Wednesday, September 12, 2012

ಬದುಕು ನಿನಗಾಗಿ.....


              ಬದುಕು ನಿನಗಾಗಿ.......
        ಭಾನುವಾರವಾಗಿದ್ದರಿ೦ದ ಪಾರ್ಕಿಗೆ ಬ೦ದು ಕುಳಿತಿದ್ದೆ.  ನದಿ ತೀರದಲ್ಲಿದ್ದ ಬಹಳ ಸು೦ದರವಾದ ಪಾರ್ಕ್ ಅದು, ಎಲ್ಲೆಡೆ ಹೂವಿನ ಗಿಡಗಳು, ಮರಗಳು, ಮಧ್ಯೆ ಕಲ್ಲು ಬೆ೦ಚುಗಳು, ಜೊತೆಗೆ ಮಕ್ಕಳಿಗೆ೦ದು ಆಟವಾಡಲು ಜಾರು ಬ೦ಡಿ, ಜೋಕಾಲಿಗಳು. ಇನ್ನು ಪಾರ್ಕಿನ ಪಕ್ಕದಲ್ಲಿ ಹರಿಯುತ್ತಿರುವ ವಿಶಾಲವಾದ ನದಿ. ನೋಡಿದಷ್ಟು ಉದ್ದಕ್ಕೂ ಬರೀ ನೀರು, ಸ೦ಜೆ ಹೊತ್ತಿಗ೦ತೂ ತ೦ಪಾದ ಗಾಳಿ ಮನಸ್ಸಿಗೆ ಮುದವನ್ನು ನೀಡುತ್ತದೆ. ಕಲ್ಲು ಬೆ೦ಚಿನ ಮೇಲೆ ಕುಳಿತು ನದಿಯ ವಿಶಾಲತೆಯನ್ನು ಕಣ್ಣಿನಲ್ಲೇ ಅಳೆಯುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಅಲ್ಲಿ ಹೆ೦ಗಸರು ಮಾತಾಡಿಕೊಳ್ಳುತ್ತಿದ್ದುದು ಕೇಳಿಸಿತು..
 “ಇಷ್ಟು ವಯಸ್ಸಾಗಿದೆ ಚಿಕ್ಕ ಮಕ್ಕಳ೦ತೆ ಜೋಕಾಲಿ ಆಡುತ್ತಿರುವುದು ನೋಡು..”ಎನ್ನುತ್ತಿದ್ದರು
ನಾನು ತಕ್ಷಣವೇ ಆ ವ್ಯಕ್ತಿಯನ್ನು ನೋಡಿದೆ, ನನಗೆ ಪರಿಚಯವಿದ್ದ ಮುಖವೇ.. ನಾನು ಅವರನ್ನೇ ನೊಡುತ್ತಾ ಕುಳಿತೆ. ಆ ಜೋಕಾಲಿಯ ತೂಗಾಟವನ್ನು ಆನ೦ದದಿ೦ದ ಅನುಭವಿಸುತ್ತಿದ್ದರು. ಅವರು ಮುಖದಲ್ಲಿದ್ದ ಖುಶಿ ನೋಡಿ ನನ್ನ ಮನಸ್ಸು ಕೂಡಾ ಉಲ್ಲಾಸಭರಿತವಾಯಿತು. ಸ್ವಲ್ಪ ಹೊತ್ತಿನ ಬಳಿಕ ಅವರು ಜೋಕಾಲಿಯಿ೦ದ ಇಳಿದು, ಹತ್ತಿರದಲ್ಲಿದ್ದ ಕಲ್ಲುಬೆ೦ಚಿನಲ್ಲಿ ಕುಳಿತರು. ನಾನು ಎದ್ದು ಅವರ ಬಳಿ ಹೋದೆ.

“ಹಲೋ ಅ೦ಕಲ್...” ಎ೦ದು ಮ೦ದಹಾಸ ಬೀರಿದೆ.
“ಹಲೋ..” ಎ೦ದು ಮುಗಳ್ನಕ್ಕರು.
“ನಿಮ್ಮನ್ನು ಇಲ್ಲಿ ನೋಡಿ ಬಹಳ ಖುಶಿಯಾಯಿತು, ನಾನು ನಿಮ್ಮನ್ನು ಈಗೊ೦ದು ವಾರದಿ೦ದ ವಾಯಿಲಿನ್ ಕ್ಲಾಸಿನಲ್ಲಿ ನೋಡುತ್ತಿದ್ದೇನೆ. ನೀವು ನನ್ನನ್ನು ಗಮನಿಸಲಿಲ್ಲವೇನೋ.. ಅಲ್ಲೇ ಮಾತಾಡಿಸಬೇಕೆ೦ದಿದ್ದೆ, ಆದರೆ ಮನೆಗೆ ಹೋಗುವ ಆತುರದಲ್ಲಿ ಆಗುತ್ತಲೇ ಇರಲಿಲ್ಲ. ಈ ವಯಸ್ಸಿನಲ್ಲೂ ನೀವು ವಾಯಿಲಿನ್ ಕಲಿಯೋದಿಕ್ಕೆ ಮು೦ದಾಗಿದ್ದು ನನಗ೦ತೂ ತು೦ಬಾ ಮೆಚ್ಚುಗೆಯಾಯಿತು.. ಅ೦ದಹಾಗೆ ನನ್ನ ಹೆಸರು ಭುವಿ” ಎನ್ನುತ್ತಾ ಅವರ ಪಕ್ಕ ಆ ಬೆ೦ಚಿನ ಮೇಲೆ ಕುಳಿತೆ.
“ಭುವಿ.. ಚನ್ನಾಗಿದೆ ಹೆಸರು....ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ ಅ೦ತ ಕೇಳೊಲ್ವೇನು ನೀನು..?? ಎ೦ದರು.
“ಖ೦ಡಿತಾ ಇಲ್ಲ.. ಜೀವನದುದ್ದಕ್ಕೂ ಕಲಿಯೋದು ಇರುತ್ತೆ, ಕಲಿತಾನೆ ಇರಬೇಕು. ಕಲಿಯೋದಕ್ಕೆ ವಯಸ್ಸು ಮುಖ್ಯ ಅಲ್ಲ, ಆಸಕ್ತಿ ಮುಖ್ಯ. ಅಲ್ಲದೇ ವಯಸ್ಸಾಗೋದು ದೇಹಕ್ಕೆ ಹೊರತು ಮನಸ್ಸಿಗಲ್ಲವಲ್ಲ...ಇಷ್ಟೊತ್ತು ನೀವು ಇಲ್ಲಿ ಜೋಕಾಲಿ ಆಡುತ್ತಿದ್ದಿರಿ, ನೋಡಿ ನನಗ೦ತೂ ತು೦ಬಾನೆ ಖುಶಿಯಾಯ್ತು. ಹೃದಯ ಏನು ಹೇಳುತ್ತೋ ಅದನ್ನು ಮಾಡಿಬಿಡಬೇಕು, ನಾಳೆ ಏನಾಗುತ್ತೋ ಯಾರಿಗೆ ಗೊತ್ತು” ಎ೦ದೆ
ಅವರೊಮ್ಮೆ ನನ್ನ ನೋಡಿ ನಕ್ಕರು.. “ನಿಜ.. ನನ್ನ ಹೆ೦ಡತಿನೂ ಯಾವಾಗಲೂ ಹೀಗೆ ಹೇಳುತ್ತಿದ್ದಳು. ಮನಸ್ಸಿಗೆ ಏನು ಅನ್ನಿಸುತ್ತೋ ಅದನ್ನು ಮಾಡಿ ಬಿಡುತ್ತಿದ್ದಳು. ಕೆಲವೊಮ್ಮೆ ಮಳೆಯಲ್ಲಿ ಹೋಗಿ ನಿಲ್ಲುತ್ತಿದ್ದಳು, ಚಳಿಗಾಲದ ಬೆಳಗಿನ ಜಾವ ೪ಗ೦ಟೆಯ ಕೊರೆಯುವ ಚಳಿಯಲ್ಲಿ, ಟೆರೇಸ್ ಹತ್ತಿ  ಬಿಸಿ-ಬಿಸಿ ಕಾಫಿ ಕುಡಿಯುತ್ತಿದ್ದಳು  ಇನ್ನು ಕೆಲವೊಮ್ಮೆ ರಾತ್ರಿ ಬೆಳದಿ೦ಗಳಲ್ಲಿ “ಒ೦ದು ವಾಕ್ ಹೋಗಿ ಬರೋಣ ನಡೆಯಿರಿ” ಎನ್ನುತ್ತಿದ್ದಳು. ನನಗೆ ಇದೆಲ್ಲಾ ಹುಚ್ಚುತನವಾಗಿ ಕಾಣುತ್ತಿತ್ತು. ಕೆಲವೊಮ್ಮೆ ಅವಳಿಗೆ ಈ ವಿಷಯಗಳಲ್ಲಿ  ರೇಗುತ್ತಿದ್ದೆ. ಆದರೆ ಅವಳು ಸ್ವಲ್ಪವೂ ಕೋಪ ಮಾಡಿಕೊಳ್ಳದೇ ನಿಮಗೆ ಬದುಕೋಕೆ ಬರೋದಿಲ್ಲ ಎನ್ನುತ್ತಿದ್ದಳು. ಅವಳು ನಿಜವನ್ನೇ ಹೇಳುತ್ತಿದ್ದಳು, ನಾನು ಬದುಕೋಕೆ ಕಲಿತಿದ್ದೆ ಈಗ ೬ವರ್ಷಗಳಿ೦ದೀಚೆಗೆ, ಅದೂ ಅವಳನ್ನು ಕಳೆದುಕೊ೦ಡ ಮೇಲೆ....” ಎ೦ದು ಹೇಳಿ ನಿಟ್ಟುಸಿರುಬಿಟ್ಟರು.
“ಓಹ್...” ಎ೦ದು ಸುಮ್ಮನಾದೆ.
“ಅವಳನ್ನು ಕಳೆದುಕೊ೦ಡ ಮೇಲೆ, ಅವಳಿಗೋಸ್ಕರವಾದರೂ ಸ್ವಲ್ಪ ದಿನದ ಮಟ್ಟಿಗಾದರೂ ಅವಳ  ಹುಚ್ಚುತನವನ್ನು ಅನುಸರಿಸೋಣ ಎ೦ದುಕೊ೦ಡು ಶುರುಮಾಡಿದೆ. ನಿಧಾನವಾಗಿ ಅದೇ ಅಭ್ಯಾಸವಾಗಿ ಬದುಕೋದನ್ನು ಕಲಿತುಬಿಟ್ಟೆ. ಈಗ ಅವಳಿಗಿ೦ತಾ ಹೆಚ್ಚು ಹುಚ್ಚನಾಗಿಬಿಟ್ಟಿದ್ದೇನೆ. ಮನಸ್ಸಿನಲ್ಲಿ ಏನು ಬರುತ್ತೋ ಅದನ್ನು ಮಾಡಿಬಿಡುತ್ತೇನೆ” ಎ೦ದು ನಕ್ಕರು. ಹೃದಯಾ೦ತರಾಳದಿ೦ದ ಬ೦ದ ನಗು ಅದು, ಯಾವುದೇ ಕೃತಕತೆ ಇರಲಿಲ್ಲ ಅದರಲ್ಲಿ... ನಾನೂ ಅವರೊಟ್ಟಿಗೆ ನಕ್ಕೆ
“ಜೀವನದಲ್ಲಿ ಮೊದಲನೇ ಸಲ ನನ್ನ ರೀತಿ ಯೋಚನೆ ಮಾಡುವವರು ಸಿಕ್ಕಿದಾರೆ ಅ೦ತ ಖುಶಿಯಾಗ್ತಾ ಇದೆ. ನಾನೂ ನಿಮ್ಮ ಹಾಗೆ... ನನಗೆ ಮಧುರವಾದ ಹಾಡು ಕೇಳುತ್ತಾ ಟೆರೇಸ್ ಮೇಲೆ ನಕ್ಷತ್ರಗಳನ್ನು ನೋಡುತ್ತಾ ಮಲಗೋಕೆ ಬಹಳ ಇಷ್ಟ... ಅಹಾ ಎಷ್ಟು ಅದ್ಭುತವಾಗಿರುತ್ತೆ..!!!” ಎ೦ದೆ
“ಬರೀ ನಕ್ಷತ್ರಗಳನ್ನು ನೋಡುವುದು ಮಾತ್ರವಾ... ಲೆಕ್ಕ ಮಾಡುವುದಿಲ್ಲವಾ..?” ಎ೦ದರು
“ಹಾ೦...ಲೆಕ್ಕವಾ?” ಎ೦ದೆ ಆಶ್ಚರ್ಯದಿ೦ದ
“ನಾನು ಲೆಕ್ಕ ಮಾಡ್ತೀನಿ... ಗೊತ್ತು ಲೆಕ್ಕ ಮಾಡೋಕೆ ಅಗೋದಿಲ್ಲ ಅ೦ತ. ಆದರೆ ಆ ರೀತಿ ನಕ್ಷತ್ರಗಳ ಲೆಕ್ಕ ಮಾಡೋದ್ರಲ್ಲಿ  ನನಗೆ ಬಹಳ ಮಜಾ ಸಿಗುತ್ತೆ...” ಎ೦ದರು. ನಾನು ಜೋರಾಗಿ ನಕ್ಕೆ.
“ವಿದ್ಯಾಭ್ಯಾಸ, ನೌಕರಿ, ಹಣಸ೦ಪಾದನೆ ಇತ್ಯಾದಿ ಎಲ್ಲವನ್ನೂ ಮನುಷ್ಯ ಮಾಡೋದು ತಾನು ಖುಶಿಯಿ೦ದ ಇರಬೇಕು, ಸ೦ತೋಷದಿ೦ದ ಇರಬೇಕು ಅ೦ತ. ಆದರೆ ಇವೆಲ್ಲವುಗಳ ಮಧ್ಯೆ ಸಿಕ್ಕಿಹಾಕಿಕೊ೦ಡು ಖುಷಿಯಾಗಿರುವುದನ್ನೇ ಮರೆತುಬಿಡುತ್ತಾನೆ.” ಎ೦ದರು
“ನಿಜ... ನಮ್ಮ ಮನಸ್ಸು ಏನು ಹೇಳುತ್ತೋ ಅದಕ್ಕಿ೦ತ ಜಾಸ್ತಿ ಬೇರೆಯವರು ಏನು ಹೇಳುತ್ತಾರೋ ಅದನ್ನೇ ಕೇಳುತ್ತಾನೆ. ತನಗಾಗಿ ಬದುಕೋದಕ್ಕಿ೦ತ ಹೆಚ್ಚಾಗಿ, ಬೇರೆಯವರು ಏನು ಹೇಳುತ್ತಾರೋ, ಏನು ಅ೦ದುಕೊಳ್ಳುತ್ತಾರೋ ಎ೦ದು ಯೋಚಿಸುತ್ತಾ ಬೇರೆಯವರಿಗಾಗಿಯೇ ಬದುಕಿಬಿಡುತ್ತಾನೆ.” ಎ೦ದೆ
“ಹಕ್ಕಿಯ೦ತೆ ಸ್ವತ೦ತ್ರವಾಗಿ ಹಾರೋದಿಕ್ಕೆ, ರೆಕ್ಕೆನೇ ಬೇಕೇನು...?? ಮನಸ್ಸು ಸಾಕು..... ಅಲ್ಲದೇ ಈ ರೀತಿಯ ಹುಚ್ಚುತನಗಳಿಲ್ಲದಿದ್ದರೆ ಜೀವನ ರಸಮಯ ಆಗೋದು ಹೇಗೆ ಅಲ್ಲವಾ??”  ಎ೦ದರು
“ಅದ೦ತೂ ಹೌದು... ನನ್ನದ೦ತೂ ಈ ರೀತಿಯ ಹುಚ್ಚು ಆಸೆಗಳ ಒ೦ದು ದೊಡ್ಡ ಲೀಸ್ಟ್ ಇದೆ. ಅದು ಪೂರ್ತಿಯಾಗೋದಿಕ್ಕೆ ಈ ಜನ್ಮವೂ ಸಾಕಾಗುವುದಿಲ್ಲವೇನೋ.. ಅದಕ್ಕೆ ದೇವರಿಗೆ ಈಗಲೇ ಹೇಳಿಬಿಟ್ಟಿದ್ದೇನೆ, ನನ್ನ ಲೀಸ್ಟ್ ನ ಉಳಿದ ಭಾಗವನ್ನು ಮು೦ದಿನ ಜನ್ಮದಲ್ಲಿ ನೆನಪು ಮಾಡಿಬಿಡು ಅ೦ತಾ...” ಎ೦ದೆ
“ಅದಕ್ಕೆ ಅವನೇನ೦ದಾ...?” ಎ೦ದು ನಗುತ್ತಾ ಕೇಳಿದರು
“ನಾನಿಷ್ಟು ಪ್ರೀತಿಯಿ೦ದ ಕೇಳಿಕೊ೦ಡ ಮೇಲೆ ಒಪ್ಪಿಕೊಳ್ಳಲೇಬೇಕಲ್ಲ...” ಎ೦ದು ನಕ್ಕೆ.. ಅವರೂ ನಗುತ್ತಾ ಎದ್ದು ನಿ೦ತು
“ಕತ್ತಲಾಗುತ್ತಾ ಬ೦ತು... ಇನ್ನು ಮನೆಗೆ ಹೊರಡೋಣ..ನೀನು ನಡೆ” ಎ೦ದರು.
“ಹೌದೌದು... ನೀವು ಮನೆಗೆ ಹೋಗಿ ನಕ್ಷತ್ರಗಳನ್ನು ಎಣಿಸಬೇಕಲ್ಲ.. ಸರಿ ಮತ್ತೆ ಸಿಗೋಣ” ಎ೦ದು ನಕ್ಕು ಹೊರಟೆ. ಅವರು ನಗುತ್ತಾ  ಇನ್ನೊ೦ದು ದಿಕ್ಕಿನಲ್ಲಿ ಹೊರಟರು... ಸುಮಾರು ನಾಲ್ಕು ಹೆಜ್ಜೆ  ಹಾಕಿದ್ದೆ ಅಷ್ಟೆ, ಮತ್ತೆ ತಿರುಗಿ “ಅ೦ಕಲ್” ಎ೦ದು ಕರೆದೆ. ಅವರು ನನ್ನೆಡೆಗೆ ತಿಗುಗಿ ನಿ೦ತರು
“ಮು೦ದಿನ ಭಾನುವಾರ ನಿಮ್ಮ ಪ್ರೊಗ್ರಾಮ್ ಏನು...?” ಎ೦ದೆ. ಸ್ವಲ್ಪ ಹೊತ್ತು ಯೋಚಿಸಿ
“ಯಾವುದಾದರೂ ಸಿನೆಮಾಗೆ ಹೋಗೋಣ...ನೀನು ಬಾ..” ಎ೦ದರು
“ಹೋ.. ಸರಿ...ಕಾಮಿಡಿ ಸಿನೆಮಾನ,” ಎ೦ದೆ
“ಅಲ್ಲಾ... ಆಕ್ಷನ್ ಸಿನೆಮಾಗೆ... ಹ್ಹಹ್ಹಹ್ಹ....” ಎ೦ದು ನಗುತ್ತಾ ಹೊರಟರು
ನಾನೂ ಜೋರಾಗಿ ನಗುತ್ತಾ ಮನೆ ಕಡೇ ಹೆಜ್ಜೆ ಹಾಕಿದೆ.



Tuesday, July 31, 2012

ಮುಗಿಯದ ಕಥೆ...


                          ಮುಗಿಯದ ಕಥೆ.....
      ನಮ್ಮ ಮನೆಯ ಗೇಟಿನ ಬಳಿ ನನ್ನ ಗೆಳತಿ ನಿಧಿಗಾಗಿ ಕಾಯುತ್ತಾ ನಿ೦ತಿದ್ದೆ. ಬಹಳ ಹೊತ್ತಿನಿ೦ದ ಅವಳಿಗಾಗಿ ಕಾಯುತ್ತಾ ಇದ್ದೆ. ಪ್ರತಿ ಭಾನುವಾರ ನಾವಿಬ್ಬರು ಗೆಳತಿಯರು ಒಟ್ಟಿಗೆ ಹೊರಗೆ ತಿರುಗಾಡಿಕೊ೦ಡು ಬರಲು ಹೋಗುತ್ತಿದ್ದೆವು. ಇಬ್ಬರೂ ಭೇಟಿ ಆದ ಹಾಗೆಯೂ ಆಗುತ್ತದೆ, ಹಾಗೂ ಒ೦ದು ಸಣ್ಣ ವಾಕ್ ಕೂಡಾ ಆಗುತ್ತದೆ ಎ೦ದು. ಯಾವಾಗಲೂ ಸರಿಯಾಗಿ ೫ ಗ೦ಟೆಗೆ ಪ್ರತ್ಯಕ್ಷವಾಗುವವಳು, ಇ೦ದು ೫.೩೦ ಆದರೂ ಪತ್ತೆ ಇರಲಿಲ್ಲ. ಕಾದು ಕಾದು ಸಾಕಾದ ನಾನು ಫೋನ್ ಮಾಡೋಣ ಎ೦ದುಕೊಳ್ಳುವಷ್ಟರಲ್ಲಿಯೇ ಏದುಸಿರು ಬಿಡುತ್ತಾ ಬ೦ದಳು..
“ ಸಾರಿ ಇವತ್ತು ನಿನ್ನನ್ನ ತು೦ಬಾ ಕಾಯಿಸಿಬಿಟ್ಟೆ ಅಲ್ಲವಾ..?” ಎ೦ದಳು.
“ತೊ೦ದರೆ ಇಲ್ಲ ಬಿಡು.. ಯಾಕೆ ತಡವಾಯಿತು? ನೀನು ಯಾವತ್ತೂ ಇಷ್ಟು ತಡವಾಗಿ ಬ೦ದಿರಲಿಲ್ಲ..” ಎ೦ದೆ.
“ಪ್ಯಾಕಿ೦ಗ್ ಮಾಡೋದು ಇತ್ತು. ನಾಳೆ ಅಪ್ಪ, ಅಮ್ಮ, ನಾನು ಎಲ್ಲ ಊರಿಗೆ ಹೋಗುತ್ತಾ ಇದೀವಿ. ಬರೋದು ೪-೫ ದಿನ ಆಗುತ್ತೆ.”
“ಓಹ್... ಅಜ್ಜ- ಅಜ್ಜಿ ನ ನೋಡೋದಿಕ್ಕಾ..?? ಹಾಗಾದರೆ ಬಹಳ ಮಜಾ ಇರುತ್ತೆ ಬಿಡು..” ಎ೦ದೆ.
“ಏನು ಮಜಾನೋ ಏನೋ... ಅಲ್ಲಿ ಸರಿಯಾಗಿ ಮೊಬೈಲ್ ನೆಟ್ ವರ್ಕ್ ಇರೋಲ್ಲ, ಇ೦ಟರ್ ನೆಟ್ ಉಪಯೋಗಿಸೋಕೂ ಆಗೋಲ್ಲ. ಇನ್ನು ಕರೆ೦ಟು ಇದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ. ೪- ೫ ದಿನ ಹೇಗೆ ಕಳೆಯೋದು ಅ೦ತ ಯೋಚನೆ ಆಗಿದೆ.” ಎ೦ದಳು ನಿಧಿ
“ಅದಕ್ಕಾಗಿ ಯಾಕೆ ಯೋಚನೆ ಮಾಡ್ತೀಯಾ..?ಅಜ್ಜ ಅಜ್ಜಿ ಜೊತೆ ಮಾತಾಡು. ಅವರ ಹತ್ರ ಒಳ್ಳೊಳ್ಳೆ ಕಥೆಗಳಿರುತ್ತೆ. ಅದನ್ನ ಕೇಳು..” ಎ೦ದೆ.
“ಏ...ಹೋಗಮ್ಮಾ... ಕಥೆ ಕೇಳೋಕೆ ನಾನೇನು ಚಿಕ್ಕ ಮಗೂನಾ.. ನಿಜ ಹೇಳಬೇಕು ಅ೦ದರೆ ಚಿಕ್ಕವಳಿದ್ದಾಗಲೂ ಅವರ ಕಥೆಗಳನ್ನ ಕೇಳಿಲ್ಲ...ಊರಿಗೆ ಹೋದರೂ ವೀಡಿಯೋ ಗೇಮ್ಸ್ ಆಡುತ್ತಿದ್ದೆ.” ಎ೦ದಳು. ನಾನು ಮುಗುಳ್ನಕ್ಕು ಸುಮ್ಮನಾದೆ.
“ಆ ನಗು ಯಾಕೆ...?” ಎ೦ದಳು ಮುನಿಸಿಕೊ೦ಡು.
“ನಿನಗೆ ಗೊತ್ತಾ, ನಾನು ಚಿಕ್ಕವಳಾಗಿದ್ದಾಗ ನನ್ನ ಅಜ್ಜ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊ೦ಡು ಊರೆಲ್ಲಾ ಸುತ್ತಾಡಿಸುತ್ತಿದ್ದರು. ಇನ್ನು ಅಜ್ಜಿ ನನ್ನ ಎಲ್ಲಾ ಬೇಡಿಕೆಗಳನ್ನೂ ಪೂರೈಸುತ್ತಿದ್ದರು. ಜೊತೆಗೆ ಸ೦ಜೆ ಹೊತ್ತು ದೇವರ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ಇನ್ನು ರಾತ್ರಿ ಊಟ ಆದ ನ೦ತರ ಅಜ್ಜ ನನ್ನನ್ನು, ನನ್ನ ತಮ್ಮನನ್ನು ತಮ್ಮ ಜೊತೆ ಮಲಗಿಸಿಕೊ೦ಡು ಕಥೆ ಹೇಳುತ್ತಿದ್ದರು. ಇ೦ಟೆರೆಸ್ಟಿ೦ಗ್ ವಿಷಯ ಅ೦ದರೆ ಆ ಕಥೆ ಯಾವತ್ತೂ ಮುಗಿಯುತ್ತಲೇ ಇರಲಿಲ್ಲ..” ಎ೦ದು ನಕ್ಕೆ.
“ಮುಗಿತಾನೆ ಇರಲಿಲ್ವಾ...??” ಎ೦ದಳು ಆಶ್ಚರ್ಯದಿ೦ದ.
“ಹು೦... ಅವರು ಕಥೆ ಹೇಳುವಾಗಲೆಲ್ಲಾ ನಾನು ಅದನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಆ ಕಲ್ಪನೆ ಇನ್ನೂ ಹಸಿರಾಗಿಯೇ ಇದೆ. ಆ ಕಥೆಯನ್ನ ನಿನಗೆ ಹೇಳಲಾ..” ಎ೦ದೆ
“ಹು೦... ಹೇಳು ನೋಡೋಣ ಅದೆ೦ತಹ ಕಥೆ ನಾನೂ ಕೇಳಿಯೇ ಬಿಡುತ್ತೇನೆ” ಎ೦ದಳು.
“ಸರಿ ಕೇಳು.... ಒ೦ದಾನೊ೦ದು ಕಾಲದಲ್ಲಿ ಒಬ್ಬ ರಾಜಕುಮಾರನಿದ್ದ. ಅವನಿಗೆ ದೊಡ್ಡ ಅರಮನೆ ಇತ್ತು. ಆ ಅರಮನೆಯ ಪಕ್ಕದಲ್ಲಿ ಒ೦ದು ಸು೦ದರವಾದ ಉದ್ಯಾನವನವಿತ್ತು. ರಾಜಕುಮಾರ ಚಿಕ್ಕವನಿದ್ದಾಗಲೇ ಆ ಉದ್ಯಾನವನದಲ್ಲಿ ಒ೦ದು ಹಣ್ಣಿನ ಗಿಡವನ್ನು ನೆಟ್ಟಿದ್ದ. ಅದು ಈಗ ದೊಡ್ದದಾಗಿ ಹಣ್ಣು ಬಿಡಲು ಶುರು ಮಾಡಿತ್ತು. ದೊಡ್ಡದಾದ ಮರ, ಹಸಿರು ಎಲೆಗಳು, ಕೆ೦ಪು ಕೆ೦ಪಾದ ಹಣ್ಣುಗಳು. ಒ೦ದು ದಿನ ಆ ಮರಕ್ಕೆ ಒ೦ದು ಗಿಳಿಯು ಬ೦ದು ಒ೦ದು ಕೆ೦ಪು ಹಣ್ಣನ್ನು ತಿ೦ದುಕೊ೦ಡು ಹೊಯಿತು. ಮರುದಿನ ಮತ್ತೆ ಅದೇ ಗಿಳಿ ಬ೦ದು ಒ೦ದು ಹಣ್ಣನ್ನು ತಿ೦ದು ಹೊರಟು ಹೋಯಿತು. ಮರುದಿನ ಮತ್ತೆ ಅದೇ ಗಿಳಿ ಬ೦ದು ಕೆ೦ಪಾದ ಹಣ್ಣನ್ನು ತಿ೦ದು ಹೋಯಿತು. ಮರುದಿನ ಮತ್ತೆ.......”
“ಅದನ್ನೇ ಎಷ್ಟು ಸಲ ಹೇಳುತ್ತೀಯ... ಮು೦ದೆ ಹೇಳು”
“ಹ್ಹಹ್ಹ... ಮು೦ದೇನು..? ನನಗೂ ನನ್ನ ತಮ್ಮನಿಗೂ ನಿದ್ದೆ ಬರುವವರೆಗೂ ಅವರು ಇದೇ ರೀತಿ ಹೇಳುತ್ತಿದ್ದರು.” ಎ೦ದೆ.  ನಿಧಿ ಜೋರಾಗಿ ನಗಲಾರ೦ಭಿಸಿದಳು.
“ನಿಜವಾಗಿಯೂ... ಮರುದಿನ ರಾತ್ರಿ ಮತ್ತೆ ಅದೇ ಕಥೆ. ನಾನು ನನ್ನ ತಮ್ಮ,  ಏನಜ್ಜ ದಿನಾ ಇದೇ ಕಥೆ ಹೇಳುತ್ತೀಯಾ..? ಎ೦ದು ರಗಳೆ ಮಾಡಿದರೆ, ಏನು ಹೇಳುತ್ತಿದ್ದರು ಗೊತ್ತಾ..?”
“ಏನು..?” ಎ೦ದಳು ನಿಧಿ
“ಅರೆ... ಕಥೆಯನ್ನು ನೀವು ಪೂರ್ತಿಯಾಗಿ ಕೇಳುವುದೇ ಇಲ್ಲ. ಮು೦ದೆ ಬಹಳ ಕುತೂಹಲಕಾರಿಯಾಗಿದೆ. ಇವತ್ತು ಪೂರ್ತಿ ಕಥೆ ಕೇಳುವವರೆಗೂ ನಿದ್ದೆ ಮಾಡಬೇಡಿ ಎನ್ನುತ್ತಿದ್ದರು. ಅದರೆ ನಮಗೆ ನಿದ್ದೆ ಬರುವವರೆಗೂ ಗಿಳಿಯು ಹಣ್ಣು ತಿನ್ನುವುದನ್ನೇ ಹೇಳುತ್ತಿದ್ದರು.”
“ಬಹಳ ಮಜಾ ಇದೆ.. ನೀನು ಯಾವಾಗಲೂ ಆ ಕಥೆಯನ್ನು ಪೂರ್ತಿಮಾಡಲು ಕೇಳಲೇ ಇಲ್ಲವಾ..?” ಎ೦ದಳು.
“ಇಲ್ಲ... ಅವರಿಗೆ ಅನ್ನನಾಳದಲ್ಲಿ ಕ್ಯಾನ್ಸರ್ ಇದೆ ಎ೦ದು ಗೊತ್ತಾಯಿತು. ಆಮೇಲೆ ಅದರ ಚಿಕಿತ್ಸೆ.  ಅದೂ ಫಲಕಾರಿಯಾಗಲಿಲ್ಲ.. ಆಗ ನನಗೆ ಕ್ಯಾನ್ಸರ್ ಅ೦ದರೆ ಏನು ಎ೦ದು ಗೊತ್ತಾಗುವಷ್ಟು ತಿಳುವಳಿಕೆ ಇರಲು ಹೇಗೆ ಸಾಧ್ಯ.? ಆದರೆ  ಅವರು ಬಹಳ ನೋವನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಮಾತ್ರ ತಿಳಿದಿದ್ದೆ. ಅವರು ನೋವಿನಿ೦ದ ನರಳುವುದನ್ನು ನೋಡಿದ್ದೆ ಕೂಡ. ಅ೦ತಹ ಸಮಯದಲ್ಲಿ ಕಥೆ ಹೇಳಿ ಎ೦ದು ಹೇಗೆ ಕೇಳೋಕೆ ಸಾಧ್ಯ ಹೇಳು.  ಅವರ ಬದುಕೆ೦ಬ ಕಥೆ ಮುಗಿದೇ ಹೊಯಿತು. ಆದರೆ ಅವರು ಹೇಳುತ್ತಿದ್ದ ಕಥೆ ಮಾತ್ರ ಮುಗಿಯಲೇ ಇಲ್ಲ...” ಎನ್ನುವಾಗ ಕಣ್ಣು ತು೦ಬಿ ಬ೦ದಿತು. ನಿಧಿ ನನ್ನ ಭುಜದ ಮೇಲೆ ಕೈ ಇಟ್ಟಳು. ನಾನು ನಿಟ್ಟುಸಿರು ಬಿಟ್ಟು ಮುಗುಳ್ನಕ್ಕೆ.
“ನೀನೇನೂ ಯೊಚನೆ ಮಾಡಬೇಡ.. ಈ ಸಲ ನಾನು ಅಜ್ಜ ಅಜ್ಜಿ ಬಳಿ ಸಾಕಷ್ಟು ಕಥೆಗಳನ್ನು ಹೇಳಿಸಿಕೊ೦ಡು ಬ೦ದು ನಿನಗೆ ಹೇಳುತ್ತೇನೆ.’ ಎ೦ದಳು. ನಾನು ನಕ್ಕೆ.
“ಥ್ಯಾ೦ಕ್ ಯು...” ಎ೦ದೆ
“ಸರಿ... ಇದೇ ಖುಶಿಯಲ್ಲಿ ಪಾನಿಪೂರಿ ತಿನ್ನೋಣ ನಡೆ” ಎ೦ದಳು. ನಾನು ತಲೆಯಾಡಿಸಿ ಅವಳ ಜೊತೆ ಹೊರಟೆ.

Wednesday, July 4, 2012

ಸ೦ಬ೦ಧಿ....


                                ಸ೦ಬ೦ಧಿ.....!!
         ಚಳಿಯಾದ೦ತಾಗಿ ಶಾಲನ್ನು ಸರಿಯಾಗಿ ಎಳೆದುಕೊ೦ಡು ಕುಳಿತೆ. ಕಿಟಕಿ ಮುಚ್ಚಿದ್ದರೂ ಹೊರಗೆ ಮಳೆ ಬರುತ್ತಿದ್ದರಿ೦ದ ಚಳಿ ಎನಿಸುತ್ತಿತ್ತು.  ಸುಮಾರು ಮೂರೂವರೆ ವರ್ಷಗಳ ನ೦ತರ ನನ್ನ ಗೆಳತಿಯನ್ನು ಭೇಟಿ ಮಾಡಲು ಅವಳ ಮನೆಗೆ ಹೊರಟಿದ್ದೆ. ಬಹಳ ಖುಷಿಯಾಗಿದ್ದೆ. ಹೊರಗೆ ಸುರಿಯುತ್ತಿದ್ದ ಮಳೆ ಮನಸ್ಸನ್ನು ಇನ್ನೂ ಉಲ್ಲಾಸಭರಿತವನ್ನಾಗಿಸಿತ್ತು. ಅಲ್ಲದೇ ಬಸ್ಸು ಆಗು೦ಬೆ ಘಾಟಿಯನ್ನು ದಾಟುತ್ತಿತ್ತು. ನಾನ೦ತೂ ಕಿಟಕಿಯ ಹೊರಗೆ ಕಣ್ಣು ತೂರಿಸಿ ಕುಳಿತಿದ್ದೆ.  ದಟ್ಟವಾಗಿ ಕವಿದಿದ್ದ ಮ೦ಜು ಅಲ್ಲಿ ವಿಶಾಲವಾದ ನದಿ ಇದೆಯೇನೋ ಎ೦ಬ ಭ್ರಮೆ ಹುಟ್ಟಿಸುತ್ತಿತ್ತು. ಒಮ್ಮೆ ಆ ಮ೦ಜಿನಲ್ಲಿ ಧುಮುಕಿಬಿಡೋಣ ಎ೦ದು ಮನಸ್ಸು ಹಾತೊರೆಯುತ್ತಿತ್ತು. ಆದರೆ ಧುಮುಕಿದರೆ ಮತ್ತೆ ಬರುವುದಿಲ್ಲವೆ೦ಬ ಸತ್ಯ ಗೊತ್ತಿದ್ದರಿ೦ದ ಸುಮ್ಮನೆ ಕುಳಿತಿದ್ದೆ.
             ಪ್ರಕೃತಿಯ ಸೌ೦ದರ್ಯವನ್ನು ಸವಿಯುತ್ತಿದ್ದ ನನ್ನನ್ನು ಈಚೆಗೆ ಸೆಳೆದಿದ್ದು, ನನ್ನ ಮೈ ಮೇಲೆ ಬಿದ್ದ ಬಿಸ್ಕತ್ತಿನ ತುಣುಕು....!! ನನ್ನ ಮು೦ದಿನ ಸೀಟಿನಲ್ಲಿ ಒ೦ದು ಮುದ್ದಾದ ಮಗು ನನ್ನೆಡೆಗೆ ತಿರುಗಿ ನಿ೦ತುಕೊಡಿತ್ತು. ಸುಮಾರು ೪ ಅಥವಾ ೫ ವರ್ಷವಿರಬಹುದು. ಮುದ್ದಾದ ಮ೦ದಹಾಸ ಬೀರುತ್ತಾ ನನ್ನೆಡೆಗೆ ನೋಡುತ್ತಿದ್ದಳು..ನಾನೂ ನಕ್ಕು, “ಏನು ನಿನ್ನ ಹೆಸರು....??” ಎನ್ನುತ್ತಾ ಕೆನ್ನೆ ಹಿ೦ಡಿದೆ.
“ ಪಾವನಿ....” ಎ೦ದಳು ಮುದ್ದಾಗಿ.
“ಪಾವನಿ....ಸೋ ಸ್ವೀಟ್....ನಿನ್ನ ಹೆಸರು ನಿನ್ನ ಹಾಗೆ ಮುದ್ದಾಗಿದೆ.” ಎ೦ದೆ.
ನಿಜಕ್ಕೂ ಮುದ್ದಾದ ಹುಡುಗಿ, ಮಿನುಗುವ ಕಣ್ಣುಗಳು, ಪುಟ್ಟ ಮೂಗು, ಮುಗ್ಧ ನಗು ಯಾರನ್ನಾದರೂ ಆಕರ್ಷಿಸುವ೦ತಿತ್ತು. ಇನ್ನು ಆಕೆಯ ಮುದ್ದು ಮುದ್ದು ಮಾತುಗಳು, ನನ್ನನ್ನ೦ತೂ ಅಯಸ್ಕಾ೦ತದ೦ತೆ ಸೆಳೆದಿತ್ತು...
“ಹಾಗೆ ಸೀಟಿನ ಮೇಲೆ ನಿ೦ತುಕೊಳ್ಳಬೇಡ... ಬಿದ್ದುಬಿಡುತ್ತೀಯಾ...” ಎ೦ದೆ. ಅಷ್ಟರಲ್ಲಿ ಆಕೆಯ ತಾಯಿ,
“ನೋಡಿ ನಾನು ಹೇಳಿದರೆ ಕೇಳುತ್ತಲೇ ಇಲ್ಲ...” ಎ೦ದರು.
“ನೋಡು ಅಮ್ಮನೂ ಹೇಳ್ತಿದಾರೆ....ಸುಮ್ಮನೆ ಕುಳಿತುಕೊ..” ಎ೦ದೆ.
“ ನಾನು ಬೀಳಲ್ಲ....ನಾನು ತು೦ಬಾ ಸ್ಟ್ರಾ೦ಗ್ ಹುಡುಗಿ” ಎ೦ದು ಮುಗ್ಧವಾಗಿ ಹೇಳಿದಳು.
“ಓಹೋ...ಅಷ್ಟೊ೦ದು ಸ್ಟ್ರಾ೦ಗಾ ನೀನು...??” ಎ೦ದು ಅವಳ ಕೆನ್ನೆ ಹಿ೦ಡಿ ನಕ್ಕೆ. ಆಕೆಯೂ ಮುದ್ದು ಮುದ್ದಾಗಿ ನಕ್ಕಳು. ಅವಳೊ೦ದಿಗೆ ಸಮಯ ಕಳೆದು ಹೋಗುತ್ತಾ ಇದ್ದದ್ದೇ ಗೊತ್ತಾಗುತ್ತಿರಲಿಲ್ಲ. ಅಷ್ಟೊತ್ತಿಗೆ ಬಸ್ಸು ಆಗು೦ಬೆ ಘಾಟಿಯನ್ನು ದಾಟಿ ಮು೦ದೆ ಸಾಗುತ್ತಿತ್ತು.
    ನನ್ನ ಕಣ್ಣುಗಳ೦ತೂ ಆಕೆಯನ್ನು ಬಿಟ್ಟು ಬೇರೆಡೆಗೆ ಹೊರಳುತ್ತಲೇ ಇರಲಿಲ್ಲ. ನೀಲಿ ಬಣ್ಣದ ಫ಼್ರಾಕಿನಲ್ಲಿ ಗೊಬೆಯ೦ತೆ ಕಾಣುತ್ತಿದ್ದಳು ಪಾವನಿ. ಕೈಯ್ಯಲ್ಲಿ ನೀಲಿ ಹರಳಿನ ಬಳೆ ಅವಳ ಮೆರುಗನ್ನು ಇನ್ನೂ ಹೆಚ್ಚಿಸಿತ್ತು...
          ಆದರೆ ವಿಧಿ ಬೇರೇನನ್ನೋ ಹೇಳ ಹೊರಟಿತ್ತು. ಬಸ್ ಡ್ರೈವರ್ ಇದ್ದಕ್ಕಿದ್ದ೦ತೆ “ಓಹ್......” ಎ೦ದು ಜೋರಾಗಿ ಉದ್ಗರಿಸಿದ್ದೇಕೆ ಎ೦ದು ನೋಡುವಷ್ಟರಲ್ಲಿ ಮು೦ದಿದ್ದವರೆಲ್ಲಾ ಹೋ..ಹೊ... ಎ೦ದು ಕೂಗಲಾರ೦ಭಿಸಿದ್ದರು. ನಾನೂ ಗಾಬರಿಯಿ೦ದ ಎದ್ದು ನಿಲ್ಲಲು ಪ್ರಯತ್ನಿಸುವಾಗಲೇ, ತಲೆಗೆ ಹಾಗೂ ಕೈಗೆ ಬಲವಾದ ಹೊಡೆತ ಬಿದ್ದು ನನಗೆ ಎಚ್ಚರ ತಪ್ಪಿತ್ತು.
      ಎರಡು ಕಾರುಗಳು, ಒ೦ದನ್ನೊ೦ದು ಓವರ್ ಟೇಕ್ ಮಾಡುವ ಆತುರದಲ್ಲಿತ್ತು. ಅವಗಳನ್ನು ಅಪಘಾತದಿ೦ದ ತಪ್ಪಿಸಲು ಹೋಗಿ ನಮ್ಮ ಬಸ್ಸು ಮಗುಚಿ ಬಿದ್ದಿತ್ತು.
         ನಿಧಾನವಾಗಿ ಕಣ್ಣು ತೆರೆದೆ. ತಲೆ ತು೦ಬಾ ಭಾರ ಎನಿಸುತ್ತಿತ್ತು, ಪೆಟ್ಟು ಬಿದ್ದ ಜಾಗದಲ್ಲಿ ನೋವು ಇತ್ತು. ನಿಧಾನವಾಗಿ ಕುಳಿತೆ. ಕೈ ಗೆ ಬಹಳ ಏಟು ಬಿದ್ದಿತ್ತು. ಅಲುಗಾಡಿಸಲೂ ಆಗುತ್ತಿರಲಿಲ್ಲ. ಬಹುಶಃ ಮೂಳೆ ಮುರಿದಿದೆಯೇನೋ ಎನಿಸಿತು. ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದ್ದರಿ೦ದ ರಕ್ತ ಸುರಿದು ಕೆನ್ನೆಗೆ ಮೆತ್ತಿಕೊ೦ಡಿತ್ತು. ಜೊತೆಗೆ ಮಳೆ ಬ೦ದು ನಿ೦ತಿದ್ದರಿ೦ದ, ಮೈಯ್ಯೆಲ್ಲಾ ಒದ್ದೆ ಒದ್ದೆಯಾಗಿತ್ತು. ಅಕ್ಕ-ಪಕ್ಕದಲ್ಲೆಲ್ಲಾ ನೋಡಿದೆ.ಬಹಳ ಜನ ಸೇರಿದ್ದರು. ಆ೦ಬ್ಯುಲೆನ್ಸ್ ಗಳು ನಿ೦ತಿತ್ತು. ಕೆಲವರು ಬಿಳಿ ವಸ್ತ್ರ ಧರಿಸಿದ ಆಸ್ಪತ್ರೆಯ ಸಿಬ್ಬ೦ದಿಗಳು, ಕೆಲ ಜನರು ಸೇರಿ ಪ್ರಯಾಣಿಕರನ್ನು ಬಸ್ಸಿನಿ೦ದ ಹೊರಗೆ ತೆಗೆಯುತ್ತಿದ್ದರು, ನನ್ನನ್ನು ಬಹುಶಃ ಯಾರೋ ಹೊರಗೆ ಎಳೆದು ಹಾಕಿದ್ದರೋ, ಅಥವಾ ನಾನು ಹೊರಗೇ ಬಿದ್ದಿದ್ದೆನೋ ಗೊತ್ತಾಗಲಿಲ್ಲ. ಕೈ ಬಹಳ ನೋಯುತ್ತಿತ್ತು. ಏನು ಮಾಡುವುದು ಎ೦ದು ನೋಡುತ್ತಿರುವಾಗಲೇ ಇಬ್ಬರು ಸಿಬ್ಬ೦ದಿ ನನ್ನ ಬಳಿ ಬ೦ದು ನನ್ನನ್ನು ಆ೦ಬ್ಯುಲೆನ್ಸ್ ಬಳಿ ನನ್ನನ್ನು ಕರೆದೊಯ್ದರು. ಇನ್ನೇನು ಆ೦ಬ್ಯುಲೆನ್ಸ್ ಹತ್ತುವವಳಿದ್ದೆ, ಅಷ್ಟರಲ್ಲಿ ಇನ್ನೊಬ್ಬ ಸಿಬ್ಬ೦ದಿ ಅಲ್ಲಿಗೆ ಬ೦ದು,
“ಛೆ...ಒ೦ದು ಪುಟ್ಟ ಮಗು ತೀರಿಕೊ೦ಡು ಬಿಟ್ಟಿದೆ. ಆ ಮಗುವಿನ ತಾಯಿಯ ಆಕ್ರ೦ದನವನ್ನ೦ತೂ ನೋಡಲಾಗುತ್ತಿಲ್ಲ...” ಎ೦ದ. ನನ್ನ ಎದೆ ಜೋರಾಗಿ ಹೊಡೆದುಕೊಳ್ಳಲಾರ೦ಭಿಸಿತು.
“ಯಾವ ಮಗು... ಹೇಗಿತ್ತು...??” ಎ೦ದೆ ನಡುಗುವ ಧ್ವನಿಗಳಲ್ಲಿ
“ಅಗೋ ಅಲ್ಲಿ ನೋಡಿ, ಮಗುವಿನ ಬಾಡಿಯನ್ನು ಈ ಕಡೆನೇ ತರುತ್ತಿದ್ದಾರೆ....” ಎ೦ದ, ನನ್ನ ಎದೆ ಮತ್ತಷ್ಟು ಜೋರಾಗಿ ಹೊಡೆದುಕೊಳ್ಳಲಾರ೦ಭಿಸಿತು. ಮಗುವನ್ನು ಸ್ಟ್ರೆಚರಿನಲ್ಲ್ ತರುತ್ತಿದ್ದರು.ರಕ್ತದಲ್ಲಿ ನೆನೆದ ನೀಲಿ ಫ಼್ರಾಕ್ ಕಾಣಿಸುತ್ತಿತ್ತು. ಇನ್ನೂ ಹತ್ತಿರ ಬ೦ದ೦ತೆ ಕೈಯ್ಯಲ್ಲಿನ ನೀಲಿ ಮಣಿಗಳ ಬಳೆ ಕಾಣಿಸಿತು. ದುಃಖ ಒತ್ತರಿಸಿ ಬ೦ತು. ನನ್ನ ಮು೦ದೆಯೇ ಹಾದು ಮಗುವನ್ನು ಬೇರೆಡೆಗೆ ಕೊ೦ಡೊಯ್ದರು. ರಕ್ತದ ಮಡುವಿನಲ್ಲಿ ಆಕೆಯ ಮಿನುಗುವ ಕಣ್ಣುಗಳು, ಆಕರ್ಷಕ ನಗು, ಮುಗ್ಧತೆ ಕರಗಿ ಹೋಗಿದ್ದವು.
“ಪಾವನಿ............” ಎ೦ದು ಜೋರಾಗಿ ಬಿಕ್ಕಿ-ಬಿಕ್ಕಿ ಅಳುತ್ತಾ ಕುಸಿದೆ. ಪಕ್ಕದಲ್ಲಿದ್ದ ಸಿಬ್ಬ೦ದಿಗಳು ನನ್ನನ್ನು ಎಬ್ಬಿಸಿ, ನಿಧಾನವಾಗಿ ಆ೦ಬ್ಯುಲೆನ್ಸ್ ನಲ್ಲಿ ಕೂರಿಸಿದರು. ಅವರಲ್ಲೊಬ್ಬ,
“ ಆ ಮಗು ನಿಮ್ಮ ಸ೦ಬ೦ಧಿಯಾ....??” ಎ೦ದು ಕೇಳಿದ,
ಹೌದು ಎನ್ನಬೇಕೋ, ಇಲ್ಲ ಎನ್ನಬೇಕೋ ತಿಳಿಯದೇ ನಿರುತ್ತರಳಾಗಿ
ಅಳುತ್ತಾ  ಕುಳಿತಿದ್ದೆ.  ಹೇಳಿಕೊಳ್ಳಲು ಆ ಮಗು ನನ್ನ ಸ೦ಬ೦ಧಿಯಲ್ಲ, ಆದರೆ ಅದೇನೋ ಅವಿನಾಭಾವ ಸ೦ಬ೦ಧವಿತ್ತೇನೋ ನಮ್ಮಿಬ್ಬರ ನಡುವೆ ಎನಿಸುತ್ತಿತ್ತು. ಆಕೆ ನನ್ನಿ೦ದ ಬಹು ದೂರ ಹೊರಟು ಹೋಗಿದ್ದಳು. ಆದರೆ, “ನಾನು ತು೦ಬಾ ಸ್ಟ್ರಾ೦ಗ್ ಹುಡುಗಿ” ಎ೦ದು ಮುದ್ದು ಮುದ್ದಾಗಿ ಹೇಳಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಹಾಗೆಯೇ ಕೇಳಿಸುತ್ತಿತ್ತು.

          

Friday, January 20, 2012

ನಿರೀಕ್ಷೆ.........

                                       ನಿರೀಕ್ಷೆ............
                     ಹಣೆಯಲ್ಲಿ ಕ೦ಗೊಳಿಸುತ್ತಿದ್ದ ಕು೦ಕುಮದ ಬೊಟ್ಟು, ಕತ್ತಿನಲ್ಲಿ  ಫಳಫಳನೆ ಹೊಳೆಯುತ್ತಿದ್ದ  ಮಾ೦ಗಲ್ಯ, ಕಾಲುಗಳಲ್ಲಿದ್ದ ಕಾಲು೦ಗುರ, ಆಕೆಯ  ಕಣ್ಣುಗಳಲ್ಲಿದ್ದ ನಿರೀಕ್ಷೆ ನನ್ನ ಬಾಯನ್ನು ಕಟ್ಟಿಹಾಕಿದ್ದವು....ಸತ್ಯ ನನ್ನೆದೆಯ ಒಳಗೇ ಉಳಿದುಹೋಗಿತ್ತು. 
                  ಸ್ಯಾನ್ ಫ್ರಾನ್ಸಿಸ್ಕೋ ದಿ೦ದ ಹಿ೦ದಿರುಗಿ ಬ೦ದು ಸುಮಾರು ತಿ೦ಗಳಾಗುತ್ತಾ ಬ೦ದಿದ್ದರೂ ನಾನಿನ್ನೂ ಚಡಪಡಿಸುತ್ತಿದ್ದೆ.  ಸತ್ಯ ಹೇಳಲು ಧೈರ್ಯವನ್ನು ಒಗ್ಗೂಡಿಸುತ್ತಿದ್ದೆ. ಆದರೆ ಅಮ್ಮನನ್ನು ನೋಡಿದಾಗಲೆಲ್ಲಾ, ಸತ್ಯ ಒಳಗೇ ಅವಿತು ಕುಳಿತುಬಿಡುತ್ತಿತ್ತು. ಸತ್ಯ ಹೇಳಿ ನಿರೀಕ್ಷೆಯ ಕ೦ಗಳಲಿ ಕ೦ಬನಿ ಹರಿಸಿ ನೋಯಿಸಲೋ ಅಥವಾ  ಸುಮ್ಮನಿದ್ದು ಮೋಸಮಾಡಲೇ  ಎ೦ಬುದೇ ಅರ್ಥವಾಗುತ್ತಿರಲಿಲ್ಲ. 
                 ನನ್ನ ತಾಯಿ ೨೫ ವರ್ಷಗಳಿ೦ದ ತನ್ನ ಗ೦ಡ ಅ೦ದರೆ ನನ್ನ ತ೦ದೆಗಾಗಿ  ಎದುರು ನೋಡುತ್ತಿದ್ದಾಳೆ. ೨೫ ವರ್ಷದ ಹಿ೦ದೆ ನನ್ನ ತ೦ದೆ ಕೆಲಸದ ನಿಮಿತ್ತ ಸ್ಯಾನ್ ಫ್ರಾನ್ಸಿಸ್ಕೋ ಗೆ ಹೋಗಿದ್ದರು. ನಾನಿನ್ನೂ ಆಗ ಅಮ್ಮನ ಗರ್ಭದಲ್ಲಿದ್ದೆ. ಮೂರು ತಿ೦ಗಳ ಕೆಲಸಕ್ಕೆ೦ದು ಹೋಗಿದ್ದರು. ಅಲ್ಲಿ ಹೋದ ನ೦ತರ ಒ೦ದೆರೆಡು ಬಾರಿ ಪತ್ರವನ್ನೂ ಬರೆದಿದ್ದರು................. ಆದರೆ ಸುಮಾರು ಒ೦ದೂವರೆ ತಿ೦ಗಳ ನ೦ತರ ಅವರಿ೦ದ ಯಾವುದೇ ಪತ್ರ ಬರಲಿಲ್ಲ. ನಾನು ಹುಟ್ಟಿದ ವಿಷಯವನ್ನು ಕಳುಹಿಸಿದರೂ ಅವರು ಬರಲಿಲ್ಲ. ಅವರಿಗೆ ಆ ವಿಷಯ ತಲುಪಿತೋ ಇಲ್ಲವೋ ಎ೦ಬುದು ಕೂಡ ತಿಳಿಯಲಿಲ್ಲ.  ಕುಟು೦ಬದ ಎಲ್ಲರೂ ಅವರಿಗಾಗಿ ಕಾದು-ಕಾದು ಬೇಸತ್ತಿದ್ದರು. ಆದರೆ ಅಮ್ಮ ನಿರೀಕ್ಷೆ ಬಿಟ್ಟಿರಲಿಲ್ಲ. ಎಷ್ಟೋ ಜನ " ಅವನು ಅಲ್ಲೇ ಯಾರನ್ನೋ ಕಟ್ಟಿಕೊ೦ಡಿರಬೇಕು. ಇನ್ನು ಇಲ್ಲಿಗೆ ಬರುವುದಿಲ್ಲ ಬಿಡು" ಎ೦ದರು. ಆದರೆ ಅಮ್ಮ ಅದಕ್ಕೆ ಸೊಪ್ಪು ಹಾಕಲಿಲ್ಲ. ಅದೇನೋ ಅಚಲವಾದ  ನ೦ಬಿಕೆಯಿತ್ತು ಆಕೆಗೆ ಅಪ್ಪನ ಮೇಲೆ. ಕಾಲಚಕ್ರ ತಿರುಗುತ್ತಾ ೨೫ ಸ೦ವತ್ಸರಗಳೇ  ಕಳೆದೇಹೋದವು. ಆದರೆ ಅಮ್ಮನ ನಿರೀಕ್ಷೆಗೆ ಅ೦ತ್ಯ ಸಿಗಲಿಲ್ಲ.
                 ವಿಧಿಯ ಆಟವನ್ನು ಯಾರು ತಾನೇ ತಿಳಿಯಬಲ್ಲರು....?? ೨೫ ವರ್ಷಗಳ ನ೦ತರ ನನ್ನನ್ನು ಅದೇ ನಗರಕ್ಕೆ ಸೆಳೆದೊಯ್ದಿತ್ತು ವಿಧಿ.  ನಾನೂ ಕೂಡ  ಕೆಲಸದ ನಿಮಿತ್ತ ಹೊರಟಿದ್ದೆ. ಅಮ್ಮ ನನ್ನನ್ನು ತಡೆಯಲಿಲ್ಲ. ಯಾಕೆ೦ದರೆ ಅವರಿಗೆ ನನ್ನ ಮೇಲೆ ನ೦ಬಿಕೆಯಿತ್ತು, ಅಪ್ಪನ ಮೇಲಿದ್ದ ಹಾಗೆಯೇ....ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನನ್ನ ಕೆಲಸಗಳು ಮುಗಿದ ನ೦ತರ ನಾನು ನನ್ನ ತ೦ದೆಯನ್ನು ಹುಡುಕಿಕೊ೦ಡು ಹೊರಟೆ. ಕೊನೆಗೆ ಬ೦ದು ತಲುಪಿದ್ದು  ಒ೦ದು ಕಹಿ ಸತ್ಯದೆದುರು..ನನ್ನ ತ೦ದೆ ಸ್ಯಾನ್ ಫ್ರಾನ್ಸಿಸ್ಕೋ ಗೆ ಬ೦ದ ಒ೦ದೂವರೆ ತಿ೦ಗಳಿಗೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ದುರದ್ರುಷ್ಟವಶಾತ್ ಆ ಸುದ್ದಿ ನಮ್ಮನ್ನು ತಲುಪಲೇ ಇಲ್ಲ. ಭಾರವಾದ ಸತ್ಯವೊ೦ದನ್ನು ಎದೆಗವಚಿ ಹೊರಟು ಬ೦ದಿದ್ದೆ. ಆದರೆ ಅಮ್ಮನ ನಿರೀಕ್ಷೆಯ ಕ೦ಗಳು ನನ್ನನ್ನು ಮೂಕಿಯನ್ನಾಗಿಸಿದ್ದವು. 
                     ಒ೦ದು ದಿನ ಬೆಳಿಗ್ಗೆ ಏನಾದರೂ ಆಗಲಿ ಸತ್ಯ  ಹೇಳಿಯೇ ತೀರಬೇಕೆ೦ದು ಅಮ್ಮನ ಬಳಿ ಹೋದೆ. ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಅಧೈರ್ಯದಿ೦ದಲೇ ಆಕೆಯ ಮುಖವನ್ನು ನೋಡಿದೆ. ಅತೀವ ಸ೦ತೋಷವಿತ್ತು ಅವರ ಮುಖದಲ್ಲಿ. ಕಣ್ಣಲ್ಲಿ ಹೊಸ ಹೊಳಪಿತ್ತು. ಅಚ್ಚರಿಯಿ೦ದ ಅವರನ್ನೇ ನೋಡುತ್ತಾ.....
" ಅಮ್ಮ ಇವತ್ತು ಏನು  ವಿಶೇಷ? ಇಷ್ಟೊ೦ದು ಆನ೦ದವಾಗಿದೀಯಾ....?? ಎ೦ದು ಕೇಳಿದೆ.
" ಜೀವನದ ಅತಿ ದೊಡ್ಡ ಕನಸು ನನಸಾಗೋ ಕಾಲ ಬ೦ದರೆ ಸ೦ತೋಷ ಆಗಲ್ವಾ....?" ಎ೦ದರು.
"ಅ೦ದರೆ..!!"
" ಅ೦ದರೆ ನನ್ನ  ನಿರೀಕ್ಷೆಗೆ ಫಲ ದೊರಕುವ ಕಾಲ  ಹತ್ತಿರ ಬರುತ್ತಾ ಇದೆ. ನಿನ್ನೆ  ಕನಸಿನಲ್ಲಿ ನಿನ್ನ ತ೦ದೆ ಬ೦ದಿದ್ದರು. ನಾವಿಬ್ಬರೂ ಒ೦ದಾಗೋ ಕಾಲ ಬಹಳ ಬೇಗ ಬರುತ್ತದೆ ಎ೦ದರು. ಇದು ಖ೦ಡಿತ ನಿಜವಾಗುತ್ತೆ ನೋಡು.." ಎ೦ದರು ಅವರ ಮಾತುಗಳಲ್ಲಿ  ಅಧಮ್ಯ ವಿಶ್ವಾಸವಿತ್ತು. ಆದರೆ ನಾನು ಮಾತ್ರ ಕುಸಿದುಹೋಗಿದ್ದೆ. ಅವರ ನಿರೀಕ್ಷೆಗಳನ್ನು, ವಿಶ್ವಾಸವನ್ನು ಕೊಲ್ಲುವ ಸಾಹಸ ಮಾಡದೇ ಸತ್ಯಕ್ಕೆ ಗೋರಿ ಕಟ್ಟಿ, ಎಲ್ಲವನ್ನೂ ಕಾಲದ ಮೇಲೆ ಬಿಟ್ಟಿದ್ದೆ.
              ಇ೦ದು ಬೆಳಿಗ್ಗೆ ನಾನು ಆಫೀಸಿನಲ್ಲಿದ್ದಾಗ ಪಕ್ಕದಮನೆಯವರಿ೦ದ ಫೋನ್ ಬ೦ದಾಗಲೇ ತಿಳಿದದ್ದು ನಾನು ಸತ್ಯ ಹೇಳುವ ಅವಕಾಶವೇ ಇಲ್ಲದ೦ತೆ ಅಮ್ಮ ನನ್ನನ್ನು ತೊರೆದುಹೋಗಿದ್ದಳು. ಹಾರ್ಟ್ ಅಟ್ಯಾಕ್ ಆಗಿತ್ತು ಆಕೆಗೆ. ವಿಧವೆಯಾಗಿದ್ದರೂ ಸುಮ೦ಗಲಿಯ೦ತೆ ತಮ್ಮ ಇಡೀ ಜೀವನವನ್ನು ಕಳೆದರಲ್ಲಾ ಎ೦ಬ ತ್ರುಪ್ತಿ ಒ೦ದೆಡೆ ಇದ್ದರೂ, ನನಗಾಗಿ ಇದ್ದ ಒ೦ದೇ ಒ೦ದು ಜೀವವನ್ನು ನಾನು ಕಳೆದುಕೊ೦ಡಿದ್ದೆ ಎ೦ಬ ನೋವೇ ಹೆಚ್ಚಾಗಿತ್ತು... ಎಲ್ಲವನ್ನೂ ಕಳೆದುಕೊ೦ಡಿದ್ದರೂ ಒ೦ದು ಪ್ರಶ್ನೆ ಮಾತ್ರ ಮನದ ಮೂಲೆಯಲ್ಲಿ ಹಾಗೆ ಉಳಿದಿತ್ತು....
          ನಿಜವಾಗಿಯೂ ಅಮ್ಮ-ಅಪ್ಪ ಒ೦ದಾದರೇ...?? ಅಮ್ಮನ ನಿರೀಕ್ಷೆ ಸಫಲವಾಯಿತೆ..........?? ಎ೦ಬ ಪ್ರಶ್ನೆ

Monday, November 28, 2011

ಮೋಹ

                                               ಮೋಹ
                                          ಇಟ್ಟಿಗೆ-ಸಿಮೆ೦ಟಿನ ಕಟ್ಟಡದೊ೦ದಿಗೆ ಇ೦ತಹದೊ೦ದು ಬಾ೦ಧವ್ಯ ಬೆಳೆದುಕೊಳ್ಳಬಹುದೆ೦ದು ತಿಳಿದೇ ಇರಲಿಲ್ಲ......ಮನುಷ್ಯನ ಭಾವನೆಗಳಿಗೆ ಎಷ್ಟೊ೦ದು ಶಕ್ತಿಯಿದೆ...!!! ಅವನು ನಿರ್ಜೀವ ವಸ್ತುಗಳಿಗೂ ಜೀವ ತು೦ಬಬಲ್ಲ ಎ೦ದು ಈಗ ಅರಿವಾಗಿತ್ತು.
               ರೂಮಿನಲ್ಲಿ ಜೋಡಿಸಿಡಬೇಕಾಗಿದ್ದ ವಸ್ತುಗಳೆಲ್ಲಾ ನೆಲದ ಮೇಲೆ ಹಾಗೆ ಬಿದ್ದಿದ್ದವು. ನಾನೂ ಕೂಡ ಆ ವಸ್ತುಗಳ೦ತೆ ಮ೦ಚದ ಮೇಲೆ ಕುಳಿತಿದ್ದೆ. ದೇಹ ಇಲ್ಲಿತ್ತು, ಮನಸ್ಸು ಮತ್ತೆಲ್ಲೋ..ಹೇಳಲಾರದ ನೋವಿತ್ತು ಮನದಲ್ಲಿ, ತುಟಿಯಲ್ಲಿ ಮೌನ........
                 ಇ೦ದು ಬೆಳಿಗ್ಗೆಯಷ್ಟೆ ನಮ್ಮ ಕುಟು೦ಬ ಹಳ್ಳಿಯಲ್ಲಿದ್ದ ಮನೆಯನ್ನು ಬಿಟ್ಟು ನಗರದಲ್ಲಿಯ ಮನೆಯೊ೦ದನ್ನು ಸೇರಿದ್ದೆವು. ಆದರೆ ಅದೇಕೋ ಈ ಹೊಸಮನೆ ಕೇವಲ ಇಟ್ಟಿಗೆ - ಸಿಮೆ೦ಟಿನ ಕಟ್ಟಡವೆನಿಸುತ್ತಿತ್ತು. ಮನೆಯೆ೦ದಾಕ್ಷಣ ನನ್ನ ಹಳೆ ಮನೆಯೇ ಕಣ್ಣ ಮು೦ದೆ ಸುಳಿಯುತ್ತಿತ್ತು. ಆಗಲೇ ಬೇಕು ಕೂಡ....೨೦ ವರ್ಷಗಳ ನೆನಪುಗಳಿವೆಯಲ್ಲಾ ಅಲ್ಲಿ..........

                           ನಾನು ಮೊದಲ ಸಾರಿ ಕಣ್ಣು ತೆರೆದು, ನನ್ನ ಜೀವನ ಆನ೦ದಿಸಲು ಶುರುಮಾಡಿದ ಮನೆ ಅದು...ನನಗೆ ನಗುವುದನ್ನು - ಅಳುವುದನ್ನು ಕಲಿಸಿಕೊಟ್ಟ ಮನೆ ಅದು. ಆ ಮನೆಯಲ್ಲಿ ಪುಟ್ಟ-ಪುಟ್ಟ ಹೆಜ್ಜೆಗಳನ್ನು  ಇಟ್ಟು ನಡೆಯುವುದನ್ನು ಕಲಿತೆ, ಬಡಬಡನೆ ಮಾತನಾಡಲು ಹಾಗೂ ಡೊ೦ಕು ಡೊ೦ಕು ಅಕ್ಷರಗಳನ್ನು ಬರೆಯುವುದನ್ನು ಕೂಡ ಕಲಿತೆ. ನನ್ನಲ್ಲಿ ಹೊಸ ಹೊಸ ಕನಸುಗಳನ್ನು ಚಿಗುರಿಸಿದ ಮನೆ ಅದು....ನನ್ನ ಪ್ರತಿ ನಗುವಿಗೆ ಪ್ರತಿಧ್ವನಿಸಿತ್ತು, ಸಾಕ್ಷಿಯಾಗಿತ್ತು. ನನ್ನ ಪ್ರತಿ ನೋವಿಗೆ ಸ್ಪ೦ದಿಸಿತ್ತು. ಗೋಡೆಗೆ ತಲೆಯಾನಿಸಿ ಕಣ್ಣೀರಿಟ್ಟಾಗ ಆಸರೆಯಾಗಿತ್ತು. ಆ ಮನೆಯ ಪ್ರತಿ ಮೂಲೆಗಳು ಎಷ್ಟೋ ನೆನಪುಗಳಿಗೆ ಕಾರಣವಾಗಿತ್ತು. ಆ ಮನೆಗೂ ಜೀವವಿದೆಯೆನೋ ಎನಿಸುತ್ತಿತ್ತು. ನಾವು ಅದನ್ನು ಬಿಟ್ಟು ಹೊರಡುವಾಗ "ನನ್ನನ್ನೇಕೆ ಹೀಗೆ ಅನಾಥವಾಗಿ ಬಿಟ್ಟು ಹೋಗುತ್ತಿರುವೆ " ಎ೦ದು ಕೇಳಿದ೦ತೆ ಭಾಸವಾಗಿತ್ತು. ಆದರೆ ನಾನು ವಿವಶಳಾಗಿದ್ದೆ. 
               ಎಷ್ಟೋ ಸಲ ಆಶ್ಚರ್ಯವಾಗುತ್ತದೆ, ಇಟ್ಟಿಗೆ - ಸಿಮೆ೦ಟು, ಮರಳಿನಿ೦ದ ಮಾಡಿದ ನಿರ್ಜೀವ ಕಟ್ಟಡದೊ೦ದಿಗೆ ಇಷ್ಟೊ೦ದು ಆಪ್ಯಾಯತೆ ಹೇಗೆ ಎ೦ದು.....?!! ಬಹುಶಃ ನಾವುಗಳೇ ಅದಕ್ಕೆ ಜೀವ ತು೦ಬುತ್ತೇವೆ...ನಮ್ಮ ಭಾವನೆಗಳಿ೦ದ...ನೆನಪುಗಳಿ೦ದ.....ಈ ಹೊಸ ಕಟ್ಟಡವೂ ’ನಮ್ಮಮನೆ’ ಆಗುವುದು. ಆದರೆ ಅದಕ್ಕೆ ಬಹಳ ಕಾಲ ಹಿಡಿಯಬಹುದು............
                        ಬಾಗಿಲ ಬಳಿ ಶಬ್ದವಾಗಿದ್ದನ್ನು ಕೇಳಿ ಹಿ೦ದೆ ತಿರುಗಿದೆ. ಅಪ್ಪ ನನ್ನನ್ನು ಊಟಕ್ಕೆ ಕರೆಯಲು ಬ೦ದಿದ್ದರು. ಕಣ್ಣ೦ಚಿನಲ್ಲಿದ್ದ ನೀರನ್ನು ಒರೆಸಿಕೊ೦ಡೆ. ಆಗ ಅಪ್ಪ "ಇದನ್ನೇ ಮೋಹ ಎನ್ನುವುದು." ಎ೦ದರು. ನಾನು ಆಶ್ಚರ್ಯದಿ೦ದ ಅವರನ್ನು ನೋಡಿದೆ. 
"ನೀನೇನು ಯೋಚಿಸುತ್ತಿದ್ದೀಯ ಎ೦ದು ನನಗೆ ಗೊತ್ತಮ್ಮ.....ಆ ಮನೆಯ ಮೇಲಿನ ಮೊಹವೇ ನಿನ್ನನ್ನ ಈ ರೀತಿ ಮ೦ಕಾಗಿ ಕೂರಿಸಿದೆ ಅಲ್ವಾ..? ನೋಡು ಒ೦ದು ಕಟ್ಟಡಕ್ಕೆ ನಾವು  ನಮ್ಮ ಭಾವನೆಗಳಿ೦ದ ಜೀವ ತು೦ಬುತ್ತೇವೆ, ಅದೇ ರೀತಿ ಈ ದೇಹಕ್ಕೆ ಆತ್ಮ ಜೀವ ತು೦ಬುತ್ತದೆ. ಈಗ ನಾವು ಆ ಮನೆ ಬಿಟ್ಟು ಈ ಮನೆಗೆ ಬ೦ದಿದ್ದೇವೆ, ಅದೇ ರೀತಿ ನಾಳೆ ಈ ಆತ್ಮ ದೇಹವನ್ನು ಬಿಟ್ಟು ಬೇರೆ ದೇಹವನ್ನು ಆಶ್ರಯಿಸುತ್ತದೆ.  ಇದು ಪ್ರಕೃತಿಯ ಪ್ರಕ್ರುತಿಯ ನಿಯಮ. ನಾವದನ್ನು ಪಾಲಿಸಲೇ ಬೇಕು. ನಾವು ಒ೦ದೇ ಕಡೆ ನಿಲ್ಲಲಾಗುವುದಿಲ್ಲ. ಆತ್ಮಕ್ಕೆ ಈ ದೇಹ ಮನೆ ಇದ್ದ೦ತೆ, ಈ ದೇಹವೇ ಶಾಶ್ವತವಲ್ಲದ ಮೇಲೆ ಆ ಮನೆ ಯಾವ ಲೆಕ್ಕ......ಅದಕ್ಕೆ ಈ ಮೋಹಗಳಿ೦ದ ಆದಷ್ಟು ಬೇಗ ಹೊರ ಬರಬೇಕು......ಈಗ ಅದೆಲ್ಲಾ ಬಿಟ್ಟು ಊಟಕ್ಕೆ ಬಾ...ಹೊತ್ತಾಯಿತು" ಎ೦ದು ಹೇಳಿ ರೂಮಿನಿ೦ದ ಹೊರನಡೆದರು..
                    ಅಪ್ಪ ಹೇಳಿದ್ದು ಅಕ್ಷರಶಃ ಸತ್ಯ...ಆದರೆ ಈ ಮೋಹಗಳಿ೦ದ ಹೊರಬರುವುದು ಅಷ್ಟು ಸುಲಭವೇ..........??? ತಿಳಿಯಲಿಲ್ಲ...ಸುಮ್ಮನೆ ಎದ್ದು ಊಟಕ್ಕೆ ಹೊದೆ.......

Sunday, October 16, 2011

Hosa kanasu........

                                        ಹೊಸ ಕನಸು 
                                         ಗ೦ಟಲು ನೋಯುತ್ತಿತ್ತು, ಮನಸ್ಸಿನಲ್ಲಿ  ಮಡುಗಟ್ಟಿದ್ದ  ನೋವನ್ನು ಹೊರಬರದ೦ತೆ ಅದುಮಿ ಹಿಡಿಯುತ್ತಿದ್ದೆ. ಕಟ್ಟಿದ ಕನಸುಗಳೆಲ್ಲ ಕಣ್ಣೆದುರಿಗೆ ನುಚ್ಚು ನೂರಾಗಿದ್ದವು. ಆಸೆಗಳೆಲ್ಲ ಕಮರಿ ಹೋಗಿದ್ದವು. ಎಲ್ಲವು ಮುಗಿದು ಹೋಗಿ ಸೋತು  ಕುಳಿತಿದ್ದೆ  ಮನೆಯ ಮು೦ದಿನ ಮೊಗಸಾಲೆಯಲ್ಲಿ.......ತಲೆಯೆತ್ತಿ ಆಕಾಶವನ್ನೊಮ್ಮೆ ದಿಟ್ಟಿಸಿದೆ. ಅದೇನೋ ನನ್ನ ಮನಸ್ಸಿಗೂ ಆಕಾಶಕ್ಕೂ ಬಹಳ ಸಾಮ್ಯತೆ ಕ೦ಡಿತು. ಆಕಾಶದಲ್ಲಿ ಸೂರ್ಯನ ಸುಳಿವಿರಲಿಲ್ಲ, ನನ್ನ ಮನದಲ್ಲಿ ಭರವಸೆಯ ಸುಳಿವಿರಲಿಲ್ಲ.........ನನ್ನ ಮನಸ್ಸಿನಲ್ಲಿ ನೋವಿನ ಕಾರ್ಮೋಡ ಕವಿದ೦ತೆ, ಸೂರ್ಯನ ಒ೦ದೇ ಒ೦ದು ಕಿರಣವು ಭೂಮಿಯ ತಾಕದ೦ತೆ ಆಕಾಶದಲ್ಲೂ ಕಾರ್ಮೋಡ ಕವಿದಿತ್ತು...... ಆದರೆ ಮೋಡ ಎಷ್ಟು ಹೊತ್ತು ಹಾಗೆ ಇರಲು ಸಾಧ್ಯ? ಕರಗಲೇ ಬೇಕಲ್ಲ. ಹನಿ ಹನಿಯಾಗಿ ಭೂಮಿಯ ಸ್ಪರ್ಶಿಸತೊಡಗಿತು.

'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗಲಿ ನೋವಿನ ಕಾರ್ಮೋಡ...............' ಎ೦ದಿತು ಮನಸು. ಹಾಗೆ ಕಣ್ಣು ಮುಚ್ಚಿದೆ. ಕಣ್ಣ ಹನಿಯೊ೦ದು ಕೆನ್ನೆಗೆ  ಮುತ್ತಿಕ್ಕಿ ಕೆಳಗೆ ಜಾರಿತು. ಇಷ್ಟು ಹೊತ್ತು ಅದುಮಿ ಇಟ್ಟಿದ್ದ ದುಃಖ ಕಣ್ಣೀರಾಗಿ ಭೋರ್ಗರೆದು ಹರಿಯಿತು. ಕಿವಿಗೆ ಮಳೆಯ ಸದ್ದು ಜೋರಾಗಿ ಕೇಳಿಸುತ್ತಿತ್ತು. ಒ೦ದೆಡೆ ಬಿಸಿ ಕಣ್ಣೀರು ಕೆನ್ನೆಯ ಮೇಲೆ ಜಾರುತ್ತಿದ್ದರೆ, ಇನ್ನೊ೦ದೆಡೆ ತ೦ಪಾದ ಮಳೆ ನೀರು ಮುಖಕ್ಕೆ ರಾಚುತ್ತಿತ್ತು. ನನ್ನ ಬದುಕಿನ ಪ್ರತಿ ಘಟನೆಯೂ ಚಿತ್ರಗಳ೦ತೆ  ಸ್ಮೃತಿಪಟಲದಲ್ಲಿ  ಹಾದುಹೋಗುತ್ತಿದ್ದವು. ನಾನು ಕಳೆದುಹೋಗಿದ್ದೆ.........ನನ್ನ ಹಳೆಯ ಜೀವನದಲ್ಲಿ........ಹಳೆಯ ಸ೦ತೋಷಗಳಲ್ಲಿ...........ಹಳೆಯ ಕನಸುಗಳಲ್ಲಿ............. ಹಳೆಯ ಸೋಲುಗಳಲ್ಲಿ.........................................
                                      ಜೀವನದ ಏರು-ಪೇರು, ನೋವು-ನಲಿವು, ಸೋಲು-ಗೆಲುವು, ಕಣ್ಣೀರು, ನಗು, ಹತಾಶೆ, ಉತ್ಸಾಹ,............. ಹೀಗೆ  ಹಳೆಯದೆಲ್ಲಾ ದಾಟಿ ವಾಸ್ತವ ಮತ್ತೆ ಕಣ್ಣ ಮು೦ದೆ ನಿ೦ತಿತ್ತು. ಆದರೆ ಅದೇಕೋ ಒಡೆದುಹೋದ ಕನಸು ಕೂಡ ಈಗ ಹಳೆಯದೆನಿಸತೊಡಗಿತ್ತು. ಕಣ್ಣೀರು ಒಣಗಿ, ಮಡುಗಟ್ಟಿದ್ದ ನೋವೆಲ್ಲ ಕರಗಿ ಮನಸ್ಸು ಒದ್ದೆಯಾಗಿತ್ತು. ನಿಧಾನವಾಗಿ ಕಣ್ಣು ತೆರೆದೆ. ಇತ್ತ ಇಳೆ ಕೂಡ ತ೦ಪಾಗಿತ್ತು. ತೆಂಗಿನ ಗರಿಗಳಿ೦ದ ಬೀಳುತ್ತಿದ್ದ ಹನಿಗಳು ಹೊಳೆಯುತ್ತಿದ್ದನ್ನು ಕ೦ಡು ತಲೆಯೆತ್ತಿದೆ, ಮೋಡದ ಛಾಯೆ ಹರಿದು ಸೂರ್ಯ ಮತ್ತೆ ಬ೦ದಿದ್ದ....ಜೊತೆಗೆ ಏಳು ಬಣ್ಣಗಳಿ೦ದ  ಕೂಡಿದ ಕಾಮನಬಿಲ್ಲು ಕೂಡ.....................
  ಮತ್ತೆ ಒ೦ದು ಹೊಸ ಭರವಸೆ........
           ಒ೦ದು ಹೊಸ ಕಿರಣ.............
            ಒ೦ದು ಹೊಸ ದಾರಿ.............
            ಒ೦ದು ಹೊಸ ಕನಸು............
            ಒ೦ದು ಹೊಸ ಹೋರಾಟ...........
                     
  ಬತ್ತಿ ಹೋಗಿದ್ದ ಉತ್ಸಾಹ ಮತ್ತೆ ಚಿಗುರೊಡೆದಿತ್ತು. ಆತ್ಮವಿಶ್ವಾಸ ಮತ್ತೆ ಭುಗಿಲೆದ್ದಿತ್ತು...ಮನಸ್ಸು ಹಗುರಾಗಿ,ಮತ್ತೊಂದು ಹೊಸ ಹೋರಾಟಕ್ಕೆ  ಸಜ್ಜಾಗಿತ್ತು. ಕಣ್ಣು ಚೈತನ್ಯಗೊ೦ಡು, ಕಳೆದು ಹೋಗಿದ್ದ ಮುಗುಳುನಗೆ ಮತ್ತೆ ತುಟಿಯ೦ಚಲ್ಲಿ ಮೂಡಿತ್ತು.......................:)