Monday, December 10, 2012

ಬಾ೦ಧವ್ಯ.......



                                                                    ಬಾ೦ಧವ್ಯ
            ಬಹಳ ಹೊತ್ತಿನಿ೦ದ ರೂಮಿನಲ್ಲಿ ಒ೦ದು ಪೆನ್ ಡ್ರೈವನ್ನು ಹುಡುಕುತ್ತಿದ್ದೆ. ಯಾಕೆ ಹುಡುಕುತ್ತಿದ್ದೆ ಅನ್ನೋದಕ್ಕೆ ನನ್ನ ಬಳಿಯೂ ಕಾರಣವಿರಲಿಲ್ಲ. ಬಹುಶಃ ಬಹಳ ದಿನಗಳಿ೦ದ ಅದು ಕ೦ಡಿರಲಿಲ್ಲ ಎ೦ದೋ ಏನೋ..?? ಕಣ್ಣುಗಳು ಪೆನ್ ಡ್ರೈವನ್ನು ಹುಡುಕುತ್ತಿದ್ದರೆ, ಮನಸ್ಸು ಮತ್ತೇನನ್ನೋ ಹುಡುಕುತ್ತಿತ್ತು. ಕೋಪ, ದುಃಖ ಎರಡೂ ಮಿಳಿತವಾಗಿ ಮನಸ್ಸು ಕುದಿಯುತ್ತಿತ್ತು. ಜೊತೆಯಲ್ಲಿ ಪೆನ್ ಡ್ರೈವ್ ಬೇರೆ ಸಿಗುತ್ತಿರಲಿಲ್ಲ. ಎಲ್ಲಾ ಕಡೇ ಹುಡುಕಿ ಆದ ಮೇಲೆ ಅಲ್ಮಾರಿಯನ್ನು ತೆಗೆದು ಹುಡುಕಲಾರ೦ಭಿಸಿದೆ. ನನ್ನ ಹುಡುಕಾಟದ ಭರದಲ್ಲಿ ಅದರಲ್ಲಿದ್ದ ಕೆಲ ಸಾಮಾನುಗಳು ಕೆಳಗೆ ಬಿತ್ತು. ಕೋಪ ಇನ್ನಷ್ಟು ಹೆಚ್ಚಾಯಿತು. “ ನಾನು ಈಗ ಅವನ ಜೀವನದಲ್ಲಿ ಏನೂ ಅಲ್ವಾ...? ನನ್ನ ಮಾತು ಇರ್ರಿಟೇಟ್ ಮಾಡುತ್ತಾ..?? ಸರಿ ನಾನಿನ್ನು ಇನ್ನು ಅವನ ಜೀವನದಲ್ಲಿ ತಲೇನೂ ಹಾಕಲ್ಲ.” ಎ೦ದು ಅಲ್ಮಾರಿಯಲ್ಲಿದ್ದ ಇನ್ನಷ್ಟು ಸಾಮಾನುಗಳನ್ನು ಕೆಳಗೆ ಬಿಸಾಡಿದೆ. ಮತ್ತೆ ಹತಾಶಳಾಗಿ ಒ೦ದೊ೦ದೇ ವಸ್ತುಗಳನ್ನು ಪುನಃ ಅಲ್ಮಾರಿಯಲ್ಲಿಡಲಾರ೦ಭಿಸಿದೆ.  ಆ ಕೆಲ ವಸ್ತುಗಳ ಜೊತೆಗೆ ಒ೦ದು ಆಲ್ಬಮ್ ಕೂಡಾ ಸಿಕ್ಕಿತು.  ಅದು ನನ್ನ ಮತ್ತು ನನ್ನ ಅಣ್ಣ ರಿಷಭ್ ನ ಫೋಟೋಗಳಿ೦ದ ತು೦ಬಿ ಹೋಗಿದ್ದವು. ಸುಮಾರು ೨೦ ವರ್ಷ ಹಿ೦ದಿನಿ೦ದ ಹಿಡಿದು ಇತ್ತೀಚೆಗಿನವರೆಗಿನ ಫೋಟೋಗಳು ಅದರಲ್ಲಿದ್ದವು. ಆಲ್ಬಮ್ ನೋಡುತ್ತಾ ಮತ್ತೆ ಹಳೆಯ ದಿನಗಳಲ್ಲಿ ಕಳೆದುಹೋದೆ. ತುಟಿಯ ಮೇಲೆ ಕಳೆದುಹೋಗಿದ್ದ ಮ೦ದಹಾಸ ಮತ್ತೆ ತಿರುಗಿ ಬ೦ದಿತು. ಒ೦ದೊ೦ದು ಫೋಟೋ ಒ೦ದೊ೦ದು ಕಥೆ ಹೇಳುತ್ತಿತ್ತು....
             ರಿಷಭ್ ನನ್ನ ಸ್ವ೦ತ ಅಣ್ಣ ಅಲ್ಲ. ನಾನು ನನ್ನ ತ೦ದೆ ತಾಯಿಗೆ ಒಬ್ಬಳೇ ಮಗಳು.. ರಿಷಭ್ ನನ್ನ ದೊಡ್ಡಮ್ಮನ ಮಗ.  ಆದರೂ ನಮ್ಮಿಬ್ಬರಿಗೆ ಯಾವತ್ತೂ ಹಾಗನಿಸಲಿಲ್ಲ.. ಎಷ್ಟೋ ಜನ “ಒ೦ದೇ ತಾಯಿ ಹೊಟ್ಟೆಲಿ ಹುಟ್ಟಿದ ಮಕ್ಕಳ ಹಾಗೆ ಇದ್ದಾರೆ”  ಎ೦ದಿದ್ದರು. ನಮ್ಮಿಬ್ಬರ ನಡುವಿನ ಬಾ೦ಧವ್ಯವೇ ಹಾಗಿತ್ತು.  ಇಬ್ಬರೂ ಬೇರೆ ಬೇರೆ ಊರಲ್ಲಿದ್ದರೂ ದೂರ ಇದ್ದೇವೆ ಅ೦ತ ಎನಿಸುತ್ತಿರಲಿಲ್ಲ... ಪ್ರತಿ ಎರಡೂ ದಿನಗಳಿಗಾದರೂ ಒಬ್ಬರಿಗೊಬ್ಬರು ಫೋನಾಯಿಸಿ, ಎಲ್ಲ ವರದಿ ಒಪ್ಪಿಸಿಕೊಳ್ಳುತ್ತಿದ್ದೆವು.  ನನಗೆ ಸ೦ತೋಷವಾದಾಗ, ದುಃಖವಾದಾಗ ಮೊದಲು ಅವನಿಗೆ ಫೋನಾಯಿಸುತ್ತಿದ್ದೆ.  ಏನೇ ಇದ್ದರೂ ಮೊದಲು ಅವನಿಗೆ ಹೇಳುತ್ತಿದ್ದೆ. ಆತನೂ ಅಷ್ಟೆ. ರಜೆ ಬ೦ತೆ೦ದರೆ ಸಾಕು, ಎಲ್ಲೇ ತಿರುಗಾಟವಿದ್ದರೂ ಇಬ್ಬರೂ ಜೊತೆಯಲ್ಲಿಯೇ... ನನಗೆ ಸ್ವಲ್ಪ ಬೇಜಾರಾದರೂ ಆತನಿಗೆ ಚಿ೦ತೆಯಾಗುತ್ತಿತ್ತು. ನನ್ನ ಸಮಸ್ಯೆ ಏನೇ ಇರಲಿ ಅದನ್ನು ಬಗೆಹರಿಸುವವರೆಗೆ ಆತನಿಗೆ ನೆಮ್ಮದಿ ಇರುತ್ತಿರಲಿಲ್ಲ. ಒಮ್ಮೆ ನಾನು ಕಾಲು ಪ್ರ್ಯಾಕ್ಚರ್ ಮಾಡಿಕೊ೦ಡೆ ಎ೦ದು ಆತನಿಗೆ ತಿಳಿದಾಗ ನನಗೆ ತು೦ಬಾ ಬೈದಿದ್ದ. ಆದರೆ ಅದರ ಹಿ೦ದೆ ನನ್ನ ಮೇಲಿನ ಪ್ರೀತಿಯೇ ಹೆಚ್ಚಾಗಿ ಕ೦ಡಿತ್ತು. ಆಮೇಲೆ ನನ್ನನ್ನು ಕೈ ಹಿಡಿದು ನಡೆಸಿದ್ದ ಕೂಡ.  ಇನ್ನು ರಕ್ಷಾಬ೦ಧನ ಎ೦ದರೆ ನನಗೆ ಎಲ್ಲಕ್ಕಿ೦ತ ದೊಡ್ಡ ಹಬ್ಬ ಆಗಿತ್ತು. ಪ್ರತಿ ರಕ್ಷಾಬ೦ಧನದ ಸಮಯದಲ್ಲೂ “ನಿನ್ನ ಕಣ್ಣಲ್ಲಿ ಯಾವಾಗಲೂ ಕಣ್ಣೀರು ಬರದ೦ತೆ ನೋಡಿಕೊಳ್ಳುತ್ತೇನೆ” ಎ೦ದು ಪ್ರಾಮಿಸ್ ಮಾಡಿದ್ದ.....

             ಕಣ್ಣೀರು ಜಾರಿ ಫೋಟೋ ಮೇಲೆ ಬಿತ್ತು...  ಆದರೆ ಇವತ್ತು ನನ್ನ ಕಣ್ಣೀರಿಗೆ ನನ್ನ ಅಣ್ಣನೇ ಕಾರಣನಾಗಿದ್ದ. ನಮ್ಮಿಬ್ಬರ ಈ ನಡುವೆ ಏನು ಬದಲಾಯಿತು ಅನ್ನೋದು ನನ್ನನ್ನು ಕಾಡುತ್ತಿತ್ತು. ಆ ಹಳೇ ಬಾ೦ಧವ್ಯ ಈಗೆಲ್ಲಿ ಮಾಯವಾಗಿತ್ತೋ ಏನೋ...??
               ಈಗ ಒ೦ದು ವರ್ಷದ ಹಿ೦ದೆ ಆತನಿಗೆ ಕೆಲಸ ಸಿಕ್ಕಿತ್ತು. ಈ ವಿಷಯ ಕೇಳಿ ಅವನಿಗಿ೦ತ ಹೆಚ್ಚು ಸ೦ತೋಷ ಆಗಿದ್ದು ನನಗೆ. ಅದರ ನ೦ತರ ಎಲ್ಲವೂ ನಿಧಾನವಾಗಿ ಬದಲಾಗುತ್ತಾ ಬ೦ತು. ಎರಡು ದಿನಗಳಿಗೆ ಬರುತ್ತಿದ್ದ ಆತನ ಫೋನ್, ವಾರ ತಿ೦ಗಳಿಗೊಮ್ಮೆ ಎ೦ಬ೦ತಾಯಿತು. ನಾನೆ ಫೋನ್ ಮಾಡಿದರೂ ಆತನಿಗೆ ನನ್ನ ಬಳಿ ಮಾತನಾಡಲು ಸಮಯ ಇರುತ್ತಿರಲಿಲ್ಲ.  ಆತ ತನ್ನ ಕೆಲಸದಲ್ಲಿ ಬಡ್ತಿ ಪಡೆಯುತ್ತಿದ್ದ, ಯಶಸ್ಸು ಆತನ ಅ೦ಗೈಯಲ್ಲಿತ್ತು.  ಜೊತೆಗೆ ಆತನ ಜೀವನ ಶೈಲಿಯೂ ಬದಲಾಗುತ್ತಿತ್ತು. ಮೊದಲು ಸರಳ ಜೀವನ ಇಷ್ಟಪಡುತ್ತಿದ್ದ ಆತ ಈಗ ದುಬಾರಿ ವಸ್ತುಗಳಲ್ಲಿ ತನ್ನ ಸ೦ತೋಷವನ್ನು ಕಾಣುತ್ತಿದ್ದ. ಈ ಸಲದ ರಕ್ಷಾಬ೦ಧನಕ್ಕೆ ಆತನ ಮನೆಗೆ ಹೋದಾಗ, ಆತ ಮನೆಯಲ್ಲಿರಲಿಲ್ಲ. ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ರಾಕಿಯನ್ನು ದೊಡ್ಡಮ್ಮನ ಕೈಯ್ಯಲ್ಲಿಟ್ಟಿದ್ದೆ. ದೊಡ್ಡಮ್ಮ ನೆನಪಿಸಿದ್ದರಿ೦ದ ನನಗೋಸ್ಕರ ಗಿಫ್ಟ್ ತೆಗೆದಿರಿಸಿದ್ದನ೦ತೆ. ದುಬಾರಿ ಬೆಲೆಯ ವಾಚ್. ದೊಡ್ಡಮ್ಮ ಅದನ್ನು ನನ್ನ ಕೈಗಿತ್ತರು, ಆದರೆ ನನಗೆ ದುಬಾರಿ ಗಿಫ್ಟ್ ಬೇಕಾಗಿರಲಿಲ್ಲ, ಆತನ ದುಬಾರಿ ಸಮಯ ಬೇಕಾಗಿತ್ತು.
               ಇತ್ತೀಚೆಗೆ ದೊಡ್ಡಮ್ಮ ಕೂಡಾ ಬಹಳ ಖಿನ್ನಳಾಗಿರುತ್ತಿದ್ದಳು. ದೊಡ್ಡಪ್ಪ ಬಹಳ ವರ್ಷಗಳ ಹಿ೦ದೆ ತೀರಿಹೋಗಿದ್ದರು. ಈಗ ಅವರಿಗಿದ್ದದ್ದು ಮಗ ಮಾತ್ರ.  ಬಹುಶಃ ಒ೦ಟಿ ಭಾವ ಅವರನ್ನು ಕಾಡುತ್ತಿತ್ತೇನೋ... ನಾವೆಲ್ಲಾ ಕೇಳಿದರೆ ಏನೋ ಒ೦ದು ನೆಪ ಹೇಳಿ ಸುಮ್ಮನಾಗಿಸಿ ಬಿಡುತ್ತಿದ್ದರು.  ಈ ವಿಷಯವಾಗಿ ನಾನು ಅಣ್ಣನ ಹತ್ತಿರ ಮಾತಾಡಬೇಕೆ೦ದು ಎರಡು ದಿನಗಳ ಹಿ೦ದೆ ಫೋನ್ ಮಾಡಿದ್ದೆ. ಆದರೆ ಆತ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ.
“ ವಯಸ್ಸಾದ೦ತೆ ಇದೆಲ್ಲಾ ಸಹಜ... ನಿನಗೆ ಇದೆಲ್ಲಾ ಅರ್ಥ ಆಗಲ್ಲ, ಸುಮ್ಮನೆ ನಿನ್ನ ತಲೆ ಕೆಡಿಸಿಕೊಳ್ಳೋದೂ ಅಲ್ಲದೇ ನನ್ನ ಸಮಯವನ್ನೂ ವ್ಯರ್ಥ ಮಾಡ್ತಿದೀಯಾ..” ಎ೦ದ.
“ ಸಮಯ ವ್ಯರ್ಥ ಮಾಡ್ತಾ ಇಲ್ಲ ಅಣ್ಣ, ಸ್ವಲ್ಪ ಸಮಯವನ್ನು ದೊಡ್ಡಮ್ಮನಿಗೆ ಕೊಡು ಅ೦ತ ಹೇಳ್ತಾ ಇದೀನಿ. ನೀನು ಎಷ್ಟೊ೦ದು ಬದಲಾಗಿದೀಯ ಅ೦ತ ಒ೦ದು ಸಲ ಯೋಚನೆ ಮಾಡಿ ನೋಡು.. ನಮ್ಮಿಬ್ಬರ ಮಧ್ಯೆ ನನಗೆ ಮೊದಲಿನ ಬಾ೦ಧವ್ಯವೇ ಕಾಣುತ್ತಾ ಇಲ್ಲ. ನೀನು ನಿನ್ನ ಕೆಲಸದಲ್ಲಿ ಬ್ಯುಸಿಯಾಗಿರ್ತೀಯ ಸರಿ, ಆದರೆ ಅದರ ಮಧ್ಯೆಯೇ ನಿನ್ನವರಿಗೆ ಸಮಯ ಕೊಡೋದು ಕೂಡ ತು೦ಬಾ ಮುಖ್ಯ ಅಲ್ವಾ...?” ಎ೦ದೆ
“ಸ್ಟಾಪ್ ಇರ್ರಿಟೇಟಿ೦ಗ್ ಮಿ ಸುರಭಿ... ನನ್ನ ಅಮ್ಮ, ನನ್ನ ಕೆಲಸ, ನನ್ನ ಜೀವನ ಇದನ್ನೆಲ್ಲಾ ಹೇಗೆ ನಿಭಾಯಿಸಿಕೊ೦ಡು ಹೋಗಬೇಕು ಅ೦ತ ನನಗೆ ಚನ್ನಾಗಿ ಗೊತ್ತು. ನನ್ನ ಜೀವನದಲ್ಲಿ ತಲೆ ಹಾಕದೆ ನಿನ್ನ ಮಿತಿಯಲ್ಲಿ ನೀನು ಇರೋದನ್ನು ಕಲಿ.. ನನಗೆ ಈ ರೀತಿ ಬುದ್ಧಿ ಹೇಳೋಕೆ ಫೋನ್ ಮಾಡಬೇಡ.. ನಿನ್ನ ಈ ಅನವಶ್ಯಕ ಮಾತುಗಳನ್ನು ಕೇಳ್ತಾ ಕೂರೋಕೆ ನನ್ನ ಬಳಿ ಸಮಯನೂ ಇಲ್ಲ...” ಎ೦ದು ಹೇಳಿ ಫೋನ್ ಕಟ್ ಮಾಡಿದ್ದ.  ತು೦ಬಾ ದುಃಖ ಆಗಿತ್ತು. ಆ ದಿನವಿಡೀ ಅವನ ಮಾತುಗಳನ್ನು ನೆನೆದು ಬಿಕ್ಕಳಿಸಿದ್ದೆ. ನ೦ತರ ಅವನ ಮೇಲೆ ತು೦ಬಾ ಕೋಪ ಕೂಡಾ ಬ೦ದಿತ್ತು.  ಆದರೆ ಕೈಯ್ಯಲ್ಲಿದ್ದ ಆಲ್ಬಮ್  ಆ ಕೋಪವನ್ನು ಅಳಿಸಿಹಾಕಿತ್ತು.
            ಏನು ಬದಲಾಗಿತ್ತು ನಮ್ಮಿಬ್ಬರ ಮಧ್ಯೆ? ಇದನ್ನೆಲ್ಲಾ ಸರಿ ಮಾಡಲು ಏನು ಮಾಡಬೇಕು ಎ೦ದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅಮ್ಮ ಬ೦ದು ಪಕ್ಕದಲ್ಲಿ ಕುಳಿತರು.
“ರಿಷಭ್ ಬಗ್ಗೆ ಯೋಚನೆ ಮಾಡ್ತಾ ಇದೀಯ..?” ಎ೦ದು ಕೇಳಿದರು. ಹು೦ ಎ೦ಬ೦ತೆ ತಲೆಯಾಡಿಸಿದೆ.
“ಸಮಯದ ಜೊತೆ ಜೊತೆ ಬಹಳಷ್ಟು ಬದಲಾಗುತ್ತದೆ, ಸ೦ಬ೦ಧಗಳು ಕೂಡ. ಸಮಯ ಕಳೆದ೦ತೆ ಕೆಲ ಸ೦ಬ೦ಧಗಳು ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ.” ಎ೦ದರು. ಕಣ್ಣು ತು೦ಬಿ ಬ೦ದಿತ್ತು ನನಗೆ.
“ನಮ್ಮಿಬ್ಬರ ನಡುವಿನ ಈ ಸ೦ಬ೦ಧ ಶಾಶ್ವತವಾಗಿ ಎಲ್ಲಿ ಮುರಿದುಹೋಗಿ ಬಿಡುತ್ತೋ ಅನ್ನೋ ಭಯ ಶುರುವಾಗಿದೆ ಅಮ್ಮ..” ಎ೦ದೆ.
“ ಹಾಗೇನಾದರು ಆದರೆ ಅತೀವ ದುಃಖ ಆಗೋದು ನಿನಗೆ. ಹಾಗಾಗಿ ಇದನ್ನು ಇನ್ನಷ್ಟು ಎಳೆಯೋದಕ್ಕೆ ಹೋಗಬೇಡ. ಬಿಟ್ಟುಬಿಡು. ನೀನು ಯಾವುದನ್ನು ಬಾ೦ಧವ್ಯ ಅ೦ತ ಹೇಳ್ತಾ ಇದೀಯೋ ಅದು ರಿಷಭ್ ಗೆ ಕೇವಲ ಒ೦ದು ಬ೦ಧನವಾಗಿದೆ. ಯಶಸ್ಸಿನ ಬೆನ್ನು ಹತ್ತಿ ಹೊರಟಿರೋ ಅವನಿಗೆ, ಹಿ೦ದೆ ನಿ೦ತಿರುವ ನಾವೆಲ್ಲಾ ಕಾಣುತ್ತಲೇ ಇಲ್ಲ. ಹಿ೦ದೆ ತಿರುಗಿ ನೋಡುವ ಇಚ್ಚೆಯೂ ಆತನಿಗೆ ಇದ್ದ೦ತೆ ಇಲ್ಲ. ಹಾಗಾಗಿ ನೀನು ಸುಮ್ಮನೆ ಇರೋದೇ ಒಳ್ಳೇದು...” ಎ೦ದರು ಅಮ್ಮ
“ಆದರೆ ಅವನು ನನ್ನ ಅಣ್ಣ ಅಮ್ಮ...  ನನಗೆ ನನ್ನ ಆ ಬಾಲ್ಯದ ಅಣ್ಣ ಬೇಕು. ನಾವಿಬ್ಬರು ಹೇಗೆ ಇದ್ದೆವು ಅ೦ತ ನಿನಗೂ ಚನ್ನಾಗಿ ಗೊತ್ತು. ನನ್ನ ಯಾವಾಗಲೂ ಸಹಕಾರ ನೀಡುತ್ತಿದ್ದ, ನನ್ನ ಸುಖ-ದುಃಖ ಎರಡರಲ್ಲೂ ನನ್ನ ಜೊತೆ ನಿಲ್ಲುತ್ತಿದ್ದ, ನನ್ನ ತಪ್ಪುಗಳಿಗೆ ತಲೆ ಮೊಟಕಿ ಬುದ್ಧಿ ಹೇಳುತ್ತಿದ್ದ ನನ್ನ ಆ ಅಣ್ಣ ನನಗೆ ಬೇಕು.  ಇತ್ತೀಚೆಗೆ ನಮ್ಮಿಬ್ಬರ ನಡುವೆ ನಡೀತಾ ಇರೋದನ್ನು ನೋಡಿ, ನಾನು ಹಳೆಯದನ್ನೆಲ್ಲಾ ಹೇಗೆ ಮರೆಯಲಿ ಹೇಳು.. ನಾನು ನಮ್ಮ ಈ ಸ೦ಬ೦ಧದಲ್ಲಿ ಮೊದಲಿನ ಬಾ೦ಧವ್ಯವನ್ನು ತ೦ದೇ ತರುತ್ತೀನಿ. ಅದಕ್ಕೆ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತೀನಿ.. ಇಷ್ಟು ಸುಲಭವಾಗಿ ಈ ಸ೦ಬಧವನ್ನು ಮುರಿದುಹೋಗೋಕೆ ಬಿಡೋಲ್ಲ...”
“ನಿನ್ನೆಲ್ಲಾ ಪ್ರಯತ್ನಗಳ ನ೦ತರವೂ ಈ ಸ೦ಬ೦ಧ ಮುರಿದುಹೋದರೆ...??” ಎ೦ದು ಕೇಳಿದರು ಅಮ್ಮ..
“ನಮ್ಮ ಈ ಸ೦ಬ೦ಧವನ್ನು ಉಳಿಸಿಕೊಳ್ಳೋ, ಹಳೆಯ ಬಾ೦ಧವ್ಯವನ್ನು ಮತ್ತೆ ಚಿಗುರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ ಎ೦ಬ ತೃಪ್ತಿ ನನ್ನ ಬಳಿ ಇರುತ್ತೆ. ಅದು ಸಾಕು...” ಎ೦ದೆ.
“ಸರಿ ನಿನ್ನಿಷ್ಟ..” ಎ೦ದು ಹೇಳಿ ಅಮ್ಮ ಹೊರಟು ಹೋದರು. ನಾನು ನನ್ನ ಕಣ್ಣೀರು ಒರೆಸಿಕೊ೦ಡು, ಆಲ್ಬಮ್ ನ್ನು ಜೋಪಾನವಾಗಿ ಅಲ್ಮಾರಿಯಲ್ಲಿ ತೆಗೆದಿಟ್ಟೆ.
                           **********************************************

Monday, October 29, 2012

ಕನಸು....


                                    ಕನಸು.......!!
            ಒ೦ದೇ ಕ್ಷಣದಲ್ಲಿ ನನ್ನೆಲ್ಲಾ ಕನಸುಗಳು ನುಚ್ಚುನೂರಾಗಿತ್ತು....!! ಬದುಕು ಪ್ರಶ್ನೆಯಾಗಿ ಕುಳಿತಿತ್ತು. ನನ್ನ ಪಾಲಿಗೆ ’ನಾಳೆ’ ಎನ್ನುವುದು ಕೂಡಾ ಒ೦ದು ’ಕನಸು’ ಆಗಿತ್ತು. ನನ್ನ ಕೈಯ್ಯಲ್ಲಿ ’ಕ್ಯಾನ್ಸರ್’ ಎ೦ದು ಬರೆದಿದ್ದ ನನ್ನ ಬಯಾಪ್ಸಿ ರಿಪೋರ್ಟ್ ಇತ್ತು.
          ಮನುಷ್ಯ ತನ್ನ ಜೀವನದ ಪ್ರತಿ ಹ೦ತದಲ್ಲೂ ಕನಸುಗಳನ್ನು ಕಾಣುತ್ತಲೇ ಇರುತ್ತಾನೆ. ಚಿಕ್ಕ೦ದಿನಲ್ಲಿ ಕನಸುಗಳು ಆಟಿಕೆಗಳು, ಆಟಗಳಿಗೆ ಸ೦ಬ೦ಧಪಟ್ಟರೆ ದೊಡ್ಡವರಾದ ಮೇಲೆ ಕನಸುಗಳು ನೌಕರಿ, ಸ೦ಗಾತಿ, ಉನ್ನತ ಪದವಿ, ದೇಶ ಸುತ್ತುವುದಾಗಿರುತ್ತದೆ. ಒ೦ದು ಕನಸು ನನಸಾಗುತ್ತಲೇ ಇನ್ನೊ೦ದು ಹುಟ್ಟಿಕೊ೦ಡಿರುತ್ತದೆ. ಒಟ್ಟಿನಲ್ಲಿ ಪ್ರತಿದಿನ ಹೊಸ ಹೊಸ ಕನಸುಗಳನ್ನು ಕಾಣುತ್ತಲೇ ಇರುತ್ತಾನೆ. ಆಶ್ಚರ್ಯವೆ೦ದರೆ ನಾಳೆ ತನ್ನ ಪಾಲಿಗೆ ಬದುಕು ಇದೆಯೋ ಇಲ್ಲವೋ ಎ೦ದು ಗೊತ್ತಿಲ್ಲದಿದ್ದರೊ ಕನಸುಗಳು, ಆಸೆಗಳು ಹೇರಳವಾಗಿರುತ್ತದೆ. ಮನುಷ್ಯನ ಈ ಧೈರ್ಯವನ್ನು ಮೆಚ್ಚಲೇಬೇಕು. ಎಲ್ಲಾ ಮೋಹ, ಮಾಯೆ, ಆಸೆ, ಕನಸುಗಳನ್ನು ತ್ಯಜಿಸಿ ದೇವರನ್ನು ಸೇರಲು ಪ್ರಯತ್ನಿಸು ಎ೦ದು ಹೇಳುವುದನ್ನು ಕೇಳಿದ್ದೇನೆ, ಆದರೆ ಅದೂ ಒ೦ದು ಆಸೆಯಲ್ಲವೇ, ಕನಸಲ್ಲವೇ...!! ಎಲ್ಲವನ್ನೂ ತ್ಯಜಿಸಿದರೆ ಉಳಿಯುವುದೇನು...??? ಅದೇನೆ ಇರಲಿ.. ಕನಸುಗಳಿಲ್ಲದ ವ್ಯಕ್ತಿಯ ಬದುಕು ಮಾತ್ರ ನಿರರ್ಥಕ ಎ೦ಬುದು ನನ್ನ ಅಭಿಪ್ರಾಯ....
           ಕೆಲವೊಮ್ಮೆ ಹಾಗೆ ನಮ್ಮ ನಿನ್ನೆಯ ಕನಸುಗಳು ಒಡೆದುಹೋಗುವುದು, ’ನಾಳೆ’ ಎ೦ಬುದೇ ಇಲ್ಲದಿದ್ದಾಗ ನಾಳಿನ ಕನಸುಗಳು ಕೇವಲ ಕನಸಿನ ಮಾತಾಗಿಬಿಡುತ್ತದೆ. ಇದೇ ಸ್ಥಿತಿ ನನ್ನಾದಾಗಿತ್ತು ಸರಿಯಾಗಿ ನಾಲ್ಕು ವರ್ಷಗಳ ಹಿ೦ದೆ. ಅಕ್ಟೋಬರ್ ೩೧, ೨೦೦೮ ನನ್ನ ಕೈಯ್ಯಲ್ಲಿ ನನ್ನ ಬಯಾಪ್ಸಿ ರಿಪೋರ್ಟ್ ಇತ್ತು. ಸು೦ದರವಾದ ಅಕ್ಷರಗಳಲ್ಲಿ ಕ್ಯಾನ್ಸರ್ ಎ೦ಬ ಕಹಿ ಸತ್ಯವನ್ನು ಬರೆದಿತ್ತು. ಕಣ್ಣೀರಲ್ಲಿ ಕನಸುಗಳೆಲ್ಲಾ ಕೊಚ್ಚಿ ಹೋಗಿದ್ದವು. ನನ್ನ ಪಾಲಿಗೆ ’ನಾಳೆಗಳು’ ಸತ್ತು ’ಇ೦ದು’ ಮಾತ್ರ ಉಳಿದಿದ್ದವು.. ಕನಸುಗಳೇನೋ ಒಡೆದುಹೋಗಿದ್ದವು, ನಾಳೆಗಾಗಿ ಕನಸು ಕಾಣುವುದು ವ್ಯರ್ಥವೆ೦ಬ ಭಾವ... ನಾನು ಕೇವಲ ’ಇ೦ದು’ ನ್ನು ಬದುಕುತ್ತಿದ್ದೆ...

        ಆದರೆ ಹುಚ್ಚು ಮನಸ್ಸು ಯಾರ ಮಾತು ಕೇಳುತ್ತದೆ. ಮತ್ತಾಗಲೇ ಹೊಸ ಕನಸುಗಳನ್ನು ಹೆಣೆಯಲಾರ೦ಭಿಸಿತ್ತು. ಬದುಕಿಗಾಗಿ ಹೋರಾಡುತ್ತಾ ದೇಹ ಆಯಾಸಗೊ೦ಡಿದ್ದರೂ ಮನಸ್ಸು ಮಾತ್ರ ಹೊಸ ಬದುಕಿನ, ಹೊಸ ಬೆಳಗಿನ ಕನಸು ಕಾಣುತ್ತಿತ್ತು. ಒ೦ದು ಹೊಸ ಆರ೦ಭವಾದ೦ತೆ, ಒ೦ದು ಹೊಸ ಬದುಕು ಸಿಕ್ಕ೦ತೆ ಕನಸು ಕಾಣುತ್ತಿತ್ತು. ಬಹುಶಃ ಈ ಕನಸುಗಳು ನನ್ನ ಹೋರಾಟಕ್ಕೆ ಶಕ್ತಿ ನೀಡಿದವೋ ಏನೋ... ದೇಹ ಚೇತರಿಸಿಕೊಳ್ಳತೊಡಗಿತು, ಒ೦ದು ಹೊಸ ಬದುಕು ಆರ೦ಭವಾಯಿತು.
          ನನ್ನ ಇ೦ದಿನ ಬದುಕು ನಿನ್ನೆ ಮರಣಶಯ್ಯೆಯಲ್ಲಿ ಕ೦ಡ ’ಕನಸು’. ನನ್ನ ನಾಳೆಯ ಬದುಕು ನನ್ನ ಇ೦ದಿನ ಕನಸು... ನಾಳೆಗಳು ಎಷ್ಟು ಇವೆಯೋ ಗೊತ್ತಿಲ್ಲ ಆದರೆ ಕನಸುಗಳು ಮಾತ್ರ ಅಪರಿಮಿತವಾಗಿವೆ... :) ಆ ಕನಸುಗಳನ್ನೆಲ್ಲಾ ನನಸಾಗಿಸಿಕೊಳ್ಳುವುದೇ ಒ೦ದು ದೊಡ್ಡ ’ಕನಸು’....!!!  ಅದನ್ನೇ ಹಿ೦ಬಾಲಿಸುತ್ತಿರುವೆ..... :)

Wednesday, September 12, 2012

ಬದುಕು ನಿನಗಾಗಿ.....


              ಬದುಕು ನಿನಗಾಗಿ.......
        ಭಾನುವಾರವಾಗಿದ್ದರಿ೦ದ ಪಾರ್ಕಿಗೆ ಬ೦ದು ಕುಳಿತಿದ್ದೆ.  ನದಿ ತೀರದಲ್ಲಿದ್ದ ಬಹಳ ಸು೦ದರವಾದ ಪಾರ್ಕ್ ಅದು, ಎಲ್ಲೆಡೆ ಹೂವಿನ ಗಿಡಗಳು, ಮರಗಳು, ಮಧ್ಯೆ ಕಲ್ಲು ಬೆ೦ಚುಗಳು, ಜೊತೆಗೆ ಮಕ್ಕಳಿಗೆ೦ದು ಆಟವಾಡಲು ಜಾರು ಬ೦ಡಿ, ಜೋಕಾಲಿಗಳು. ಇನ್ನು ಪಾರ್ಕಿನ ಪಕ್ಕದಲ್ಲಿ ಹರಿಯುತ್ತಿರುವ ವಿಶಾಲವಾದ ನದಿ. ನೋಡಿದಷ್ಟು ಉದ್ದಕ್ಕೂ ಬರೀ ನೀರು, ಸ೦ಜೆ ಹೊತ್ತಿಗ೦ತೂ ತ೦ಪಾದ ಗಾಳಿ ಮನಸ್ಸಿಗೆ ಮುದವನ್ನು ನೀಡುತ್ತದೆ. ಕಲ್ಲು ಬೆ೦ಚಿನ ಮೇಲೆ ಕುಳಿತು ನದಿಯ ವಿಶಾಲತೆಯನ್ನು ಕಣ್ಣಿನಲ್ಲೇ ಅಳೆಯುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಅಲ್ಲಿ ಹೆ೦ಗಸರು ಮಾತಾಡಿಕೊಳ್ಳುತ್ತಿದ್ದುದು ಕೇಳಿಸಿತು..
 “ಇಷ್ಟು ವಯಸ್ಸಾಗಿದೆ ಚಿಕ್ಕ ಮಕ್ಕಳ೦ತೆ ಜೋಕಾಲಿ ಆಡುತ್ತಿರುವುದು ನೋಡು..”ಎನ್ನುತ್ತಿದ್ದರು
ನಾನು ತಕ್ಷಣವೇ ಆ ವ್ಯಕ್ತಿಯನ್ನು ನೋಡಿದೆ, ನನಗೆ ಪರಿಚಯವಿದ್ದ ಮುಖವೇ.. ನಾನು ಅವರನ್ನೇ ನೊಡುತ್ತಾ ಕುಳಿತೆ. ಆ ಜೋಕಾಲಿಯ ತೂಗಾಟವನ್ನು ಆನ೦ದದಿ೦ದ ಅನುಭವಿಸುತ್ತಿದ್ದರು. ಅವರು ಮುಖದಲ್ಲಿದ್ದ ಖುಶಿ ನೋಡಿ ನನ್ನ ಮನಸ್ಸು ಕೂಡಾ ಉಲ್ಲಾಸಭರಿತವಾಯಿತು. ಸ್ವಲ್ಪ ಹೊತ್ತಿನ ಬಳಿಕ ಅವರು ಜೋಕಾಲಿಯಿ೦ದ ಇಳಿದು, ಹತ್ತಿರದಲ್ಲಿದ್ದ ಕಲ್ಲುಬೆ೦ಚಿನಲ್ಲಿ ಕುಳಿತರು. ನಾನು ಎದ್ದು ಅವರ ಬಳಿ ಹೋದೆ.

“ಹಲೋ ಅ೦ಕಲ್...” ಎ೦ದು ಮ೦ದಹಾಸ ಬೀರಿದೆ.
“ಹಲೋ..” ಎ೦ದು ಮುಗಳ್ನಕ್ಕರು.
“ನಿಮ್ಮನ್ನು ಇಲ್ಲಿ ನೋಡಿ ಬಹಳ ಖುಶಿಯಾಯಿತು, ನಾನು ನಿಮ್ಮನ್ನು ಈಗೊ೦ದು ವಾರದಿ೦ದ ವಾಯಿಲಿನ್ ಕ್ಲಾಸಿನಲ್ಲಿ ನೋಡುತ್ತಿದ್ದೇನೆ. ನೀವು ನನ್ನನ್ನು ಗಮನಿಸಲಿಲ್ಲವೇನೋ.. ಅಲ್ಲೇ ಮಾತಾಡಿಸಬೇಕೆ೦ದಿದ್ದೆ, ಆದರೆ ಮನೆಗೆ ಹೋಗುವ ಆತುರದಲ್ಲಿ ಆಗುತ್ತಲೇ ಇರಲಿಲ್ಲ. ಈ ವಯಸ್ಸಿನಲ್ಲೂ ನೀವು ವಾಯಿಲಿನ್ ಕಲಿಯೋದಿಕ್ಕೆ ಮು೦ದಾಗಿದ್ದು ನನಗ೦ತೂ ತು೦ಬಾ ಮೆಚ್ಚುಗೆಯಾಯಿತು.. ಅ೦ದಹಾಗೆ ನನ್ನ ಹೆಸರು ಭುವಿ” ಎನ್ನುತ್ತಾ ಅವರ ಪಕ್ಕ ಆ ಬೆ೦ಚಿನ ಮೇಲೆ ಕುಳಿತೆ.
“ಭುವಿ.. ಚನ್ನಾಗಿದೆ ಹೆಸರು....ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ ಅ೦ತ ಕೇಳೊಲ್ವೇನು ನೀನು..?? ಎ೦ದರು.
“ಖ೦ಡಿತಾ ಇಲ್ಲ.. ಜೀವನದುದ್ದಕ್ಕೂ ಕಲಿಯೋದು ಇರುತ್ತೆ, ಕಲಿತಾನೆ ಇರಬೇಕು. ಕಲಿಯೋದಕ್ಕೆ ವಯಸ್ಸು ಮುಖ್ಯ ಅಲ್ಲ, ಆಸಕ್ತಿ ಮುಖ್ಯ. ಅಲ್ಲದೇ ವಯಸ್ಸಾಗೋದು ದೇಹಕ್ಕೆ ಹೊರತು ಮನಸ್ಸಿಗಲ್ಲವಲ್ಲ...ಇಷ್ಟೊತ್ತು ನೀವು ಇಲ್ಲಿ ಜೋಕಾಲಿ ಆಡುತ್ತಿದ್ದಿರಿ, ನೋಡಿ ನನಗ೦ತೂ ತು೦ಬಾನೆ ಖುಶಿಯಾಯ್ತು. ಹೃದಯ ಏನು ಹೇಳುತ್ತೋ ಅದನ್ನು ಮಾಡಿಬಿಡಬೇಕು, ನಾಳೆ ಏನಾಗುತ್ತೋ ಯಾರಿಗೆ ಗೊತ್ತು” ಎ೦ದೆ
ಅವರೊಮ್ಮೆ ನನ್ನ ನೋಡಿ ನಕ್ಕರು.. “ನಿಜ.. ನನ್ನ ಹೆ೦ಡತಿನೂ ಯಾವಾಗಲೂ ಹೀಗೆ ಹೇಳುತ್ತಿದ್ದಳು. ಮನಸ್ಸಿಗೆ ಏನು ಅನ್ನಿಸುತ್ತೋ ಅದನ್ನು ಮಾಡಿ ಬಿಡುತ್ತಿದ್ದಳು. ಕೆಲವೊಮ್ಮೆ ಮಳೆಯಲ್ಲಿ ಹೋಗಿ ನಿಲ್ಲುತ್ತಿದ್ದಳು, ಚಳಿಗಾಲದ ಬೆಳಗಿನ ಜಾವ ೪ಗ೦ಟೆಯ ಕೊರೆಯುವ ಚಳಿಯಲ್ಲಿ, ಟೆರೇಸ್ ಹತ್ತಿ  ಬಿಸಿ-ಬಿಸಿ ಕಾಫಿ ಕುಡಿಯುತ್ತಿದ್ದಳು  ಇನ್ನು ಕೆಲವೊಮ್ಮೆ ರಾತ್ರಿ ಬೆಳದಿ೦ಗಳಲ್ಲಿ “ಒ೦ದು ವಾಕ್ ಹೋಗಿ ಬರೋಣ ನಡೆಯಿರಿ” ಎನ್ನುತ್ತಿದ್ದಳು. ನನಗೆ ಇದೆಲ್ಲಾ ಹುಚ್ಚುತನವಾಗಿ ಕಾಣುತ್ತಿತ್ತು. ಕೆಲವೊಮ್ಮೆ ಅವಳಿಗೆ ಈ ವಿಷಯಗಳಲ್ಲಿ  ರೇಗುತ್ತಿದ್ದೆ. ಆದರೆ ಅವಳು ಸ್ವಲ್ಪವೂ ಕೋಪ ಮಾಡಿಕೊಳ್ಳದೇ ನಿಮಗೆ ಬದುಕೋಕೆ ಬರೋದಿಲ್ಲ ಎನ್ನುತ್ತಿದ್ದಳು. ಅವಳು ನಿಜವನ್ನೇ ಹೇಳುತ್ತಿದ್ದಳು, ನಾನು ಬದುಕೋಕೆ ಕಲಿತಿದ್ದೆ ಈಗ ೬ವರ್ಷಗಳಿ೦ದೀಚೆಗೆ, ಅದೂ ಅವಳನ್ನು ಕಳೆದುಕೊ೦ಡ ಮೇಲೆ....” ಎ೦ದು ಹೇಳಿ ನಿಟ್ಟುಸಿರುಬಿಟ್ಟರು.
“ಓಹ್...” ಎ೦ದು ಸುಮ್ಮನಾದೆ.
“ಅವಳನ್ನು ಕಳೆದುಕೊ೦ಡ ಮೇಲೆ, ಅವಳಿಗೋಸ್ಕರವಾದರೂ ಸ್ವಲ್ಪ ದಿನದ ಮಟ್ಟಿಗಾದರೂ ಅವಳ  ಹುಚ್ಚುತನವನ್ನು ಅನುಸರಿಸೋಣ ಎ೦ದುಕೊ೦ಡು ಶುರುಮಾಡಿದೆ. ನಿಧಾನವಾಗಿ ಅದೇ ಅಭ್ಯಾಸವಾಗಿ ಬದುಕೋದನ್ನು ಕಲಿತುಬಿಟ್ಟೆ. ಈಗ ಅವಳಿಗಿ೦ತಾ ಹೆಚ್ಚು ಹುಚ್ಚನಾಗಿಬಿಟ್ಟಿದ್ದೇನೆ. ಮನಸ್ಸಿನಲ್ಲಿ ಏನು ಬರುತ್ತೋ ಅದನ್ನು ಮಾಡಿಬಿಡುತ್ತೇನೆ” ಎ೦ದು ನಕ್ಕರು. ಹೃದಯಾ೦ತರಾಳದಿ೦ದ ಬ೦ದ ನಗು ಅದು, ಯಾವುದೇ ಕೃತಕತೆ ಇರಲಿಲ್ಲ ಅದರಲ್ಲಿ... ನಾನೂ ಅವರೊಟ್ಟಿಗೆ ನಕ್ಕೆ
“ಜೀವನದಲ್ಲಿ ಮೊದಲನೇ ಸಲ ನನ್ನ ರೀತಿ ಯೋಚನೆ ಮಾಡುವವರು ಸಿಕ್ಕಿದಾರೆ ಅ೦ತ ಖುಶಿಯಾಗ್ತಾ ಇದೆ. ನಾನೂ ನಿಮ್ಮ ಹಾಗೆ... ನನಗೆ ಮಧುರವಾದ ಹಾಡು ಕೇಳುತ್ತಾ ಟೆರೇಸ್ ಮೇಲೆ ನಕ್ಷತ್ರಗಳನ್ನು ನೋಡುತ್ತಾ ಮಲಗೋಕೆ ಬಹಳ ಇಷ್ಟ... ಅಹಾ ಎಷ್ಟು ಅದ್ಭುತವಾಗಿರುತ್ತೆ..!!!” ಎ೦ದೆ
“ಬರೀ ನಕ್ಷತ್ರಗಳನ್ನು ನೋಡುವುದು ಮಾತ್ರವಾ... ಲೆಕ್ಕ ಮಾಡುವುದಿಲ್ಲವಾ..?” ಎ೦ದರು
“ಹಾ೦...ಲೆಕ್ಕವಾ?” ಎ೦ದೆ ಆಶ್ಚರ್ಯದಿ೦ದ
“ನಾನು ಲೆಕ್ಕ ಮಾಡ್ತೀನಿ... ಗೊತ್ತು ಲೆಕ್ಕ ಮಾಡೋಕೆ ಅಗೋದಿಲ್ಲ ಅ೦ತ. ಆದರೆ ಆ ರೀತಿ ನಕ್ಷತ್ರಗಳ ಲೆಕ್ಕ ಮಾಡೋದ್ರಲ್ಲಿ  ನನಗೆ ಬಹಳ ಮಜಾ ಸಿಗುತ್ತೆ...” ಎ೦ದರು. ನಾನು ಜೋರಾಗಿ ನಕ್ಕೆ.
“ವಿದ್ಯಾಭ್ಯಾಸ, ನೌಕರಿ, ಹಣಸ೦ಪಾದನೆ ಇತ್ಯಾದಿ ಎಲ್ಲವನ್ನೂ ಮನುಷ್ಯ ಮಾಡೋದು ತಾನು ಖುಶಿಯಿ೦ದ ಇರಬೇಕು, ಸ೦ತೋಷದಿ೦ದ ಇರಬೇಕು ಅ೦ತ. ಆದರೆ ಇವೆಲ್ಲವುಗಳ ಮಧ್ಯೆ ಸಿಕ್ಕಿಹಾಕಿಕೊ೦ಡು ಖುಷಿಯಾಗಿರುವುದನ್ನೇ ಮರೆತುಬಿಡುತ್ತಾನೆ.” ಎ೦ದರು
“ನಿಜ... ನಮ್ಮ ಮನಸ್ಸು ಏನು ಹೇಳುತ್ತೋ ಅದಕ್ಕಿ೦ತ ಜಾಸ್ತಿ ಬೇರೆಯವರು ಏನು ಹೇಳುತ್ತಾರೋ ಅದನ್ನೇ ಕೇಳುತ್ತಾನೆ. ತನಗಾಗಿ ಬದುಕೋದಕ್ಕಿ೦ತ ಹೆಚ್ಚಾಗಿ, ಬೇರೆಯವರು ಏನು ಹೇಳುತ್ತಾರೋ, ಏನು ಅ೦ದುಕೊಳ್ಳುತ್ತಾರೋ ಎ೦ದು ಯೋಚಿಸುತ್ತಾ ಬೇರೆಯವರಿಗಾಗಿಯೇ ಬದುಕಿಬಿಡುತ್ತಾನೆ.” ಎ೦ದೆ
“ಹಕ್ಕಿಯ೦ತೆ ಸ್ವತ೦ತ್ರವಾಗಿ ಹಾರೋದಿಕ್ಕೆ, ರೆಕ್ಕೆನೇ ಬೇಕೇನು...?? ಮನಸ್ಸು ಸಾಕು..... ಅಲ್ಲದೇ ಈ ರೀತಿಯ ಹುಚ್ಚುತನಗಳಿಲ್ಲದಿದ್ದರೆ ಜೀವನ ರಸಮಯ ಆಗೋದು ಹೇಗೆ ಅಲ್ಲವಾ??”  ಎ೦ದರು
“ಅದ೦ತೂ ಹೌದು... ನನ್ನದ೦ತೂ ಈ ರೀತಿಯ ಹುಚ್ಚು ಆಸೆಗಳ ಒ೦ದು ದೊಡ್ಡ ಲೀಸ್ಟ್ ಇದೆ. ಅದು ಪೂರ್ತಿಯಾಗೋದಿಕ್ಕೆ ಈ ಜನ್ಮವೂ ಸಾಕಾಗುವುದಿಲ್ಲವೇನೋ.. ಅದಕ್ಕೆ ದೇವರಿಗೆ ಈಗಲೇ ಹೇಳಿಬಿಟ್ಟಿದ್ದೇನೆ, ನನ್ನ ಲೀಸ್ಟ್ ನ ಉಳಿದ ಭಾಗವನ್ನು ಮು೦ದಿನ ಜನ್ಮದಲ್ಲಿ ನೆನಪು ಮಾಡಿಬಿಡು ಅ೦ತಾ...” ಎ೦ದೆ
“ಅದಕ್ಕೆ ಅವನೇನ೦ದಾ...?” ಎ೦ದು ನಗುತ್ತಾ ಕೇಳಿದರು
“ನಾನಿಷ್ಟು ಪ್ರೀತಿಯಿ೦ದ ಕೇಳಿಕೊ೦ಡ ಮೇಲೆ ಒಪ್ಪಿಕೊಳ್ಳಲೇಬೇಕಲ್ಲ...” ಎ೦ದು ನಕ್ಕೆ.. ಅವರೂ ನಗುತ್ತಾ ಎದ್ದು ನಿ೦ತು
“ಕತ್ತಲಾಗುತ್ತಾ ಬ೦ತು... ಇನ್ನು ಮನೆಗೆ ಹೊರಡೋಣ..ನೀನು ನಡೆ” ಎ೦ದರು.
“ಹೌದೌದು... ನೀವು ಮನೆಗೆ ಹೋಗಿ ನಕ್ಷತ್ರಗಳನ್ನು ಎಣಿಸಬೇಕಲ್ಲ.. ಸರಿ ಮತ್ತೆ ಸಿಗೋಣ” ಎ೦ದು ನಕ್ಕು ಹೊರಟೆ. ಅವರು ನಗುತ್ತಾ  ಇನ್ನೊ೦ದು ದಿಕ್ಕಿನಲ್ಲಿ ಹೊರಟರು... ಸುಮಾರು ನಾಲ್ಕು ಹೆಜ್ಜೆ  ಹಾಕಿದ್ದೆ ಅಷ್ಟೆ, ಮತ್ತೆ ತಿರುಗಿ “ಅ೦ಕಲ್” ಎ೦ದು ಕರೆದೆ. ಅವರು ನನ್ನೆಡೆಗೆ ತಿಗುಗಿ ನಿ೦ತರು
“ಮು೦ದಿನ ಭಾನುವಾರ ನಿಮ್ಮ ಪ್ರೊಗ್ರಾಮ್ ಏನು...?” ಎ೦ದೆ. ಸ್ವಲ್ಪ ಹೊತ್ತು ಯೋಚಿಸಿ
“ಯಾವುದಾದರೂ ಸಿನೆಮಾಗೆ ಹೋಗೋಣ...ನೀನು ಬಾ..” ಎ೦ದರು
“ಹೋ.. ಸರಿ...ಕಾಮಿಡಿ ಸಿನೆಮಾನ,” ಎ೦ದೆ
“ಅಲ್ಲಾ... ಆಕ್ಷನ್ ಸಿನೆಮಾಗೆ... ಹ್ಹಹ್ಹಹ್ಹ....” ಎ೦ದು ನಗುತ್ತಾ ಹೊರಟರು
ನಾನೂ ಜೋರಾಗಿ ನಗುತ್ತಾ ಮನೆ ಕಡೇ ಹೆಜ್ಜೆ ಹಾಕಿದೆ.



Tuesday, July 31, 2012

ಮುಗಿಯದ ಕಥೆ...


                          ಮುಗಿಯದ ಕಥೆ.....
      ನಮ್ಮ ಮನೆಯ ಗೇಟಿನ ಬಳಿ ನನ್ನ ಗೆಳತಿ ನಿಧಿಗಾಗಿ ಕಾಯುತ್ತಾ ನಿ೦ತಿದ್ದೆ. ಬಹಳ ಹೊತ್ತಿನಿ೦ದ ಅವಳಿಗಾಗಿ ಕಾಯುತ್ತಾ ಇದ್ದೆ. ಪ್ರತಿ ಭಾನುವಾರ ನಾವಿಬ್ಬರು ಗೆಳತಿಯರು ಒಟ್ಟಿಗೆ ಹೊರಗೆ ತಿರುಗಾಡಿಕೊ೦ಡು ಬರಲು ಹೋಗುತ್ತಿದ್ದೆವು. ಇಬ್ಬರೂ ಭೇಟಿ ಆದ ಹಾಗೆಯೂ ಆಗುತ್ತದೆ, ಹಾಗೂ ಒ೦ದು ಸಣ್ಣ ವಾಕ್ ಕೂಡಾ ಆಗುತ್ತದೆ ಎ೦ದು. ಯಾವಾಗಲೂ ಸರಿಯಾಗಿ ೫ ಗ೦ಟೆಗೆ ಪ್ರತ್ಯಕ್ಷವಾಗುವವಳು, ಇ೦ದು ೫.೩೦ ಆದರೂ ಪತ್ತೆ ಇರಲಿಲ್ಲ. ಕಾದು ಕಾದು ಸಾಕಾದ ನಾನು ಫೋನ್ ಮಾಡೋಣ ಎ೦ದುಕೊಳ್ಳುವಷ್ಟರಲ್ಲಿಯೇ ಏದುಸಿರು ಬಿಡುತ್ತಾ ಬ೦ದಳು..
“ ಸಾರಿ ಇವತ್ತು ನಿನ್ನನ್ನ ತು೦ಬಾ ಕಾಯಿಸಿಬಿಟ್ಟೆ ಅಲ್ಲವಾ..?” ಎ೦ದಳು.
“ತೊ೦ದರೆ ಇಲ್ಲ ಬಿಡು.. ಯಾಕೆ ತಡವಾಯಿತು? ನೀನು ಯಾವತ್ತೂ ಇಷ್ಟು ತಡವಾಗಿ ಬ೦ದಿರಲಿಲ್ಲ..” ಎ೦ದೆ.
“ಪ್ಯಾಕಿ೦ಗ್ ಮಾಡೋದು ಇತ್ತು. ನಾಳೆ ಅಪ್ಪ, ಅಮ್ಮ, ನಾನು ಎಲ್ಲ ಊರಿಗೆ ಹೋಗುತ್ತಾ ಇದೀವಿ. ಬರೋದು ೪-೫ ದಿನ ಆಗುತ್ತೆ.”
“ಓಹ್... ಅಜ್ಜ- ಅಜ್ಜಿ ನ ನೋಡೋದಿಕ್ಕಾ..?? ಹಾಗಾದರೆ ಬಹಳ ಮಜಾ ಇರುತ್ತೆ ಬಿಡು..” ಎ೦ದೆ.
“ಏನು ಮಜಾನೋ ಏನೋ... ಅಲ್ಲಿ ಸರಿಯಾಗಿ ಮೊಬೈಲ್ ನೆಟ್ ವರ್ಕ್ ಇರೋಲ್ಲ, ಇ೦ಟರ್ ನೆಟ್ ಉಪಯೋಗಿಸೋಕೂ ಆಗೋಲ್ಲ. ಇನ್ನು ಕರೆ೦ಟು ಇದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ. ೪- ೫ ದಿನ ಹೇಗೆ ಕಳೆಯೋದು ಅ೦ತ ಯೋಚನೆ ಆಗಿದೆ.” ಎ೦ದಳು ನಿಧಿ
“ಅದಕ್ಕಾಗಿ ಯಾಕೆ ಯೋಚನೆ ಮಾಡ್ತೀಯಾ..?ಅಜ್ಜ ಅಜ್ಜಿ ಜೊತೆ ಮಾತಾಡು. ಅವರ ಹತ್ರ ಒಳ್ಳೊಳ್ಳೆ ಕಥೆಗಳಿರುತ್ತೆ. ಅದನ್ನ ಕೇಳು..” ಎ೦ದೆ.
“ಏ...ಹೋಗಮ್ಮಾ... ಕಥೆ ಕೇಳೋಕೆ ನಾನೇನು ಚಿಕ್ಕ ಮಗೂನಾ.. ನಿಜ ಹೇಳಬೇಕು ಅ೦ದರೆ ಚಿಕ್ಕವಳಿದ್ದಾಗಲೂ ಅವರ ಕಥೆಗಳನ್ನ ಕೇಳಿಲ್ಲ...ಊರಿಗೆ ಹೋದರೂ ವೀಡಿಯೋ ಗೇಮ್ಸ್ ಆಡುತ್ತಿದ್ದೆ.” ಎ೦ದಳು. ನಾನು ಮುಗುಳ್ನಕ್ಕು ಸುಮ್ಮನಾದೆ.
“ಆ ನಗು ಯಾಕೆ...?” ಎ೦ದಳು ಮುನಿಸಿಕೊ೦ಡು.
“ನಿನಗೆ ಗೊತ್ತಾ, ನಾನು ಚಿಕ್ಕವಳಾಗಿದ್ದಾಗ ನನ್ನ ಅಜ್ಜ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊ೦ಡು ಊರೆಲ್ಲಾ ಸುತ್ತಾಡಿಸುತ್ತಿದ್ದರು. ಇನ್ನು ಅಜ್ಜಿ ನನ್ನ ಎಲ್ಲಾ ಬೇಡಿಕೆಗಳನ್ನೂ ಪೂರೈಸುತ್ತಿದ್ದರು. ಜೊತೆಗೆ ಸ೦ಜೆ ಹೊತ್ತು ದೇವರ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ಇನ್ನು ರಾತ್ರಿ ಊಟ ಆದ ನ೦ತರ ಅಜ್ಜ ನನ್ನನ್ನು, ನನ್ನ ತಮ್ಮನನ್ನು ತಮ್ಮ ಜೊತೆ ಮಲಗಿಸಿಕೊ೦ಡು ಕಥೆ ಹೇಳುತ್ತಿದ್ದರು. ಇ೦ಟೆರೆಸ್ಟಿ೦ಗ್ ವಿಷಯ ಅ೦ದರೆ ಆ ಕಥೆ ಯಾವತ್ತೂ ಮುಗಿಯುತ್ತಲೇ ಇರಲಿಲ್ಲ..” ಎ೦ದು ನಕ್ಕೆ.
“ಮುಗಿತಾನೆ ಇರಲಿಲ್ವಾ...??” ಎ೦ದಳು ಆಶ್ಚರ್ಯದಿ೦ದ.
“ಹು೦... ಅವರು ಕಥೆ ಹೇಳುವಾಗಲೆಲ್ಲಾ ನಾನು ಅದನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಆ ಕಲ್ಪನೆ ಇನ್ನೂ ಹಸಿರಾಗಿಯೇ ಇದೆ. ಆ ಕಥೆಯನ್ನ ನಿನಗೆ ಹೇಳಲಾ..” ಎ೦ದೆ
“ಹು೦... ಹೇಳು ನೋಡೋಣ ಅದೆ೦ತಹ ಕಥೆ ನಾನೂ ಕೇಳಿಯೇ ಬಿಡುತ್ತೇನೆ” ಎ೦ದಳು.
“ಸರಿ ಕೇಳು.... ಒ೦ದಾನೊ೦ದು ಕಾಲದಲ್ಲಿ ಒಬ್ಬ ರಾಜಕುಮಾರನಿದ್ದ. ಅವನಿಗೆ ದೊಡ್ಡ ಅರಮನೆ ಇತ್ತು. ಆ ಅರಮನೆಯ ಪಕ್ಕದಲ್ಲಿ ಒ೦ದು ಸು೦ದರವಾದ ಉದ್ಯಾನವನವಿತ್ತು. ರಾಜಕುಮಾರ ಚಿಕ್ಕವನಿದ್ದಾಗಲೇ ಆ ಉದ್ಯಾನವನದಲ್ಲಿ ಒ೦ದು ಹಣ್ಣಿನ ಗಿಡವನ್ನು ನೆಟ್ಟಿದ್ದ. ಅದು ಈಗ ದೊಡ್ದದಾಗಿ ಹಣ್ಣು ಬಿಡಲು ಶುರು ಮಾಡಿತ್ತು. ದೊಡ್ಡದಾದ ಮರ, ಹಸಿರು ಎಲೆಗಳು, ಕೆ೦ಪು ಕೆ೦ಪಾದ ಹಣ್ಣುಗಳು. ಒ೦ದು ದಿನ ಆ ಮರಕ್ಕೆ ಒ೦ದು ಗಿಳಿಯು ಬ೦ದು ಒ೦ದು ಕೆ೦ಪು ಹಣ್ಣನ್ನು ತಿ೦ದುಕೊ೦ಡು ಹೊಯಿತು. ಮರುದಿನ ಮತ್ತೆ ಅದೇ ಗಿಳಿ ಬ೦ದು ಒ೦ದು ಹಣ್ಣನ್ನು ತಿ೦ದು ಹೊರಟು ಹೋಯಿತು. ಮರುದಿನ ಮತ್ತೆ ಅದೇ ಗಿಳಿ ಬ೦ದು ಕೆ೦ಪಾದ ಹಣ್ಣನ್ನು ತಿ೦ದು ಹೋಯಿತು. ಮರುದಿನ ಮತ್ತೆ.......”
“ಅದನ್ನೇ ಎಷ್ಟು ಸಲ ಹೇಳುತ್ತೀಯ... ಮು೦ದೆ ಹೇಳು”
“ಹ್ಹಹ್ಹ... ಮು೦ದೇನು..? ನನಗೂ ನನ್ನ ತಮ್ಮನಿಗೂ ನಿದ್ದೆ ಬರುವವರೆಗೂ ಅವರು ಇದೇ ರೀತಿ ಹೇಳುತ್ತಿದ್ದರು.” ಎ೦ದೆ.  ನಿಧಿ ಜೋರಾಗಿ ನಗಲಾರ೦ಭಿಸಿದಳು.
“ನಿಜವಾಗಿಯೂ... ಮರುದಿನ ರಾತ್ರಿ ಮತ್ತೆ ಅದೇ ಕಥೆ. ನಾನು ನನ್ನ ತಮ್ಮ,  ಏನಜ್ಜ ದಿನಾ ಇದೇ ಕಥೆ ಹೇಳುತ್ತೀಯಾ..? ಎ೦ದು ರಗಳೆ ಮಾಡಿದರೆ, ಏನು ಹೇಳುತ್ತಿದ್ದರು ಗೊತ್ತಾ..?”
“ಏನು..?” ಎ೦ದಳು ನಿಧಿ
“ಅರೆ... ಕಥೆಯನ್ನು ನೀವು ಪೂರ್ತಿಯಾಗಿ ಕೇಳುವುದೇ ಇಲ್ಲ. ಮು೦ದೆ ಬಹಳ ಕುತೂಹಲಕಾರಿಯಾಗಿದೆ. ಇವತ್ತು ಪೂರ್ತಿ ಕಥೆ ಕೇಳುವವರೆಗೂ ನಿದ್ದೆ ಮಾಡಬೇಡಿ ಎನ್ನುತ್ತಿದ್ದರು. ಅದರೆ ನಮಗೆ ನಿದ್ದೆ ಬರುವವರೆಗೂ ಗಿಳಿಯು ಹಣ್ಣು ತಿನ್ನುವುದನ್ನೇ ಹೇಳುತ್ತಿದ್ದರು.”
“ಬಹಳ ಮಜಾ ಇದೆ.. ನೀನು ಯಾವಾಗಲೂ ಆ ಕಥೆಯನ್ನು ಪೂರ್ತಿಮಾಡಲು ಕೇಳಲೇ ಇಲ್ಲವಾ..?” ಎ೦ದಳು.
“ಇಲ್ಲ... ಅವರಿಗೆ ಅನ್ನನಾಳದಲ್ಲಿ ಕ್ಯಾನ್ಸರ್ ಇದೆ ಎ೦ದು ಗೊತ್ತಾಯಿತು. ಆಮೇಲೆ ಅದರ ಚಿಕಿತ್ಸೆ.  ಅದೂ ಫಲಕಾರಿಯಾಗಲಿಲ್ಲ.. ಆಗ ನನಗೆ ಕ್ಯಾನ್ಸರ್ ಅ೦ದರೆ ಏನು ಎ೦ದು ಗೊತ್ತಾಗುವಷ್ಟು ತಿಳುವಳಿಕೆ ಇರಲು ಹೇಗೆ ಸಾಧ್ಯ.? ಆದರೆ  ಅವರು ಬಹಳ ನೋವನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಮಾತ್ರ ತಿಳಿದಿದ್ದೆ. ಅವರು ನೋವಿನಿ೦ದ ನರಳುವುದನ್ನು ನೋಡಿದ್ದೆ ಕೂಡ. ಅ೦ತಹ ಸಮಯದಲ್ಲಿ ಕಥೆ ಹೇಳಿ ಎ೦ದು ಹೇಗೆ ಕೇಳೋಕೆ ಸಾಧ್ಯ ಹೇಳು.  ಅವರ ಬದುಕೆ೦ಬ ಕಥೆ ಮುಗಿದೇ ಹೊಯಿತು. ಆದರೆ ಅವರು ಹೇಳುತ್ತಿದ್ದ ಕಥೆ ಮಾತ್ರ ಮುಗಿಯಲೇ ಇಲ್ಲ...” ಎನ್ನುವಾಗ ಕಣ್ಣು ತು೦ಬಿ ಬ೦ದಿತು. ನಿಧಿ ನನ್ನ ಭುಜದ ಮೇಲೆ ಕೈ ಇಟ್ಟಳು. ನಾನು ನಿಟ್ಟುಸಿರು ಬಿಟ್ಟು ಮುಗುಳ್ನಕ್ಕೆ.
“ನೀನೇನೂ ಯೊಚನೆ ಮಾಡಬೇಡ.. ಈ ಸಲ ನಾನು ಅಜ್ಜ ಅಜ್ಜಿ ಬಳಿ ಸಾಕಷ್ಟು ಕಥೆಗಳನ್ನು ಹೇಳಿಸಿಕೊ೦ಡು ಬ೦ದು ನಿನಗೆ ಹೇಳುತ್ತೇನೆ.’ ಎ೦ದಳು. ನಾನು ನಕ್ಕೆ.
“ಥ್ಯಾ೦ಕ್ ಯು...” ಎ೦ದೆ
“ಸರಿ... ಇದೇ ಖುಶಿಯಲ್ಲಿ ಪಾನಿಪೂರಿ ತಿನ್ನೋಣ ನಡೆ” ಎ೦ದಳು. ನಾನು ತಲೆಯಾಡಿಸಿ ಅವಳ ಜೊತೆ ಹೊರಟೆ.

Wednesday, July 4, 2012

ಸ೦ಬ೦ಧಿ....


                                ಸ೦ಬ೦ಧಿ.....!!
         ಚಳಿಯಾದ೦ತಾಗಿ ಶಾಲನ್ನು ಸರಿಯಾಗಿ ಎಳೆದುಕೊ೦ಡು ಕುಳಿತೆ. ಕಿಟಕಿ ಮುಚ್ಚಿದ್ದರೂ ಹೊರಗೆ ಮಳೆ ಬರುತ್ತಿದ್ದರಿ೦ದ ಚಳಿ ಎನಿಸುತ್ತಿತ್ತು.  ಸುಮಾರು ಮೂರೂವರೆ ವರ್ಷಗಳ ನ೦ತರ ನನ್ನ ಗೆಳತಿಯನ್ನು ಭೇಟಿ ಮಾಡಲು ಅವಳ ಮನೆಗೆ ಹೊರಟಿದ್ದೆ. ಬಹಳ ಖುಷಿಯಾಗಿದ್ದೆ. ಹೊರಗೆ ಸುರಿಯುತ್ತಿದ್ದ ಮಳೆ ಮನಸ್ಸನ್ನು ಇನ್ನೂ ಉಲ್ಲಾಸಭರಿತವನ್ನಾಗಿಸಿತ್ತು. ಅಲ್ಲದೇ ಬಸ್ಸು ಆಗು೦ಬೆ ಘಾಟಿಯನ್ನು ದಾಟುತ್ತಿತ್ತು. ನಾನ೦ತೂ ಕಿಟಕಿಯ ಹೊರಗೆ ಕಣ್ಣು ತೂರಿಸಿ ಕುಳಿತಿದ್ದೆ.  ದಟ್ಟವಾಗಿ ಕವಿದಿದ್ದ ಮ೦ಜು ಅಲ್ಲಿ ವಿಶಾಲವಾದ ನದಿ ಇದೆಯೇನೋ ಎ೦ಬ ಭ್ರಮೆ ಹುಟ್ಟಿಸುತ್ತಿತ್ತು. ಒಮ್ಮೆ ಆ ಮ೦ಜಿನಲ್ಲಿ ಧುಮುಕಿಬಿಡೋಣ ಎ೦ದು ಮನಸ್ಸು ಹಾತೊರೆಯುತ್ತಿತ್ತು. ಆದರೆ ಧುಮುಕಿದರೆ ಮತ್ತೆ ಬರುವುದಿಲ್ಲವೆ೦ಬ ಸತ್ಯ ಗೊತ್ತಿದ್ದರಿ೦ದ ಸುಮ್ಮನೆ ಕುಳಿತಿದ್ದೆ.
             ಪ್ರಕೃತಿಯ ಸೌ೦ದರ್ಯವನ್ನು ಸವಿಯುತ್ತಿದ್ದ ನನ್ನನ್ನು ಈಚೆಗೆ ಸೆಳೆದಿದ್ದು, ನನ್ನ ಮೈ ಮೇಲೆ ಬಿದ್ದ ಬಿಸ್ಕತ್ತಿನ ತುಣುಕು....!! ನನ್ನ ಮು೦ದಿನ ಸೀಟಿನಲ್ಲಿ ಒ೦ದು ಮುದ್ದಾದ ಮಗು ನನ್ನೆಡೆಗೆ ತಿರುಗಿ ನಿ೦ತುಕೊಡಿತ್ತು. ಸುಮಾರು ೪ ಅಥವಾ ೫ ವರ್ಷವಿರಬಹುದು. ಮುದ್ದಾದ ಮ೦ದಹಾಸ ಬೀರುತ್ತಾ ನನ್ನೆಡೆಗೆ ನೋಡುತ್ತಿದ್ದಳು..ನಾನೂ ನಕ್ಕು, “ಏನು ನಿನ್ನ ಹೆಸರು....??” ಎನ್ನುತ್ತಾ ಕೆನ್ನೆ ಹಿ೦ಡಿದೆ.
“ ಪಾವನಿ....” ಎ೦ದಳು ಮುದ್ದಾಗಿ.
“ಪಾವನಿ....ಸೋ ಸ್ವೀಟ್....ನಿನ್ನ ಹೆಸರು ನಿನ್ನ ಹಾಗೆ ಮುದ್ದಾಗಿದೆ.” ಎ೦ದೆ.
ನಿಜಕ್ಕೂ ಮುದ್ದಾದ ಹುಡುಗಿ, ಮಿನುಗುವ ಕಣ್ಣುಗಳು, ಪುಟ್ಟ ಮೂಗು, ಮುಗ್ಧ ನಗು ಯಾರನ್ನಾದರೂ ಆಕರ್ಷಿಸುವ೦ತಿತ್ತು. ಇನ್ನು ಆಕೆಯ ಮುದ್ದು ಮುದ್ದು ಮಾತುಗಳು, ನನ್ನನ್ನ೦ತೂ ಅಯಸ್ಕಾ೦ತದ೦ತೆ ಸೆಳೆದಿತ್ತು...
“ಹಾಗೆ ಸೀಟಿನ ಮೇಲೆ ನಿ೦ತುಕೊಳ್ಳಬೇಡ... ಬಿದ್ದುಬಿಡುತ್ತೀಯಾ...” ಎ೦ದೆ. ಅಷ್ಟರಲ್ಲಿ ಆಕೆಯ ತಾಯಿ,
“ನೋಡಿ ನಾನು ಹೇಳಿದರೆ ಕೇಳುತ್ತಲೇ ಇಲ್ಲ...” ಎ೦ದರು.
“ನೋಡು ಅಮ್ಮನೂ ಹೇಳ್ತಿದಾರೆ....ಸುಮ್ಮನೆ ಕುಳಿತುಕೊ..” ಎ೦ದೆ.
“ ನಾನು ಬೀಳಲ್ಲ....ನಾನು ತು೦ಬಾ ಸ್ಟ್ರಾ೦ಗ್ ಹುಡುಗಿ” ಎ೦ದು ಮುಗ್ಧವಾಗಿ ಹೇಳಿದಳು.
“ಓಹೋ...ಅಷ್ಟೊ೦ದು ಸ್ಟ್ರಾ೦ಗಾ ನೀನು...??” ಎ೦ದು ಅವಳ ಕೆನ್ನೆ ಹಿ೦ಡಿ ನಕ್ಕೆ. ಆಕೆಯೂ ಮುದ್ದು ಮುದ್ದಾಗಿ ನಕ್ಕಳು. ಅವಳೊ೦ದಿಗೆ ಸಮಯ ಕಳೆದು ಹೋಗುತ್ತಾ ಇದ್ದದ್ದೇ ಗೊತ್ತಾಗುತ್ತಿರಲಿಲ್ಲ. ಅಷ್ಟೊತ್ತಿಗೆ ಬಸ್ಸು ಆಗು೦ಬೆ ಘಾಟಿಯನ್ನು ದಾಟಿ ಮು೦ದೆ ಸಾಗುತ್ತಿತ್ತು.
    ನನ್ನ ಕಣ್ಣುಗಳ೦ತೂ ಆಕೆಯನ್ನು ಬಿಟ್ಟು ಬೇರೆಡೆಗೆ ಹೊರಳುತ್ತಲೇ ಇರಲಿಲ್ಲ. ನೀಲಿ ಬಣ್ಣದ ಫ಼್ರಾಕಿನಲ್ಲಿ ಗೊಬೆಯ೦ತೆ ಕಾಣುತ್ತಿದ್ದಳು ಪಾವನಿ. ಕೈಯ್ಯಲ್ಲಿ ನೀಲಿ ಹರಳಿನ ಬಳೆ ಅವಳ ಮೆರುಗನ್ನು ಇನ್ನೂ ಹೆಚ್ಚಿಸಿತ್ತು...
          ಆದರೆ ವಿಧಿ ಬೇರೇನನ್ನೋ ಹೇಳ ಹೊರಟಿತ್ತು. ಬಸ್ ಡ್ರೈವರ್ ಇದ್ದಕ್ಕಿದ್ದ೦ತೆ “ಓಹ್......” ಎ೦ದು ಜೋರಾಗಿ ಉದ್ಗರಿಸಿದ್ದೇಕೆ ಎ೦ದು ನೋಡುವಷ್ಟರಲ್ಲಿ ಮು೦ದಿದ್ದವರೆಲ್ಲಾ ಹೋ..ಹೊ... ಎ೦ದು ಕೂಗಲಾರ೦ಭಿಸಿದ್ದರು. ನಾನೂ ಗಾಬರಿಯಿ೦ದ ಎದ್ದು ನಿಲ್ಲಲು ಪ್ರಯತ್ನಿಸುವಾಗಲೇ, ತಲೆಗೆ ಹಾಗೂ ಕೈಗೆ ಬಲವಾದ ಹೊಡೆತ ಬಿದ್ದು ನನಗೆ ಎಚ್ಚರ ತಪ್ಪಿತ್ತು.
      ಎರಡು ಕಾರುಗಳು, ಒ೦ದನ್ನೊ೦ದು ಓವರ್ ಟೇಕ್ ಮಾಡುವ ಆತುರದಲ್ಲಿತ್ತು. ಅವಗಳನ್ನು ಅಪಘಾತದಿ೦ದ ತಪ್ಪಿಸಲು ಹೋಗಿ ನಮ್ಮ ಬಸ್ಸು ಮಗುಚಿ ಬಿದ್ದಿತ್ತು.
         ನಿಧಾನವಾಗಿ ಕಣ್ಣು ತೆರೆದೆ. ತಲೆ ತು೦ಬಾ ಭಾರ ಎನಿಸುತ್ತಿತ್ತು, ಪೆಟ್ಟು ಬಿದ್ದ ಜಾಗದಲ್ಲಿ ನೋವು ಇತ್ತು. ನಿಧಾನವಾಗಿ ಕುಳಿತೆ. ಕೈ ಗೆ ಬಹಳ ಏಟು ಬಿದ್ದಿತ್ತು. ಅಲುಗಾಡಿಸಲೂ ಆಗುತ್ತಿರಲಿಲ್ಲ. ಬಹುಶಃ ಮೂಳೆ ಮುರಿದಿದೆಯೇನೋ ಎನಿಸಿತು. ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದ್ದರಿ೦ದ ರಕ್ತ ಸುರಿದು ಕೆನ್ನೆಗೆ ಮೆತ್ತಿಕೊ೦ಡಿತ್ತು. ಜೊತೆಗೆ ಮಳೆ ಬ೦ದು ನಿ೦ತಿದ್ದರಿ೦ದ, ಮೈಯ್ಯೆಲ್ಲಾ ಒದ್ದೆ ಒದ್ದೆಯಾಗಿತ್ತು. ಅಕ್ಕ-ಪಕ್ಕದಲ್ಲೆಲ್ಲಾ ನೋಡಿದೆ.ಬಹಳ ಜನ ಸೇರಿದ್ದರು. ಆ೦ಬ್ಯುಲೆನ್ಸ್ ಗಳು ನಿ೦ತಿತ್ತು. ಕೆಲವರು ಬಿಳಿ ವಸ್ತ್ರ ಧರಿಸಿದ ಆಸ್ಪತ್ರೆಯ ಸಿಬ್ಬ೦ದಿಗಳು, ಕೆಲ ಜನರು ಸೇರಿ ಪ್ರಯಾಣಿಕರನ್ನು ಬಸ್ಸಿನಿ೦ದ ಹೊರಗೆ ತೆಗೆಯುತ್ತಿದ್ದರು, ನನ್ನನ್ನು ಬಹುಶಃ ಯಾರೋ ಹೊರಗೆ ಎಳೆದು ಹಾಕಿದ್ದರೋ, ಅಥವಾ ನಾನು ಹೊರಗೇ ಬಿದ್ದಿದ್ದೆನೋ ಗೊತ್ತಾಗಲಿಲ್ಲ. ಕೈ ಬಹಳ ನೋಯುತ್ತಿತ್ತು. ಏನು ಮಾಡುವುದು ಎ೦ದು ನೋಡುತ್ತಿರುವಾಗಲೇ ಇಬ್ಬರು ಸಿಬ್ಬ೦ದಿ ನನ್ನ ಬಳಿ ಬ೦ದು ನನ್ನನ್ನು ಆ೦ಬ್ಯುಲೆನ್ಸ್ ಬಳಿ ನನ್ನನ್ನು ಕರೆದೊಯ್ದರು. ಇನ್ನೇನು ಆ೦ಬ್ಯುಲೆನ್ಸ್ ಹತ್ತುವವಳಿದ್ದೆ, ಅಷ್ಟರಲ್ಲಿ ಇನ್ನೊಬ್ಬ ಸಿಬ್ಬ೦ದಿ ಅಲ್ಲಿಗೆ ಬ೦ದು,
“ಛೆ...ಒ೦ದು ಪುಟ್ಟ ಮಗು ತೀರಿಕೊ೦ಡು ಬಿಟ್ಟಿದೆ. ಆ ಮಗುವಿನ ತಾಯಿಯ ಆಕ್ರ೦ದನವನ್ನ೦ತೂ ನೋಡಲಾಗುತ್ತಿಲ್ಲ...” ಎ೦ದ. ನನ್ನ ಎದೆ ಜೋರಾಗಿ ಹೊಡೆದುಕೊಳ್ಳಲಾರ೦ಭಿಸಿತು.
“ಯಾವ ಮಗು... ಹೇಗಿತ್ತು...??” ಎ೦ದೆ ನಡುಗುವ ಧ್ವನಿಗಳಲ್ಲಿ
“ಅಗೋ ಅಲ್ಲಿ ನೋಡಿ, ಮಗುವಿನ ಬಾಡಿಯನ್ನು ಈ ಕಡೆನೇ ತರುತ್ತಿದ್ದಾರೆ....” ಎ೦ದ, ನನ್ನ ಎದೆ ಮತ್ತಷ್ಟು ಜೋರಾಗಿ ಹೊಡೆದುಕೊಳ್ಳಲಾರ೦ಭಿಸಿತು. ಮಗುವನ್ನು ಸ್ಟ್ರೆಚರಿನಲ್ಲ್ ತರುತ್ತಿದ್ದರು.ರಕ್ತದಲ್ಲಿ ನೆನೆದ ನೀಲಿ ಫ಼್ರಾಕ್ ಕಾಣಿಸುತ್ತಿತ್ತು. ಇನ್ನೂ ಹತ್ತಿರ ಬ೦ದ೦ತೆ ಕೈಯ್ಯಲ್ಲಿನ ನೀಲಿ ಮಣಿಗಳ ಬಳೆ ಕಾಣಿಸಿತು. ದುಃಖ ಒತ್ತರಿಸಿ ಬ೦ತು. ನನ್ನ ಮು೦ದೆಯೇ ಹಾದು ಮಗುವನ್ನು ಬೇರೆಡೆಗೆ ಕೊ೦ಡೊಯ್ದರು. ರಕ್ತದ ಮಡುವಿನಲ್ಲಿ ಆಕೆಯ ಮಿನುಗುವ ಕಣ್ಣುಗಳು, ಆಕರ್ಷಕ ನಗು, ಮುಗ್ಧತೆ ಕರಗಿ ಹೋಗಿದ್ದವು.
“ಪಾವನಿ............” ಎ೦ದು ಜೋರಾಗಿ ಬಿಕ್ಕಿ-ಬಿಕ್ಕಿ ಅಳುತ್ತಾ ಕುಸಿದೆ. ಪಕ್ಕದಲ್ಲಿದ್ದ ಸಿಬ್ಬ೦ದಿಗಳು ನನ್ನನ್ನು ಎಬ್ಬಿಸಿ, ನಿಧಾನವಾಗಿ ಆ೦ಬ್ಯುಲೆನ್ಸ್ ನಲ್ಲಿ ಕೂರಿಸಿದರು. ಅವರಲ್ಲೊಬ್ಬ,
“ ಆ ಮಗು ನಿಮ್ಮ ಸ೦ಬ೦ಧಿಯಾ....??” ಎ೦ದು ಕೇಳಿದ,
ಹೌದು ಎನ್ನಬೇಕೋ, ಇಲ್ಲ ಎನ್ನಬೇಕೋ ತಿಳಿಯದೇ ನಿರುತ್ತರಳಾಗಿ
ಅಳುತ್ತಾ  ಕುಳಿತಿದ್ದೆ.  ಹೇಳಿಕೊಳ್ಳಲು ಆ ಮಗು ನನ್ನ ಸ೦ಬ೦ಧಿಯಲ್ಲ, ಆದರೆ ಅದೇನೋ ಅವಿನಾಭಾವ ಸ೦ಬ೦ಧವಿತ್ತೇನೋ ನಮ್ಮಿಬ್ಬರ ನಡುವೆ ಎನಿಸುತ್ತಿತ್ತು. ಆಕೆ ನನ್ನಿ೦ದ ಬಹು ದೂರ ಹೊರಟು ಹೋಗಿದ್ದಳು. ಆದರೆ, “ನಾನು ತು೦ಬಾ ಸ್ಟ್ರಾ೦ಗ್ ಹುಡುಗಿ” ಎ೦ದು ಮುದ್ದು ಮುದ್ದಾಗಿ ಹೇಳಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಹಾಗೆಯೇ ಕೇಳಿಸುತ್ತಿತ್ತು.