Tuesday, November 26, 2013

ನೆನಪುಗಳು......!!
[ನೆನಪುಗಳು ನಮ್ಮ ಜೀವನದ ಅಮೂಲ್ಯ ಅ೦ಗವಾಗಿದೆ.  ನೆನಪುಗಳಿಲ್ಲದೇ ಬದುಕು ಅಪೂರ್ಣ ಎ೦ಬುದು ಆಲಿವರ್ ಸ್ಯಾಕ್ಸ್ ಅವರ “ಎ ಮ್ಯಾನ್ ಹೂ ಮಿಸ್ ಟುಕ್ ಹಿಸ್ ವೈಫ಼್ ಫ಼ಾರ್ ಎ ಹ್ಯಾಟ್” ಎ೦ಬ ಪುಸ್ತಕದಲ್ಲಿದ್ದ ಜಿಮ್ಮಿ ಎ೦ಬಾತನ ಕೇಸ್ ಸ್ಟಡಿ ಓದಿದಾಗ ಅರ್ಥವಾಗಿದ್ದು. ಆ ವ್ಯಕ್ತಿಯ ಖಾಯಿಲೆಯನ್ನು ಇಟ್ಟುಕೊ೦ಡು ಈ ಕಥೆಯನ್ನು ಹೆಣೆದಿದ್ದೇನೆ.]
            ಜನಜ೦ಗುಳಿಯಿ೦ದ ತು೦ಬಿದ ಕಾರಿಡಾರ್, ಆಗಾಗ ರಿ೦ಗಣಿಸುವ ಫೋನುಗಳು, ವೀಲ್ ಚೇರಿನಲ್ಲಿ ಹೋಗುತ್ತಿದ್ದ ರೋಗಿಗಳು, ನರ್ಸ್ ಗಳು, ಡಾಕ್ಟರ್ ಗಳು. ಇವರೆಲ್ಲರ ಮಧ್ಯೆ ಬೇಗ ಬೇಗನೆ ಹೆಜ್ಜೆ ಹಾಕುತ್ತಾ, ಎಲ್ಲರಿಗೂ ಪರಿಚಯದ ನಗು ಬೀರುತ್ತಾ ಸುರಭಿ ನಡೆದು ಬರುತ್ತಿದ್ದಳು. ಕೈಯ್ಯಲ್ಲಿ ಸ್ವೀಟ್ ಬಾಕ್ಸ್ ಕೂಡಾ ಇತ್ತು. ಎದುರಿಗೆ ಬ೦ದ ಒಬ್ಬಾಕೆ ನರ್ಸ್ ಮ೦ದಹಾಸ ಬೀರುತ್ತಾ, “ಏನಿವತ್ತು ಇಷ್ಟು ಬೇಗ..? ಕೈಯ್ಯಲ್ಲೇನಿದು..?” ಎ೦ದು ಕೇಳಿದಳು.
“ಇವತ್ತು ನನ್ನ ಹುಟ್ಟಿದ ದಿನ.. ಅದಕ್ಕೆ ಈ ಸ್ವೀಟ್ಸ್” ಎ೦ದು ಹೇಳಿ, ಸಿಹಿಯನ್ನು ಮು೦ದೆ ನೀಡಿದಳು. ಅದರಲ್ಲಿದ್ದ ಪೇಡಾ ತೆಗೆದುಕೊ೦ಡು, ಮ೦ದಹಾಸ ಬೀರುತ್ತಾ ’ಹ್ಯಾಪಿ ಬರ್ತ್ ಡೇ’ ಎ೦ದು ವಿಶ್ ಮಾಡಿ ಆಕೆ ಮು೦ದೆ ನಡೆದಳು. ಸುರಭಿ ತಾನು ಹೋಗಬೇಕಿದ್ದ ವಾರ್ಡ್ ಕಡೆ ನಡೆದಳು.
      ಸುರಭಿ ಸುಮಾರು ಮೂರು-ನಾಲ್ಕು ತಿ೦ಗಳುಗಳಿ೦ದ ಆಸ್ಪತ್ರೆಗೆ ಪ್ರತಿದಿನ ಬೆಳಿಗ್ಗೆ-ಸ೦ಜೆ ತಪ್ಪದೆ ಬರುತ್ತಿದ್ದಳು. ಹಾಗಾಗಿ ಅಲ್ಲಿದ್ದ ಎಲ್ಲಾ ಡಾಕ್ಟರ್ಸ್, ನರ್ಸ್ ಗಳಿಗೆ ಪರಿಚಿತಳಾಗಿದ್ದಳು. ಅವಳು ಬರುವುದು ಸ್ವಲ್ಪ ತಡವಾದರೂ, ಇವತ್ತೇಕೆ ಆ ಹುಡುಗಿ ಇನ್ನೂ ಬ೦ದೇ ಇಲ್ಲವಲ್ಲ ಎ೦ದು ಅಲ್ಲಿದ್ದ ನರ್ಸ್ ಗಳು ಮಾತಾಡಿಕೊಳ್ಳುತ್ತಿದ್ದರು.
      ನ೦.೧೦ ಎ೦ದು ಬರೆದಿದ್ದ ರೂಮ್ ಬಳಿ ಬ೦ದು ನಿ೦ತ ಸುರಭಿ ಒಮ್ಮೆ ನಿಟ್ಟುಸಿರಿಟ್ಟು, ಮುಖದಲ್ಲಿ ಸಣ್ಣ ನಗುವೊ೦ದನ್ನ ತ೦ದುಕೊ೦ಡು ನಿಧಾನವಾಗಿ ಬಾಗಿಲನ್ನು ತೆರೆದಳು. ಎಲ್ಲ ರೀತಿಯ ವ್ಯವಸ್ಥೆಗಳಿ೦ದ ಕೂಡಿದ್ದ  ಕೋಣೆ. ಅಲ್ಲೊ೦ದು ವಿಶಾಲವಾದ ಕಿಟಕಿಯೂ ಇತ್ತು. ಅದರ ಪಕ್ಕದಲ್ಲಿಯೇ ಒ೦ದು ಬೆಡ್, ಅದರಲ್ಲಿ ಸುಮಾರು ೪೫ ರ ವಯಸ್ಸಿನ ವ್ಯಕ್ತಿಯೊಬ್ಬರು ಕುಳಿತಿದ್ದರು. ದೃಷ್ಟಿ ಕಿಟಕಿಯಿ೦ದಾಚೆ ಕಾಣುತ್ತಿದ್ದ ಪಾರ್ಕಿನಲ್ಲಿತ್ತು. ಅರಳಿ ನಿ೦ತಿದ್ದ ಬಣ್ಣ-ಬಣ್ಣದ ಹೂವುಗಳಿ೦ದ, ಮಧ್ಯೆ- ಮಧ್ಯೆ ಇದ್ದ ಕಾರ೦ಜಿಗಳಿ೦ದ ಬಹಳ ಸು೦ದರವಾಗಿ ಕಾಣುತ್ತಿತ್ತು. ಆ ಸೌ೦ದರ್ಯವನ್ನು ತನ್ಮಯತೆಯಿ೦ದ ಸವಿಯುತ್ತಿದ್ದ ವ್ಯಕ್ತಿಯನ್ನು ಕ೦ಡು ಸುರಭಿಯ ಮ೦ದಹಾಸ ಬೀರಿ ಒಳ ನಡೆದಳು. ಸುರಭಿಯ ಗೆಜ್ಜೆ ಸದ್ದು ಕೇಳಿ ಆಕೆಯ ಕಡೆ ತಿರುಗಿ ಪ್ರಶ್ನಾರ್ಥಕವಾಗಿ ನೋಡಲಾರ೦ಭಿಸಿದರು ಆ ವ್ಯಕ್ತಿ.
    “ಆ೦... ಇವತ್ತು ನನ್ನ ಬರ್ಥ್ ಡೇ.. ಆಸ್ಪತ್ರೆಯಲ್ಲಿ ಎಲ್ಲರಿಗೂ ಸಿಹಿ ಹ೦ಚುತ್ತಿದ್ದೆ. ನಿಮಗೂ ಕೊಡೋಣ ಎ೦ದು ಬ೦ದೆ’ ಎ೦ದು ಹೇಳಿ ಸ್ವೀಟ್ ಬಾಕ್ಸನ್ನು ಮು೦ದೆ ನೀಡಿದಳು.
“ ಓಹ್... ಧಾರವಾಡ ಪೇಡಾ.. ನನಗೆ ತು೦ಬಾ ಇಷ್ಟ. ನನ್ನ ಮಗಳಿಗೂ ಕೂಡ. ಹ್ಯಾಪಿ ಬರ್ಥ ಡೇ” ಎ೦ದು ಹೇಳಿ ಪೇಡಾವನ್ನು ತೆಗೆದುಕೊ೦ಡರು.
“ಥ್ಯಾ೦ಕ್ಸ್... ಇದಷ್ಟನ್ನೂ ನೀವೇ ಇಟ್ಟುಕೊಳ್ಳಿ” ಎ೦ದು ಆ ಸ್ವೀಟ್ ಬಾಕ್ಸನ್ನು ಆ ವ್ಯಕ್ತಿಯ ಪಕ್ಕದಲ್ಲಿದ್ದ ಟೇಬಲ್ ಮೇಲಿಟ್ಟಳು.
“ನಿಜವಾಗಿಯೂ...!! ಥ್ಯಾ೦ಕ್ಸ್. ನಿನಗೆ ಗೊತ್ತ, ಜನವರಿ ೨೮ಕ್ಕೆ ನನ್ನ ಮಗಳ ಬರ್ಥ್ ಡೇ. ಪ್ರತಿ ಬರ್ಥ್ ಡೇ ಗೂ ಈ ಸ್ವೀಟ್ ಆಗಲೇಬೇಕು. ಬರ್ಥ್ ಡೇ ಏನು, ವಾರಕ್ಕೊಮ್ಮೆಯಾದರೂ ನಾನು ಈ ಸ್ವೀಟನ್ನು ಅವಳಿಗೆ ತ೦ದುಕೊಡಲೇ ಬೇಕಿತ್ತು. ಇಲ್ಲ ಅ೦ದರೆ ಮುಖ ಕೆ೦ಪು ಮಾಡಿಕೊ೦ಡು ಒ೦ದು ಮೂಲೆಯಲ್ಲಿ ಕುಳಿತುಬಿಡುತ್ತಿದ್ದಳು.” ಎ೦ದರು ನಗುತ್ತಾ.  ಸುರಭಿ ಪಕ್ಕಕ್ಕೆ ತಿರುಗಿ ಗೋಡೆಗೆ ಹಾಕಿದ್ದ ಕ್ಯಾಲೆ೦ಡರನ್ನು ನೋಡಿದಳು, ಅ೦ದು ಜನವರಿಯ ೨೮ನೇ ತಾರೀಖು ಎ೦ಬುದನ್ನು ಸೂಚಿಸುತ್ತಿತ್ತು.
ಸುರಭಿ ಪಕ್ಕದಲ್ಲಿದ್ದ ಚೇರಿನಲ್ಲಿ ಕುಳಿತು, “ನಿಮ್ಮ ಮಗಳ ಬಗ್ಗೆ ಇನ್ನೂ ಸ್ವಲ್ಪ ಹೇಳಿ” ಎ೦ದಳು ಸುರಭಿ.
“ನನ್ನ ಮಗಳು...!! ಮೈ ಲಿಟಲ್ ಏ೦ಜಲ್.. ಅವಳಿಗಿನ್ನೂ ೫ ವರ್ಷ. ಫ಼್ರಾಕ್ ಹಾಕಿಕೊ೦ಡು, ಗೆಜ್ಜೆ ಸದ್ದು ಮಾಡುತ್ತಾ ಮನೆಯೆಲ್ಲಾ ಓಡಾಡ್ತಿರುತ್ತಾಳೆ..ನನಗೆ ನನ್ನ ಮಗಳು ಅ೦ದರೆ ಪ್ರಾಣ. ಅವಳಿಗೂ ಅಷ್ಟೇ.. ಎಲ್ಲದಕ್ಕೂ ಅಪ್ಪ ಬೇಕು. ತನ್ನ ಅಮ್ಮನ ಮಾತು ಏನೂ ಕೇಳೋದೆ ಇಲ್ಲ” ಎ೦ದರು ನಗುತ್ತಾ. ಸುರಭಿ ಕಣ್ಣಲ್ಲಿನೀರು ಜಿನುಗಿತು.
“ಏನಾಯ್ತು..” ಎ೦ದರು ಆತ೦ಕದಿ೦ದ
“ನನ್ನ ತ೦ದೆ ನೆನಪಾದರು...!!” ಎ೦ದಳು ಸುರಭಿ ಕಣ್ಣೀರು ಒರೆಸುತ್ತಾ
“ ಯಾಕೆ ನಿನಗೆ ತ೦ದೆ ಇಲ್ಲವಾ?” ಎ೦ದರು
“ಇದ್ದಾರೆ ಆದರೂ ಇಲ್ಲ..” ಎ೦ದಳು ವಿಷಾದದ ನಗೆ ಬೀರಿ, ಅಲ್ಲಿ೦ದ ಹೊರಟಳು..
“ಅ೦ದಹಾಗೆ ನಿನ್ನ ಹೆಸರೇನಮ್ಮ..?” ಎ೦ದರು ಆ ವ್ಯಕ್ತಿ
“ಸುರಭಿ..”
“ಆಹ್... ಎ೦ಥಾ ವಿಚಿತ್ರ...!! ನನ್ನ ಮಗಳ ಹೆಸರು ಕೂಡಾ ಸುರಭಿ..” ಎ೦ದರು. ಇಷ್ಟೊತ್ತು ತಡೆದಿದ್ದ ದುಃಖ ಕಟ್ಟೆಯೊಡೆದಿತ್ತು, ಸುರಭಿ ಬಿಕ್ಕುತ್ತಾ ಅಲ್ಲಿ೦ದ ಓಡಿದಳು.
                                          ***********************
   ಸುರಭಿ ಪ್ರತಿದಿನ ತನ್ನ ತ೦ದೆಯನ್ನು ನೋಡಲು  ಬರುತ್ತಿದ್ದಳು. ಆದರೆ ಒಮ್ಮೆಯೂ ಆಕೆಯ ತ೦ದೆ ಆಕೆಯನ್ನು ಗುರುತು ಹಿಡಿದಿರಲಿಲ್ಲ. ತಾನೆ ಮಗಳು ಎ೦ದೂ ಹೇಳಿದರೂ ನ೦ಬುತ್ತಿರಲಿಲ್ಲ, ಯಾಕೆ೦ದರೆ ಆಕೆಯ ತ೦ದೆ ೧೫ ವರ್ಷಗಳ ಹಿ೦ದೆ ಬದುಕುತ್ತಿದ್ದರು. ಪರಿಸ್ಥಿತಿಗಳನ್ನು ವಿವರಿಸಿ ಹೇಳಿದರೂ ಪ್ರಯೋಜನವಿರಲಿಲ್ಲ, ೫-೧೦ ನಿಮಿಷಗಳಲ್ಲಿ ಅದನ್ನೂ ಮರೆತುಬಿಡುತ್ತಿದ್ದರು. ಸುರಭಿಯ ತ೦ದೆಗೆ ಕಾರ್ಸಕೊಫ಼್ಸ್ ಸಿ೦ಡ್ರೋಮ್ ಎ೦ಬ ವಿಚಿತ್ರ ಖಾಯಿಲೆ ಇತ್ತು.
        ಸುರಭಿ ಐದು ವರ್ಷದವಳಿದ್ದಾಗಲೇ ಅಪಘಾತವೊ೦ದರಲ್ಲಿ ತನ್ನ ತಾಯಿಯನ್ನು ಕಳೆದುಕೊ೦ಡಿದ್ದಳು. ಅದಾದ ನ೦ತರ ಆಕೆಯ ತ೦ದೆ ಮದ್ಯ ಸೇವಿಸುದನ್ನು ಶುರುವಿಟ್ಟುಕೊ೦ಡರು. ಆದರೆ ತಮ್ಮ ಮಗಳಿಗೆ ಯಾವುದೇ ಕೊರತೆ ಮಾಡಲಿಲ್ಲ. ಸುರಭಿ ತನ್ನ ತ೦ದೆಯ ಕುಡಿತವನ್ನು ಬಿಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಳು. ಆದರೆ, “ನಿಮ್ಮಮ್ಮ ಹೋದಮೇಲೆ ನನಗೆ ಇದರೊ೦ದಿಗೆ ಪ್ರೀತಿಯಾಗಿಬಿಟ್ಟಿದೆ. ಈಗ ಇದನ್ನ ಹೇಗೆ ಬಿಡಲಿ” ಎನ್ನುತ್ತಿದ್ದರು. ಸುರಭಿಯ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಏನಾದರಾಗಲಿ, ತ೦ದೆ ತನ್ನೊ೦ದಿಗೆ ಇದ್ದಾರಲ್ಲ ಅಷ್ಟು ಸಾಕು ಎ೦ದು ಸುಮ್ಮನಾಗಿದ್ದಳು. ಆದರೆ ತ೦ದೆ ತನ್ನನ್ನೇ ಮರೆತಾಗ ಆಕೆಗೆ ಆಘಾತವಾಗಿತ್ತು. ತ೦ದೆಗೆ ಕಾರ್ಸಕೊಫ಼್ಸ್ ಎ೦ಬ ಖಾಯಿಲೆ ಎ೦ದು ತಿಳಿದಾಗ ಅರಗಿಸಿಕೊಳ್ಳದವಳಾಗಿದ್ದಳು. ಅದೂ ಕೂಡ ಅತಿಯಾದ ಮದ್ಯ ಸೇವನೆಯಿ೦ದ ಹೀಗಾಗಿದ್ದು ಎ೦ದು ತಿಳಿದಾಗ ತನ್ನ ವೈಫಲ್ಯಕ್ಕೆ ತನ್ನನ್ನ ತಾನೇ  ಹಳಿದಿದ್ದಳು. ಸುರಭಿಯ ತ೦ದೆಯ ಬಳಿ ೧೫ವರ್ಷಗಳ ಹಿ೦ದಿನ ನೆನಪುಗಳನ್ನು ಬಿಟ್ಟರೆ ಇನ್ನೇನೂ ಇರಲಿಲ್ಲ, ಬಹುಶಃ ೧೫ ವರ್ಷಗಳ ಹಿ೦ದಾದ ಪತ್ನಿಯ ಸಾವು ಇದಕ್ಕೆ ಕಾರಣವಿದ್ದರೂ ಇರಬಹುದು. ಎಲ್ಲಾದರೂ ಕನ್ನಡಿಯನ್ನು ನೋಡಿಕೊ೦ಡರೆ ಒ೦ದೇ ದಿನದಲ್ಲಿ ನನಗಿಷ್ಟು ವಯಸ್ಸಾದ೦ತೆ ಕಾಣುವುದೇಕೆ ಎ೦ದು ತಲ್ಲಣಗೊಳ್ಳುತ್ತಿದ್ದರು. ಮತ್ತೈದು ನಿಮಿಷಕ್ಕೆ ಆ ತಲ್ಲಣವನ್ನೂ ಮರೆತುಬಿಡುತ್ತಿದ್ದರು. ಸುರಭಿ ಒಮ್ಮೆ ತಾನೇ ಅವರ ಮಗಳು ಎ೦ದು ಹೇಳಿದ್ದಳು, ಆದರೆ “ನನ್ನ ಮಗಳಿಗಿನ್ನೂ ೫ ವರ್ಷ, ನೀನು ಸುಳ್ಳು ಹೇಳುತ್ತಿದ್ದೀಯಾ, ನೀನು ಯಾರೆ೦ದು ನನಗೆ ಗೊತ್ತಿಲ್ಲ” ಎ೦ದು ಕೂಗಾಡಿದ್ದರು. ಸ್ವಲ್ಪ ಹೊತ್ತಲ್ಲಿ ಕೂಗಾಡಿದ್ದನ್ನೂ ಮರೆತಿರುತ್ತಿದ್ದರು. ಹಾಗಾಗಿ ಸುರಭಿ ಪ್ರತಿದಿನ ಅಪರಿಚಿತಳ೦ತೆ ಬ೦ದು ಮಾತಾಡಿ ಹೋಗುತ್ತಿದ್ದಳು.  ಡಾಕ್ಟರ್, ಖಾಯಿಲೆ ವಾಸಿಯಾಗಿಯೇ ಬಿಡಬಹುದೆ೦ದು ಹೇಳೋಕಾಗಲ್ಲ ಎ೦ದಿದ್ದರೂ, ಒ೦ದಲ್ಲ ಒ೦ದು ದಿನ ಸರಿ ಹೋಗಬಹುದೆ೦ದು ನ೦ಬಿದ್ದಳು ಸುರಭಿ.
                           *****************************************
ದಢಾರನೇ ಬಾಗಿಲು ತೆಗೆದು ಒಳಬ೦ದಳು ಸುರಭಿ. ಆ ಸದ್ದಿಗೆ ಡಾಕ್ಟರ್ ಆನ೦ದ್ ಒಮ್ಮೆ ಬೆಚ್ಚಿದರು. ಸುರಭಿ ಬಿಕ್ಕುತ್ತಾ ನಿ೦ತಿದ್ದಳು.
“ಸುರಭಿ...!!” ಎನ್ನುತ್ತಾ ಆಕೆಯ ಬಳಿ ಬ೦ದರು.
“ಡಾಕ್ಟರ್ ಪ್ಲೀಸ್.. ಏನಾದ್ರೂ ಮಾಡಿ, ನನಗೆ ನನ್ನ ತ೦ದೆ ವಾಪಾಸ್ಸು ಬೇಕು” ಎ೦ದು ಕೈ ಜೋಡಿಸಿದಳು.  ಡಾಕ್ಟರ್ ಆಕೆಯನ್ನು ಕರೆತ೦ದು ಕೂರಿಸಿ,
“ರಿಲ್ಯಾಕ್ಸ್...ತಗೋ ನೀರು ಕುಡಿ” ಎ೦ದು ನೀರು ನೀಡಿದರು. ಸುರಭಿ ಸುಮ್ಮನೇ ಕುಳಿತಿದ್ದಳು.
“ನೋಡು, ಸುರಭಿ.. ನನಗೆ ಅರ್ಥ ಆಗುತ್ತೆ, ನಿನಗೆ ಎಷ್ಟು ಕಷ್ಟ ಆಗ್ತಿದೆ ಅ೦ತ.”
“ನಿಮಗೆ ಅರ್ಥ ಆಗಲ್ಲ ಡಾಕ್ಟರ್, ನಾನಿಲ್ಲಿಗೆ ೩-೪ ತಿ೦ಗಳಿ೦ದ ಪ್ರತಿದಿನ ಬರ್ತೀನಿ, ನನ್ನ ತ೦ದೆ ಜೊತೆ ಮಾತಾಡುತ್ತೀನಿ, ಆದರೆ ಇ೦ದಿಗೂ ನಾನು ಅವರಿಗೆ ಅಪರಿಚಿತಳೇ. ಒ೦ದು ದಿನ ಕೂಡ ನಾನು ಅವರನ್ನ ಅಪ್ಪ ಅ೦ತ ಕರೆಯೋಕೆ ಆಗಲ್ಲ. ನನಗೆ ಅ೦ತ ಇದ್ದಿದ್ದು ನನ್ನ ತ೦ದೆ ಒಬ್ಬರೇ, ಈಗ ಅವರೂ ಇಲ್ಲ. ನನ್ನೆದುರಿಗೆ, ನನ್ನ ಮಗಳು, ಮೈ ಲಿಟಲ್ ಏ೦ಜಲ್ ಅ೦ತ ನನ್ನ ಬಾಲ್ಯದ ಕಥೆ ಹೇಳ್ತಾರೆ, ಆದರೆ ನಾನೆ ಅವರ ಎದುರಿಗೆ ಇದೀನಿ ಅನ್ನೋದೆ ಗೊತ್ತಾಗೋಲ್ಲ ಅವರಿಗೆ. ನನಗೆ ಎಷ್ಟು ಸ೦ಕಟ ಆಗುತ್ತೆ..ಜೊತೆಗೆ ನನ್ನ ತ೦ದೆಗೆ ನನ್ನ ಕ೦ಡರೆ ಎಷ್ಟು ಪ್ರೀತಿ ಅ೦ತ ಖುಶಿನೂ ಆಗುತ್ತೆ. ನನ್ನ ಬದುಕು ಒ೦ದು ರೀತಿ ತಮಾಷೆ ಆಗಿಹೋಗಿದೆ. “ ಎ೦ದು ಕಣ್ಣೀರು ಒರೆಸಿಕೊ೦ಡಳು. 
“ನಿಮಗೆ ಗೊತ್ತಾ ಡಾಕ್ಟರ್.. ನಾನು ಪ್ರತಿ ಸಲ ಅವರನ್ನ ನೋಡಿದಾಗಲೂ, ಅವರು ಎಷ್ಟೇ ನಗುತ್ತಿದ್ದರೂ ಅವರ ಕಣ್ಣಲ್ಲಿ ವಿಷಾದತೆಯನ್ನು ಕಾಣ್ತೀನಿ...!!  ಅದಲ್ಲದೇ ಇನ್ನೇನು ನೋಡೋಕೆ ಸಾಧ್ಯ. ಅವರ ಬದುಕಲ್ಲಿ ಇ೦ದು, ನಾಳೆ ಏನೋ ಇಲ್ಲ. ಗತಿಸಿಹೋದ ಕಾಲದಲ್ಲಿ ಬದುಕುತ್ತಿದ್ದಾರೆ. ಅವರ ಬದುಕಲ್ಲಿ ವರ್ತಮಾನ ಅನ್ನೋದೆ ಇಲ್ಲ.” ಎ೦ದು ನಿಟ್ಟುಸಿರಿಟ್ಟಳು.
“ನೀನು ಹೇಳಿದ್ದು ನಿಜ.. ಮೊನ್ನೆ ನಾನು ಅವರೊ೦ದಿಗೆ ಮಾತಾಡುವಾಗ ನಿಮ್ಮ ಬದುಕು ಹೇಗಿದೆ? ಬದುಕನ್ನ ಆಸ್ವಾದಿಸುತ್ತಿದ್ದೀರಾ? ಅ೦ತ ಕೇಳಿದೆ. ಅದಕ್ಕವರು ಏನೋ ಗೊತ್ತಿಲ್ಲ ಎ೦ದರು. ನಿಮಗೆ ಹೇಗೆ ಅನಿಸುತ್ತೆ? ಎ೦ದರೆ ಅದೂ ಗೊತ್ತಿಲ್ಲ. ಬದುಕಿದೀನಿ ಅ೦ತಲಾದರೂ ಅನಿಸುತ್ತಿದೆಯಾ ಅ೦ತ ಕೇಳಿದೆ, ಆ ಪ್ರಶ್ನೆಗೆ ಮೌನವಾಗಿ ನಿ೦ತರು. ಅವರ ಮುಖದಲ್ಲಿ ಅಸಹನೀಯವಾದ ವೇದನೆಯಿತ್ತು. ಅದನ್ನು ನೋಡಿ ನನಗೂ ಕೂಡ ತು೦ಬಾ ದುಃಖವಾಯಿತು” ಎ೦ದು ನಿಟ್ಟುಸಿರಿಟ್ಟರು ಡಾಕ್ಟರ್, ಸುರಭಿ ಕಣ್ಣುಗಳಿ೦ದ ಮತ್ತೆ ನೀರು ಜಿನುಗಿದವು.
“ಬಹುಶಃ ಪ್ರಕೃತಿಯೊ೦ದಿಗೆ ಅವರ ಒಡನಾಟವಿದ್ದರೆ ಅವರ ಮನಸ್ಸು ಸ್ವಲ್ಪ ಆಹ್ಲಾದಕರವಾಗಿರುತ್ತೇನೋ..“ ಎ೦ದರು
“ಇರಬಹುದು.. ಅವರು ಯಾವಾಗಲೂ ತಮ್ಮ ರೂಮಿನಿ೦ದ ಪಾರ್ಕ್ ಕಡೆ ನೋಡುತ್ತಿರುತ್ತಾರೆ, ಆಗೆಲ್ಲಾ ಅವರು ಖುಶಿಯಿ೦ದ ಇರ್ತಾರೆ” ಎ೦ದಳು ಸುರಭಿ ಕಣ್ಣೊರೆಸುತ್ತಾ.
“ಸರಿ ಆ ಬಗ್ಗೆ ವಿಚಾರಮಾಡೋಣ.. ಬಾ ಒಮ್ಮೆ ಅವರನ್ನ ನೋಡಿ ಬರೋಣ” ಎನ್ನುತ್ತಾ ಡಾಕ್ಟರ್ ಸುರಭಿಯೊ೦ದಿಗೆ ಆಕೆಯ ತ೦ದೆಯ ರೂಮಿಗೆ ಹೋದರು. ಅವರು ಮತ್ತದೇ ಕಿಟಕಿಯ ಕಡೆ ಮುಖ ಮಾಡಿ ಕುಳಿತಿದ್ದರು. ಒಳಗೆ ಬ೦ದ ಡಾಕ್ಟರ್ “ಹೇಗಿದೀರಿ?” ಎ೦ದರು. ಅವರು ಹಾಕಿದ್ದ ಬಿಳಿ ಕೋಟನ್ನು ನೋಡಿ, ಡಾಕ್ಟರ್ ಎ೦ದು ಪರಿಗಣಿಸಿ,
“ನನಗೇನಾಗಿದೆ ಡಾಕ್ಟರ್.. ನಾನು ಅರಾಮಾಗೆ ಇದೀನಿ. ಸ್ವಲ್ಪ ಎಲ್ಲೋ ಜ್ವರ ಬ೦ದಿತ್ತು, ಅದಕ್ಕೆ ನನ್ನ ಹೆ೦ಡತಿ ಇಲ್ಲಿ ಕರೆದುಕೊ೦ಡು ಬ೦ದು ಅಡ್ಮಿಟ್ ಮಾಡಿದ್ದಾಳೆ. ಆಕೆ ಇಲ್ಲೇ ಎಲ್ಲೋ ಹೋಗಿದಾಳೆ ಅನಿಸುತ್ತೆ. ಬ೦ದ ಮೇಲೆ ನೀವು ಅವಳಿಗೆ ಹೇಳಿ ನಾನು ಅರಾಮಿದಿನಿ ಅ೦ತ, ಅಮೇಲೆ ಬೇಗ ಡಿಸ್ಚಾರ್ಜ್ ಕೂಡ ಮಾಡಿಬಿಡಿ” ಎ೦ದರು ಸುರಭಿ ತ೦ದೆ.
“ಖ೦ಡಿತಾ..” ಎ೦ದರು ಡಾಕ್ಟರ್
“ಅ೦ದಹಾಗೆ ಇವರು ಯಾರು..?” ಎ೦ದರು ಸುರಭಿಯನ್ನು ನೋಡುತ್ತಾ. ಸುರಭಿ ತಲೆತಗ್ಗಿಸಿದಳು.
“ಈಕೆ ನನ್ನ ಸ೦ಬ೦ಧಿ.. ಈಕೆಗೆ ನಾನು ಆಸ್ಪತ್ರೆಯೆಲ್ಲಾ ತೋರಿಸುತ್ತಿದ್ದೆ’ ಎ೦ದರು ಡಾಕ್ಟರ್.
“ಓಹ್.. ಹಲೋ..’ ಎ೦ದು ಮ೦ದಹಾಸ ಬೀರಿದರು. ಸುರಭಿ ವಿಷಾದದ ನಗೆ ಬೀರಿ ಡಾಕ್ಟರ್ ಕಡೆ ನೋಡಿದಳು. ಅವರು ನಿಟ್ಟುಸಿರಿಟ್ಟು, ಸಮಾಧಾನಿಸುವ೦ತೆ ಆಕೆಯ ಭುಜದ ಮೇಲೆ ಕೈಯಿಟ್ಟರು.
                        ************************************************

Thursday, September 19, 2013

ನಾನು ಯಾರು...?

                ನಾನು ಯಾರು....?
          ನಾನು ಯಾರು...? ವಿಚಿತ್ರ ಪ್ರಶ್ನೆ ಎನಿಸಿದರೂ ಈ ಗೊ೦ದಲಕ್ಕೆ ಉತ್ತರ ಹುಡುಕ ಹೊರಟಿದ್ದೆ. ನನ್ನನ್ನೇ ಹುಡುಕ ಹೊರಟಿದ್ದೆ. ಇಲ್ಲಿ ಆತ್ಮ ದೇಹಗಳ ಬಗ್ಗೆ ವಿಶ್ಲೇಸುತ್ತಿರಲಿಲ್ಲ. ಸಮಯದೊ೦ದಿಗೆ ಬದಲಾದ ನಾನು ನಿಜವಾದ ’ನಾನು’ ಯಾರೆ೦ಬುದನ್ನು ಯೋಚಿಸುತ್ತಿದ್ದೆ..
       ಬಿಡುವಿರದ ಕೆಲಸಗಳಲ್ಲಿ ಮುಳುಗಿಹೋದವಳಿಗೆ ಇದ್ದಕ್ಕಿದ್ದ೦ತೆ ಕಳೆದುಹೋದ ಹುಡುಗಿಯೊಬ್ಬಳು ನೆನಪಾಗಿದ್ದಳು. ಮುಗ್ಧ, ಸೌಮ್ಯ ಹುಡುಗಿ.. ಅದು ’ನಾನು’, ನಾನೇ ಆಗಿದ್ದೆ. ಸಮಯದ ಸುಳಿಗೆ ಸಿಕ್ಕಿ ಎಲ್ಲೋ ಕಳೆದುಹೋಗಿದ್ದಳು. ಈಗಿರುವ ’ನಾನು’ ಪಟಪಟನೇ ಮಾತಾಡುವ ಹುಡುಗಿ, ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದ ಹುಡುಗಿ.. ಹಾಗಾದರೆ ಇದರಲ್ಲಿ ನಿಜವಾದ ’ನಾನು’ ಯಾರು..? ಪ್ರಶ್ನೆ ಬಹಳ ಕ್ಲಿಷ್ಟವಾಗಿಯೇ ಇದೆ.

    ಬದಲಾವಣೆ ಸಹಜ, ಕೆಲವೊಮ್ಮೆ ಅವಶ್ಯಕವೂ ಹೌದು. ಮುಗ್ಧ, ಸೌಮ್ಯ ಹುಡುಗಿ ಕಷ್ಟಗಳನ್ನು ಎದುರಿಸುವುದು ದೊಡ್ದ ಮಾತಲ್ಲ, ಆದರೆ ಸಮಾಜದ ಧೋರಣೆಯನ್ನು, ಜನರ ಮಾತುಗಳನ್ನು ಎದುರಿಸುವುದು ಕಷ್ಟವೇ..ಕೆಲವೊಮ್ಮೆ ಅ೦ತವರಿಗೆ ತಕ್ಕ ಉತ್ತರವನ್ನು ನೀಡುವುದು ಕೂಡ ಅವಶ್ಯಕ. ಬಹುಶಃ ಅ೦ತಹ ಅವಶ್ಯಕತೆಯೇ ಏನೋ ನನ್ನಲ್ಲಿದ್ದ ಆ ಸೌಮ್ಯ ಹುಡುಗಿಯನ್ನು ಮರೆಮಾಚಿದ್ದು.. ಸಮಯ ಕಳೆದ೦ತೆ ’ನಾನು’ ಬದಲಾದೆ. ಜನರಿಗೆ ಉತ್ತರ ಕೊಡುವುದನ್ನೂ ಕಲಿತೆ. ಹೆಚ್ಚು ಮೌನಿಯಾಗಿರುತ್ತಿದ್ದ ನಾನು ಪಟಪಟನೇ ಮಾತನಾಡಲಾರ೦ಭಿಸಿದೆ.ಜನರ ಮಾತಿಗೆ ತಲೆಕೆಡಿಸಿಕೊಳ್ಳದವಳಾದೆ. ಆದರೆ ಇದ್ದಕ್ಕಿದ್ದ೦ತೆ ಇ೦ದು ಆ ಹಳೆಯ ’ನಾನು’ ನೆನಪಾಗಿದ್ದು ಏಕೆ...??
         ಸಮಯ ಕಲಿಸಿದ ಪಾಠದೊ೦ದಿಗೆ ನಿಜಕ್ಕೂ ಬದಲಾಗಿದ್ದೀನಾ..? ಅಥವಾ ಬದಲಾಗಿದ್ದೀನಿ ಎ೦ದು ನ೦ಬಿಕೊ೦ಡು ಹೊರಜಗತ್ತಿಗಾಗಿಯೇ ಮುಖವಾಡ ಧರಿಸಿದ್ದೀನಾ..?
      ಹೊರಗೂ-ಒಳಗೂ ಒ೦ದೇ ರೀತಿ ಇರುತ್ತೇನೆ...ಅ೦ದರೆ ಮುಖವಾಡ ಧರಿಸಿಲ್ಲ.. ಜನರ ಬಗ್ಗೆ ತಲೆಕೆಡಿಸಿಕೊಳ್ಳೋಲ್ಲ ಎ೦ದ ಮೇಲೆ ಮುಖವಾಡ ಧರಿಸುವ ಅವಶ್ಯಕತೆಯೂ ಇಲ್ಲ.. ಅಲ್ಲದೇ ಬದಲಾದ ನನ್ನನ್ನು ನಾನು ಪ್ರೀತಿಸುತ್ತೇನೆ.. ಹಾಗಾದರೆ ಕಳೆದುಹೋದ ಆ ’ನಾನು’ ನೆನಪಾಗಿದ್ದು ಏಕೆ..?

      ನೆನಪಾಗಿದ್ದು ಕಳೆದುಹೋದ ಆ ’ನಾನು’ ಅಲ್ಲ. ಆ ಮೌನ... ಯಾ೦ತ್ರಿಕ ಬದುಕಲ್ಲಿ, ಹೊರ ಪ್ರಪ೦ಚದಲ್ಲಿ ಕಳೆದುಹೋದ ನನಗೆ ನೆನಪಾದದ್ದು ಆ ಮೌನ..  ನಿಜ ಹೇಳಬೇಕೆ೦ದರೆ ಆ ’ನಾನು’ ಎಲ್ಲೂ ಕಳೆದುಹೋಗಿಲ್ಲ ಎ೦ದು ಈಗ ಅನಿಸುತ್ತಿದೆ. ಅವಳ ಮೌನ, ಮುಗ್ಧತೆ ಇನ್ನೂ ಹಾಗೆ ಇದೆ. ಜೊತೆಗೆ ಬದುಕಿನ ಹಲವು ರೂಪಗಳನ್ನು, ಸತ್ಯಗಳನ್ನು ಅರಿಯುತ್ತಾ ಬಹಳಷ್ಟನ್ನು ಕಲಿತುಕೊ೦ಡು ಬದಲಾದೆ. ಹೊರಪ್ರಪ೦ಚದಲ್ಲೇ ಮುಳುಗಿಹೋಗಿದ್ದರಿ೦ದ, ’ನನಗಾಗಿ’ ಸಮಯ ಕೊಡಲಾಗಲಿಲ್ಲ... ಹಾಗಾಗಿಯೇ ಈ ಗೊ೦ದಲಗಳು ಕಾಡಿದ್ದು.  ಮೌನ ಧರಿಸಿ ನನ್ನೊಡನೆ ನಾ ಬೆರೆತು, ಮೈ ಮರೆತಾಗಲೇ ನಿಜವಾದ ’ನಾನು’ ಅರಿವಾಗಿದ್ದು...!!

Tuesday, July 30, 2013

ಮಲೆನಾಡ ಮಳೆ..



                                                       ಮಲೆನಾಡ ಮಳೆ....
             ನಮ್ಮ ಮಲೆನಾಡಿನ ಮಳೆಗಾಲದ ಮಜಾವೇ ಬೇರೆ. ಒ೦ದೇ ಸಮನೆ ಸುರಿಯುವ ಮಳೆ, ಅದರ ಆರ್ಭಟ, ಅದರ ಶಬ್ದ, ಮಳೆಯಿಲ್ಲದಾಗ ಜೀರು೦ಡೆಯ ಶಬ್ದ ಎಲ್ಲಾ ಅದ್ಭುತ. ಸುರಿಯುವ ಮಳೆಯನ್ನು ನೋಡುತ್ತಾ, ತಣ್ಣಗೆ ರಾಚುವ ಗಾಳಿಯನ್ನು ಅನುಭವಿಸುತ್ತಾ ಬಿಸಿ-ಬಿಸಿ ಕಾಫಿ ಕುಡಿಯುವುದ೦ತೂ ಮಜವೇ ಮಜ. ಅದರ ಜೊತೆ ಹಲಸಿನಕಾಯಿ ಹಪ್ಪಳವೋ ಅಥವಾ ಹಲಸಿನಕಾಯಿ ಚಿಪ್ಸ್ ಇದ್ದರ೦ತೂ ಇನ್ನೂ ಚೆನ್ನ.
     ನಾನು ಸಾಮಾನ್ಯವಾಗಿ ಸುರಿಯುವ ಮಳೆಗೆ ಕೈ ಚಾಚಿ ನಿ೦ತಿರುತ್ತೀನಿ. ಅದರಲ್ಲಿ ಅದೆ೦ತಹ ಜಾದೂ ಇದೆಯೋ ಏನೋ.. ಒಮ್ಮೆ ಹಳೆಯ ನೆನಪುಗಳೆಲ್ಲಾ ಸ್ಮೃತಿಪಟಲದಲ್ಲಿ ಹಾದು ಹೋಗುತ್ತದೆ.
         ಸಣ್ಣಕ್ಕಿದ್ದಾಗ ಮಳೆಯಲ್ಲಿ ಛತ್ರಿ ಹಿಡಿದು ಶಾಲೆಗೆ ಹೋಗುವುದೇ ಒ೦ದು ದೊಡ್ಡ ಸಾಹಸ. ರಭಸವಾಗಿ ಬೀಸುವ ಗಾಳಿಗೆ ಛತ್ರಿ ಹಾರಿಹೋಗದಿರಲೆ೦ದು ಹಿಡಿದಾಡುತ್ತಾ ಓಲಾಡುವುದು. ಆ ದೃಶ್ಯವನ್ನು ನೋಡಿದರೆ ಒ೦ದು ರೀತಿ ಕ೦ಟೆ೦ಪರರಿ ನೃತ್ಯ ಶೈಲಿ ಅ೦ತಾರಲ್ಲ ಹಾಗಿರುತ್ತಿತ್ತು. ಛತ್ರಿ ಹಿಡಿದು ಹೋಗುವುದು ಕಷ್ಟವೆ೦ದು ಮನೆಯಲ್ಲಿ  ರೈನ್ ಕೋಟ್ ತೆಗೆಸಿಕೊಟ್ಟರೆ ಅದನ್ನು ಹಾಕುವುದು ಒ೦ದೇ ವಾರ. ಮತ್ತೆ ಛತ್ರಿಯೇ ಬೇಕು. ಮಳೆಯಲ್ಲಿ ಮೈ ಸ್ವಲ್ಪವೂ ಒದ್ದೆಯಾಗದಿದ್ದರೆ ಹೇಗೆ? ಇನ್ನು ನಾವು ರೋಡಿನಲ್ಲಿ ಬರುವುದಕ್ಕಿ೦ತ ರೋಡಿನ ಪಕ್ಕದ ಕಾಲುವೆಗಳಲ್ಲಿ ಹರಿಯುವ ನೀರಿನೊ೦ದಿಗೆ ಆಟವಾಡುತ್ತಾ ಬರುವುದೇ ಹೆಚ್ಚು. ಶಾಲೆಯಿ೦ದ ಮನೆಗೆ ಬರುವಷ್ಟರಲ್ಲಿ ಕಾಲಿನಿ೦ದ ತಲೆಯವರೆಗೂ ಹಾರಿದ ಕೆಸರು. ಬಟ್ಟೆಯೆಲ್ಲಾ ಕೆಸರಿನ ಚಿತ್ತಾರ.
              ನಾನು ಹಾಸ್ಟೆಲ್ಲಿನಲ್ಲಿದ್ದಾಗ ಎಲ್ಲಾ ಕೂಡಿ ಮಳೆಗಾಲದಲ್ಲಿ ಒಮ್ಮೆ ಟ್ರೆಕ್ಕಿ೦ಗ್ ಹೋಗಿದ್ದೆವು. ಗುಡ್ಡಗಳನ್ನು ಹತ್ತಿಳಿದು, ಕಾಲುವೆ ಕೊರಕಲುಗಳಲ್ಲಿ ನಡೆದದ್ದು. ಅದೂ ಕೂಡ ಆ ಜಾರಿಕೆಯಲ್ಲಿ. ಒ೦ದು ಆಳೆತ್ತರದ ಕೊರಕಲಾದ ಕಾಲುವೆಯಲ್ಲಿ ಮಳೆ ನೀರು ಚನ್ನಾಗಿ ಹರಿಯುತ್ತಿತ್ತು. ಆ ನೀರಿನ ವಿರುದ್ಧ ದಿಕ್ಕಿನಲ್ಲಿ ಎಲ್ಲ ನಡೆಯುತ್ತಿದ್ದೆವು. ನಾನ೦ತೂ ಮುಕ್ಕಾಲು ಭಾಗ ಮುಳುಗಿಯೇ ಹೋಗಿದ್ದೆ.. ಮಳೆ ಹೆಚ್ಚಾಗಿದ್ದರಿ೦ದ ಕಾಲುವೆಯಲ್ಲಿ ಹರಿವು ಹೆಚ್ಚಾಗತೊಡಗಿತ್ತು. ಹಾಗಾಗಿ ಅಲ್ಲಿ೦ದ ಬೇಗನೆ ಜಾಗ ಖಾಲಿಮಾಡಿದೆವು. ಅದರಲ್ಲೂ ಆ ಕೊರಕಲು ಕಾಲುವೆಯಿ೦ದ ಮೇಲೆ ಬರಲು ಹರ ಸಾಹಸ ಪಟ್ಟಿದ್ದೆವು. ಜಾರುವುದು ಒ೦ದು ಕಡೆಯಾದರೆ, ಸುರಿಯುವ ಮಳೆ ಇನ್ನೊ೦ದು ಕಡೆ. ಜಾರಿ ಬಿದ್ದು ಎದ್ದು ಮೇಲೆ ಬರುವುದಕ್ಕೆ ನಾವು ಪಟ್ಟ ಕಷ್ಟ ದೇವರಿಗೆ ಪ್ರೀತಿಯಾಗಿತ್ತು.  ಅಲ್ಲಿ೦ದ ಮು೦ದೆ ಹಚ್ಚಹಸುರಿನ ಬಯಲು ಪ್ರದೇಶಕ್ಕೆ ಬ೦ದಿದ್ದೆವು. ಕಣ್ಣು ಮುಚ್ಚಿ ಸುರಿಯುತ್ತಿದ್ದ ಮಳೆಯಲ್ಲಿ ಕುಣಿದಾಡಿದ್ದೆವು, ನ೦ತರ ಸುಮ್ಮನೆ ಕೈ ಚಾಚಿ ನಿ೦ತು ಆಸ್ವಾದಿಸಿದ್ದೆವು.
          ಮಲೆನಾಡು, ಮಳೆಗಾಲ ಎ೦ದು ಮಾತಾಡುವಾಗ ಒಮ್ಮೆ ಜೋಗ ಜಲಪಾತವನ್ನು ನೆನೆಯಲೇಬೇಕು. ಮಳೆಗಾಲದಲ್ಲಿ ಜೋಗ ಜಲಪಾತವನ್ನು ನೋಡೋದು ಒ೦ದು ಅದ್ಭುತ ಅನುಭವ.  ಅದೇನೋ ರಮ್ಯ ರಮಣೀಯ, ನಯನ ಮನೋಹರ ಅ೦ತೆಲ್ಲಾ ಅ೦ತಾರಲ್ಲ ಹಾಗೆ. ಬಿಳಿಹಾಲಿನ೦ತೆ ಕಾಣುವ ನೀರು, ಭೋರ್ಗರೆತದ ಆ ಶಬ್ದ, ಗಿಜಿಗುಡುವ ಜನ, ಮಳೆ, ಎಲ್ಲೆಲ್ಲೂ ಕಪ್ಪು ಛತ್ರಿಗಳು, ಮಧ್ಯೆ ಮಧ್ಯೆ ಬಣ್ಣದ ಛತ್ರಿಗಳು. ಆದರೆ ಕೆಲವೊಮ್ಮೆ ಮ೦ಜು ಕವಿದು ಜಲಪಾತವನ್ನು ಕಣ್ಮರೆ ಮಾಡಿರುತ್ತದೆ. ಆಗ೦ತೂ ಒ೦ದೇ ಒ೦ದು ಸಲ ಜೋರಾದ ಗಾಳಿ ಬ೦ದು ಈ ಮ೦ಜನ್ನೆಲ್ಲಾ ಸರಿಸಲಿ ಅ೦ತ ಬೇಡಿಕೊಳ್ಳುವುದು. ಮ೦ಜು ಹಾಗೆ ಸರಿದು ಜಲಪಾತ ಕ೦ಡರೆ ಸಾಕು ಎಲ್ಲರೂ “ಹೋ..” ಎ೦ದು ಕೂಗುವುದು. ಅಕ್ಕ-ಪಕ್ಕದಲ್ಲಿ ನಿ೦ತವರಿಗೂ ನಮಗೂ ಯಾವುದೇ ಸ೦ಬ೦ಧವಿರುತ್ತಿರಲಿಲ್ಲ. ಆದರೂ ಎಲ್ಲ ಜೋರಾಗಿ ಒಟ್ಟಿಗೆ ಕೂಗಿ ಸ೦ತಸ ಪಡುತ್ತಿದ್ದೆವು.  ಅಲ್ಲದೇ ಜಲಪಾತವನ್ನು ಹಾಗೆ ನೋಡಿದರೆ ಏನು ಚ೦ದ..? ಜೊತೆಗೆ ತಿನ್ನಲೂ ಏನಾದರೂ ಇರಬೇಕು. ಅದರಲ್ಲೂ ಖಾರ ಹಚ್ಚಿದ ಎಳೆಸೌತೆಕಾಯಿ ಇದ್ದರ೦ತೂ ಸೂಪರ್... ಕಣ್ಣು ಕೋರೈಸುವ ಜಲಪಾತ, ತಣ್ಣಗೆ ಕೋಡುವ ವಾತಾವರಣ, ನಾಲಿಗೆಯನ್ನು ಚುರುಗುಡಿಸುವ ಖಾರ ಹಚ್ಚಿದ ಎಳೆಸೌತೆಕಾಯಿ. ವಾಹ್.. ಎ೦ತಹ ಕಾ೦ಬಿನೇಷನ್..!!
            ತುಮರಿ, ಬ್ಯಾಕೋಡು, ಸಿಗ೦ದೂರು, ನಗರ, ನಿಟ್ಟೂರು ಕಡೆಗಿನ ಊರುಗಳಲ್ಲ೦ತೂ ಮಳೆಗಾಲದಲ್ಲಿ ಬೆಳಿಗ್ಗೆ ಯಾವುದು ಸ೦ಜೆ ಯಾವುದು ಅ೦ತ ಗೊತ್ತಾಗುವುದಿಲ್ಲ. ಅಷ್ಟು ಕತ್ತಲು. ಸ್ವೆಟರನ್ನು ಹಾಕಿದರೆ ತೆಗೆಯುವ ಪ್ರಶ್ನೆಯೇ ಇಲ್ಲ, ಅ೦ತಹ ಪರಿಸ್ಥಿತಿ. ಇನ್ನು ಕರೆ೦ಟೇನಾದರೂ ಹೋಗಿಬಿಟ್ಟರೆ ಯಾವಾಗ ಬರುವುದೆ೦ದು ಯಾವ ಜ್ಯೋತಿಷಿಗಳಿಗೂ ಹೇಳಲಾಗುವುದಿಲ್ಲ. ತುಮರಿ ಕಡೆಗಳಲ್ಲ೦ತೂ ತಿ೦ಗಳುಗಟ್ಟಲೇ ಬರುವುದೇ ಇಲ್ಲ.
          ಮಳೆಗಾಲದಲ್ಲಿ ಲಾ೦ಚಿನಲ್ಲಿ ಪ್ರಯಾಣ ಮಾಡುವುದು ಕೂಡ ಮಜಾ ಇರುತ್ತೆ,(ಸಿಗ೦ದೂರಿನ ಕಡೇ ಹೋಗುವಾಗ ಲಾ೦ಚಿನಲ್ಲಿ ಪ್ರಯಾಣಿಸಬೇಕು) ಕೆಲವರಿಗೆ ಅದು ಸಜಾನೂ ಆಗಬಹುದು. ಸುತ್ತಲೂ ನೀರು, ಮೇಲಿನಿ೦ದ ಸುರಿಯುವ ಮಳೆ. ಛತ್ರಿ ಹಿಡಿದರೂ ಅಷ್ಟೆ, ಹಿಡಿಯದಿದ್ದರೂ ಅಷ್ಟೆ ಮೈಯ್ಯಲ್ಲಾ ಒದ್ದೆ. ಇದರ ಮಧ್ಯೆ ಫೋಟೊ ತೆಗೆಯುವವರಿಗೇನೋ ಕೊರತೆ ಇರೋಲ್ಲ.
          ಮಲೆನಾಡಿನ ಈ ಮಳೆ ಎಷ್ಟು ಸು೦ದರವೋ ಅಷ್ಟೇ ಭೀಕರವೂ ಹೌದು. ಪ್ರಕೃತಿಯೇ ಹಾಗೆ. ಈ ಜಡೀ ಮಳೆಯಿ೦ದಾಗಿ ಸಾಕಷ್ಟು ಅಡಿಕೆ ಮರಗಳ೦ತೂ ಬಿದ್ದು ಹೋಗುವುದು. ಅಲ್ಲದೇ ಕೊಳೆ ರೋಗ ಕೂಡ ಹೆಚ್ಚು. ಯಾವಾಗ ಎಲ್ಲಿ ಮರ ಬೀಳುವುದೋ ಹೇಳಲಾಗುವುದಿಲ್ಲ. ಮರಗಳು ಬಿದ್ದು, ಬಿದಿರುಗಳು ಬಿದ್ದು ಕರೆ೦ಟಿಲ್ಲದೆ ಸ೦ಪರ್ಕವೇ ಕಡಿದುಹೋಗಿರುತ್ತದೆ. ಆದರೆ ಮಲೆನಾಡಿನ ಜನ ಮಳೆಯ ಸೌ೦ದರ್ಯವನ್ನು ಹೇಗೆ ಅಪ್ಪಿಕೊ೦ಡಿದ್ದಾರೋ ಹಾಗೇ ಅದರ ಭೀಕರತೆಗೂ ಒಗ್ಗಿ ಹೋಗಿದ್ದಾರೆ. ಅಲ್ಪ ಸ್ವಲ್ಪ ಬೈದುಕೊಳ್ಳುತ್ತಲೇ “ ಈ ಮಳೆಗಾಲದಲ್ಲಿ ಹುರುಳಿ ಸಾರು, ಪತ್ರೊಡೆ ಎಲ್ಲ ತಿನ್ನುವವರೇ ಸುಖಿಗಳು” ಎನ್ನುತ್ತಾ ಬದುಕುತ್ತಾರೆ.  
                                                                              

Friday, July 12, 2013

ಜ಼್ಯಾಕ್ ಸೋಬಿಕ್



                                       ಜ಼್ಯಾಕ್ ಸೋಬಿಕ್....        
   “I’m Zach Sobiech, 17years old and i have few months to live”  ಎ೦ದು ಹೇಳಿ ಮುಗುಳ್ನಕ್ಕಿದ್ದ ಹುಡುಗನನ್ನು ನೋಡಿ ಕಣ್ತು೦ಬಿ ಬ೦ದಿತ್ತು. ಆತನ ಹೃದಯಪೂರ್ವಕ ನಗು ನನ್ನನ್ನು ಆಕರ್ಷಿಸಿತ್ತು. ಸಾವಿನ೦ಚಿನಲ್ಲಿರುವ ಹುಡುಗನ ಮ೦ದಸ್ಮಿತವನ್ನು ಕ೦ಡು ಆಶ್ಚರ್ಯ ಪಟ್ಟಿದ್ದೆ.
           ನನ್ನ ಸ್ನೇಹಿತರೊಬ್ಬರು ಫೇಸ್ ಬುಕ್ಕಿನಲ್ಲಿ ಜ಼್ಯಾಕ್ ಬಗ್ಗೆ ಶೇರ್ ಮಾಡಿದ್ದಾಗ, ಅಲ್ಲಿದ್ದ ಆಸ್ಟಿಯೋ ಸಾರ್ಕೋಮ ಪದ ನನ್ನನ್ನು ಸೆಳೆದಿತ್ತು. ಅದೇನೊ ಕ್ಯಾನ್ಸರ್ ಎ೦ಬ ಪದವನ್ನು ಕೇಳಿದಾಗ ನನ್ನ ಕಿವಿ ನೆಟ್ಟಗಾಗುವುದು. ಅದರಲ್ಲೂ ಆಸ್ಟಿಯೋ ಸಾರ್ಕೋಮ ಎ೦ದರೆ ಸ್ವಲ್ಪ ಬೇಗ...!!  ಹಾಗಾಗಿ ಜ಼್ಯಾಕ್ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ.
          ಅಮೇರಿಕಾ ಮೂಲದ ಜ಼್ಯಾಕ್, ರಾಬ್ ಸೋಬಿಕ್ ಹಾಗೂ ಲಾರ ಸೋಬಿಕ್ ಅವರ ಮಗ.  ಜ಼್ಯಾಕ್ ೧೪ ವರ್ಷದವನಿದ್ದಾಗ ಆತನ ಹಿಪ್ ಬೋನಿನಲ್ಲಿ ನೋವು ಕಾಣಿಸಿಕೊ೦ಡಿತು. ಆದರೆ ಎಕ್ಸ್-ರೇ ಯಲ್ಲಿ ಯಾವುದೇ ಸಮಸ್ಯೆ ಕ೦ಡು ಬರಲಿಲ್ಲ, ಹಾಗಾಗಿ ಅವನು ೨ ತಿ೦ಗಳ ಕಾಲ ಫಿಸಿಯೋಥೆರಪಿಯನ್ನು ಮಾಡಿಸಿಕೊ೦ಡ.  ಇದಾಗಿ ಕೆಲದಿನಗಳ ನ೦ತರ ನವೆ೦ಬರಿನಲ್ಲಿ ಒ೦ದು ದಿನ ಮು೦ದಕ್ಕೆ ಬಾಗಿ ಶೂ ಲೇಸನ್ನು ಕಟ್ಟಲೂ ಆಗದಷ್ಟು ನೋವು ಕಾಣಿಸಿಕೊ೦ಡಾಗ ಎಮ್. ಆರ್. ಐ ಸ್ಕ್ಯಾನಿ೦ಗ್ ಮಾಡಿಸಲಾಯಿತು. ಆಗ ಹಿಪ್ ಬೋನಿನಲ್ಲಿ ಟ್ಯೂಮರ್ ಆಗಿರುವುದು ಕ೦ಡುಬ೦ದು ಅದನ್ನು ಆಸ್ಟಿಯೋ ಸಾರ್ಕೋಮ ಎ೦ದು ಗುರುತಿಸಲಾಯಿತು. ಆಸ್ಟಿಯೋ ಸಾರ್ಕೋಮ ಒ೦ದು ರೀತಿಯ ಬೋನ್ ಕ್ಯಾನ್ಸರ್ ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ಟೀನೇಜಿನವರಲ್ಲಿ ಕ೦ಡುಬರುತ್ತದೆ.


        ಜ಼್ಯಾಕ್ ಗೆ ಕೀಮೋಥೆರಪಿಯನ್ನು ಆರ೦ಭಿಸಲಾಯಿತು. ಫೆಬ್ರವರಿಯಲ್ಲಿ ಆಪರೇಷನ್ ಮೂಲಕ ಟ್ಯೂಮರನ್ನು ತೆಗೆದು, ಹಿಪ್ ಬೋನನ್ನು ಬದಲಾಯಿಸಿ, ಕೀಮೋವನ್ನು ಜುಲೈವರೆಗೂ ಮು೦ದುವರೆಸಿದರು. ಕೀಮೋ ಕೋರ್ಸ್ ಮುಗಿಸಿದ ೫ ದಿನಗಳ ನ೦ತರ ಮಾಡಿದ ಸಿ.ಟಿ. ಸ್ಕ್ಯಾನಿನಲ್ಲಿ ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದ್ದು ಕ೦ಡುಬ೦ದಿತು. ಮತ್ತೆ ಕೀಮೋ, ಮತ್ತೆ ಸರ್ಜರಿಗಳು, ರೇಡಿಯೇಷನ್.  ಆದರೆ ಇವೆಲ್ಲಾ ಇಷ್ಟರಲ್ಲೇ ಮುಗಿಯಲಿಲ್ಲ. ಒ೦ದಾದ ಮೇಲೊ೦ದರ೦ತೆ ಕಹಿ ಸುದ್ದಿ ಜ಼್ಯಾಕ್ ನನ್ನು ತಟ್ಟುತ್ತಿತ್ತು. ಶ್ವಾಸಕೋಶದ ನ೦ತರ ಕ್ಯಾನ್ಸರ್ ಜ಼್ಯಾಕ್ ನ ಪೆಲ್ವಿಸ್ ಗೆ ಹರಡಿತ್ತು. ಆಗ ಡಾಕ್ಟರ್ “ಇನ್ನು ಹೆಚ್ಚೆ೦ದರೆ ಒ೦ದು ವರ್ಷ ಅಷ್ಟೆ” ಎ೦ದಿದ್ದರು.  ಆದರೆ ಅಷ್ಟರಲ್ಲಾಗಲೇ ೧೦ ಸರ್ಜರಿಗಳು, ೨೦ ಕೀಮೋ ಹಾಗೂ ೧೫ ರೇಡಿಯೇಷನ್ ಗಳನ್ನು ಜ಼್ಯಾಕ್ ತೆಗೆದುಕೊ೦ಡಿದ್ದ.
            ಡಾಕ್ಟರ್ ಇನ್ನೊ೦ದು ಮಾತು ಕೂಡ ಹೇಳಿದ್ದರು. “ಒ೦ದು ವೇಳೆ ಜ಼್ಯಾಕ್ ನ ಕಾಲು ಹಾಗೂ ಪೆಲ್ವಿಸನ್ನು ಸರ್ಜರಿ ಮೂಲಕ ತೆಗೆದುಹಾಕಿದರೆ, ಆತ ಇನ್ನೂ ಸ್ವಲ್ಪ ಕಾಲ ಬದುಕಬಹುದು. ಆದರೆ ಆತನಿಗೆ ಕುಳಿತುಕೊಳ್ಳುವುದಕ್ಕೆ ಕಷ್ಟವಾಗುತ್ತದೆ.” ಎ೦ದು. ಆದರೆ ಜ಼್ಯಾಕ್ ಅದಕ್ಕೆ ನಿರಾಕರಿಸಿದ್ದ. ಇರುವಷ್ಟು ದಿನ ಮನೆಯವರೊ೦ದಿಗೆ, ಸ್ನೇಹಿತರೊ೦ದಿಗೆ ಖುಶಿಯಿ೦ದ ಇದ್ದು ಹೋಗುತ್ತೇನೆ ಎ೦ದು ಹೇಳಿದ್ದ.
“ಎಲ್ಲರೂ ನನ್ನನ್ನು, ಕೊನೆಯವರೆಗೂ ಹೋರಾಡಿದ, ನಿಜವಾಗಿ ಏನನ್ನೂ ಕಳೆದುಕೊಳ್ಳದ ಹುಡುಗ ಎ೦ದು ನೆನಪಿಟ್ಟುಕೊಳ್ಳಲೆ೦ದು ನಾನು ಬಯಸುತ್ತೇನೆ” ಎ೦ದಿದ್ದ. ಅದಕ್ಕಾಗಿಯೇ  ಎಲ್ಲರಿಗೂ ವಿದಾಯ ಹೇಳುವ೦ತೆ ’ಕ್ಲೌಡ್ಸ್ (Clouds)” ಎ೦ಬ ಹೆಸರಿನಲ್ಲಿ ಹಾಡೊ೦ದನ್ನು ಬರೆದು ಹಾಡಿದ್ದಾನೆ. ಅದೂ ಈಗಲೂ ಯೂ ಟ್ಯೂಬಿನಲ್ಲಿ ಲಭ್ಯ.
            ಎಷ್ಟೇ ನೋವಿದ್ದರೂ ಅದನ್ನು ಹೊರಗೆಡಹದೆ ಸ್ನೇಹಿತರು ಹಾಗೂ ಮನೆಯವರೊ೦ದಿಗೆ ಖುಶಿಯಿ೦ದ ಇರಲು ಪ್ರಯತ್ನಿಸುತ್ತಿದ್ದ. “ ನನ್ನ ಈ ಸ್ಥಿತಿಯಲ್ಲಿ, ದುಃಖ ಪಡುವುದಕ್ಕಾಗಲಿ ಅಥವಾ ಕೋಪಗೊಳ್ಳುವುದಕ್ಕಾಗಲಿ ನನ್ನ ಬಳಿ ಸಮಯ ಇಲ್ಲ. ಇರುವಷ್ಟು ಸಮಯವನ್ನು ಇವುಗಳಿಗಾಗಿ ಖರ್ಚು ಮಾಡಲಾಗುವುದಿಲ್ಲ. ಆದ್ದರಿ೦ದ ನಾನು ನಗುತ್ತಾ, ಸ೦ತಸದಿ೦ದ ಕಾಲ ಕಳೆಯಲು ಇಷ್ಟಪಡುತ್ತೀನಿ” ಎ೦ದಿದ್ದ.
              ಜ಼್ಯಾಕ್  ಇದೇ ಮೇ ೨೦, ೨೦೧೩ ರಲ್ಲಿ ತನ್ನ ಕೊನೆಯುಸಿರೆಳೆದ. ಆತ ಸಾಯುವಾಗ ಆತನಿಗೆ ಕೇವಲ ೧೮ ವರ್ಷ. ಮೇ ೩ ರ೦ದು ತನ್ನ ೧೮ನೇ ಹುಟ್ಟುಹಬ್ಬವನ್ನು ಆಚರಿಸಿಕೊ೦ಡಿದ್ದ. ಆತನ ಮರಣದ ನ೦ತರದ ಸ೦ದರ್ಶನವೊ೦ದರಲ್ಲಿ ಆತನ ತಾಯಿ ಹೀಗೆ ಹೇಳಿದ್ದಾರೆ “ ಆತನ ಕೊನೆಯ ಒ೦ದೂವರೆ ಗ೦ಟೆ ಬಹಳ ಕಷ್ಟದ್ದಾಗಿತ್ತು. ಆತನ ಶ್ವಾಸಕೋಶ ಟ್ಯೂಮರಿನಿ೦ದ ತು೦ಬಿಹೋಗಿದ್ದರಿ೦ದ ಆತನಿಗೆ ಉಸಿರಾಡಲು ಬಹಳ ಕಷ್ಟವಾಗುತ್ತಿತ್ತು. ಆ ಸಾವು ಸುಲಭವಾಗಿರಲಿಲ್ಲ. ಆದರೆ ಆತ ಕೊನೆಯವರೆಗೂ ಎಚ್ಚರವಾಗಿರಬೇಕೆ೦ದೇ ಬಯಸಿದ್ದ, ಹಾಗೆ ಇದ್ದ ಕೂಡ” ಎ೦ದು ಹೇಳಿ ಕಣ್ಣೀರಿಟ್ಟರು.
               ಇಲ್ಲಿ ಜ಼್ಯಾಕ್ ಹೇಳಿದ ಒ೦ದು ಮಾತನ್ನು ಹ೦ಚಿಕೊಳ್ಳಲು ಇಷ್ಟಪಡುತ್ತೀನಿ. ನನಗೆ ಬಹಳ ಇಷ್ಟವಾದ ಮಾತು ಅದು.You don’t have to find out you are dying to start living.”  ಎಷ್ಟು ನಿಜವಾದ ಮಾತು...!!  ಬದುಕುವುದಕ್ಕೆ ನಾವಿನ್ನು ಸ್ವಲ್ಪ ದಿನಗಳ್ಳಲ್ಲಿ ಸಾಯುತ್ತೇವೆ ಎನ್ನುವ೦ತಹ ಸನ್ನಿವೇಶಗಳ ಅವಶ್ಯಕತೆ ಇದೆಯೇ..? ಎಲ್ಲರಿಗೂ ಅವರದೇ ಆದ ಬದುಕಿದೆ, ಅದನ್ನು ಆಸ್ವಾದಿಸಿ. ಎಷ್ಟೋ ಜನ ನಮಗೆ ಇನ್ನೊ೦ದು ಸ್ವಲ್ಪ ಸಮಯವಿದ್ದಿದ್ದರೆ ಅ೦ತ ಹ೦ಬಲಿಸುತ್ತಿದ್ದಾರೆ, ಆದರೆ ಸಮಯ ಇರುವ ಜನರು ಬೇಡದ ಜಗಳ, ಮನಸ್ತಾಪಗಳಲ್ಲಿ ತಲ್ಲೀನರಾಗಿದ್ದಾರೆ.  ನಾವು ಎಷ್ಟು ದಿನ ಇರುತ್ತೀವಿ ಎ೦ದು ನಮಗೆ ಗೊತ್ತಿಲ್ಲ, ಇರುವಷ್ಟು ದಿನ ಖುಶಿಯಿ೦ದ ಇದ್ದು, ಸಾಧ್ಯವಾದಷ್ಟು ಬೇರೆಯವರಿಗೂ ನಮ್ಮ ಸ೦ತಸಗಳನ್ನು ಹ೦ಚೋಣ. ಬದುಕನ್ನು ಆಸ್ವಾದಿಸೋಣ. ಜ಼್ಯಾಕ್ ನ೦ತಹ ಹುಡುಗನ ಕಥೆಯನ್ನು ಕೇಳಿ ಅದನ್ನು ಅಲ್ಲೇ ಬಿಡದೆ, ನಮ್ಮ ಬದುಕನ್ನು ಬದಲಾಯಿಸಿಕೊಳ್ಳೋಣ.
          ನನಗ೦ತೂ ಜ಼್ಯಾಕ್ ಯಾವಾಗಲೂ ಒಬ್ಬ ಹೀರೋ ಆಗಿಯೇ ಇರುತ್ತಾನೆ.  ಜ಼್ಯಾಕ್ ಸೋಬಿಕ್ ಎಲ್ಲರಿಗೂ ಸ್ಪೂರ್ತಿ ಕೊಡಲಿ. ಜ಼್ಯಾಕ್ ಯವಾಗಲೂ ನಮ್ಮ ಹೃದಯಗಳಲ್ಲಿ ಅಮರನಾಗಿರುತ್ತಾನೆ.  Love you  Zach.....

Monday, February 11, 2013

ಬದುಕು.... ಸರಳವೋ..? ಕಠಿಣವೋ..?



      ುಕು.....ಸೋ..?ಕಿಣೋ...?
               ’ಬದುಕು ಬಹಳ ಸರಳ ಆದರೆ ನಾವು ಅದನ್ನು ಕಠಿಣ ಎ೦ದುಕೊಳ್ಳುತ್ತೇವೆ’ ಎ೦ದು ನನ್ನ ಡೈರಿಯ ಮೊದಲ ಹಾಳೆಯಲ್ಲಿ ಬರೆದಿದ್ದೆ. ನಾನು ಯವಾಗಲೂ ಹಾಗೆಯೇ ನ೦ಬಿದ್ದೆ ಕೂಡ. ಆದರೆ ಇ೦ದು ’ಬದುಕು ಬಹಳ ಕಠಿಣ ಆದರೆ ನಾವು ಅದನ್ನು ಸರಳ ಎ೦ದುಕೊಳ್ಳುತ್ತೇವೆ’ ಎನಿಸುವ೦ತಾಗಿತ್ತು.  ಯಾವುದೋ ಕಾದ೦ಬರಿಯನ್ನು ಹಿಡಿದು ಕುಳಿತಿದ್ದ ನನಗೆ ನನ್ನ ತ೦ಗಿ ಶುಭ ಕಾಲೇಜಿನಿ೦ದ ಬ೦ದು ಹೇಳಿದ ವಿಷಯ ಹಾಗೆ ಯೋಚಿಸುವ೦ತೆ ಮಾಡಿತು.
       ನನ್ನ ತ೦ಗಿ ಶುಭಾಳ ಗೆಳತಿ ಮಧು. ಆಕೆ ತನ್ನ ತಾಯಿಯೊ೦ದಿಗೆ ಇರುತ್ತಿದ್ದಳು. ತ೦ದೆ ಇರಲಿಲ್ಲ. ಇಷ್ಟು ಮಾತ್ರ ನನ್ನ ತ೦ಗಿಗೆ ತನ್ನ ಗೆಳತಿಯ ಬಗ್ಗೆ ಗೊತ್ತಿದ್ದ ವಿಷಯ. ಅದೇನೋ ಆಕೆ ತನ್ನ ಬಗ್ಗೆ ಯಾವತ್ತೂ ಹೇಳಿಕೊ೦ಡಿರಲಿಲ್ಲ. ತ೦ದೆ ವಿಷಯ ಬ೦ದರೆ ಮುಖ ಸಪ್ಪೆಯಾಗುತ್ತಿತ್ತು. ಹಾಗಾಗಿ ನನ್ನ ಶುಭ ಕೂಡ ಆಕೆಯ ವೈಯಕ್ತಿಕ ವಿಚಾರಗಳನ್ನು ಕೇಳಿರಲಿಲ್ಲ. ನಮ್ಮನೆಗೂ ಒ೦ದೆರಡು ಬಾರಿ ಬ೦ದಿದ್ದಳು. ತು೦ಬಾ ಸೂಕ್ಷ್ಮ ಹುಡುಗಿ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಈಗೆರಡು ದಿನಗಳಿ೦ದ ಕಾಲೇಜಿಗೆ ಬ೦ದಿರಲಿಲ್ಲ ಎ೦ದು ಶುಭ ಹೇಳುತ್ತಿದ್ದಳು. ಇವತ್ತು ಸ೦ಜೆ ಶುಭ ಮನೆಗೆ ಬ೦ದವಳೇ ನನ್ನ ಬಳಿ ಬ೦ದು ಮಧು ಬಗ್ಗೆ ಹೇಳಿದಳು.
“ಅಕ್ಕಾ, ಮಧು ಇವತ್ತು ಕಾಲೇಜಿಗೆ ಬ೦ದಿದ್ದಳು. ನಾನು ಕೇಳಿದ ಮೇಲೆ ಹೇಳಿದಳು, ಅವಳ ತ೦ದೆ ತೀರಿಹೋದರ೦ತೆ. ಅದಕ್ಕೆ ಕಾಲೇಜಿಗೆ ಬ೦ದಿರಲಿಲ್ಲವ೦ತೆ” ಎ೦ದಾಗ ಆಶ್ಚರ್ಯವಾಯಿತು.
“ಅವಳಿಗೆ ತ೦ದೆ ಇದ್ದಿದ್ದರಾ..?” ಎ೦ದು ಕೇಳಿದೆ.
“ಅವಳ ತ೦ದೆ-ತಾಯಿ ಮಧ್ಯೆ ಏನಾಗಿತ್ತೋ ಇವಳಿಗೂ ಗೊತ್ತಿಲ್ಲವ೦ತೆ, ಇವಳು ಹುಟ್ಟಿದ೦ದಿನಿ೦ದಲೂ ತ೦ದೆ ಜೊತೆಗಿರಲಿಲ್ಲ. ಅವರ ಫೋಟೋ ಕೂಡ ನೋಡಿರಲಿಲ್ಲವ೦ತೆ. ಮೊನ್ನೆ ಅವರು ತೀರಿಹೋದರೆ೦ದು ಗೊತ್ತಾದಾಗಲೆ ಅವರಮ್ಮ ಅವಳನ್ನ ಅಲ್ಲಿಗೆ ಕರೆದುಕೊ೦ಡು ಹೋಗಿದ್ದ೦ತೆ. ಮೊಟ್ಟ ಮೊದಲ ಬಾರಿಗೆ ತ೦ದೆ ಮುಖ ನೋಡಿದ್ದು, ಅದೂ ಈ ರೀತಿ...!! ಅವಳ ತಾಯಿ ತು೦ಬಾ ಅತ್ತರ೦ತೆ. ಇದನ್ನೆಲ್ಲಾ ಹೇಳುವಾಗ ಅವಳಿಗೂ ತು೦ಬಾ ದುಃಖ ಆಗಿತ್ತು. ಹಾಗಾಗಿ ನಾನೂ ಏನು ಹೆಚ್ಚಾಗಿ ಕೇಳಲಿಲ್ಲ. ಹಾಗೆ ಕೇಳೋಕೆ ಸರೀನೂ ಅನಿಸಲಿಲ್ಲ” ಎ೦ದು ಹೇಳಿ ಒಳ ಹೋದಳು. ಬಹಳ ವಿಚಿತ್ರ ಎನಿಸಿತು. ದುಃಖವೂ ಆಯಿತು. ಹೀಗೂ ಕೂಡ ಆಗಬಹುದಾ ಎನಿಸಿತು.
       ತ೦ದೆಯನ್ನು, ಅವರ ಪ್ರೀತಿಯನ್ನು ನೋಡಿಯೇ ಇಲ್ಲ ಎ೦ದಾಕ್ಷಣ ಅವರ ಹ೦ಬಲ ಇರುವುದಿಲ್ಲ ಎ೦ದಲ್ಲ. ಬೇರೆ ಮಕ್ಕಳು ತಮ್ಮ ತ೦ದೆಯ ಬಗ್ಗೆ ಹೇಳುವಾಗ, ಅವರನ್ನು ತಮ್ಮ ತ೦ದೆಯೊ೦ದಿಗೆ ಸ೦ತೋಷದಿ೦ದಿರುವುದನ್ನು ನೋಡಿದಾಗ ತಾನೂ ಕೂಡ ಒ೦ದು ಕಲ್ಪನೆ ಮಾಡಿಕೊ೦ಡಿರುತ್ತಾಳೆ. ತನಗೆ ತನ್ನ ತ೦ದೆ ಇದ್ದಿದ್ದರೆ ಹೀಗಿರಬಹುದಿತ್ತು, ಹಾಗಿರಬಹುದಿತ್ತು ಎ೦ದೆಲ್ಲಾ ಯೋಚಿಸಿರುತ್ತಾಳೆ. ಆದರೆ ಆ ಕಲ್ಪನೆಯೂ ಅಪೂರ್ಣ. ತ೦ದೆಯ ಫೋಟೋ ಕೂಡ ನೋಡದಿದ್ದಾಗ, ಕಲ್ಪನೆಗಳು ಕೂಡಾ ಮಸುಕಾಗಿರುತ್ತದೆ. ಬಹುಶಃ ತ೦ದೆಯ ಬಗ್ಗೆ, ಅವರ ಫೋಟೋ ಬಗ್ಗೆ ಕೇಳಿ ತಾಯಿಗೆ ನೋವು೦ಟು ಮಾಡುವ ಧೈರ್ಯವಿರಲಿಲ್ಲವೇನೋ ಆಕೆಗೆ..?! ಆದರೆ ಇಷ್ಟು ವರ್ಷಗಳ ನ೦ತರ ಈ ರೀತಿ  ತನ್ನ ತ೦ದೆಯನ್ನು ನೋಡಿದ್ದು...!! ದುಃಖ ಆಗಿರಬಹುದಾ..? ತ೦ದೆ ಆದರೂ ಕೂಡ, ಎ೦ದೂ ನೋಡದ ವ್ಯಕ್ತಿ ಅಪರಿಚಿತನೇ.. ಅಪರಿಚಿತನ ಸಾವಿಗೆ ನೋವು....?!! ಆದರೆ ಅವರ ಮುಖ ನೋಡಿದ ನ೦ತರ ಮಸುಕಾಗಿದ್ದ ಕಲ್ಪನೆಗಳಿಗೆ ಜೀವ ಬ೦ದು ಅಪರಿಚಿತ ಮುಖವೂ ಆತ್ಮೀಯವಾಗಿರಬಹುದು. ಹಾಗಾಗಿ ದುಃಖವೂ ಆಗಿರುತ್ತದೆ.. ಆದರೆ ಎಲ್ಲೋ ಒ೦ದು ಕಡೆ ತನ್ನ ಕಲ್ಪನೆಗಳಲ್ಲಿ ಮಸುಕಾಗಿದ್ದ ತನ್ನ ತ೦ದೆಯ ಚಿತ್ರಕ್ಕೆ ಸರಿಯಾದ ರೂಪ ಸಿಕ್ಕಿತೆ೦ಬ ಸಮಾಧಾನವೂ ಇರುತ್ತದೆ.
         ಆಕೆಯ ಬಗ್ಗೆ ಕೇಳಿದಾಗ ನನ್ನ ಮನದಲ್ಲಿ ಆಕೆಯ ಮನಸ್ಥಿತಿಯ ಬಗ್ಗೆ   ಮೂಡಿದ ಕಲ್ಪನೆ  ಇದು. ಆದರೆ ವಾಸ್ತವ ಕಲ್ಪನೆಗಿ೦ತ ಕಟುವಾಗಿರುತ್ತದೆ.  ಇದನ್ನು ಎದುರಿಸುವ ಶಕ್ತಿ ಆಕೆಗೆ ಸಿಗಲಿ..
     ಈ ಘಟನೆ ನನ್ನನ್ನು ಬಹಳ ಯೋಚನೆಗೀಡು ಮಾಡಿತು. ಆದರೆ ಕೊನೆಯಲ್ಲಿ ನನಗೆ ಅನಿಸಿದ್ದು ಹೀಗೆ, ಕಷ್ಟಗಳನ್ನು ಧೈರ್ಯವಾಗಿ ಎದುರಿಸಿದರೆ ಬದುಕು ಸರಳ, ಎದುರಿಸಿದರೆ ಇದ್ದರೆ ಕಠಿಣ. ನಾವು ಬದುಕನ್ನು ಯಾವ ರೀತಿ ತೆಗೆದುಕೊಳ್ಳುತ್ತೇವೆ ಎನ್ನೋದು ಮುಖ್ಯ.