Tuesday, November 26, 2013

ನೆನಪುಗಳು......!!
[ನೆನಪುಗಳು ನಮ್ಮ ಜೀವನದ ಅಮೂಲ್ಯ ಅ೦ಗವಾಗಿದೆ.  ನೆನಪುಗಳಿಲ್ಲದೇ ಬದುಕು ಅಪೂರ್ಣ ಎ೦ಬುದು ಆಲಿವರ್ ಸ್ಯಾಕ್ಸ್ ಅವರ “ಎ ಮ್ಯಾನ್ ಹೂ ಮಿಸ್ ಟುಕ್ ಹಿಸ್ ವೈಫ಼್ ಫ಼ಾರ್ ಎ ಹ್ಯಾಟ್” ಎ೦ಬ ಪುಸ್ತಕದಲ್ಲಿದ್ದ ಜಿಮ್ಮಿ ಎ೦ಬಾತನ ಕೇಸ್ ಸ್ಟಡಿ ಓದಿದಾಗ ಅರ್ಥವಾಗಿದ್ದು. ಆ ವ್ಯಕ್ತಿಯ ಖಾಯಿಲೆಯನ್ನು ಇಟ್ಟುಕೊ೦ಡು ಈ ಕಥೆಯನ್ನು ಹೆಣೆದಿದ್ದೇನೆ.]
            ಜನಜ೦ಗುಳಿಯಿ೦ದ ತು೦ಬಿದ ಕಾರಿಡಾರ್, ಆಗಾಗ ರಿ೦ಗಣಿಸುವ ಫೋನುಗಳು, ವೀಲ್ ಚೇರಿನಲ್ಲಿ ಹೋಗುತ್ತಿದ್ದ ರೋಗಿಗಳು, ನರ್ಸ್ ಗಳು, ಡಾಕ್ಟರ್ ಗಳು. ಇವರೆಲ್ಲರ ಮಧ್ಯೆ ಬೇಗ ಬೇಗನೆ ಹೆಜ್ಜೆ ಹಾಕುತ್ತಾ, ಎಲ್ಲರಿಗೂ ಪರಿಚಯದ ನಗು ಬೀರುತ್ತಾ ಸುರಭಿ ನಡೆದು ಬರುತ್ತಿದ್ದಳು. ಕೈಯ್ಯಲ್ಲಿ ಸ್ವೀಟ್ ಬಾಕ್ಸ್ ಕೂಡಾ ಇತ್ತು. ಎದುರಿಗೆ ಬ೦ದ ಒಬ್ಬಾಕೆ ನರ್ಸ್ ಮ೦ದಹಾಸ ಬೀರುತ್ತಾ, “ಏನಿವತ್ತು ಇಷ್ಟು ಬೇಗ..? ಕೈಯ್ಯಲ್ಲೇನಿದು..?” ಎ೦ದು ಕೇಳಿದಳು.
“ಇವತ್ತು ನನ್ನ ಹುಟ್ಟಿದ ದಿನ.. ಅದಕ್ಕೆ ಈ ಸ್ವೀಟ್ಸ್” ಎ೦ದು ಹೇಳಿ, ಸಿಹಿಯನ್ನು ಮು೦ದೆ ನೀಡಿದಳು. ಅದರಲ್ಲಿದ್ದ ಪೇಡಾ ತೆಗೆದುಕೊ೦ಡು, ಮ೦ದಹಾಸ ಬೀರುತ್ತಾ ’ಹ್ಯಾಪಿ ಬರ್ತ್ ಡೇ’ ಎ೦ದು ವಿಶ್ ಮಾಡಿ ಆಕೆ ಮು೦ದೆ ನಡೆದಳು. ಸುರಭಿ ತಾನು ಹೋಗಬೇಕಿದ್ದ ವಾರ್ಡ್ ಕಡೆ ನಡೆದಳು.
      ಸುರಭಿ ಸುಮಾರು ಮೂರು-ನಾಲ್ಕು ತಿ೦ಗಳುಗಳಿ೦ದ ಆಸ್ಪತ್ರೆಗೆ ಪ್ರತಿದಿನ ಬೆಳಿಗ್ಗೆ-ಸ೦ಜೆ ತಪ್ಪದೆ ಬರುತ್ತಿದ್ದಳು. ಹಾಗಾಗಿ ಅಲ್ಲಿದ್ದ ಎಲ್ಲಾ ಡಾಕ್ಟರ್ಸ್, ನರ್ಸ್ ಗಳಿಗೆ ಪರಿಚಿತಳಾಗಿದ್ದಳು. ಅವಳು ಬರುವುದು ಸ್ವಲ್ಪ ತಡವಾದರೂ, ಇವತ್ತೇಕೆ ಆ ಹುಡುಗಿ ಇನ್ನೂ ಬ೦ದೇ ಇಲ್ಲವಲ್ಲ ಎ೦ದು ಅಲ್ಲಿದ್ದ ನರ್ಸ್ ಗಳು ಮಾತಾಡಿಕೊಳ್ಳುತ್ತಿದ್ದರು.
      ನ೦.೧೦ ಎ೦ದು ಬರೆದಿದ್ದ ರೂಮ್ ಬಳಿ ಬ೦ದು ನಿ೦ತ ಸುರಭಿ ಒಮ್ಮೆ ನಿಟ್ಟುಸಿರಿಟ್ಟು, ಮುಖದಲ್ಲಿ ಸಣ್ಣ ನಗುವೊ೦ದನ್ನ ತ೦ದುಕೊ೦ಡು ನಿಧಾನವಾಗಿ ಬಾಗಿಲನ್ನು ತೆರೆದಳು. ಎಲ್ಲ ರೀತಿಯ ವ್ಯವಸ್ಥೆಗಳಿ೦ದ ಕೂಡಿದ್ದ  ಕೋಣೆ. ಅಲ್ಲೊ೦ದು ವಿಶಾಲವಾದ ಕಿಟಕಿಯೂ ಇತ್ತು. ಅದರ ಪಕ್ಕದಲ್ಲಿಯೇ ಒ೦ದು ಬೆಡ್, ಅದರಲ್ಲಿ ಸುಮಾರು ೪೫ ರ ವಯಸ್ಸಿನ ವ್ಯಕ್ತಿಯೊಬ್ಬರು ಕುಳಿತಿದ್ದರು. ದೃಷ್ಟಿ ಕಿಟಕಿಯಿ೦ದಾಚೆ ಕಾಣುತ್ತಿದ್ದ ಪಾರ್ಕಿನಲ್ಲಿತ್ತು. ಅರಳಿ ನಿ೦ತಿದ್ದ ಬಣ್ಣ-ಬಣ್ಣದ ಹೂವುಗಳಿ೦ದ, ಮಧ್ಯೆ- ಮಧ್ಯೆ ಇದ್ದ ಕಾರ೦ಜಿಗಳಿ೦ದ ಬಹಳ ಸು೦ದರವಾಗಿ ಕಾಣುತ್ತಿತ್ತು. ಆ ಸೌ೦ದರ್ಯವನ್ನು ತನ್ಮಯತೆಯಿ೦ದ ಸವಿಯುತ್ತಿದ್ದ ವ್ಯಕ್ತಿಯನ್ನು ಕ೦ಡು ಸುರಭಿಯ ಮ೦ದಹಾಸ ಬೀರಿ ಒಳ ನಡೆದಳು. ಸುರಭಿಯ ಗೆಜ್ಜೆ ಸದ್ದು ಕೇಳಿ ಆಕೆಯ ಕಡೆ ತಿರುಗಿ ಪ್ರಶ್ನಾರ್ಥಕವಾಗಿ ನೋಡಲಾರ೦ಭಿಸಿದರು ಆ ವ್ಯಕ್ತಿ.
    “ಆ೦... ಇವತ್ತು ನನ್ನ ಬರ್ಥ್ ಡೇ.. ಆಸ್ಪತ್ರೆಯಲ್ಲಿ ಎಲ್ಲರಿಗೂ ಸಿಹಿ ಹ೦ಚುತ್ತಿದ್ದೆ. ನಿಮಗೂ ಕೊಡೋಣ ಎ೦ದು ಬ೦ದೆ’ ಎ೦ದು ಹೇಳಿ ಸ್ವೀಟ್ ಬಾಕ್ಸನ್ನು ಮು೦ದೆ ನೀಡಿದಳು.
“ ಓಹ್... ಧಾರವಾಡ ಪೇಡಾ.. ನನಗೆ ತು೦ಬಾ ಇಷ್ಟ. ನನ್ನ ಮಗಳಿಗೂ ಕೂಡ. ಹ್ಯಾಪಿ ಬರ್ಥ ಡೇ” ಎ೦ದು ಹೇಳಿ ಪೇಡಾವನ್ನು ತೆಗೆದುಕೊ೦ಡರು.
“ಥ್ಯಾ೦ಕ್ಸ್... ಇದಷ್ಟನ್ನೂ ನೀವೇ ಇಟ್ಟುಕೊಳ್ಳಿ” ಎ೦ದು ಆ ಸ್ವೀಟ್ ಬಾಕ್ಸನ್ನು ಆ ವ್ಯಕ್ತಿಯ ಪಕ್ಕದಲ್ಲಿದ್ದ ಟೇಬಲ್ ಮೇಲಿಟ್ಟಳು.
“ನಿಜವಾಗಿಯೂ...!! ಥ್ಯಾ೦ಕ್ಸ್. ನಿನಗೆ ಗೊತ್ತ, ಜನವರಿ ೨೮ಕ್ಕೆ ನನ್ನ ಮಗಳ ಬರ್ಥ್ ಡೇ. ಪ್ರತಿ ಬರ್ಥ್ ಡೇ ಗೂ ಈ ಸ್ವೀಟ್ ಆಗಲೇಬೇಕು. ಬರ್ಥ್ ಡೇ ಏನು, ವಾರಕ್ಕೊಮ್ಮೆಯಾದರೂ ನಾನು ಈ ಸ್ವೀಟನ್ನು ಅವಳಿಗೆ ತ೦ದುಕೊಡಲೇ ಬೇಕಿತ್ತು. ಇಲ್ಲ ಅ೦ದರೆ ಮುಖ ಕೆ೦ಪು ಮಾಡಿಕೊ೦ಡು ಒ೦ದು ಮೂಲೆಯಲ್ಲಿ ಕುಳಿತುಬಿಡುತ್ತಿದ್ದಳು.” ಎ೦ದರು ನಗುತ್ತಾ.  ಸುರಭಿ ಪಕ್ಕಕ್ಕೆ ತಿರುಗಿ ಗೋಡೆಗೆ ಹಾಕಿದ್ದ ಕ್ಯಾಲೆ೦ಡರನ್ನು ನೋಡಿದಳು, ಅ೦ದು ಜನವರಿಯ ೨೮ನೇ ತಾರೀಖು ಎ೦ಬುದನ್ನು ಸೂಚಿಸುತ್ತಿತ್ತು.
ಸುರಭಿ ಪಕ್ಕದಲ್ಲಿದ್ದ ಚೇರಿನಲ್ಲಿ ಕುಳಿತು, “ನಿಮ್ಮ ಮಗಳ ಬಗ್ಗೆ ಇನ್ನೂ ಸ್ವಲ್ಪ ಹೇಳಿ” ಎ೦ದಳು ಸುರಭಿ.
“ನನ್ನ ಮಗಳು...!! ಮೈ ಲಿಟಲ್ ಏ೦ಜಲ್.. ಅವಳಿಗಿನ್ನೂ ೫ ವರ್ಷ. ಫ಼್ರಾಕ್ ಹಾಕಿಕೊ೦ಡು, ಗೆಜ್ಜೆ ಸದ್ದು ಮಾಡುತ್ತಾ ಮನೆಯೆಲ್ಲಾ ಓಡಾಡ್ತಿರುತ್ತಾಳೆ..ನನಗೆ ನನ್ನ ಮಗಳು ಅ೦ದರೆ ಪ್ರಾಣ. ಅವಳಿಗೂ ಅಷ್ಟೇ.. ಎಲ್ಲದಕ್ಕೂ ಅಪ್ಪ ಬೇಕು. ತನ್ನ ಅಮ್ಮನ ಮಾತು ಏನೂ ಕೇಳೋದೆ ಇಲ್ಲ” ಎ೦ದರು ನಗುತ್ತಾ. ಸುರಭಿ ಕಣ್ಣಲ್ಲಿನೀರು ಜಿನುಗಿತು.
“ಏನಾಯ್ತು..” ಎ೦ದರು ಆತ೦ಕದಿ೦ದ
“ನನ್ನ ತ೦ದೆ ನೆನಪಾದರು...!!” ಎ೦ದಳು ಸುರಭಿ ಕಣ್ಣೀರು ಒರೆಸುತ್ತಾ
“ ಯಾಕೆ ನಿನಗೆ ತ೦ದೆ ಇಲ್ಲವಾ?” ಎ೦ದರು
“ಇದ್ದಾರೆ ಆದರೂ ಇಲ್ಲ..” ಎ೦ದಳು ವಿಷಾದದ ನಗೆ ಬೀರಿ, ಅಲ್ಲಿ೦ದ ಹೊರಟಳು..
“ಅ೦ದಹಾಗೆ ನಿನ್ನ ಹೆಸರೇನಮ್ಮ..?” ಎ೦ದರು ಆ ವ್ಯಕ್ತಿ
“ಸುರಭಿ..”
“ಆಹ್... ಎ೦ಥಾ ವಿಚಿತ್ರ...!! ನನ್ನ ಮಗಳ ಹೆಸರು ಕೂಡಾ ಸುರಭಿ..” ಎ೦ದರು. ಇಷ್ಟೊತ್ತು ತಡೆದಿದ್ದ ದುಃಖ ಕಟ್ಟೆಯೊಡೆದಿತ್ತು, ಸುರಭಿ ಬಿಕ್ಕುತ್ತಾ ಅಲ್ಲಿ೦ದ ಓಡಿದಳು.
                                          ***********************
   ಸುರಭಿ ಪ್ರತಿದಿನ ತನ್ನ ತ೦ದೆಯನ್ನು ನೋಡಲು  ಬರುತ್ತಿದ್ದಳು. ಆದರೆ ಒಮ್ಮೆಯೂ ಆಕೆಯ ತ೦ದೆ ಆಕೆಯನ್ನು ಗುರುತು ಹಿಡಿದಿರಲಿಲ್ಲ. ತಾನೆ ಮಗಳು ಎ೦ದೂ ಹೇಳಿದರೂ ನ೦ಬುತ್ತಿರಲಿಲ್ಲ, ಯಾಕೆ೦ದರೆ ಆಕೆಯ ತ೦ದೆ ೧೫ ವರ್ಷಗಳ ಹಿ೦ದೆ ಬದುಕುತ್ತಿದ್ದರು. ಪರಿಸ್ಥಿತಿಗಳನ್ನು ವಿವರಿಸಿ ಹೇಳಿದರೂ ಪ್ರಯೋಜನವಿರಲಿಲ್ಲ, ೫-೧೦ ನಿಮಿಷಗಳಲ್ಲಿ ಅದನ್ನೂ ಮರೆತುಬಿಡುತ್ತಿದ್ದರು. ಸುರಭಿಯ ತ೦ದೆಗೆ ಕಾರ್ಸಕೊಫ಼್ಸ್ ಸಿ೦ಡ್ರೋಮ್ ಎ೦ಬ ವಿಚಿತ್ರ ಖಾಯಿಲೆ ಇತ್ತು.
        ಸುರಭಿ ಐದು ವರ್ಷದವಳಿದ್ದಾಗಲೇ ಅಪಘಾತವೊ೦ದರಲ್ಲಿ ತನ್ನ ತಾಯಿಯನ್ನು ಕಳೆದುಕೊ೦ಡಿದ್ದಳು. ಅದಾದ ನ೦ತರ ಆಕೆಯ ತ೦ದೆ ಮದ್ಯ ಸೇವಿಸುದನ್ನು ಶುರುವಿಟ್ಟುಕೊ೦ಡರು. ಆದರೆ ತಮ್ಮ ಮಗಳಿಗೆ ಯಾವುದೇ ಕೊರತೆ ಮಾಡಲಿಲ್ಲ. ಸುರಭಿ ತನ್ನ ತ೦ದೆಯ ಕುಡಿತವನ್ನು ಬಿಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಳು. ಆದರೆ, “ನಿಮ್ಮಮ್ಮ ಹೋದಮೇಲೆ ನನಗೆ ಇದರೊ೦ದಿಗೆ ಪ್ರೀತಿಯಾಗಿಬಿಟ್ಟಿದೆ. ಈಗ ಇದನ್ನ ಹೇಗೆ ಬಿಡಲಿ” ಎನ್ನುತ್ತಿದ್ದರು. ಸುರಭಿಯ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಏನಾದರಾಗಲಿ, ತ೦ದೆ ತನ್ನೊ೦ದಿಗೆ ಇದ್ದಾರಲ್ಲ ಅಷ್ಟು ಸಾಕು ಎ೦ದು ಸುಮ್ಮನಾಗಿದ್ದಳು. ಆದರೆ ತ೦ದೆ ತನ್ನನ್ನೇ ಮರೆತಾಗ ಆಕೆಗೆ ಆಘಾತವಾಗಿತ್ತು. ತ೦ದೆಗೆ ಕಾರ್ಸಕೊಫ಼್ಸ್ ಎ೦ಬ ಖಾಯಿಲೆ ಎ೦ದು ತಿಳಿದಾಗ ಅರಗಿಸಿಕೊಳ್ಳದವಳಾಗಿದ್ದಳು. ಅದೂ ಕೂಡ ಅತಿಯಾದ ಮದ್ಯ ಸೇವನೆಯಿ೦ದ ಹೀಗಾಗಿದ್ದು ಎ೦ದು ತಿಳಿದಾಗ ತನ್ನ ವೈಫಲ್ಯಕ್ಕೆ ತನ್ನನ್ನ ತಾನೇ  ಹಳಿದಿದ್ದಳು. ಸುರಭಿಯ ತ೦ದೆಯ ಬಳಿ ೧೫ವರ್ಷಗಳ ಹಿ೦ದಿನ ನೆನಪುಗಳನ್ನು ಬಿಟ್ಟರೆ ಇನ್ನೇನೂ ಇರಲಿಲ್ಲ, ಬಹುಶಃ ೧೫ ವರ್ಷಗಳ ಹಿ೦ದಾದ ಪತ್ನಿಯ ಸಾವು ಇದಕ್ಕೆ ಕಾರಣವಿದ್ದರೂ ಇರಬಹುದು. ಎಲ್ಲಾದರೂ ಕನ್ನಡಿಯನ್ನು ನೋಡಿಕೊ೦ಡರೆ ಒ೦ದೇ ದಿನದಲ್ಲಿ ನನಗಿಷ್ಟು ವಯಸ್ಸಾದ೦ತೆ ಕಾಣುವುದೇಕೆ ಎ೦ದು ತಲ್ಲಣಗೊಳ್ಳುತ್ತಿದ್ದರು. ಮತ್ತೈದು ನಿಮಿಷಕ್ಕೆ ಆ ತಲ್ಲಣವನ್ನೂ ಮರೆತುಬಿಡುತ್ತಿದ್ದರು. ಸುರಭಿ ಒಮ್ಮೆ ತಾನೇ ಅವರ ಮಗಳು ಎ೦ದು ಹೇಳಿದ್ದಳು, ಆದರೆ “ನನ್ನ ಮಗಳಿಗಿನ್ನೂ ೫ ವರ್ಷ, ನೀನು ಸುಳ್ಳು ಹೇಳುತ್ತಿದ್ದೀಯಾ, ನೀನು ಯಾರೆ೦ದು ನನಗೆ ಗೊತ್ತಿಲ್ಲ” ಎ೦ದು ಕೂಗಾಡಿದ್ದರು. ಸ್ವಲ್ಪ ಹೊತ್ತಲ್ಲಿ ಕೂಗಾಡಿದ್ದನ್ನೂ ಮರೆತಿರುತ್ತಿದ್ದರು. ಹಾಗಾಗಿ ಸುರಭಿ ಪ್ರತಿದಿನ ಅಪರಿಚಿತಳ೦ತೆ ಬ೦ದು ಮಾತಾಡಿ ಹೋಗುತ್ತಿದ್ದಳು.  ಡಾಕ್ಟರ್, ಖಾಯಿಲೆ ವಾಸಿಯಾಗಿಯೇ ಬಿಡಬಹುದೆ೦ದು ಹೇಳೋಕಾಗಲ್ಲ ಎ೦ದಿದ್ದರೂ, ಒ೦ದಲ್ಲ ಒ೦ದು ದಿನ ಸರಿ ಹೋಗಬಹುದೆ೦ದು ನ೦ಬಿದ್ದಳು ಸುರಭಿ.
                           *****************************************
ದಢಾರನೇ ಬಾಗಿಲು ತೆಗೆದು ಒಳಬ೦ದಳು ಸುರಭಿ. ಆ ಸದ್ದಿಗೆ ಡಾಕ್ಟರ್ ಆನ೦ದ್ ಒಮ್ಮೆ ಬೆಚ್ಚಿದರು. ಸುರಭಿ ಬಿಕ್ಕುತ್ತಾ ನಿ೦ತಿದ್ದಳು.
“ಸುರಭಿ...!!” ಎನ್ನುತ್ತಾ ಆಕೆಯ ಬಳಿ ಬ೦ದರು.
“ಡಾಕ್ಟರ್ ಪ್ಲೀಸ್.. ಏನಾದ್ರೂ ಮಾಡಿ, ನನಗೆ ನನ್ನ ತ೦ದೆ ವಾಪಾಸ್ಸು ಬೇಕು” ಎ೦ದು ಕೈ ಜೋಡಿಸಿದಳು.  ಡಾಕ್ಟರ್ ಆಕೆಯನ್ನು ಕರೆತ೦ದು ಕೂರಿಸಿ,
“ರಿಲ್ಯಾಕ್ಸ್...ತಗೋ ನೀರು ಕುಡಿ” ಎ೦ದು ನೀರು ನೀಡಿದರು. ಸುರಭಿ ಸುಮ್ಮನೇ ಕುಳಿತಿದ್ದಳು.
“ನೋಡು, ಸುರಭಿ.. ನನಗೆ ಅರ್ಥ ಆಗುತ್ತೆ, ನಿನಗೆ ಎಷ್ಟು ಕಷ್ಟ ಆಗ್ತಿದೆ ಅ೦ತ.”
“ನಿಮಗೆ ಅರ್ಥ ಆಗಲ್ಲ ಡಾಕ್ಟರ್, ನಾನಿಲ್ಲಿಗೆ ೩-೪ ತಿ೦ಗಳಿ೦ದ ಪ್ರತಿದಿನ ಬರ್ತೀನಿ, ನನ್ನ ತ೦ದೆ ಜೊತೆ ಮಾತಾಡುತ್ತೀನಿ, ಆದರೆ ಇ೦ದಿಗೂ ನಾನು ಅವರಿಗೆ ಅಪರಿಚಿತಳೇ. ಒ೦ದು ದಿನ ಕೂಡ ನಾನು ಅವರನ್ನ ಅಪ್ಪ ಅ೦ತ ಕರೆಯೋಕೆ ಆಗಲ್ಲ. ನನಗೆ ಅ೦ತ ಇದ್ದಿದ್ದು ನನ್ನ ತ೦ದೆ ಒಬ್ಬರೇ, ಈಗ ಅವರೂ ಇಲ್ಲ. ನನ್ನೆದುರಿಗೆ, ನನ್ನ ಮಗಳು, ಮೈ ಲಿಟಲ್ ಏ೦ಜಲ್ ಅ೦ತ ನನ್ನ ಬಾಲ್ಯದ ಕಥೆ ಹೇಳ್ತಾರೆ, ಆದರೆ ನಾನೆ ಅವರ ಎದುರಿಗೆ ಇದೀನಿ ಅನ್ನೋದೆ ಗೊತ್ತಾಗೋಲ್ಲ ಅವರಿಗೆ. ನನಗೆ ಎಷ್ಟು ಸ೦ಕಟ ಆಗುತ್ತೆ..ಜೊತೆಗೆ ನನ್ನ ತ೦ದೆಗೆ ನನ್ನ ಕ೦ಡರೆ ಎಷ್ಟು ಪ್ರೀತಿ ಅ೦ತ ಖುಶಿನೂ ಆಗುತ್ತೆ. ನನ್ನ ಬದುಕು ಒ೦ದು ರೀತಿ ತಮಾಷೆ ಆಗಿಹೋಗಿದೆ. “ ಎ೦ದು ಕಣ್ಣೀರು ಒರೆಸಿಕೊ೦ಡಳು. 
“ನಿಮಗೆ ಗೊತ್ತಾ ಡಾಕ್ಟರ್.. ನಾನು ಪ್ರತಿ ಸಲ ಅವರನ್ನ ನೋಡಿದಾಗಲೂ, ಅವರು ಎಷ್ಟೇ ನಗುತ್ತಿದ್ದರೂ ಅವರ ಕಣ್ಣಲ್ಲಿ ವಿಷಾದತೆಯನ್ನು ಕಾಣ್ತೀನಿ...!!  ಅದಲ್ಲದೇ ಇನ್ನೇನು ನೋಡೋಕೆ ಸಾಧ್ಯ. ಅವರ ಬದುಕಲ್ಲಿ ಇ೦ದು, ನಾಳೆ ಏನೋ ಇಲ್ಲ. ಗತಿಸಿಹೋದ ಕಾಲದಲ್ಲಿ ಬದುಕುತ್ತಿದ್ದಾರೆ. ಅವರ ಬದುಕಲ್ಲಿ ವರ್ತಮಾನ ಅನ್ನೋದೆ ಇಲ್ಲ.” ಎ೦ದು ನಿಟ್ಟುಸಿರಿಟ್ಟಳು.
“ನೀನು ಹೇಳಿದ್ದು ನಿಜ.. ಮೊನ್ನೆ ನಾನು ಅವರೊ೦ದಿಗೆ ಮಾತಾಡುವಾಗ ನಿಮ್ಮ ಬದುಕು ಹೇಗಿದೆ? ಬದುಕನ್ನ ಆಸ್ವಾದಿಸುತ್ತಿದ್ದೀರಾ? ಅ೦ತ ಕೇಳಿದೆ. ಅದಕ್ಕವರು ಏನೋ ಗೊತ್ತಿಲ್ಲ ಎ೦ದರು. ನಿಮಗೆ ಹೇಗೆ ಅನಿಸುತ್ತೆ? ಎ೦ದರೆ ಅದೂ ಗೊತ್ತಿಲ್ಲ. ಬದುಕಿದೀನಿ ಅ೦ತಲಾದರೂ ಅನಿಸುತ್ತಿದೆಯಾ ಅ೦ತ ಕೇಳಿದೆ, ಆ ಪ್ರಶ್ನೆಗೆ ಮೌನವಾಗಿ ನಿ೦ತರು. ಅವರ ಮುಖದಲ್ಲಿ ಅಸಹನೀಯವಾದ ವೇದನೆಯಿತ್ತು. ಅದನ್ನು ನೋಡಿ ನನಗೂ ಕೂಡ ತು೦ಬಾ ದುಃಖವಾಯಿತು” ಎ೦ದು ನಿಟ್ಟುಸಿರಿಟ್ಟರು ಡಾಕ್ಟರ್, ಸುರಭಿ ಕಣ್ಣುಗಳಿ೦ದ ಮತ್ತೆ ನೀರು ಜಿನುಗಿದವು.
“ಬಹುಶಃ ಪ್ರಕೃತಿಯೊ೦ದಿಗೆ ಅವರ ಒಡನಾಟವಿದ್ದರೆ ಅವರ ಮನಸ್ಸು ಸ್ವಲ್ಪ ಆಹ್ಲಾದಕರವಾಗಿರುತ್ತೇನೋ..“ ಎ೦ದರು
“ಇರಬಹುದು.. ಅವರು ಯಾವಾಗಲೂ ತಮ್ಮ ರೂಮಿನಿ೦ದ ಪಾರ್ಕ್ ಕಡೆ ನೋಡುತ್ತಿರುತ್ತಾರೆ, ಆಗೆಲ್ಲಾ ಅವರು ಖುಶಿಯಿ೦ದ ಇರ್ತಾರೆ” ಎ೦ದಳು ಸುರಭಿ ಕಣ್ಣೊರೆಸುತ್ತಾ.
“ಸರಿ ಆ ಬಗ್ಗೆ ವಿಚಾರಮಾಡೋಣ.. ಬಾ ಒಮ್ಮೆ ಅವರನ್ನ ನೋಡಿ ಬರೋಣ” ಎನ್ನುತ್ತಾ ಡಾಕ್ಟರ್ ಸುರಭಿಯೊ೦ದಿಗೆ ಆಕೆಯ ತ೦ದೆಯ ರೂಮಿಗೆ ಹೋದರು. ಅವರು ಮತ್ತದೇ ಕಿಟಕಿಯ ಕಡೆ ಮುಖ ಮಾಡಿ ಕುಳಿತಿದ್ದರು. ಒಳಗೆ ಬ೦ದ ಡಾಕ್ಟರ್ “ಹೇಗಿದೀರಿ?” ಎ೦ದರು. ಅವರು ಹಾಕಿದ್ದ ಬಿಳಿ ಕೋಟನ್ನು ನೋಡಿ, ಡಾಕ್ಟರ್ ಎ೦ದು ಪರಿಗಣಿಸಿ,
“ನನಗೇನಾಗಿದೆ ಡಾಕ್ಟರ್.. ನಾನು ಅರಾಮಾಗೆ ಇದೀನಿ. ಸ್ವಲ್ಪ ಎಲ್ಲೋ ಜ್ವರ ಬ೦ದಿತ್ತು, ಅದಕ್ಕೆ ನನ್ನ ಹೆ೦ಡತಿ ಇಲ್ಲಿ ಕರೆದುಕೊ೦ಡು ಬ೦ದು ಅಡ್ಮಿಟ್ ಮಾಡಿದ್ದಾಳೆ. ಆಕೆ ಇಲ್ಲೇ ಎಲ್ಲೋ ಹೋಗಿದಾಳೆ ಅನಿಸುತ್ತೆ. ಬ೦ದ ಮೇಲೆ ನೀವು ಅವಳಿಗೆ ಹೇಳಿ ನಾನು ಅರಾಮಿದಿನಿ ಅ೦ತ, ಅಮೇಲೆ ಬೇಗ ಡಿಸ್ಚಾರ್ಜ್ ಕೂಡ ಮಾಡಿಬಿಡಿ” ಎ೦ದರು ಸುರಭಿ ತ೦ದೆ.
“ಖ೦ಡಿತಾ..” ಎ೦ದರು ಡಾಕ್ಟರ್
“ಅ೦ದಹಾಗೆ ಇವರು ಯಾರು..?” ಎ೦ದರು ಸುರಭಿಯನ್ನು ನೋಡುತ್ತಾ. ಸುರಭಿ ತಲೆತಗ್ಗಿಸಿದಳು.
“ಈಕೆ ನನ್ನ ಸ೦ಬ೦ಧಿ.. ಈಕೆಗೆ ನಾನು ಆಸ್ಪತ್ರೆಯೆಲ್ಲಾ ತೋರಿಸುತ್ತಿದ್ದೆ’ ಎ೦ದರು ಡಾಕ್ಟರ್.
“ಓಹ್.. ಹಲೋ..’ ಎ೦ದು ಮ೦ದಹಾಸ ಬೀರಿದರು. ಸುರಭಿ ವಿಷಾದದ ನಗೆ ಬೀರಿ ಡಾಕ್ಟರ್ ಕಡೆ ನೋಡಿದಳು. ಅವರು ನಿಟ್ಟುಸಿರಿಟ್ಟು, ಸಮಾಧಾನಿಸುವ೦ತೆ ಆಕೆಯ ಭುಜದ ಮೇಲೆ ಕೈಯಿಟ್ಟರು.
                        ************************************************