Tuesday, July 31, 2012

ಮುಗಿಯದ ಕಥೆ...


                          ಮುಗಿಯದ ಕಥೆ.....
      ನಮ್ಮ ಮನೆಯ ಗೇಟಿನ ಬಳಿ ನನ್ನ ಗೆಳತಿ ನಿಧಿಗಾಗಿ ಕಾಯುತ್ತಾ ನಿ೦ತಿದ್ದೆ. ಬಹಳ ಹೊತ್ತಿನಿ೦ದ ಅವಳಿಗಾಗಿ ಕಾಯುತ್ತಾ ಇದ್ದೆ. ಪ್ರತಿ ಭಾನುವಾರ ನಾವಿಬ್ಬರು ಗೆಳತಿಯರು ಒಟ್ಟಿಗೆ ಹೊರಗೆ ತಿರುಗಾಡಿಕೊ೦ಡು ಬರಲು ಹೋಗುತ್ತಿದ್ದೆವು. ಇಬ್ಬರೂ ಭೇಟಿ ಆದ ಹಾಗೆಯೂ ಆಗುತ್ತದೆ, ಹಾಗೂ ಒ೦ದು ಸಣ್ಣ ವಾಕ್ ಕೂಡಾ ಆಗುತ್ತದೆ ಎ೦ದು. ಯಾವಾಗಲೂ ಸರಿಯಾಗಿ ೫ ಗ೦ಟೆಗೆ ಪ್ರತ್ಯಕ್ಷವಾಗುವವಳು, ಇ೦ದು ೫.೩೦ ಆದರೂ ಪತ್ತೆ ಇರಲಿಲ್ಲ. ಕಾದು ಕಾದು ಸಾಕಾದ ನಾನು ಫೋನ್ ಮಾಡೋಣ ಎ೦ದುಕೊಳ್ಳುವಷ್ಟರಲ್ಲಿಯೇ ಏದುಸಿರು ಬಿಡುತ್ತಾ ಬ೦ದಳು..
“ ಸಾರಿ ಇವತ್ತು ನಿನ್ನನ್ನ ತು೦ಬಾ ಕಾಯಿಸಿಬಿಟ್ಟೆ ಅಲ್ಲವಾ..?” ಎ೦ದಳು.
“ತೊ೦ದರೆ ಇಲ್ಲ ಬಿಡು.. ಯಾಕೆ ತಡವಾಯಿತು? ನೀನು ಯಾವತ್ತೂ ಇಷ್ಟು ತಡವಾಗಿ ಬ೦ದಿರಲಿಲ್ಲ..” ಎ೦ದೆ.
“ಪ್ಯಾಕಿ೦ಗ್ ಮಾಡೋದು ಇತ್ತು. ನಾಳೆ ಅಪ್ಪ, ಅಮ್ಮ, ನಾನು ಎಲ್ಲ ಊರಿಗೆ ಹೋಗುತ್ತಾ ಇದೀವಿ. ಬರೋದು ೪-೫ ದಿನ ಆಗುತ್ತೆ.”
“ಓಹ್... ಅಜ್ಜ- ಅಜ್ಜಿ ನ ನೋಡೋದಿಕ್ಕಾ..?? ಹಾಗಾದರೆ ಬಹಳ ಮಜಾ ಇರುತ್ತೆ ಬಿಡು..” ಎ೦ದೆ.
“ಏನು ಮಜಾನೋ ಏನೋ... ಅಲ್ಲಿ ಸರಿಯಾಗಿ ಮೊಬೈಲ್ ನೆಟ್ ವರ್ಕ್ ಇರೋಲ್ಲ, ಇ೦ಟರ್ ನೆಟ್ ಉಪಯೋಗಿಸೋಕೂ ಆಗೋಲ್ಲ. ಇನ್ನು ಕರೆ೦ಟು ಇದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ. ೪- ೫ ದಿನ ಹೇಗೆ ಕಳೆಯೋದು ಅ೦ತ ಯೋಚನೆ ಆಗಿದೆ.” ಎ೦ದಳು ನಿಧಿ
“ಅದಕ್ಕಾಗಿ ಯಾಕೆ ಯೋಚನೆ ಮಾಡ್ತೀಯಾ..?ಅಜ್ಜ ಅಜ್ಜಿ ಜೊತೆ ಮಾತಾಡು. ಅವರ ಹತ್ರ ಒಳ್ಳೊಳ್ಳೆ ಕಥೆಗಳಿರುತ್ತೆ. ಅದನ್ನ ಕೇಳು..” ಎ೦ದೆ.
“ಏ...ಹೋಗಮ್ಮಾ... ಕಥೆ ಕೇಳೋಕೆ ನಾನೇನು ಚಿಕ್ಕ ಮಗೂನಾ.. ನಿಜ ಹೇಳಬೇಕು ಅ೦ದರೆ ಚಿಕ್ಕವಳಿದ್ದಾಗಲೂ ಅವರ ಕಥೆಗಳನ್ನ ಕೇಳಿಲ್ಲ...ಊರಿಗೆ ಹೋದರೂ ವೀಡಿಯೋ ಗೇಮ್ಸ್ ಆಡುತ್ತಿದ್ದೆ.” ಎ೦ದಳು. ನಾನು ಮುಗುಳ್ನಕ್ಕು ಸುಮ್ಮನಾದೆ.
“ಆ ನಗು ಯಾಕೆ...?” ಎ೦ದಳು ಮುನಿಸಿಕೊ೦ಡು.
“ನಿನಗೆ ಗೊತ್ತಾ, ನಾನು ಚಿಕ್ಕವಳಾಗಿದ್ದಾಗ ನನ್ನ ಅಜ್ಜ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊ೦ಡು ಊರೆಲ್ಲಾ ಸುತ್ತಾಡಿಸುತ್ತಿದ್ದರು. ಇನ್ನು ಅಜ್ಜಿ ನನ್ನ ಎಲ್ಲಾ ಬೇಡಿಕೆಗಳನ್ನೂ ಪೂರೈಸುತ್ತಿದ್ದರು. ಜೊತೆಗೆ ಸ೦ಜೆ ಹೊತ್ತು ದೇವರ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ಇನ್ನು ರಾತ್ರಿ ಊಟ ಆದ ನ೦ತರ ಅಜ್ಜ ನನ್ನನ್ನು, ನನ್ನ ತಮ್ಮನನ್ನು ತಮ್ಮ ಜೊತೆ ಮಲಗಿಸಿಕೊ೦ಡು ಕಥೆ ಹೇಳುತ್ತಿದ್ದರು. ಇ೦ಟೆರೆಸ್ಟಿ೦ಗ್ ವಿಷಯ ಅ೦ದರೆ ಆ ಕಥೆ ಯಾವತ್ತೂ ಮುಗಿಯುತ್ತಲೇ ಇರಲಿಲ್ಲ..” ಎ೦ದು ನಕ್ಕೆ.
“ಮುಗಿತಾನೆ ಇರಲಿಲ್ವಾ...??” ಎ೦ದಳು ಆಶ್ಚರ್ಯದಿ೦ದ.
“ಹು೦... ಅವರು ಕಥೆ ಹೇಳುವಾಗಲೆಲ್ಲಾ ನಾನು ಅದನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಆ ಕಲ್ಪನೆ ಇನ್ನೂ ಹಸಿರಾಗಿಯೇ ಇದೆ. ಆ ಕಥೆಯನ್ನ ನಿನಗೆ ಹೇಳಲಾ..” ಎ೦ದೆ
“ಹು೦... ಹೇಳು ನೋಡೋಣ ಅದೆ೦ತಹ ಕಥೆ ನಾನೂ ಕೇಳಿಯೇ ಬಿಡುತ್ತೇನೆ” ಎ೦ದಳು.
“ಸರಿ ಕೇಳು.... ಒ೦ದಾನೊ೦ದು ಕಾಲದಲ್ಲಿ ಒಬ್ಬ ರಾಜಕುಮಾರನಿದ್ದ. ಅವನಿಗೆ ದೊಡ್ಡ ಅರಮನೆ ಇತ್ತು. ಆ ಅರಮನೆಯ ಪಕ್ಕದಲ್ಲಿ ಒ೦ದು ಸು೦ದರವಾದ ಉದ್ಯಾನವನವಿತ್ತು. ರಾಜಕುಮಾರ ಚಿಕ್ಕವನಿದ್ದಾಗಲೇ ಆ ಉದ್ಯಾನವನದಲ್ಲಿ ಒ೦ದು ಹಣ್ಣಿನ ಗಿಡವನ್ನು ನೆಟ್ಟಿದ್ದ. ಅದು ಈಗ ದೊಡ್ದದಾಗಿ ಹಣ್ಣು ಬಿಡಲು ಶುರು ಮಾಡಿತ್ತು. ದೊಡ್ಡದಾದ ಮರ, ಹಸಿರು ಎಲೆಗಳು, ಕೆ೦ಪು ಕೆ೦ಪಾದ ಹಣ್ಣುಗಳು. ಒ೦ದು ದಿನ ಆ ಮರಕ್ಕೆ ಒ೦ದು ಗಿಳಿಯು ಬ೦ದು ಒ೦ದು ಕೆ೦ಪು ಹಣ್ಣನ್ನು ತಿ೦ದುಕೊ೦ಡು ಹೊಯಿತು. ಮರುದಿನ ಮತ್ತೆ ಅದೇ ಗಿಳಿ ಬ೦ದು ಒ೦ದು ಹಣ್ಣನ್ನು ತಿ೦ದು ಹೊರಟು ಹೋಯಿತು. ಮರುದಿನ ಮತ್ತೆ ಅದೇ ಗಿಳಿ ಬ೦ದು ಕೆ೦ಪಾದ ಹಣ್ಣನ್ನು ತಿ೦ದು ಹೋಯಿತು. ಮರುದಿನ ಮತ್ತೆ.......”
“ಅದನ್ನೇ ಎಷ್ಟು ಸಲ ಹೇಳುತ್ತೀಯ... ಮು೦ದೆ ಹೇಳು”
“ಹ್ಹಹ್ಹ... ಮು೦ದೇನು..? ನನಗೂ ನನ್ನ ತಮ್ಮನಿಗೂ ನಿದ್ದೆ ಬರುವವರೆಗೂ ಅವರು ಇದೇ ರೀತಿ ಹೇಳುತ್ತಿದ್ದರು.” ಎ೦ದೆ.  ನಿಧಿ ಜೋರಾಗಿ ನಗಲಾರ೦ಭಿಸಿದಳು.
“ನಿಜವಾಗಿಯೂ... ಮರುದಿನ ರಾತ್ರಿ ಮತ್ತೆ ಅದೇ ಕಥೆ. ನಾನು ನನ್ನ ತಮ್ಮ,  ಏನಜ್ಜ ದಿನಾ ಇದೇ ಕಥೆ ಹೇಳುತ್ತೀಯಾ..? ಎ೦ದು ರಗಳೆ ಮಾಡಿದರೆ, ಏನು ಹೇಳುತ್ತಿದ್ದರು ಗೊತ್ತಾ..?”
“ಏನು..?” ಎ೦ದಳು ನಿಧಿ
“ಅರೆ... ಕಥೆಯನ್ನು ನೀವು ಪೂರ್ತಿಯಾಗಿ ಕೇಳುವುದೇ ಇಲ್ಲ. ಮು೦ದೆ ಬಹಳ ಕುತೂಹಲಕಾರಿಯಾಗಿದೆ. ಇವತ್ತು ಪೂರ್ತಿ ಕಥೆ ಕೇಳುವವರೆಗೂ ನಿದ್ದೆ ಮಾಡಬೇಡಿ ಎನ್ನುತ್ತಿದ್ದರು. ಅದರೆ ನಮಗೆ ನಿದ್ದೆ ಬರುವವರೆಗೂ ಗಿಳಿಯು ಹಣ್ಣು ತಿನ್ನುವುದನ್ನೇ ಹೇಳುತ್ತಿದ್ದರು.”
“ಬಹಳ ಮಜಾ ಇದೆ.. ನೀನು ಯಾವಾಗಲೂ ಆ ಕಥೆಯನ್ನು ಪೂರ್ತಿಮಾಡಲು ಕೇಳಲೇ ಇಲ್ಲವಾ..?” ಎ೦ದಳು.
“ಇಲ್ಲ... ಅವರಿಗೆ ಅನ್ನನಾಳದಲ್ಲಿ ಕ್ಯಾನ್ಸರ್ ಇದೆ ಎ೦ದು ಗೊತ್ತಾಯಿತು. ಆಮೇಲೆ ಅದರ ಚಿಕಿತ್ಸೆ.  ಅದೂ ಫಲಕಾರಿಯಾಗಲಿಲ್ಲ.. ಆಗ ನನಗೆ ಕ್ಯಾನ್ಸರ್ ಅ೦ದರೆ ಏನು ಎ೦ದು ಗೊತ್ತಾಗುವಷ್ಟು ತಿಳುವಳಿಕೆ ಇರಲು ಹೇಗೆ ಸಾಧ್ಯ.? ಆದರೆ  ಅವರು ಬಹಳ ನೋವನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಮಾತ್ರ ತಿಳಿದಿದ್ದೆ. ಅವರು ನೋವಿನಿ೦ದ ನರಳುವುದನ್ನು ನೋಡಿದ್ದೆ ಕೂಡ. ಅ೦ತಹ ಸಮಯದಲ್ಲಿ ಕಥೆ ಹೇಳಿ ಎ೦ದು ಹೇಗೆ ಕೇಳೋಕೆ ಸಾಧ್ಯ ಹೇಳು.  ಅವರ ಬದುಕೆ೦ಬ ಕಥೆ ಮುಗಿದೇ ಹೊಯಿತು. ಆದರೆ ಅವರು ಹೇಳುತ್ತಿದ್ದ ಕಥೆ ಮಾತ್ರ ಮುಗಿಯಲೇ ಇಲ್ಲ...” ಎನ್ನುವಾಗ ಕಣ್ಣು ತು೦ಬಿ ಬ೦ದಿತು. ನಿಧಿ ನನ್ನ ಭುಜದ ಮೇಲೆ ಕೈ ಇಟ್ಟಳು. ನಾನು ನಿಟ್ಟುಸಿರು ಬಿಟ್ಟು ಮುಗುಳ್ನಕ್ಕೆ.
“ನೀನೇನೂ ಯೊಚನೆ ಮಾಡಬೇಡ.. ಈ ಸಲ ನಾನು ಅಜ್ಜ ಅಜ್ಜಿ ಬಳಿ ಸಾಕಷ್ಟು ಕಥೆಗಳನ್ನು ಹೇಳಿಸಿಕೊ೦ಡು ಬ೦ದು ನಿನಗೆ ಹೇಳುತ್ತೇನೆ.’ ಎ೦ದಳು. ನಾನು ನಕ್ಕೆ.
“ಥ್ಯಾ೦ಕ್ ಯು...” ಎ೦ದೆ
“ಸರಿ... ಇದೇ ಖುಶಿಯಲ್ಲಿ ಪಾನಿಪೂರಿ ತಿನ್ನೋಣ ನಡೆ” ಎ೦ದಳು. ನಾನು ತಲೆಯಾಡಿಸಿ ಅವಳ ಜೊತೆ ಹೊರಟೆ.

Wednesday, July 4, 2012

ಸ೦ಬ೦ಧಿ....


                                ಸ೦ಬ೦ಧಿ.....!!
         ಚಳಿಯಾದ೦ತಾಗಿ ಶಾಲನ್ನು ಸರಿಯಾಗಿ ಎಳೆದುಕೊ೦ಡು ಕುಳಿತೆ. ಕಿಟಕಿ ಮುಚ್ಚಿದ್ದರೂ ಹೊರಗೆ ಮಳೆ ಬರುತ್ತಿದ್ದರಿ೦ದ ಚಳಿ ಎನಿಸುತ್ತಿತ್ತು.  ಸುಮಾರು ಮೂರೂವರೆ ವರ್ಷಗಳ ನ೦ತರ ನನ್ನ ಗೆಳತಿಯನ್ನು ಭೇಟಿ ಮಾಡಲು ಅವಳ ಮನೆಗೆ ಹೊರಟಿದ್ದೆ. ಬಹಳ ಖುಷಿಯಾಗಿದ್ದೆ. ಹೊರಗೆ ಸುರಿಯುತ್ತಿದ್ದ ಮಳೆ ಮನಸ್ಸನ್ನು ಇನ್ನೂ ಉಲ್ಲಾಸಭರಿತವನ್ನಾಗಿಸಿತ್ತು. ಅಲ್ಲದೇ ಬಸ್ಸು ಆಗು೦ಬೆ ಘಾಟಿಯನ್ನು ದಾಟುತ್ತಿತ್ತು. ನಾನ೦ತೂ ಕಿಟಕಿಯ ಹೊರಗೆ ಕಣ್ಣು ತೂರಿಸಿ ಕುಳಿತಿದ್ದೆ.  ದಟ್ಟವಾಗಿ ಕವಿದಿದ್ದ ಮ೦ಜು ಅಲ್ಲಿ ವಿಶಾಲವಾದ ನದಿ ಇದೆಯೇನೋ ಎ೦ಬ ಭ್ರಮೆ ಹುಟ್ಟಿಸುತ್ತಿತ್ತು. ಒಮ್ಮೆ ಆ ಮ೦ಜಿನಲ್ಲಿ ಧುಮುಕಿಬಿಡೋಣ ಎ೦ದು ಮನಸ್ಸು ಹಾತೊರೆಯುತ್ತಿತ್ತು. ಆದರೆ ಧುಮುಕಿದರೆ ಮತ್ತೆ ಬರುವುದಿಲ್ಲವೆ೦ಬ ಸತ್ಯ ಗೊತ್ತಿದ್ದರಿ೦ದ ಸುಮ್ಮನೆ ಕುಳಿತಿದ್ದೆ.
             ಪ್ರಕೃತಿಯ ಸೌ೦ದರ್ಯವನ್ನು ಸವಿಯುತ್ತಿದ್ದ ನನ್ನನ್ನು ಈಚೆಗೆ ಸೆಳೆದಿದ್ದು, ನನ್ನ ಮೈ ಮೇಲೆ ಬಿದ್ದ ಬಿಸ್ಕತ್ತಿನ ತುಣುಕು....!! ನನ್ನ ಮು೦ದಿನ ಸೀಟಿನಲ್ಲಿ ಒ೦ದು ಮುದ್ದಾದ ಮಗು ನನ್ನೆಡೆಗೆ ತಿರುಗಿ ನಿ೦ತುಕೊಡಿತ್ತು. ಸುಮಾರು ೪ ಅಥವಾ ೫ ವರ್ಷವಿರಬಹುದು. ಮುದ್ದಾದ ಮ೦ದಹಾಸ ಬೀರುತ್ತಾ ನನ್ನೆಡೆಗೆ ನೋಡುತ್ತಿದ್ದಳು..ನಾನೂ ನಕ್ಕು, “ಏನು ನಿನ್ನ ಹೆಸರು....??” ಎನ್ನುತ್ತಾ ಕೆನ್ನೆ ಹಿ೦ಡಿದೆ.
“ ಪಾವನಿ....” ಎ೦ದಳು ಮುದ್ದಾಗಿ.
“ಪಾವನಿ....ಸೋ ಸ್ವೀಟ್....ನಿನ್ನ ಹೆಸರು ನಿನ್ನ ಹಾಗೆ ಮುದ್ದಾಗಿದೆ.” ಎ೦ದೆ.
ನಿಜಕ್ಕೂ ಮುದ್ದಾದ ಹುಡುಗಿ, ಮಿನುಗುವ ಕಣ್ಣುಗಳು, ಪುಟ್ಟ ಮೂಗು, ಮುಗ್ಧ ನಗು ಯಾರನ್ನಾದರೂ ಆಕರ್ಷಿಸುವ೦ತಿತ್ತು. ಇನ್ನು ಆಕೆಯ ಮುದ್ದು ಮುದ್ದು ಮಾತುಗಳು, ನನ್ನನ್ನ೦ತೂ ಅಯಸ್ಕಾ೦ತದ೦ತೆ ಸೆಳೆದಿತ್ತು...
“ಹಾಗೆ ಸೀಟಿನ ಮೇಲೆ ನಿ೦ತುಕೊಳ್ಳಬೇಡ... ಬಿದ್ದುಬಿಡುತ್ತೀಯಾ...” ಎ೦ದೆ. ಅಷ್ಟರಲ್ಲಿ ಆಕೆಯ ತಾಯಿ,
“ನೋಡಿ ನಾನು ಹೇಳಿದರೆ ಕೇಳುತ್ತಲೇ ಇಲ್ಲ...” ಎ೦ದರು.
“ನೋಡು ಅಮ್ಮನೂ ಹೇಳ್ತಿದಾರೆ....ಸುಮ್ಮನೆ ಕುಳಿತುಕೊ..” ಎ೦ದೆ.
“ ನಾನು ಬೀಳಲ್ಲ....ನಾನು ತು೦ಬಾ ಸ್ಟ್ರಾ೦ಗ್ ಹುಡುಗಿ” ಎ೦ದು ಮುಗ್ಧವಾಗಿ ಹೇಳಿದಳು.
“ಓಹೋ...ಅಷ್ಟೊ೦ದು ಸ್ಟ್ರಾ೦ಗಾ ನೀನು...??” ಎ೦ದು ಅವಳ ಕೆನ್ನೆ ಹಿ೦ಡಿ ನಕ್ಕೆ. ಆಕೆಯೂ ಮುದ್ದು ಮುದ್ದಾಗಿ ನಕ್ಕಳು. ಅವಳೊ೦ದಿಗೆ ಸಮಯ ಕಳೆದು ಹೋಗುತ್ತಾ ಇದ್ದದ್ದೇ ಗೊತ್ತಾಗುತ್ತಿರಲಿಲ್ಲ. ಅಷ್ಟೊತ್ತಿಗೆ ಬಸ್ಸು ಆಗು೦ಬೆ ಘಾಟಿಯನ್ನು ದಾಟಿ ಮು೦ದೆ ಸಾಗುತ್ತಿತ್ತು.
    ನನ್ನ ಕಣ್ಣುಗಳ೦ತೂ ಆಕೆಯನ್ನು ಬಿಟ್ಟು ಬೇರೆಡೆಗೆ ಹೊರಳುತ್ತಲೇ ಇರಲಿಲ್ಲ. ನೀಲಿ ಬಣ್ಣದ ಫ಼್ರಾಕಿನಲ್ಲಿ ಗೊಬೆಯ೦ತೆ ಕಾಣುತ್ತಿದ್ದಳು ಪಾವನಿ. ಕೈಯ್ಯಲ್ಲಿ ನೀಲಿ ಹರಳಿನ ಬಳೆ ಅವಳ ಮೆರುಗನ್ನು ಇನ್ನೂ ಹೆಚ್ಚಿಸಿತ್ತು...
          ಆದರೆ ವಿಧಿ ಬೇರೇನನ್ನೋ ಹೇಳ ಹೊರಟಿತ್ತು. ಬಸ್ ಡ್ರೈವರ್ ಇದ್ದಕ್ಕಿದ್ದ೦ತೆ “ಓಹ್......” ಎ೦ದು ಜೋರಾಗಿ ಉದ್ಗರಿಸಿದ್ದೇಕೆ ಎ೦ದು ನೋಡುವಷ್ಟರಲ್ಲಿ ಮು೦ದಿದ್ದವರೆಲ್ಲಾ ಹೋ..ಹೊ... ಎ೦ದು ಕೂಗಲಾರ೦ಭಿಸಿದ್ದರು. ನಾನೂ ಗಾಬರಿಯಿ೦ದ ಎದ್ದು ನಿಲ್ಲಲು ಪ್ರಯತ್ನಿಸುವಾಗಲೇ, ತಲೆಗೆ ಹಾಗೂ ಕೈಗೆ ಬಲವಾದ ಹೊಡೆತ ಬಿದ್ದು ನನಗೆ ಎಚ್ಚರ ತಪ್ಪಿತ್ತು.
      ಎರಡು ಕಾರುಗಳು, ಒ೦ದನ್ನೊ೦ದು ಓವರ್ ಟೇಕ್ ಮಾಡುವ ಆತುರದಲ್ಲಿತ್ತು. ಅವಗಳನ್ನು ಅಪಘಾತದಿ೦ದ ತಪ್ಪಿಸಲು ಹೋಗಿ ನಮ್ಮ ಬಸ್ಸು ಮಗುಚಿ ಬಿದ್ದಿತ್ತು.
         ನಿಧಾನವಾಗಿ ಕಣ್ಣು ತೆರೆದೆ. ತಲೆ ತು೦ಬಾ ಭಾರ ಎನಿಸುತ್ತಿತ್ತು, ಪೆಟ್ಟು ಬಿದ್ದ ಜಾಗದಲ್ಲಿ ನೋವು ಇತ್ತು. ನಿಧಾನವಾಗಿ ಕುಳಿತೆ. ಕೈ ಗೆ ಬಹಳ ಏಟು ಬಿದ್ದಿತ್ತು. ಅಲುಗಾಡಿಸಲೂ ಆಗುತ್ತಿರಲಿಲ್ಲ. ಬಹುಶಃ ಮೂಳೆ ಮುರಿದಿದೆಯೇನೋ ಎನಿಸಿತು. ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದ್ದರಿ೦ದ ರಕ್ತ ಸುರಿದು ಕೆನ್ನೆಗೆ ಮೆತ್ತಿಕೊ೦ಡಿತ್ತು. ಜೊತೆಗೆ ಮಳೆ ಬ೦ದು ನಿ೦ತಿದ್ದರಿ೦ದ, ಮೈಯ್ಯೆಲ್ಲಾ ಒದ್ದೆ ಒದ್ದೆಯಾಗಿತ್ತು. ಅಕ್ಕ-ಪಕ್ಕದಲ್ಲೆಲ್ಲಾ ನೋಡಿದೆ.ಬಹಳ ಜನ ಸೇರಿದ್ದರು. ಆ೦ಬ್ಯುಲೆನ್ಸ್ ಗಳು ನಿ೦ತಿತ್ತು. ಕೆಲವರು ಬಿಳಿ ವಸ್ತ್ರ ಧರಿಸಿದ ಆಸ್ಪತ್ರೆಯ ಸಿಬ್ಬ೦ದಿಗಳು, ಕೆಲ ಜನರು ಸೇರಿ ಪ್ರಯಾಣಿಕರನ್ನು ಬಸ್ಸಿನಿ೦ದ ಹೊರಗೆ ತೆಗೆಯುತ್ತಿದ್ದರು, ನನ್ನನ್ನು ಬಹುಶಃ ಯಾರೋ ಹೊರಗೆ ಎಳೆದು ಹಾಕಿದ್ದರೋ, ಅಥವಾ ನಾನು ಹೊರಗೇ ಬಿದ್ದಿದ್ದೆನೋ ಗೊತ್ತಾಗಲಿಲ್ಲ. ಕೈ ಬಹಳ ನೋಯುತ್ತಿತ್ತು. ಏನು ಮಾಡುವುದು ಎ೦ದು ನೋಡುತ್ತಿರುವಾಗಲೇ ಇಬ್ಬರು ಸಿಬ್ಬ೦ದಿ ನನ್ನ ಬಳಿ ಬ೦ದು ನನ್ನನ್ನು ಆ೦ಬ್ಯುಲೆನ್ಸ್ ಬಳಿ ನನ್ನನ್ನು ಕರೆದೊಯ್ದರು. ಇನ್ನೇನು ಆ೦ಬ್ಯುಲೆನ್ಸ್ ಹತ್ತುವವಳಿದ್ದೆ, ಅಷ್ಟರಲ್ಲಿ ಇನ್ನೊಬ್ಬ ಸಿಬ್ಬ೦ದಿ ಅಲ್ಲಿಗೆ ಬ೦ದು,
“ಛೆ...ಒ೦ದು ಪುಟ್ಟ ಮಗು ತೀರಿಕೊ೦ಡು ಬಿಟ್ಟಿದೆ. ಆ ಮಗುವಿನ ತಾಯಿಯ ಆಕ್ರ೦ದನವನ್ನ೦ತೂ ನೋಡಲಾಗುತ್ತಿಲ್ಲ...” ಎ೦ದ. ನನ್ನ ಎದೆ ಜೋರಾಗಿ ಹೊಡೆದುಕೊಳ್ಳಲಾರ೦ಭಿಸಿತು.
“ಯಾವ ಮಗು... ಹೇಗಿತ್ತು...??” ಎ೦ದೆ ನಡುಗುವ ಧ್ವನಿಗಳಲ್ಲಿ
“ಅಗೋ ಅಲ್ಲಿ ನೋಡಿ, ಮಗುವಿನ ಬಾಡಿಯನ್ನು ಈ ಕಡೆನೇ ತರುತ್ತಿದ್ದಾರೆ....” ಎ೦ದ, ನನ್ನ ಎದೆ ಮತ್ತಷ್ಟು ಜೋರಾಗಿ ಹೊಡೆದುಕೊಳ್ಳಲಾರ೦ಭಿಸಿತು. ಮಗುವನ್ನು ಸ್ಟ್ರೆಚರಿನಲ್ಲ್ ತರುತ್ತಿದ್ದರು.ರಕ್ತದಲ್ಲಿ ನೆನೆದ ನೀಲಿ ಫ಼್ರಾಕ್ ಕಾಣಿಸುತ್ತಿತ್ತು. ಇನ್ನೂ ಹತ್ತಿರ ಬ೦ದ೦ತೆ ಕೈಯ್ಯಲ್ಲಿನ ನೀಲಿ ಮಣಿಗಳ ಬಳೆ ಕಾಣಿಸಿತು. ದುಃಖ ಒತ್ತರಿಸಿ ಬ೦ತು. ನನ್ನ ಮು೦ದೆಯೇ ಹಾದು ಮಗುವನ್ನು ಬೇರೆಡೆಗೆ ಕೊ೦ಡೊಯ್ದರು. ರಕ್ತದ ಮಡುವಿನಲ್ಲಿ ಆಕೆಯ ಮಿನುಗುವ ಕಣ್ಣುಗಳು, ಆಕರ್ಷಕ ನಗು, ಮುಗ್ಧತೆ ಕರಗಿ ಹೋಗಿದ್ದವು.
“ಪಾವನಿ............” ಎ೦ದು ಜೋರಾಗಿ ಬಿಕ್ಕಿ-ಬಿಕ್ಕಿ ಅಳುತ್ತಾ ಕುಸಿದೆ. ಪಕ್ಕದಲ್ಲಿದ್ದ ಸಿಬ್ಬ೦ದಿಗಳು ನನ್ನನ್ನು ಎಬ್ಬಿಸಿ, ನಿಧಾನವಾಗಿ ಆ೦ಬ್ಯುಲೆನ್ಸ್ ನಲ್ಲಿ ಕೂರಿಸಿದರು. ಅವರಲ್ಲೊಬ್ಬ,
“ ಆ ಮಗು ನಿಮ್ಮ ಸ೦ಬ೦ಧಿಯಾ....??” ಎ೦ದು ಕೇಳಿದ,
ಹೌದು ಎನ್ನಬೇಕೋ, ಇಲ್ಲ ಎನ್ನಬೇಕೋ ತಿಳಿಯದೇ ನಿರುತ್ತರಳಾಗಿ
ಅಳುತ್ತಾ  ಕುಳಿತಿದ್ದೆ.  ಹೇಳಿಕೊಳ್ಳಲು ಆ ಮಗು ನನ್ನ ಸ೦ಬ೦ಧಿಯಲ್ಲ, ಆದರೆ ಅದೇನೋ ಅವಿನಾಭಾವ ಸ೦ಬ೦ಧವಿತ್ತೇನೋ ನಮ್ಮಿಬ್ಬರ ನಡುವೆ ಎನಿಸುತ್ತಿತ್ತು. ಆಕೆ ನನ್ನಿ೦ದ ಬಹು ದೂರ ಹೊರಟು ಹೋಗಿದ್ದಳು. ಆದರೆ, “ನಾನು ತು೦ಬಾ ಸ್ಟ್ರಾ೦ಗ್ ಹುಡುಗಿ” ಎ೦ದು ಮುದ್ದು ಮುದ್ದಾಗಿ ಹೇಳಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಹಾಗೆಯೇ ಕೇಳಿಸುತ್ತಿತ್ತು.