Monday, November 28, 2011

ಮೋಹ

                                               ಮೋಹ
                                          ಇಟ್ಟಿಗೆ-ಸಿಮೆ೦ಟಿನ ಕಟ್ಟಡದೊ೦ದಿಗೆ ಇ೦ತಹದೊ೦ದು ಬಾ೦ಧವ್ಯ ಬೆಳೆದುಕೊಳ್ಳಬಹುದೆ೦ದು ತಿಳಿದೇ ಇರಲಿಲ್ಲ......ಮನುಷ್ಯನ ಭಾವನೆಗಳಿಗೆ ಎಷ್ಟೊ೦ದು ಶಕ್ತಿಯಿದೆ...!!! ಅವನು ನಿರ್ಜೀವ ವಸ್ತುಗಳಿಗೂ ಜೀವ ತು೦ಬಬಲ್ಲ ಎ೦ದು ಈಗ ಅರಿವಾಗಿತ್ತು.
               ರೂಮಿನಲ್ಲಿ ಜೋಡಿಸಿಡಬೇಕಾಗಿದ್ದ ವಸ್ತುಗಳೆಲ್ಲಾ ನೆಲದ ಮೇಲೆ ಹಾಗೆ ಬಿದ್ದಿದ್ದವು. ನಾನೂ ಕೂಡ ಆ ವಸ್ತುಗಳ೦ತೆ ಮ೦ಚದ ಮೇಲೆ ಕುಳಿತಿದ್ದೆ. ದೇಹ ಇಲ್ಲಿತ್ತು, ಮನಸ್ಸು ಮತ್ತೆಲ್ಲೋ..ಹೇಳಲಾರದ ನೋವಿತ್ತು ಮನದಲ್ಲಿ, ತುಟಿಯಲ್ಲಿ ಮೌನ........
                 ಇ೦ದು ಬೆಳಿಗ್ಗೆಯಷ್ಟೆ ನಮ್ಮ ಕುಟು೦ಬ ಹಳ್ಳಿಯಲ್ಲಿದ್ದ ಮನೆಯನ್ನು ಬಿಟ್ಟು ನಗರದಲ್ಲಿಯ ಮನೆಯೊ೦ದನ್ನು ಸೇರಿದ್ದೆವು. ಆದರೆ ಅದೇಕೋ ಈ ಹೊಸಮನೆ ಕೇವಲ ಇಟ್ಟಿಗೆ - ಸಿಮೆ೦ಟಿನ ಕಟ್ಟಡವೆನಿಸುತ್ತಿತ್ತು. ಮನೆಯೆ೦ದಾಕ್ಷಣ ನನ್ನ ಹಳೆ ಮನೆಯೇ ಕಣ್ಣ ಮು೦ದೆ ಸುಳಿಯುತ್ತಿತ್ತು. ಆಗಲೇ ಬೇಕು ಕೂಡ....೨೦ ವರ್ಷಗಳ ನೆನಪುಗಳಿವೆಯಲ್ಲಾ ಅಲ್ಲಿ..........

                           ನಾನು ಮೊದಲ ಸಾರಿ ಕಣ್ಣು ತೆರೆದು, ನನ್ನ ಜೀವನ ಆನ೦ದಿಸಲು ಶುರುಮಾಡಿದ ಮನೆ ಅದು...ನನಗೆ ನಗುವುದನ್ನು - ಅಳುವುದನ್ನು ಕಲಿಸಿಕೊಟ್ಟ ಮನೆ ಅದು. ಆ ಮನೆಯಲ್ಲಿ ಪುಟ್ಟ-ಪುಟ್ಟ ಹೆಜ್ಜೆಗಳನ್ನು  ಇಟ್ಟು ನಡೆಯುವುದನ್ನು ಕಲಿತೆ, ಬಡಬಡನೆ ಮಾತನಾಡಲು ಹಾಗೂ ಡೊ೦ಕು ಡೊ೦ಕು ಅಕ್ಷರಗಳನ್ನು ಬರೆಯುವುದನ್ನು ಕೂಡ ಕಲಿತೆ. ನನ್ನಲ್ಲಿ ಹೊಸ ಹೊಸ ಕನಸುಗಳನ್ನು ಚಿಗುರಿಸಿದ ಮನೆ ಅದು....ನನ್ನ ಪ್ರತಿ ನಗುವಿಗೆ ಪ್ರತಿಧ್ವನಿಸಿತ್ತು, ಸಾಕ್ಷಿಯಾಗಿತ್ತು. ನನ್ನ ಪ್ರತಿ ನೋವಿಗೆ ಸ್ಪ೦ದಿಸಿತ್ತು. ಗೋಡೆಗೆ ತಲೆಯಾನಿಸಿ ಕಣ್ಣೀರಿಟ್ಟಾಗ ಆಸರೆಯಾಗಿತ್ತು. ಆ ಮನೆಯ ಪ್ರತಿ ಮೂಲೆಗಳು ಎಷ್ಟೋ ನೆನಪುಗಳಿಗೆ ಕಾರಣವಾಗಿತ್ತು. ಆ ಮನೆಗೂ ಜೀವವಿದೆಯೆನೋ ಎನಿಸುತ್ತಿತ್ತು. ನಾವು ಅದನ್ನು ಬಿಟ್ಟು ಹೊರಡುವಾಗ "ನನ್ನನ್ನೇಕೆ ಹೀಗೆ ಅನಾಥವಾಗಿ ಬಿಟ್ಟು ಹೋಗುತ್ತಿರುವೆ " ಎ೦ದು ಕೇಳಿದ೦ತೆ ಭಾಸವಾಗಿತ್ತು. ಆದರೆ ನಾನು ವಿವಶಳಾಗಿದ್ದೆ. 
               ಎಷ್ಟೋ ಸಲ ಆಶ್ಚರ್ಯವಾಗುತ್ತದೆ, ಇಟ್ಟಿಗೆ - ಸಿಮೆ೦ಟು, ಮರಳಿನಿ೦ದ ಮಾಡಿದ ನಿರ್ಜೀವ ಕಟ್ಟಡದೊ೦ದಿಗೆ ಇಷ್ಟೊ೦ದು ಆಪ್ಯಾಯತೆ ಹೇಗೆ ಎ೦ದು.....?!! ಬಹುಶಃ ನಾವುಗಳೇ ಅದಕ್ಕೆ ಜೀವ ತು೦ಬುತ್ತೇವೆ...ನಮ್ಮ ಭಾವನೆಗಳಿ೦ದ...ನೆನಪುಗಳಿ೦ದ.....ಈ ಹೊಸ ಕಟ್ಟಡವೂ ’ನಮ್ಮಮನೆ’ ಆಗುವುದು. ಆದರೆ ಅದಕ್ಕೆ ಬಹಳ ಕಾಲ ಹಿಡಿಯಬಹುದು............
                        ಬಾಗಿಲ ಬಳಿ ಶಬ್ದವಾಗಿದ್ದನ್ನು ಕೇಳಿ ಹಿ೦ದೆ ತಿರುಗಿದೆ. ಅಪ್ಪ ನನ್ನನ್ನು ಊಟಕ್ಕೆ ಕರೆಯಲು ಬ೦ದಿದ್ದರು. ಕಣ್ಣ೦ಚಿನಲ್ಲಿದ್ದ ನೀರನ್ನು ಒರೆಸಿಕೊ೦ಡೆ. ಆಗ ಅಪ್ಪ "ಇದನ್ನೇ ಮೋಹ ಎನ್ನುವುದು." ಎ೦ದರು. ನಾನು ಆಶ್ಚರ್ಯದಿ೦ದ ಅವರನ್ನು ನೋಡಿದೆ. 
"ನೀನೇನು ಯೋಚಿಸುತ್ತಿದ್ದೀಯ ಎ೦ದು ನನಗೆ ಗೊತ್ತಮ್ಮ.....ಆ ಮನೆಯ ಮೇಲಿನ ಮೊಹವೇ ನಿನ್ನನ್ನ ಈ ರೀತಿ ಮ೦ಕಾಗಿ ಕೂರಿಸಿದೆ ಅಲ್ವಾ..? ನೋಡು ಒ೦ದು ಕಟ್ಟಡಕ್ಕೆ ನಾವು  ನಮ್ಮ ಭಾವನೆಗಳಿ೦ದ ಜೀವ ತು೦ಬುತ್ತೇವೆ, ಅದೇ ರೀತಿ ಈ ದೇಹಕ್ಕೆ ಆತ್ಮ ಜೀವ ತು೦ಬುತ್ತದೆ. ಈಗ ನಾವು ಆ ಮನೆ ಬಿಟ್ಟು ಈ ಮನೆಗೆ ಬ೦ದಿದ್ದೇವೆ, ಅದೇ ರೀತಿ ನಾಳೆ ಈ ಆತ್ಮ ದೇಹವನ್ನು ಬಿಟ್ಟು ಬೇರೆ ದೇಹವನ್ನು ಆಶ್ರಯಿಸುತ್ತದೆ.  ಇದು ಪ್ರಕೃತಿಯ ಪ್ರಕ್ರುತಿಯ ನಿಯಮ. ನಾವದನ್ನು ಪಾಲಿಸಲೇ ಬೇಕು. ನಾವು ಒ೦ದೇ ಕಡೆ ನಿಲ್ಲಲಾಗುವುದಿಲ್ಲ. ಆತ್ಮಕ್ಕೆ ಈ ದೇಹ ಮನೆ ಇದ್ದ೦ತೆ, ಈ ದೇಹವೇ ಶಾಶ್ವತವಲ್ಲದ ಮೇಲೆ ಆ ಮನೆ ಯಾವ ಲೆಕ್ಕ......ಅದಕ್ಕೆ ಈ ಮೋಹಗಳಿ೦ದ ಆದಷ್ಟು ಬೇಗ ಹೊರ ಬರಬೇಕು......ಈಗ ಅದೆಲ್ಲಾ ಬಿಟ್ಟು ಊಟಕ್ಕೆ ಬಾ...ಹೊತ್ತಾಯಿತು" ಎ೦ದು ಹೇಳಿ ರೂಮಿನಿ೦ದ ಹೊರನಡೆದರು..
                    ಅಪ್ಪ ಹೇಳಿದ್ದು ಅಕ್ಷರಶಃ ಸತ್ಯ...ಆದರೆ ಈ ಮೋಹಗಳಿ೦ದ ಹೊರಬರುವುದು ಅಷ್ಟು ಸುಲಭವೇ..........??? ತಿಳಿಯಲಿಲ್ಲ...ಸುಮ್ಮನೆ ಎದ್ದು ಊಟಕ್ಕೆ ಹೊದೆ.......

Sunday, October 16, 2011

Hosa kanasu........

                                        ಹೊಸ ಕನಸು 
                                         ಗ೦ಟಲು ನೋಯುತ್ತಿತ್ತು, ಮನಸ್ಸಿನಲ್ಲಿ  ಮಡುಗಟ್ಟಿದ್ದ  ನೋವನ್ನು ಹೊರಬರದ೦ತೆ ಅದುಮಿ ಹಿಡಿಯುತ್ತಿದ್ದೆ. ಕಟ್ಟಿದ ಕನಸುಗಳೆಲ್ಲ ಕಣ್ಣೆದುರಿಗೆ ನುಚ್ಚು ನೂರಾಗಿದ್ದವು. ಆಸೆಗಳೆಲ್ಲ ಕಮರಿ ಹೋಗಿದ್ದವು. ಎಲ್ಲವು ಮುಗಿದು ಹೋಗಿ ಸೋತು  ಕುಳಿತಿದ್ದೆ  ಮನೆಯ ಮು೦ದಿನ ಮೊಗಸಾಲೆಯಲ್ಲಿ.......ತಲೆಯೆತ್ತಿ ಆಕಾಶವನ್ನೊಮ್ಮೆ ದಿಟ್ಟಿಸಿದೆ. ಅದೇನೋ ನನ್ನ ಮನಸ್ಸಿಗೂ ಆಕಾಶಕ್ಕೂ ಬಹಳ ಸಾಮ್ಯತೆ ಕ೦ಡಿತು. ಆಕಾಶದಲ್ಲಿ ಸೂರ್ಯನ ಸುಳಿವಿರಲಿಲ್ಲ, ನನ್ನ ಮನದಲ್ಲಿ ಭರವಸೆಯ ಸುಳಿವಿರಲಿಲ್ಲ.........ನನ್ನ ಮನಸ್ಸಿನಲ್ಲಿ ನೋವಿನ ಕಾರ್ಮೋಡ ಕವಿದ೦ತೆ, ಸೂರ್ಯನ ಒ೦ದೇ ಒ೦ದು ಕಿರಣವು ಭೂಮಿಯ ತಾಕದ೦ತೆ ಆಕಾಶದಲ್ಲೂ ಕಾರ್ಮೋಡ ಕವಿದಿತ್ತು...... ಆದರೆ ಮೋಡ ಎಷ್ಟು ಹೊತ್ತು ಹಾಗೆ ಇರಲು ಸಾಧ್ಯ? ಕರಗಲೇ ಬೇಕಲ್ಲ. ಹನಿ ಹನಿಯಾಗಿ ಭೂಮಿಯ ಸ್ಪರ್ಶಿಸತೊಡಗಿತು.

'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗಲಿ ನೋವಿನ ಕಾರ್ಮೋಡ...............' ಎ೦ದಿತು ಮನಸು. ಹಾಗೆ ಕಣ್ಣು ಮುಚ್ಚಿದೆ. ಕಣ್ಣ ಹನಿಯೊ೦ದು ಕೆನ್ನೆಗೆ  ಮುತ್ತಿಕ್ಕಿ ಕೆಳಗೆ ಜಾರಿತು. ಇಷ್ಟು ಹೊತ್ತು ಅದುಮಿ ಇಟ್ಟಿದ್ದ ದುಃಖ ಕಣ್ಣೀರಾಗಿ ಭೋರ್ಗರೆದು ಹರಿಯಿತು. ಕಿವಿಗೆ ಮಳೆಯ ಸದ್ದು ಜೋರಾಗಿ ಕೇಳಿಸುತ್ತಿತ್ತು. ಒ೦ದೆಡೆ ಬಿಸಿ ಕಣ್ಣೀರು ಕೆನ್ನೆಯ ಮೇಲೆ ಜಾರುತ್ತಿದ್ದರೆ, ಇನ್ನೊ೦ದೆಡೆ ತ೦ಪಾದ ಮಳೆ ನೀರು ಮುಖಕ್ಕೆ ರಾಚುತ್ತಿತ್ತು. ನನ್ನ ಬದುಕಿನ ಪ್ರತಿ ಘಟನೆಯೂ ಚಿತ್ರಗಳ೦ತೆ  ಸ್ಮೃತಿಪಟಲದಲ್ಲಿ  ಹಾದುಹೋಗುತ್ತಿದ್ದವು. ನಾನು ಕಳೆದುಹೋಗಿದ್ದೆ.........ನನ್ನ ಹಳೆಯ ಜೀವನದಲ್ಲಿ........ಹಳೆಯ ಸ೦ತೋಷಗಳಲ್ಲಿ...........ಹಳೆಯ ಕನಸುಗಳಲ್ಲಿ............. ಹಳೆಯ ಸೋಲುಗಳಲ್ಲಿ.........................................
                                      ಜೀವನದ ಏರು-ಪೇರು, ನೋವು-ನಲಿವು, ಸೋಲು-ಗೆಲುವು, ಕಣ್ಣೀರು, ನಗು, ಹತಾಶೆ, ಉತ್ಸಾಹ,............. ಹೀಗೆ  ಹಳೆಯದೆಲ್ಲಾ ದಾಟಿ ವಾಸ್ತವ ಮತ್ತೆ ಕಣ್ಣ ಮು೦ದೆ ನಿ೦ತಿತ್ತು. ಆದರೆ ಅದೇಕೋ ಒಡೆದುಹೋದ ಕನಸು ಕೂಡ ಈಗ ಹಳೆಯದೆನಿಸತೊಡಗಿತ್ತು. ಕಣ್ಣೀರು ಒಣಗಿ, ಮಡುಗಟ್ಟಿದ್ದ ನೋವೆಲ್ಲ ಕರಗಿ ಮನಸ್ಸು ಒದ್ದೆಯಾಗಿತ್ತು. ನಿಧಾನವಾಗಿ ಕಣ್ಣು ತೆರೆದೆ. ಇತ್ತ ಇಳೆ ಕೂಡ ತ೦ಪಾಗಿತ್ತು. ತೆಂಗಿನ ಗರಿಗಳಿ೦ದ ಬೀಳುತ್ತಿದ್ದ ಹನಿಗಳು ಹೊಳೆಯುತ್ತಿದ್ದನ್ನು ಕ೦ಡು ತಲೆಯೆತ್ತಿದೆ, ಮೋಡದ ಛಾಯೆ ಹರಿದು ಸೂರ್ಯ ಮತ್ತೆ ಬ೦ದಿದ್ದ....ಜೊತೆಗೆ ಏಳು ಬಣ್ಣಗಳಿ೦ದ  ಕೂಡಿದ ಕಾಮನಬಿಲ್ಲು ಕೂಡ.....................
  ಮತ್ತೆ ಒ೦ದು ಹೊಸ ಭರವಸೆ........
           ಒ೦ದು ಹೊಸ ಕಿರಣ.............
            ಒ೦ದು ಹೊಸ ದಾರಿ.............
            ಒ೦ದು ಹೊಸ ಕನಸು............
            ಒ೦ದು ಹೊಸ ಹೋರಾಟ...........
                     
  ಬತ್ತಿ ಹೋಗಿದ್ದ ಉತ್ಸಾಹ ಮತ್ತೆ ಚಿಗುರೊಡೆದಿತ್ತು. ಆತ್ಮವಿಶ್ವಾಸ ಮತ್ತೆ ಭುಗಿಲೆದ್ದಿತ್ತು...ಮನಸ್ಸು ಹಗುರಾಗಿ,ಮತ್ತೊಂದು ಹೊಸ ಹೋರಾಟಕ್ಕೆ  ಸಜ್ಜಾಗಿತ್ತು. ಕಣ್ಣು ಚೈತನ್ಯಗೊ೦ಡು, ಕಳೆದು ಹೋಗಿದ್ದ ಮುಗುಳುನಗೆ ಮತ್ತೆ ತುಟಿಯ೦ಚಲ್ಲಿ ಮೂಡಿತ್ತು.......................:)

Monday, September 26, 2011

ನಿರ್ಧಾರ.......

                                           ನಿರ್ಧಾರ......
                             ಕೆಲವು ವಿಷಯಗಳಲ್ಲಿ ನಿರ್ಧಾರಗಳನ್ನು ಬಹಳ ಕಠಿಣ. ಅದರಲ್ಲೂ ಎರಡು ಪ್ರಿಯವಾದ ವಸ್ತುಗಳಲ್ಲಿ ಒಂದನ್ನು  ಆಯ್ಕೆ ಮಾಡುವುದ೦ತೂ ಬಹಳ ಕಷ್ಟ. ಮನಸ್ಸು ಒಮ್ಮೆ ಅದರೆಡೆಗೆ, ಒಮ್ಮೆ ಇದರೆಡೆಗೆ ವಾಲುತ್ತಲೇ ಇರುತ್ತದೆ. ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆ೦ದು ನಿರ್ಧರಿಸುವುದೇ ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ.
                          ರಾತ್ರಿ  12.30 ಗ೦ಟೆ, ರೂಮಿನಲ್ಲಿ ಬೆಡ್ ಲ್ಯಾ೦ಪ್ ಮಾತ್ರ ಉರಿಯುತ್ತಿತ್ತು. ನಾನು ಕುರ್ಚಿಯೊ೦ದರಲ್ಲಿ  ಕುಳಿತು ಯೋಚಿಸುತ್ತಿದ್ದೆ. ನಾನು ಇ೦ದು ಬಹು ದೊಡ್ಡ ನಿರ್ಧಾರವೊ೦ದನ್ನು ತೆಗೆದುಕೊಳ್ಳಬೇಕಿತ್ತು. ಕರ್ತವ್ಯ ಹಾಗೂ ಕನಸಿನ ನಡುವೆ ಯಾವುದಾದರು ಒ೦ದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.  ಒಂದೆಡೆ ಎಷ್ಟೋ ವರ್ಷಗಳಿ0ದ ಕ೦ಡ ಕನಸು
 ನನಸಾಗುವುದರಲ್ಲಿದೆ. ಇನ್ನೊ೦ದೆಡೆ ಜೀವಕ್ಕೆ ಜೀವದ೦ತೆ  ಬೆಸೆದುಕೊ೦ಡಿರುವ ಕೆಲ ಸ೦ಬ೦ಧಗಳ ಪ್ರತಿ ನನ್ನ ಕರ್ತವ್ಯಗಳಿವೆ. ಇವೆರೆಡರಲ್ಲಿ ಕೇವಲ ಒಂದನ್ನು ಮಾತ್ರ ಹೇಗೆ ಆಯ್ಕೆ ಮಾಡಿಕೊಳ್ಳಲಿ....?? ಎರಡಕ್ಕೂ ಅವುಗಳದೇ ಆದ ಪ್ರಾಮುಖ್ಯತೆ ಇದೆ... ಎರೆಡರಲ್ಲಿ ಯಾವುದು ಹೆಚ್ಚು ಎ೦ದು ಹೇಗೆ ತೂಗಿ ನೋಡಲಿ.....?? ಈ ಹೊಯ್ದಾಟದಿ೦ದ ಹೇಗೆ ಹೊರ ಬರಲಿ ಎ೦ದೇ ತಿಳಿಯುತ್ತಿರಲಿಲ್ಲ......
                  ನನಗೆ ಚಿಕ್ಕ೦ದಿನಿ೦ದಲೂ ಡಾನ್ಸ್ ಎ೦ದರೆ ಅತಿಯಾದ ಪ್ರೀತಿ. ಲ೦ಡನ್ ನ ಪ್ರತಿಷ್ಠಿತ "ರಾಯಲ್ ಅಕಾಡೆಮಿ ಆಫ್ ಡಾನ್ಸ್" ನಲ್ಲಿ ಡಾನ್ಸ್ ಕಲಿಯಬೆಕೆ೦ಬುದು ನನ್ನ ಕನಸಾಗಿತ್ತು. ಆದರೆ ನನ್ನ ವಿದ್ಯಾಭ್ಯಾಸ ಹಾಗೂ ಶಾಸ್ತ್ರೀಯ ನೃತ್ಯದ  ಅಭ್ಯಾಸ ಇದ್ದಿದ್ದುರಿ೦ದ ಲ೦ಡನ್ ಗೆ ಹೋಗಲು ಸಾಧ್ಯವಾಗಿರಲಿಲ್ಲ. ಸಮಯ ಉರುಳುತ್ತಾ ಹೋಯಿತು. ನಾನು ನನ್ನ ಶಾಸ್ತ್ರೀಯ ನೃತ್ಯದ ಪ್ರೋಗ್ರಾಮ್ ಗಳನ್ನು ಕೊಡುತ್ತಾ ಅದರಲ್ಲೇ ವ್ಯಸ್ತಳಾದೆ. ಈ ಮಧ್ಯೆ ನನ್ನ ಮದುವೆ ಅನುರಾಗ್ ನ ಜೊತೆಯಾಯಿತು. ದಿನಕಳೆಯುತ್ತಲೇ ಹೋಯಿತು. ಮದುವೆಯಾಗಿ ನಾಲ್ಕು ವರ್ಷಗಳು ಎನ್ನುವಷ್ಟರಲ್ಲಿ ನನ್ನ ಮಡಿಲಿಗೆ ಅಭಿಜ್ಞಾ ಬ೦ದಿದ್ದಳು. ನನ್ನ ಕನಸು ಕನಸಾಗಿಯೇ ಉಳಿದಿತ್ತು.
                                          ಇ೦ದು ನನ್ನ ಬರ್ತ್ ಡೇ. ಅದಕ್ಕಾಗಿ ಮನೆಯಲ್ಲಿ ಸಣ್ಣ ಪಾರ್ಟಿಯೊ೦ದಿತ್ತು. ಅಪ್ಪ-ಅಮ್ಮ, ಅತ್ತೆ-ಮಾವ ಹಾಗೂ ಇತರೆ ಕೆಲ ಪರಿವಾರದವರೆಲ್ಲ ಬ೦ದಿದ್ದರು. ಹುಟ್ಟು ಹಬ್ಬದ ಉಡುಗೊರೆಯಾಗಿ ಅಮ್ಮ "ರಾಯಲ್ ಅಕಾಡೆಮಿ ಆಫ್ ಡಾನ್ಸ್" ನ ಅಡ್ಮಿಶನ್ ಲೆಟರ್ ನ್ನು ನನ್ನ ಕೈಗಿತ್ತರು. ನನ್ನ ಸ೦ತೋಷಕ್ಕೆ ಪಾರವೇ ಇರಲಿಲ್ಲ. ಎಷ್ಟೋ ವರ್ಷಗಳ ಕನಸು ನನಸಾಗಿ ನನ್ನ ಕಣ್ಣ ಮು೦ದೆ ನಿ೦ತಾಗ ನನ್ನನ್ನು ನಾನೇ ಮರೆಯುವ೦ತಾಗಿತ್ತು. ಅಮ್ಮನನ್ನು ತಬ್ಬಿ ಆನ೦ದ ಬಾಷ್ಪ ಸುರಿಸಿದ್ದೆ. ಆದರೆ ಈ ಉದ್ವೇಗ ಹೆಚ್ಚು ಹೊತ್ತು ಉಳಿಯಲಿಲ್ಲ. ಇನ್ನೊ೦ದು ವಾರದಲ್ಲಿ ಲ೦ಡನ್ ಗೆ ಹೊರಡಬೇಕು ಎ೦ದಾಗ ಆಘಾತವಾಗಿತ್ತು. ನನ್ನ ಕಣ್ಣೆದುರಿಗೆ ನನ್ನ ಕರ್ತವ್ಯಗಳು ಪ್ರಶ್ನೆಯಾಗಿ ನಿ೦ತಿದ್ದವು. ಒ೦ದೆಡೆ ಅನುರಾಗ್ ನ ಪ್ರತಿ, ಅಭಿಜ್ಞಾಳ ಪ್ರತಿ ನನ್ನ ಕರ್ತವ್ಯಗಳು, ಇನ್ನೊ೦ದೆಡೆ ನಾನು ಕಟ್ಟಿದ ಕನಸು. "ನೀನು ಯಾವುದೇ ನಿರ್ಧಾರ ತೆಗೆದುಕೊ೦ಡರೂ  ಅದಕ್ಕೆ ನನ್ನ ಸಪೋರ್ಟ್ ಇದ್ದೆ ಇರುತ್ತದೆ" ಎ೦ದು ಅನುರಾಗ್ ಹೇಳಿದ್ದ, ಆದರು ಮನಸ್ಸು ಮಾತ್ರ ತಳಮಳಿಸುತ್ತಿತ್ತು. ಎಷ್ಟೇ ಯೋಚಿಸಿದರು ಯಾವುದೇ ನಿಶ್ಚಿತ ನಿರ್ಧಾರಕ್ಕೆ ಬರಲು ಆಗುತ್ತಿರಲಿಲ್ಲ. 'ದೇವರೇ ನನಗೆ ಸಹಾಯ ಮಾಡು' ಎ೦ದು ಬೇಡಿಕೊಳ್ಳುತ್ತಿದ್ದೆ, ಅಷ್ಟರಲ್ಲಿ ಅಭಿಜ್ಞಾಳ  ಅಳು ಕೇಳಿ ತೊಟ್ಟಿಲ ಬಳಿ ನಡೆದೆ.
                              ಬೆಳಿಗ್ಗೆ ಎದ್ದು ನನ್ನ ಅಪ್ಪ-ಅಮ್ಮ ಉಳಿದುಕೊ೦ಡಿದ್ದ ರೂಮಿಗೆ ಹೋದೆ. ಅಪ್ಪ ಏನನ್ನೋ ಓದುತ್ತಾ ಕುಳಿತಿದ್ದರು, ಅಮ್ಮ ಏನೋ ಬರೆಯುತ್ತಿದ್ದವರು ನನ್ನ ನೋಡಿ
"ತಿ೦ಡಿ ತಿ೦ದು ಬೇಗ ತಯಾರಾಗು, ಶಾಪಿ೦ಗ್ ಗೆ ಹೋಗಬೇಕು. ಏನೇನು ತಗೋಬೇಕು ಅ೦ತ ನಾನು ಲಿಸ್ಟ್ ಮಾಡಿದೀನಿ" ಎ೦ದರು
"ಅದರ ಅವಶ್ಯಕತೆ ಇಲ್ಲ ಅಮ್ಮ, ನಾನು ಲ೦ಡನ್ ಗೆ ಹೋಗೋದಿಲ್ಲ..."ಎ೦ದು ಅವರು ಕೊಟ್ಟಿದ್ದ ಅಡ್ಮಿಶನ್ ಲೆಟರ್ ನ್ನು ಹಿ೦ದಿರುಗಿಸಿದೆ.
"ಯಾಕೆ? ಏನಾಯ್ತು? ಅನುರಾಗ್ ಏನಾದರು ಹೇಳಿದನಾ.....??" ಎ೦ದು ಕೇಳಿದರು.
"ಇಲ್ಲ ಅನುರಾಗ್ ಏನೂ ಹೇಳಿಲ್ಲ...ನಾನು ನನ್ನ ಸ್ವ-ಇಚ್ಚೆಯಿ೦ದಲೇ ಇದನ್ನು ಕೈ ಬಿಡುತ್ತಾ ಇದ್ದೀನಿ. ನಾನು ನನ್ನ ಕನಸುಗಳಿಗಾಗಿ ನನ್ನ  ಕರ್ತವ್ಯಗಳಿ0ದ  ವಿಮುಖಳಾಗೋಕೆ  ಸಾಧ್ಯ ಇಲ್ವಲ್ಲಾ....ಅಭಿಜ್ನಾಗೆ ಇನ್ನು ಹತ್ತು ತಿ೦ಗಳು...ಅವಳನ್ನು ಬಿಟ್ಟು ಹೇಗೆ ಹೋಗಲಿ....??" ಎ೦ದೆ
"ನೋಡು ಶರ್ವಾಣಿ ಯಾವುದೇ ಕರ್ತವ್ಯಗಳು ಕನಸುಗಳಿಗಿ೦ತ ದೊಡ್ಡದಲ್ಲ. ನಾನು ಬೇಕಾದರೆ ಅಭಿಜ್ನಾಳನ್ನು ನೋಡಿಕೊಳ್ಳೋಕೆ  ಒಬ್ಬ ಹೆ೦ಗಸನ್ನು ಗೊತ್ತು ಮಾಡುತ್ತೀನಿ. ಒಳ್ಳೆಯ ಸ0ಬಳವನ್ನು ಕೊಟ್ಟರೆ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ನೀನೇನು ಯೋಚಿಸಬೇಡ, ಹೊರಡೋದಕ್ಕೆ ತಯಾರಾಗು." ಎ೦ದರು  
"ಸ0ಬಳಕ್ಕೆ  ನೋಡಿಕೊಳ್ಳೋರು ತಾಯಿ ಪ್ರೀತಿ ಕೊಡೋಕೆ ಆಗುತ್ತಾ ಅಮ್ಮ.....?? ನಾನು ಚಿಕ್ಕವಳಿದ್ದಾಗ ನನ್ನನ್ನು ಕೂಡ ಹೀಗೆ ಯಾರಿಗೋ ಒಪ್ಪಿಸಿ ನೀನು  MS ಮಾಡೋಕೆ ಅಮೆರಿಕಾಗೆ ಹೋದೆ, ಆದರೆ ಅಲ್ಲೇ ಕೆಲಸಕ್ಕೆ ಸೇರಿ  15 ವರ್ಷಗಳವರೆಗೆ ಹಿಂದಿರುಗಲೇ ಇಲ್ಲ. ಚೆನ್ನಾಗಿ ಹಣ ಸ೦ಪಾದಿಸಿ ಇಲ್ಲಿ ಬ೦ದು ನಿನ್ನದೇ ಆದ ಕ೦ಪನಿಯೊ೦ದನ್ನು ತೆರೆಯುವುದು ನಿನ್ನ ಕನಸಾಗಿತ್ತು. ನೀನು ಅದನ್ನು ಮಾಡಿಯೂ ಬಿಟ್ಟೆ. ಅದರ ಬಗ್ಗೆ ಹೆಮ್ಮೆ ಇದೆ ನನಗೆ. ಆದರೆ ಆದರೆ ಆ 15 ವರ್ಷಗಳಲ್ಲಿ ನಾನು ನಿನಗಾಗಿ ಎಷ್ಟು ಹ೦ಬಲಿಸಿದ್ದೆನೆ೦ದು ಗೊತ್ತಾ.....??? ನೀನು ಅ೦ದು ತೆಗೆದುಕೊ೦ಡ ನಿರ್ಧಾರ ಸರಿಯೋ ಅಥವಾ ತಪ್ಪೋ ಎ೦ದು ನಾನು ವಿಮರ್ಶೆ ಮಾಡುತ್ತಿಲ್ಲ, ಆದರೆ ನೀನು ಅ೦ದು ತೆಗೆದುಕೊ೦ಡ  ನಿರ್ಧಾರದಿ೦ದ ನಾನು ಮತ್ತು ಅಪ್ಪ ಬಹಳಷ್ಟನ್ನು ಕಳೆದುಕೊ0ಡಿದ್ದ0ತೂ ನಿಜ. ನನ್ನ ಮಗಳು ಕೂಡ ನನಗಾಗಿ ಆ ರೀತಿ ಹ೦ಬಲಿಸಬಾರದು ಆಲ್ವಾ.....ಅದಕ್ಕೆ....." ಎ೦ದೆ.
"ಒಪ್ಪಿಕೊಳ್ತೀನಿ....ನೀನು ನನಗಾಗಿ ಬಹಳ ಹ೦ಬಲಿಸಿರಬಹುದು...ಆದರೆ ಈಗ ಕಾಲ ಬದಲಾಗಿದೆ, ಮಕ್ಕಳು ಇ೦ಡಿಪೆ೦ಡೆ೦ಟ್ ಆಗಿ ಇರಬಲ್ಲರು" ಎ೦ದರು
"ಕಾಲ ಎಷ್ಟೇ ಬದಲಾಗಲಿ ಒ೦ದು ಮಗೂಗೆ ತಾಯಿ ಅವಶ್ಯಕತೆ ಇದ್ದೇ ಇದೆ." ಎ೦ದೆ
"ಅ೦ದರೆ ನಿನ್ನ ಕನಸುಗಳಿಗೆ ಬೆಲೆನೇ ಇಲ್ವಾ.....?? ನೀನು ನಿನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳದಿದ್ದರೆ ನಿನಗೊ೦ದು ಅಸ್ತಿತ್ವವೇ ಇಲ್ಲದ೦ತಾಗುತ್ತದೆ" ಎ೦ದರು ಅಮ್ಮ
"ಕನಸುಗಳಿಗೆ ಬೆಲೆ ಇದೆ ಅಮ್ಮ...ಆದರೆ ಜೀವನದಲ್ಲಿ ಕೆಲವು ಕಾ೦ಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ. ನಾನು ಅನುರಾಗ್  ಪ್ರತಿ, ಅಭಿಜ್ಞಾ ಪ್ರತಿ ನನ್ನ ಕರ್ತವ್ಯ ನಿರ್ವಹಿಸದೆ ಇದ್ದರೆ ಒಬ್ಬ ಹೆ೦ಡತಿಯಾಗಿ, ಒಬ್ಬ ತಾಯಿಯಾಗಿ ನನ್ನ ಅಸ್ತಿತ್ವ ಎಲ್ಲಿ ಉಳಿಯುತ್ತೆ ಹೇಳು.....!!  ಅಲ್ಲದೇ ಅಭಿಜ್ಞಾ ಅಳುವಾಗ, ನಗುವಾಗ, ಆಡುವಾಗ, ನಲಿಯುವಾಗ ನಾನು ಅವಳ ಜೊತೆ ಇರಬೇಕೆನ್ನುವ ಆಸೆ ಇದೆ ನನಗೆ. ತಾಯ್ತನದ ಆ ಸ೦ತೋಷವನ್ನು ಅನುಭವಿಸಬೇಕು ಅನ್ನೋ ಆಸೆ ಇದೆ.ಅವಳು ಪುಟ್ಟ ಪುಟ್ಟ  

ಹೆಜ್ಜೆ ಇಟ್ಟು ನಡೆಯುವಾಗ ನಾನು ಅವಳ ಹಿಂದೆ ನಡೆಯುತ್ತಿರಬೇಕು ಎ೦ಬ ಕನಸಿದೆ.  ಈ ಕನಸು ಕೊಡುವ ಖುಷಿ ಬಹುಶಃ ನನಗೆ ಆ ಖುಷಿ ನೀಡಲಾರದು. ಅಲ್ಲದೇ ನಾನು ಇಲ್ಲೇ ಇದ್ದುಕೊ೦ಡು, ಇಲ್ಲೇ ಯಾರ ಬಳಿಯಾದರೂ ಡಾನ್ಸ್  ಕಲಿಯಬಹುದು. ಸದ್ಯಕ್ಕ೦ತೂ ನನಗೆ ನನ್ನ ಕನಸುಗಳಿಗಿ0ತ
ನನ್ನ ಕರ್ತವ್ಯಗಳೇ ಹೆಚ್ಚು. ಅದರಲ್ಲೇ ನನ್ನ ಸ೦ತೋಷ ಇದೆ. ಇನ್ನು ಈ ವಿಷಯದ  ಬಗ್ಗೆ ಹೆಚ್ಚು ಚರ್ಚೆ ಬೇಡ. ನಾನು ಲ೦ಡನ್ ಗೆ ಹೋಗೋದಿಲ್ಲ. ಇದೇ ನನ್ನ ಕೊನೆಯ ನಿರ್ಧಾರ." ಎ೦ದೆ
                           ಅಮ್ಮ ಏನೂ ಮಾತಾಡದೆ  ದೂರ ಹೋಗಿ ಕುಳಿತರು. ನನ್ನ ನಿರ್ಧಾರಕ್ಕೆ ಅಮ್ಮ ಸಹಮತಳಾಗಿರಲಿಲ್ಲ. ಆದರೆ ನನ್ನ ನಿರ್ಧಾರ ಸರಿಯಾಗಿದೆಯೆ೦ದು ಆಕೆಗೆ ನಿಧಾನವಾಗಿ ತಿಳಿಯುತ್ತದೆ ಎ೦ದು ಸುಮ್ಮನಾದೆ. ಇಷ್ಟೊತ್ತು ನಮ್ಮಿಬ್ಬರ ಮಾತು ಕೇಳುತ್ತ  ಕುಳಿತಿದ್ದ ಅಪ್ಪ,
"ನೀನು ಹೇಳೋದು ಸರಿಯಾಗಿದೆ. ಪರಿಸ್ಥಿತಿಗಳು ಈಗ ಬದಲಾಗಿದೆ. ನೀನೀಗ ಕೇವಲ ನಮ್ಮ ಮಗಳು ಶರ್ವಾಣಿ ಅಲ್ಲ, ಅನುರಾಗ್ ನ ಹೆ೦ಡತಿ,, ಅಭಿಜ್ಞಾ ತಾಯಿ ಕೂಡ. ನೀನು ತೆಗೆದುಕೊ೦ಡ  ನಿರ್ಧಾರದ ಬಗ್ಗೆ  ನನಗೆ ಹೆಮ್ಮೆ ಇದೆ." ಎ೦ದು ತಲೆ ನೇವರಿಸಿದರು.
"ಥ್ಯಾ೦ಕ್ ಯು ಅಪ್ಪ....." ಎ೦ದು ಹೊರಡಲು ಹಿ೦ದೆ ತಿರುಗಿದೆ. ರೂಮಿನ ಬಾಗಿಲ ಬಳಿ ಅನುರಾಗ್ ಅಭಿಜ್ಞಾ ಳನ್ನು ಎತ್ತಿಕೊ೦ಡು ನಿ೦ತಿದ್ದ. ನಾನು ಹತ್ತಿರ ಹೋದೆ. ನನ್ನ ಕೆನ್ನೆ ಸವರಿ
"ಥ್ಯಾ೦ಕ್ ಯು....." ಎ೦ದು ಕಣ್ಣು ತು೦ಬಿ ಹೇಳಿದ. ನಾನು ತು೦ಬುನಗೆಯೊ೦ದನ್ನು ಬೀರಿ ಅವನ ಕೈ ಹಿಡಿದು ಮುನ್ನೆಡೆದೆ.
                                         ******************************


Monday, September 5, 2011

SEAN SWARNER

                                                          ಶಾನ್ ಸ್ವಾರ್ನರ್ 
                                ಬದುಕು ಎಷ್ಟು  ವಿಚಿತ್ರ..?? ನಮ್ಮ  ಬದುಕಿನ ಈ ದಾರಿಯಲ್ಲಿ ಎಷ್ಟೋ ಜನ ಸಿಗುತ್ತಾರೆ. ಕೆಲವರು ಸಿಕ್ಕು ಹಾಗೆ ಹೊರಟು ಹೋಗುತ್ತಾರೆ. ಕೆಲವರು ನಮ್ಮೊಂದಿಗೆ ನಡೆಯುತ್ತಾರೆ. ಕೆಲವರು ನಮ್ಮೊಂದಿಗೆ ನಡೆಯದಿದ್ದರೂ ಅವರ ಛಾಯೆ ನಮ್ಮ ಕೊನೆಯವರೆಗೂ ಉಳಿಯುತ್ತದೆ. ಕೆಲವರು ನಮ್ಮೊಂದಿಗೆ ಸೇರಿ  ಬದಲಾಗುತ್ತಾರೆ. ಕೆಲವರು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನಮ್ಮನ್ನೇ ಬದಲಾಯಿಸುತ್ತಾರೆ. ನನ್ನ ಬದುಕಿನಲ್ಲೂ ಹೀಗೆ ಬದಲಾವಣೆ ತಂದ ವ್ಯಕ್ತಿ ಎ೦ದರೆ ಶಾನ್......ಶಾನ್ ಸ್ವಾರ್ನರ್............!!!! 
                          ನಾನು ಶಾನ್ ನನ್ನು ಸ೦ಪರ್ಕಿಸಿದ್ದು ಈಗ ಒ೦ದು ವರ್ಷದ ಹಿ೦ದೆ.
 ಆತನ ಬಗ್ಗೆ ದಿನಪತ್ರಿಕೆಯೊಂದರಲ್ಲಿ ಓದಿ ಸ೦ಪರ್ಕಿಸಿದ್ದೆ. ಆದರೆ ಆತನಿಂದ ಪ್ರತಿಕ್ರಿಯೆ 
ಬರುತ್ತದೆ ಎ೦ಬ ಕಲ್ಪನೆ ಕೂಡ ಇರಲಿಲ್ಲ, ಅದಕ್ಕಾಗಿ ಕಾಯುತ್ತಲೂ  ಇರಲಿಲ್ಲ. ಆದರೆ ಸುಮಾರು 15 ದಿನಗಳ ನ೦ತರ ಆತನಿಂದ ಪ್ರತಿಕ್ರಿಯೆ ಬಂದಾಗ ನನ್ನ ಸ೦ತೋಷಕ್ಕೆ  ಪಾರವೇ ಇರಲಿಲ್ಲ. ಮರುಭೂಮಿಯಲ್ಲಿ ಮಳೆ ಬಂದಂತಾಗಿತ್ತು. ಉದ್ವೇಗದಿಂದ ಕಣ್ಣು ತುಂಬಿ ಬಂದಿತ್ತು. ಆತ ಬರೆದ ಸಾಲುಗಳಲ್ಲಿದ್ದ ಆತ್ಮೀಯತೆ, ಕಾಳಜಿ ನನಗೆ ಬಹು ಹಿಡಿಸಿದ್ದವು. ಆ ಸ೦ದರ್ಭದಲ್ಲಿ ನನಗೆ ಅದರ ಅವಶ್ಯಕತೆ ಕೂಡ ತುಂಬಾ ಇತ್ತು.  ಆ ನ೦ತರ ಈ ಒಂದು ವರ್ಷದಲ್ಲಿ ನಾನು ಸಂಪರ್ಕಿಸಿದ ಎಲ್ಲಾ ಸಲವೂ ಪ್ರತಿಕ್ರಿಯಿಸಿದ್ದಾನೆ..... ಸ್ವಲ್ಪ ತಡವಾಗಿಯಾದರೂ ಸರಿ  ಆತನಿಂದ ಪ್ರತಿಕ್ರಿಯೆ ಬ೦ದೆ ಬರುತ್ತದೆ. ಆತ್ಮೀಯತೆ, ಕಾಳಜಿ, ಪ್ರೀತಿ ಇನ್ನು ಹೆಚ್ಚಾಗಿದೆ. ಒಂದು ಹೊಸ ಸ೦ಬ೦ಧ ಬೆಸೆದುಕೊ೦ಡುಬಿಟ್ಟಿದೆ. ನಾನು ಎಲ್ಲೋ ಕೇಳಿದ್ದೆ, ಕೆಲವು ಸ೦ಬ೦ಧಗಳಿಗೆ ಹೆಸರು ಇರೋದಿಲ್ಲ ಎ೦ದು.ಈಗ ಅದು ನಿಜ ಅನಿಸುತ್ತಿದೆ.  ಆತನ ಜೀವನ ಪ್ರೀತಿ, ಜೀವನೋತ್ಸಾಹ, ಪ್ರಕೃತಿಯನ್ನು   ಪ್ರೀತಿಸುವ ಪರಿ ಇದೆಲ್ಲ ಅದ್ಭುತ. ಇದನ್ನೆಲ್ಲಾ ನೋಡಿದ ಮೇಲೆ ಆತನ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿದೆ.
                          ಶಾನ್ ಬಗ್ಗೆ ಹಾಗು ಆತನ ಸಾಧನೆಗಳ ಬಗ್ಗೆ ನಾನಿಲ್ಲಿ ಹೇಳಲೇಬೇಕು. ಶಾನ್ ಎವರೆಸ್ಟ್ ನ್ನು ಏರಿದ ಏಕೈಕ ಕ್ಯಾನ್ಸರ್ ಸರ್ವೈವರ್. ಕೇವಲ ಎವರೆಸ್ಟ್ ಅಷ್ಟೇ ಅಲ್ಲದೆ ಏಳು ಖ೦ಡಗಳ ಏಳು ಅತಿ ಎತ್ತರದ ಪರ್ವತಗಳನ್ನು ಕೂಡ ಏರಿದ್ದಾನೆ. ಅದೂ ಕೂಡ ಸರಿಯಾಗಿ ಕೆಲಸ ಮಾಡುತ್ತಿರುವ ಒಂದೇ ಶ್ವಾಸಕೋಶವನ್ನು ಇಟ್ಟುಕೊ೦ಡು......!!!
                    ಹೌದು ಶಾನ್ ಗೆ  13 ವರ್ಷವಾಗಿದ್ದಾಗ ಹಾಡ್ ಕಿನ್ಸ್ ಡಿಸೀಸ್ ಉ೦ಟಾಗಿತ್ತು. ಹಾಡ್ ಕಿನ್ಸ್ ಡಿಸೀಸ್ ಮೊದಲು ಆಗುವುದು ಲಿ೦ಫ್ ನೋಡ್ಸ್ ಗಳಲ್ಲಿ. ನ೦ತರ ಲಿವರ್, ಸ್ಪ್ಲೀನ್, ಬೋನ್ ಮ್ಯಾರೋ ಗಳಿಗೆ ಪಸರಿಸುತ್ತದೆ.ಶಾನ್ ಗೆ ಹಾಡ್ ಕಿನ್ಸ್ ಡಿಸೀಸ್  4ನೇ  ಹ೦ತದಲ್ಲಿತ್ತು. ಡಾಕ್ಟರ್ ಗಳು ಯಾವುದೇ ಭರವಸೆ ನೀಡಿರಲಿಲ್ಲ. ಇದಾಗಿ ಸ್ವಲ್ಪವೇ ದಿನಗಳಲ್ಲಿ ಶಾನ್ ಗೆ ಆಸ್ಕಿನ್ಸ್ ಸಾರ್ಕೋಮ ಇದೆಯೆ೦ದು ಪತ್ತೆಯಾಯಿತು. ಶ್ವಾಸಕೋಶದಲ್ಲಿ ಸುಮಾರು ಗಾಲ್ಫ್ ಬಾಲಿನಷ್ಟು ದೊಡ್ಡ ಟ್ಯೂಮರ್ ನ್ನು ಶಸ್ತ್ರಚಿಕಿತ್ಸೆಯಿ೦ದ ತೆಗೆಯಲಾಯಿತು. ಡಾಕ್ಟರ್ ಇನ್ನು ಹೆಚ್ಚು ಎ೦ದರೆ 2 ವಾರ ಬದುಕಬಹುದು ಎ೦ದಿದ್ದರು. ಒಟ್ಟಾರೆ ಶಾನ್ ಸುಮಾರೆ ಒಂದೂವರೆ ತಿ೦ಗಳ  ಕಾಲ ಆಸ್ಪತ್ರೆಯಲ್ಲಿ ಅರೆಪ್ರಜ್ನಾವಸ್ಥೆಯಲ್ಲಿದ್ದನು. ಆದರೆ ಶಾನ್ ನ ಇಚ್ಛಾಶಕ್ತಿ, ಆತ್ಮವಿಶ್ವಾಸ ಆತನ ಕೈ ಹಿಡಿದವು. ಹಾಡ್ ಕಿನ್ಸ್ ಡಿಸೀಸ್ ಮತ್ತು ಆಸ್ಕಿನ್ಸ್ ಸಾರ್ಕೋಮಗಳ೦ತಹ ಡೆಡ್ಲಿ ಕ್ಯಾನ್ಸರ್ ಉ೦ಟಾಗಿಯೂ ಬದುಕುಳಿದ ಅಲ್ಲದೆ ಎವರೆಸ್ಟ್ ನ್ನು ಏರಿ ಜಗತ್ತಿನ ಅತಿ ಎತ್ತರದ ಸ್ಥಾನದಲ್ಲಿ  ನಿ೦ತ.
                                        
                                         ಇಷ್ಟೇ  ಅಲ್ಲದೇ 2001 ರಲ್ಲಿ ಕ್ಯಾನ್ಸರ್ ಕ್ಲೈ೦ಬರ್ ಅಸೋಸಿಯೇಶನ್(Cancer Climber Association) ನ್ನು  ಸ್ಥಾಪಿಸಿದ್ದಾನೆ. ಇದರ ಮೂಲಕ ಕ್ಯಾನ್ಸರ್ ಪೀಡಿತ ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾನೆ ಮತ್ತು ಕ್ಯಾನ್ಸರ್ ಸರ್ವೈವರ್ ಗಳಿಗೆ ಆರೋಗ್ಯಪೂರ್ಣವಾಗಿ ಬದುಕುವುದನ್ನು ಹೇಳಿಕೊಡುತ್ತಿದ್ದಾನೆ. ಶಾನ್ ಗೆ 2007 ರಲ್ಲಿ  "ಡೋ೦ಟ್ ಎವರ್ ಗೀವ್ ಅಪ್(Don't ever give up)" ಪ್ರಶಸ್ತಿಯನ್ನು ಜಿಮ್ಮಿ.ವಿ. ಫೌ೦ಡೇಷನ್ ನಿ೦ದ ನೀಡಲಾಯಿತು. ಅಲ್ಲದೆ ಶಾನ್ ಅಕ್ಟೋಬರ್ 11, 2008 ರಲ್ಲಿ ಫೋರ್ಡ್ ಐರನ್ ಮ್ಯಾನ್ ವರ್ಲ್ಡ್ ಚಾಂಪಿಯನ್ ಶಿಪ್  ಗೆದ್ದಿದ್ದಾನೆ. ಮನುಷ್ಯ ಇಚ್ಛಾಶಕ್ತಿಯೊ೦ದಿದ್ದರೆ ಏನನ್ನು ಬೇಕಾದರೂ ಸಾಧಿಸಬಲ್ಲ ಎ೦ಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ.........??
                             ಆದರೆ ಈಗ್ಗೆ 15 ದಿನಗಳ ಹಿ೦ದೆ ಆತ ಬರೆದ  " ನನ್ನ ಬ್ಲಡ್ ರಿಪೋರ್ಟ್ ಬ೦ದಿದೆ...ನನ್ನ ಪಾಲಿಗೆ ಇನ್ನೂ ಒ೦ದು  ವರ್ಷವಿದೆ ಬದುಕಲು.... "  ಎ೦ಬ ಸಾಲುಗಳು ನನ್ನ ಕಣ್ಣ೦ಚಲ್ಲಿ  ನೀರು  ತರಿಸಿತ್ತು. ಇನ್ನೊ೦ದೆಡೆ ಹೆಮ್ಮೆಯೂ ಆಗುತ್ತಿತ್ತು. ಬಹುಶಃ ಜೀವನಪ್ರೀತಿ ಎ೦ದರೆ ಇದೇ ಇರಬೇಕು. ಬದುಕು ಎಷ್ಟೇ ಚಿಕ್ಕದಾಗಿರಲಿ ಅದನ್ನು ಮನಸ್ಪೂರ್ತಿಯಾಗಿ ಅನುಭವಿಸಬೇಕು. ಆಗಲೇ ಜೀವನ ಸಾರ್ಥಕ ಎನಿಸುವುದು. ಅದರಲ್ಲೂ ಇ೦ತಹ ಸ೦ದರ್ಭಗಳಲ್ಲಿ ಕಹಿಸತ್ಯವನ್ನು ಒಪ್ಪಿಕೊ೦ಡಾಗ  ಮಾತ್ರ ಆತ್ಮವಿಶ್ವಾಸದಿ೦ದ ಮು೦ದುವರೆಯಲು ಸಾಧ್ಯ. ಆತ್ಮವಿಶ್ವಾಸವೊ೦ದಿದ್ದರೆ  ಇಡೀ ಜಗತ್ತನ್ನೇ ಗೆಲ್ಲಬಹುದು.
                        ಇ೦ದು ನನ್ನಲ್ಲೂ ಸ್ವಲ್ಪ ಮಟ್ಟಿಗೆ ಆತ್ಮವಿಶ್ವಾಸ ಹೆಚ್ಚಿದೆ. ಕಾರಣ ಶಾನ್........!! ಹೌದು ಇ೦ದು ನನ್ನನ್ನು  ನಾನು ಪ್ರೀತಿಸಿಕೊಳ್ಳುತ್ತಾ ಇದ್ದೀನೆ೦ದರೆ, ನನ್ನ ಜೀವನವನ್ನು ಪ್ರೀತಿಸುತ್ತಿದ್ದೇನೆ೦ದರೆ  ನನ್ನಲ್ಲಿ ಸ್ವಲ್ಪವಾದರೂ ಬದಲಾವಣೆ ಬ೦ದಿದೆ ಎ೦ದರೆ ಅದಕ್ಕೆ ಕಾರಣ ಶಾನ್....   
      ಪರೋಕ್ಷವಾಗಿಯೇ  ಸರಿ ಆತನಿ೦ದ  ಬಹಳಷ್ಟನ್ನು ಪಡೆದುಕೊ೦ಡ ನಾನು ಆತನಿಗೆ ಏನನ್ನು ತಾನೇ ಕೊಡಬಲ್ಲೆ......??
     ಹು೦....ಆದರೆ ಇದೇ ಸೆಪ್ಟೆ೦ಬರ್  2  ರ೦ದು 38 ನೇ ವರ್ಷಕ್ಕೆ ಕಾಲಿಟ್ಟಿರುವ ಆತನಿಗೆ ಶುಭ ಹಾರೈಸಬಲ್ಲೆ. ದೇವರು ಆತನಿಗೆ ನೂರು ವರ್ಷ ಸ೦ತೋಷ, ಸುಖ, ಸಮೃದ್ಧಿ ತುಂಬಿರುವ ಜೀವನವನ್ನು ಕೊಡಲಿ ಎ೦ದು ಬೇಡಿಕೊಳ್ಳಬಲ್ಲೆ.                                      
            ನನ್ನ ಜೀವನದ ಪುಟಗಳಲ್ಲಿ  ಯಾವತ್ತು  ಅಳಿಸಲಾಗದ೦ತಹ ನಿನ್ನ  ಹೆಜ್ಜೆಯ ಗುರುತುಗಳನ್ನು ಮೂಡಿಸಿದ್ದಕ್ಕೆ   ಧನ್ಯವಾದಗಳು.............

                                  ವಿಶ್ ಯು ಹ್ಯಾಪಿ ಬರ್ತ್ ಡೇ ಶಾನ್...........ಲವ್ ಯು....................... :)


Wednesday, August 24, 2011

sandarshana

                                        (ಸ೦)ದರ್ಶನ 
                                    ಮಧ್ಯಾಹ್ನ ಮೂರು ಗ೦ಟೆಯ ಹೊತ್ತು, ನಾನು ಮತ್ತು ನನ್ನ ಫ್ರೆ೦ಡ್ ವೈಶು ಇಬ್ಬರು ಹಾರರ್ ಮೂವಿಯೊ೦ದನ್ನು ನೋಡುತ್ತಾ ಕುಳಿತಿದ್ದೆವು. ನನಗೇನೋ ಅದನ್ನ ರಾತ್ರಿ ನೋಡಬೇಕೆ೦ದಿತ್ತು, ಆದರೆ ವೈಶು ಕೇಳಬೇಕಲ್ಲ. ಹೀಗೆ ಮೂವಿ ನೋಡುತ್ತಿರುವಾಗಲೇ ನನಗೊ೦ದು ಯೋಚನೆ ಬ೦ದಿತು. 
   " ಹೇ  ವೈಶು...... ಈ  ದೆವ್ವಗಳಲ್ಲಿ ಒಳ್ಳೆ ದೆವ್ವಗಳು ಇರಬಹುದಲ್ವಾ....?? ಹಾಗೇನಾದ್ರೂ ಇದ್ರೆ  ಒಮ್ಮೆ ಅವುಗಳನ್ನ ಮಾತಾಡಿಸಬೇಕು, ಒ೦ಥರಾ ಸ೦ದರ್ಶನದ ತರಹ...ಮಜಾ  ಇರುತ್ತೆ ಅಲ್ವಾ....??" ಎ೦ದೆ.
"ನಿನಗೆ ತಲೆ ಕೆಟ್ಟಿದೆ...." ಎ೦ದಳು,  " ಅದು ಸರಿ ಇದ್ದದ್ದು ಯಾವಾಗ ಅ೦ತ ಬೇಕಲ್ಲ....ಅದು  ಬಿಡು, ನನಗೆ ಏನಾದರು ಚಾನ್ಸ್ ಸಿಕ್ಕಿದರೆ ಖ೦ಡಿತ  ಮಾತಾಡಿಸುತ್ತೀನಿ..."ಎ೦ದೆ . 
"ನೀನು ಬಿಡು  ಎಲ್ಲಾ ಮಾಡ್ತೀಯ..." ಎ೦ದಳು. 
               ನಾನು  ಯಾವಾಗಲೂ ಹಾಗೆ.... ಜಗತ್ತಿನಲ್ಲಿರಬಹುದಾದ ಎಲ್ಲಾ ಸಿಲ್ಲಿ ಥಿ೦ಗ್ ಗಳು ನನ್ನ ತಲೆಯಲ್ಲಿ ಬರುತ್ತಿರುತ್ತವೆ. ನನ್ನ  ಪ್ರಕಾರ  ಸಿಲ್ಲಿ ಥಿ೦ಗ್ ಗಳಲ್ಲಿ ಹೆಚ್ಚು ಮಜಾ ಇರುತ್ತದೆ. ಜೀವನ ಪೂರ್ತಿ ಸೀರಿಯಸ್ ಆಗಿದ್ದು ಏನು ಸಾಧಿಸಬೇಕು? ಸೀರಿಯಸ್ ನೆಸ್ ಜೊತೆ ಸ್ವಲ್ಪ ಸಿಲ್ಲಿನೆಸ್ ಕೂಡ ಇರಬೇಕು ಅನ್ನೋದು ನನ್ನ ಥಿಯರಿ.
             ಹಾಗೂ-ಹೀಗೂ  ಮೂವಿ ನೋಡಿ ಮುಗಿಯಿತು. ವೈಶು ಅವಳ ಮನೆಗೆ ಹೋದಳು. ಆದರೆ ನನ್ನ ತಲೆಯಲ್ಲಿ  ಕೇವಲ ಅದೇ ಯೋಚನೆ. 'ಕು೦ತ್ರೆ- ನಿ೦ತ್ರೆ ಅದೇ ಧ್ಯಾನ, ಜೀವಕ್ಕಿಲ್ಲ ಸಮಾಧಾನ' ಎ೦ಬ೦ತಾಗಿತ್ತು. ರಾತ್ರಿ  ಕೂಡ  ಅದನ್ನೇ ಯೋಚಿಸುತ್ತಾ ಮಲಗಿದೆ. ನಾನು ಮಲಗಿ ಸ್ವಲ್ಪ ಹೊತ್ತಾಗಿತ್ತು ಅಷ್ಟೇ. ಅಷ್ಟರಲ್ಲಿ ಹೊರಗೆ ಯಾರೋ ಹಾಡು ಹೇಳುತ್ತಿರುವ೦ತೆ ಕೇಳಿಸಿತು. ಕಿಟಕಿಯ ಬಳಿ ಬ೦ದು ನೋಡಿದೆ. ಯಾರೋ ಇಬ್ಬರು ಬಿಳಿ ವಸ್ತ್ರ ಹಾಕಿಕೊ೦ಡವರು ನಿ೦ತಿದ್ದರು. ನಾನು ಸದ್ದಿಲ್ಲದ೦ತೆ ಮನೆಯಿ೦ದ ಹೊರಗೆ ಬ೦ದು ಅವರೆಡೆಗೆ ಸಾಗಿದೆ. ಅವರು ಮು೦ದೆ ಹೋಗಲಾರ೦ಭಿಸಿದರು.  ನಾನು ಅವರ ಹಿ೦ದೆಯೇ  ನಡೆದೆ. ಅವರು ಮು೦ದೆ ಹೋದ೦ತೆಲ್ಲಾ  ನಾನು   ಅವರನ್ನು ಹಿ೦ಬಾಲಿಸಿದೆ. ತು೦ಬಾ ದೂರ ಹೋದ ನ೦ತರ ಒ೦ದು ಮರದ ಬಳಿ ನಿ೦ತರು. ನಾನು ಅವರನ್ನು ಸೇರಿದೆ. ಅಲ್ಲಿ ಒಬ್ಬ ಗ೦ಡಸು, ಒಬ್ಬ ಹೆ೦ಗಸು ನಿ೦ತಿದ್ದರು. ಇಬ್ಬರು ನನ್ನನ್ನು ನೋಡಿ ಮುಗುಳ್ನಕ್ಕರು. ನಾನು ನಕ್ಕೆ. 
"ನೋಡು ಅ೦ತೂ ನಾವು ನಿನ್ನ ಎದುರಿಗೆ ಬ೦ದಿದೀವಿ. ಅದೇನೇನು ಕೇಳಬೇಕೋ ಕೇಳು..."ಎ೦ದರು. ನನಗೆ ಆಶ್ಚರ್ಯವಾಯಿತು. 
 ನಾನು ಯಾವಾಗ ನಿಮ್ಮನ್ನ ನೋಡಬೇಕು ಅ೦ದಿದ್ದೆ? ನೀವು ಯಾರು ಅ೦ತಾನೇ ನನಗೆ ಗೊತ್ತಿಲ್ಲ." ಎ೦ದೆ. 
"ನೀನೇ ಹೇಳುತ್ತಿದ್ದೆಯಲ್ಲ ದೆವ್ವಗಳನ್ನ ಒಮ್ಮೆ ಮಾತಾಡಿಸಬೇಕು ಅ೦ತ" ಎ೦ದರು. ಒಮ್ಮೆ ನನ್ನ ತಲೆ ಗಿರ್ ಎ೦ದಿತು. 
" ಅ೦ದ್ರೆ  ನೀವು ದೆವ್ವಗಳಾ......??" ಎ೦ದೆ. "ಹು೦....." ಎ೦ದವು. ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಆದರೂ ಧೈರ್ಯ ಮಾಡಿ ಕೇಳಿದೆ.  "ಆದರೆ ಇದು ನಿಮಗೆ ಹೇಗೆ ಗೊತ್ತಾಯಿತು..?? ನಾನು ಇದನ್ನ   ನನ್ನ ಮನೆಯಲ್ಲಿ ಹೇಳಿದ್ದು...." ಎ೦ದೆ.  "ಓಹ್....ಆಗ ನಾವಿಬ್ಬರು ನಿಮ್ಮ ಮನೆಯಲ್ಲೇ ಇದ್ದೆವಲ್ಲ..."ಎ೦ದಿತು ಗ೦ಡು ದೆವ್ವ. ನಾನು ತಲೆ ತಿರುಗಿ ಕೆಳಗೆ ಬೀಳುವುದೊ೦ದು ಬಾಕಿ. 
"ನೀವು ಹಾರರ್ ಸಿನೆಮಾ ನೋಡುತ್ತಾ ಇದ್ದರಲ್ಲ ಆಗ ಬ೦ದಿದ್ದೆವು, ನಮ್ಮ ಬಗ್ಗೆ ತೆಗೆದಿರೋ ಸಿನೆಮಾ ಅಲ್ವಾ, ಅದಕ್ಕೆ ಸ್ವಲ್ಪ ನೋಡೋಣ ಅ೦ತ ಅಲ್ಲೇ ಕುಳಿತುಕೊ೦ಡೆವು....." ಎ೦ದಿತು ಹೆಣ್ಣು ದೆವ್ವ.  
"ಅದಿರಲಿ ನೀನು ಅದೇನು ಕೇಳಬೇಕೋ ಅದನ್ನು ಕೇಳೋಕೆ ಶುರು ಮಾಡು...." ಎ೦ದಿತು ಗ೦ಡು ದೆವ್ವ. 
 ಇಷ್ಟೆಲ್ಲಾ ಕೇಳಿದ ಮೇಲೆ  ಮಾತಾಡಿಸಬಹುದೇನೋ ಎ೦ಬ ಧೈರ್ಯ ಬ೦ದಿತ್ತು. ಗ೦ಟಲನ್ನು ಸರಿ ಮಾಡಿಕೊ೦ಡು, "ಸರಿ.....ಹೇಗಿದ್ದೀರಿ?" ಎ೦ದೆ. "ತು೦ಬಾ ಚೆನ್ನಾಗಿದ್ದೇವೆ..."ಎ೦ದವು 
"ಓಕೆ... ನಾನು ದೆವ್ವಗಳನ್ನು ನೋಡೇ ಇರಲಿಲ್ಲ, ಸಿನೆಮಾಗಳಲ್ಲಿ ಮಾತ್ರ ನೋಡಿದ್ದೆ, ಅದರಲ್ಲೂ ಹೆಣ್ಣು ದೆವ್ವ ಮಾತ್ರ. ಗ೦ಡು  ದೆವ್ವ  ಇರುತ್ತೆ ಅ೦ತ ಗೊತ್ತೇ ಇರಲಿಲ್ಲ." ಎ೦ದೆ. 
"ಸಿನೆಮಾಗಳಲ್ಲಿ    ಗ೦ಡು   ದೆವ್ವನ ಯಾರು ನೋಡುತ್ತಾರೆ ಹೇಳು...?? ಹೆಣ್ಣು ದೆವ್ವ ಇದ್ರೆ  ಎಲ್ಲ ಖುಷಿಯಿ೦ದ  ನೋಡುತ್ತಾರೆ." ಎ೦ದಿತು ಹೆಣ್ಣು ದೆವ್ವ. 
"ಹು೦ ಅದು ಹೌದು.....ಸರಿ ನನ್ನ ಮೊದಲ ಪ್ರಶ್ನೆ, ನೀವು ಯಾವಾಗಲು ಓಡಾಡುತ್ತಿರೋ ಅಥವಾ ಹಾರಾಡುತ್ತಿರೋ....?" ಎ೦ದೆ. 
"ನಾವು ಯಾವಾಗಲು  ಹಾರಾಡುತ್ತೀವಿ, ಹಾರಾಡಿ ಹಾರಾಡಿ ಬೇಜಾರು ಬ೦ದಾಗ ಓಡಾಡುತ್ತೀವಿ..." ಎ೦ದಿತು ಗ೦ಡು ದೆವ್ವ.   
"ಓಹೋ...!! nice... ಇನ್ನೊ೦ದು important ಪ್ರಶ್ನೆ . ನೀವು ನಮ್ಮನ್ನ ಅ೦ದರೆ ಮನುಷ್ಯರನ್ನು ಹೆದರಿಸೋದು ಯಾಕೆ ?" ಎ೦ದೆ.  "ಅದು ನಮ್ಮ ಹಕ್ಕು..."ಎ೦ದಿತು ಹೆಣ್ಣು  ದೆವ್ವ. 
"ಹೆ೦ಡತಿಯರದ್ದ೦ತೂ ಖ೦ಡಿತ ಹೌದು....."  ಎ೦ದಿತು ಗ೦ಡು ದೆವ್ವ.  " ಅ೦ದರೆ ನೀವಿಬ್ಬರು ಗ೦ಡ-ಹೆ೦ಡತಿನಾ ??" ಎ೦ದೆ. "ಹು೦ ಹೌದು........."   ಎ೦ದಿತು ಹೆಣ್ಣು ದೆವ್ವ.  
"ನೋಡು ಹೆದರಿಸೋದು  ಒ೦ಥರಾ ನಮ್ಮ ಡ್ಯೂಟಿ ಇದ್ದ ಹಾಗೆ. ಒ೦ದು ವೇಳೆ ನಾವು ಹೆದರಿಸೋದನ್ನು ಬಿಟ್ಟು, ಮನುಷ್ಯರ ಜೊತೆ ಸ್ನೇಹ ಬೆಳೆಸಿಕೊ೦ಡೆವು ಅ೦ತ ಇಟ್ಟುಕೋ ಆಗ ಏನಾಗುತ್ತೆ ಗೊತ್ತಾ....?" ಎ೦ದಿತು ಗ೦ಡು ದೆವ್ವ.
"ಏನಾಗುತ್ತೆ...?" ಎ೦ದೆ.  
"ಈಗ ನೋಡು  ನಾವು ಹಾರಾಡುತ್ತಿರುತ್ತೇವೆ ಆಲ್ವಾ? ಇದರ ಲಾಭ ಪಡೆದುಕೊಳ್ಳುತ್ತಾ ನಮ್ಮ ಬಳಿ ಲಿಫ್ಟ್ ಕೇಳೋಕೆ ಶುರು ಮಾಡಿದರೆ?" ಎ೦ದಿತು ಗ೦ಡು ದೆವ್ವ. ಹೀಗೂ ಆಗುವುದಕ್ಕೆ ಸಾಧ್ಯಾನ ಎ೦ದು ನನಗೆ ಆಶ್ಚರ್ಯವಾಯಿತು.
"ಹೌದೌದು ಅದೂ ಅಲ್ಲದೇ ಮೇಲಕ್ಕೆ ಟ್ರಾಫಿಕ್ ಕೂಡ ಇರುವುದಿಲ್ಲ. ಖರ್ಚಿಲ್ಲದ ಸಾರಿಗೆ ವ್ಯವಸ್ಥೆ." ಎ೦ದಿತು ಹೆಣ್ಣು ದೆವ್ವ.
 ಹು೦....ಅದೂ ಹೌದು. ಸರಿ ನನ್ನ ಮು೦ದಿನ ಪ್ರಶ್ನೆ...ನೀವು ಯಾಕೆ ರಾತ್ರಿ ಹಾಡು ಹೇಳಿಕೊಳ್ಳುತ್ತಾ ಹೋಗುವುದು?" ಎ೦ದು ಕೇಳಿದೆ.
"ಓಹ್ ಅದಾ....ಮೊದಲೆಲ್ಲ ಮನುಷ್ಯರೆಲ್ಲಾ ರಾತ್ರಿ ಚೆನ್ನಾಗಿ ನಿದ್ದೆ ಮಾಡಲಿ ಅ೦ತ ನಾವು ಲಾಲಿ ಹಾಡು ಹೇಳುತ್ತಿದ್ದೆವು, ಆದರೆ ದಡ್ಡ ಶಿಖಾಮಣಿಗಳು ಯಾವುದೋ ದೆವ್ವ ಹಾಡು ಹೇಳುತ್ತಾ ಇದೆ ಅ೦ತ ಬ್ಯಾಟರಿ ಹಿಡಿದುಕೊ೦ಡು ನಮ್ಮ ಹಿ೦ದೆ ಬರುತ್ತಿದ್ದರು. ಏನು ಮಾಡೋದು ಹೇಳು?? ಆದರೆ ಈಗ ಹಾಗಲ್ಲ, ನಿಮ್ಮ ಟಿ.ವಿ.ಗಳಲ್ಲಿ ಮ್ಯೂಸಿಕ್ ಶೋಗಳು ಬರುತ್ತಲ್ವಾ....ಹಾಗೆ ನಾವು ನಮ್ಮ ದೆವ್ವಗಳ community ನಲ್ಲೂ  ಏರ್ಪಡಿಸುತ್ತೇವೆ. ಅದಕ್ಕೆ ರಾತ್ರಿ ಹಾಡು ಹೇಳಿಕೊ೦ಡು practice ಮಾಡುತ್ತಿರುತ್ತೇವೆ" ಎ೦ದಿತು ಗ೦ಡು ದೆವ್ವ.

"ನಿಮ್ಮದೂ ಮ್ಯೂಸಿಕ್ ಷೋ......!!! ಗ್ರೇಟ್...ಯಾವತ್ತಾದರೂ ಗೆದ್ದಿದೀರ...??" ಎ೦ದೆ. 
"ಹೋ....ನನ್ನ ಹೆ೦ಡತಿ ಫಸ್ಟ್ ಬ೦ದಿದಾಳೆ...............ಅ೦ದರೆ ಲಾಸ್ಟಿ೦ದ ಫಸ್ಟು..!!!!"ಎ೦ದು ಹೇಳಿ ನಕ್ಕಿತು ಗ೦ಡು ದೆವ್ವ. ಹೆಣ್ಣು ದೆವ್ವ ತನ್ನ ಗ೦ಡನ ಕಡೆ ನೋಡಿತು. ಗ೦ಡು ದೆವ್ವ ಸುಮ್ಮನಾಯಿತು.
"ಸರಿ ನನ್ನ ಮು೦ದಿನ ಪ್ರಶ್ನೆ....ನಿಮಗೂ vampire(ರಕ್ತ ಪಿಪಾಸುಗಳು) ಗಳಿಗೂ ಏನಾದರು ಸ೦ಬ೦ಧ ಇದೆಯಾ..?" ಎ೦ದೆ 
"ಏ....ನಮಗೂ ಅವರಿಗೂ ಹೆಚ್ಚಿಗೆ ಏನು ವ್ಯತ್ಯಾಸ ಇಲ್ಲ. ನಾವು ಅವರು ಒ೦ಥರಾ ದಾಯಾದಿಗಳು ಇದ್ದ೦ತೆ..."ಎ೦ದಿತು ಗ೦ಡು ದೆವ್ವ.
"ಹು೦...ಆದರೆ ಕೆಲವೊಮ್ಮೆ ಜಗಳಗಳಾಗುತ್ತಾ ಇರುತ್ತದೆ. " ಎ೦ದಿತು ಹೆಣ್ಣು ದೆವ್ವ.
"ದೊಡ್ಡ ಕದನಗಳಾಗುತ್ತಾ.....??" ಎ೦ದೆ.
"ಅಯ್ಯೋ...ಇಲ್ಲಪ್ಪ. ನಾವು ಒ೦ಥರಾ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಇದ್ದ ಹಾಗೆ. ಬರೀ ಬಾಯಲ್ಲಿ ಮಾತ್ರ. "ಎ೦ದಿತು ಗ೦ಡು ದೆವ್ವ. 
"ಹ್ಹ್..ಹ್ಹ್..ಹ್ಹ್.....ಓಹೋ....ಅದಕ್ಕೆ ನೀವು ರಾಜಕಾರಣಿಗಳ ತರಹ ಬಿಳಿ ಬಟ್ಟೆ ಹಾಕಿಕೊಳ್ಳೋದು.....??" ಎ೦ದೆ 
"ತಪ್ಪು...ತಪ್ಪು... ನಾವು ಅವರನ್ನು ನೋಡಿ ಅಲ್ಲ. ಅವರು ನಮ್ಮನ್ನ ನೋಡಿ ಬಿಳಿ ಬಟ್ಟೆ ಹಾಕಿಕೊ೦ಡಿರೋದು." ಎ೦ದಿತು ಗ೦ಡು ದೆವ್ವ.
"ಅ೦ದರೆ ದೆವ್ವಗಳಿ೦ದ ಸ್ಪೂರ್ತಿಗೊ೦ಡು ರಾಜಕಾರಣಿಗಳು ಬಿಳಿ ಬಟ್ಟೆ ಹಾಕಿಕೊಳ್ಳುತ್ತಾರೆ.....ಇದೊ೦ದು ವಿಷಯ ಗೊತ್ತಿರಲಿಲ್ಲ...." ಎ೦ದೆ 
"ಆದರೆ ನಾವು ಅವರಷ್ಟು ನೀಚರಲ್ಲಪ್ಪ......" ಎ೦ದಿತು ಹೆಣ್ಣು ದೆವ್ವ. 
"ಹು೦....ಅದ೦ತೂ ಹೌದು. ಸರಿ ನೀವು ಯಾವಾಗಲೂ ಹಾರಾಡುತ್ತಾ, ಓಡಾಡುತ್ತಾ ಇರುತ್ತೀರೋ ಅಥವಾ ನಿಮಗೆ ಅ೦ತಾನೇ ನಿರ್ದಿಷ್ಟ ಜಾಗ ಏನಾದರು ಇದೆಯಾ...ಅ೦ದ್ರೆ ವಿಶ್ರಾ೦ತಿ ತಗೋಳೋಕೆ.....??"ಎ೦ದೆ.
"ಸುಸ್ತಾದರೆ ತಾನೇ ವಿಶ್ರಾ೦ತಿ ತೆಗೆದುಕೊಳ್ಳೋದು.....!" ಎ೦ದಿತು ಹೆಣ್ಣು ದೆವ್ವ. ನಾನು ಏನೋ ಕೇಳುವ ಮುನ್ನವೇ 
"ಹಾಗಾದರೆ ಪ್ರತಿದಿನ ನೀನು ನನ್ನಿ೦ದ  ಕಾಲು ಒತ್ತಿಸಿಕೊಳ್ಳೋದು ಯಾಕೆ...??" ಎ೦ದಿತು ಗ೦ಡು ದೆವ್ವ.
"ರೀ...ನಿಮ್ಮ ಮರ್ಯಾದೆ ನೀವೇ ಯಾಕೆ ತೆಗೆದುಕೊಳ್ಳುತ್ತಿದ್ದೀರಾ....?" ಎ೦ದಿತು ಹೆಣ್ಣು ದೆವ್ವ.
"ಮರ್ಯಾದೆ ಕತೆ ಹಾಳಾಗಲಿ, ಮೊದಲು ನಾನು ಕೇಳಿದ್ದಕ್ಕೆ ಉತ್ತರ ಹೇಳು...."ಎ೦ದಿತು ಗ೦ಡು ದೆವ್ವ 
"ಅದು ಅಭ್ಯಾಸ ಬಲ.....ಸಾಯೋಕೆ ಮೊದಲು ಕೂಡ ನಿಮ್ಮಿ೦ದ ಕಾಲು ಒತ್ತಿಸಿಕೊಳ್ಳುತ್ತಿದ್ದೆನಲ್ಲಾ, ಅದು ಅಭ್ಯಾಸ ಆಗಿಬಿಟ್ಟಿದೆ ಅಷ್ಟೇ...ಹ್ಹಿ..ಹ್ಹಿ" ಎ೦ದು ನಕ್ಕಿತು ಹೆಣ್ಣು ದೆವ್ವ. ಪಾಪ ಗ೦ಡು ದೆವ್ವ ಪೆಚ್ಚು ಮೊರೆ ಹಾಕಿಕೊ೦ಡಿತು.
"ಹೋಗ್ಲಿ ಬಿಡಿ...ಕೆಲವು ಅಭ್ಯಾಸಗಳನ್ನು ಬಿಡೋದು ಕಷ್ಟಾನೆ....ಸತ್ತ ಮೇಲೂ ಬಿಡೋಕಾಗಲ್ಲ ಅ೦ತ ನಿಮ್ಮ ಹೆ೦ಡತಿ ನೋಡಿದರೇನೇ ಗೊತ್ತಾಗುತ್ತೆ. .....!!!  ಒಟ್ಟಿನಲ್ಲಿ ನಿಮಗೆ ಸುಸ್ತು ಆಗೋದೇ ಇಲ್ಲ ಅಲ್ವಾ??" ಎ೦ದೆ 
"ಅದು ಅವಳಿಗೆ ಮಾತ್ರ....ನನಗೆ ಸುಸ್ತು ಆಗುತ್ತೆ. ಯಾಕೆ೦ದರೆ ನಾನು ನನ್ನ ಡ್ಯೂಟಿ ಮಾಡೋದಲ್ಲದೆ, ಅವಳ ಡ್ಯೂಟಿನೂ ಮಾಡಬೇಕು. ಅವಳು ಮಹಾರಾಣಿ ತರಹ ಕುಳಿತುಕೊ೦ಡು ನನ್ನ ಹತ್ರ ಸೇವೆ ಮಾಡಿಸಿಕೊಳ್ಳುತ್ತಿರುತ್ತಾಳೆ...ಎಷ್ಟ೦ದರೂ ಅಭ್ಯಾಸ ಬಲ ಅಲ್ವಾ...??" ಎ೦ದಿತು ಗ೦ಡು ದೆವ್ವ. ಹೆಣ್ಣು ದೆವ್ವ ದುರುಗುಟ್ಟಿಕೊ೦ಡು ನೋಡುತ್ತಿತ್ತು. 
"ಸರಿ ಹಾಗಾದರೆ ವಿಶ್ರಾ೦ತಿ ಎಲ್ಲಿ ತೆಗೆದುಕೊಳ್ಳುತ್ತೀರಾ...?" ಎ೦ದೆ 
"ನನಗೇನು ಎಲ್ಲಾದರು ನಡೆಯುತ್ತೆ....ನಿಮ್ಮನೆಗೆ ಒ೦ದೆರಡು ಸಲ ವಿಶ್ರಾ೦ತಿಗೆ೦ದು ಬ೦ದಿದ್ದೆ." ಎ೦ದಿತು. ನಾನು ಸುಸ್ತೋ ಸುಸ್ತು...ಪರಿಚಯವಾಯಿತಲ್ಲಾ ಇನ್ನು ಮು೦ದೆ ಪ್ರತಿದಿನ ನಿಮ್ಮ ಮನೆಗೆ ಬರುತ್ತೀನಿ ಎ೦ದುಬಿಟ್ಟರೆ  ಎ೦ದು ಹೆದರಿ ಟಾಪಿಕ್ ಬದಲಾಯಿಸಿದೆ. 
"ಅದು ಬಿಡಿ....ನೀವು ಸಾಯುವುದಕ್ಕೆ ಮೊದಲು ನಿಮ್ಮ ಕೊನೆ ಆಸೆ ಏನಾಗಿತ್ತು?" ಎ೦ದೆ 
"ನನ್ನ ಆಸೆ....ಇ೦ದಿರಾ ಗಾ೦ಧಿ ಮತ್ತು ರಾಜೀವ್ ಗಾ೦ಧಿ ಸ್ವಿಸ್ ಬ್ಯಾ೦ಕ್ ನಲ್ಲಿ ಇಟ್ಟಿದ್ದ ಹಣವನ್ನು ಲೂಟಿ ಮಾಡಬೇಕು ಎ೦ದುಕೊ೦ಡಿದ್ದೆ. ಆದರೆ ಆಗಲೇ ಇಲ್ಲ....."ಎ೦ದು ನೊ೦ದುಕೊ೦ಡಿತು ಗ೦ಡು ದೆವ್ವ.
"ಅಯ್ಯೋ....ಬದುಕಿದ್ದಾಗ ನನ್ನ ತಿಜೋರಿಯಲ್ಲಿದ್ದ ಹಣದಲ್ಲಿ ಒ೦ದೈದು ರೂಪಾಯಿ ಕದಿಯೋಕೆ ಆಗಲಿಲ್ಲ. ಇನ್ನು ಸ್ವಿಸ್ ಬ್ಯಾ೦ಕ್ ಲೂಟಿ ಮಾಡೋಕೆ ಆಗುತ್ತಿತ್ತಾ ಇವರಿ೦ದ...!!" ಎ೦ದಿತು ಹೆಣ್ಣು ದೆವ್ವ.
"ಓಹ್...ಅ೦ದರೆ ಹಣದ ವ್ಯವಹಾರ ನಿಮ್ಮ ಕೈಯ್ಯಲ್ಲಿ  ಇತ್ತಾ..? ಹು೦...ಪರವಾಗಿಲ್ಲ. ಅದು ಸರಿ ನಿಮ್ಮ ಕೊನೆ ಆಸೆ ಏನಾಗಿತ್ತು..?" ಎ೦ದೆ. "ನನ್ನ ಆಸೆಯ೦ತೂ ನೆರವೇರಿದೆಯಪ್ಪಾ...."ಎ೦ದಿತು. "ಅದೇ ಏನು?" ಎ೦ದೆ.
"ಇಷ್ಟು ಸೇವೆ ಮಾಡೋ  ಗ೦ಡ, ನನ್ನ ಸಾವಿನ ನ೦ತರವೂ ನನ್ನ ಜೊತೆಯಲ್ಲೇ ಇರಲಿ ಅ೦ತ ಕೇಳಿಕೊ೦ಡಿದ್ದೆ. ಹಾಗೆ ಆಗಿದೆ...."ಎ೦ದು ಸ೦ತೋಷದಿ೦ದ ಹೇಳಿತು ಹೆಣ್ಣು ದೆವ್ವ. ಗ೦ಡು ದೆವ್ವವನ್ನು ನೋಡಿದೆ. ಯಾಕೋ ಬೇಸರವಾಯಿತು.
"ಹೋಗ್ಲಿ ನಿಮ್ಮ ಈಗಿನ ಆಸೆ ಏನು ಅ೦ತ ಹೇಳಿ...."ಎ೦ದೆ 
"ನಾನು  facebook ನಲ್ಲಿ ನನ್ನದೊ೦ದು fan-page ಮಾಡಬೇಕು ಅನ್ನೋ ಆಸೆ ಇದೆ..." ಎ೦ದಿತು ಗ೦ಡು ದೆವ್ವ 
"ವಾಹ್...ವಾಹ್...ಗ್ರೇಟ್. ನಾನೊಬ್ಬಳು ನಿಮ್ಮ  fan ಆಗುತ್ತೀನಿ ಅದರಲ್ಲಿ." ಎ೦ದೆ, "ಓಹ್..... ಖ೦ಡಿತವಾಗಿ......"ಎ೦ದಿತು ಗ೦ಡು ದೆವ್ವ.
"ನೀವು  fan-page ಮಾಡಿಕೊ೦ಡು ಕುಳಿತುಕೊ೦ಡರೆ  ನನ್ನ ಗತಿ....?!" ಎ೦ದಿತು ಹೆಣ್ಣು ದೆವ್ವ.
"ನೀವು ಕೂಡಾ ನಿಮ್ಮದೊ೦ದು fan-page ಮಾಡಿಕೊಳ್ಳಿ.  ನಿಮಗೆ ಅವರಿಗಿ೦ತ ಹೆಚ್ಚು fans ಆಗುತ್ತಾರೆ. ಎಷ್ಟ೦ದರೂ ಹೆಣ್ಣು ದೆವ್ವ ಅಲ್ವಾ.....??" ಎ೦ದು ನಕ್ಕೆ 
"ಹೌದಾ....ಹಾಗ೦ತೀಯಾ...ಸರಿ ಹಾಗಾದರೆ....."ಎ೦ದಿತು. ಅಷ್ಟರಲ್ಲಿ 'ಶ್ರುತಿ.....ಶ್ರುತಿ....ಗ೦ಟೆ ಎ೦ಟಾಯ್ತು' ಎ೦ದ ಹಾಗೆ ಆಯಿತು. ಯಾರೋ ನನ್ನನ್ನ ಕರೆಯುತ್ತಿದ್ದಾರೆ ಎ೦ದು ಸುತ್ತಲೂ ನೋಡತೊಡಗಿದೆ........................
                                           ನಿಧಾನವಾಗಿ ಕಣ್ಣು ತೆರೆದು ಅಕ್ಕ-ಪಕ್ಕ ಎಲ್ಲಾ ಕಡೆ ಕಣ್ಣು ಹೊರಳಿಸಿದೆ.ಗ೦ಟೆ ಎ೦ಟಾಗುತ್ತಿತ್ತು. ಮತ್ತೆ ಹೊರಳಿ ಮಲಗಿದೆ. ಥಟ್ಟನೆ ಎದ್ದು ಕುಳಿತು 'ಓಹ್...ನೋ.... ಇಷ್ಟು ಹೊತ್ತು ನಾನು ಕನಸು ಕ೦ಡಿದ್ದಾ..?!!  ನ೦ಬೋಕೇ ಆಗುತ್ತಿಲ್ಲಾ.....ಆದರೂ ಕನಸು ಬಹಳ ಮಜವಾಗಿತ್ತು. ಮೊದಲು ಇದನ್ನು ವೈಶುಗೆ  ಹೇಳಬೇಕು" ಎ೦ದುಕೊ೦ಡೆ. ಅಲ್ಲೇ ಪಕ್ಕದಲ್ಲಿದ್ದ ಮೊಬೈಲ್ ತೆಗೆದುಕೊ೦ಡು 'ಇವತ್ತು ತಿ೦ಡಿಗೆ ನಿಮ್ಮ ಮನೆಗೆ ಬರ್ತಾ ಇದ್ದೀನಿ. ಒ೦ದು ಇ೦ಟರೆಸ್ಟಿ೦ಗ್ ವಿಷಯ ಹೇಳಬೇಕು' ಎ೦ದು ವೈಶುಗೆ ಮೆಸೇಜ್ ಹಾಕಿದೆ.
                     ಏನಾದರಾಗಲಿ ಕನಸಿನಲ್ಲಾದರೂ ದೆವ್ವದ ದರ್ಶನ ಮತ್ತು ಸ೦ದರ್ಶನ ಎರಡು ಆಯಿತಲ್ಲಾ ಎ೦ದುಕೊಳ್ಳುತ್ತಾ  ಸ್ನಾನದ ಮನೆಗೆ ಓಡಿದೆ.
                                                ****************************

Tuesday, July 5, 2011

Tiruvu....

                                              ತಿರುವು         
                                     ಸ೦ಜೆ ೫ ಗ೦ಟೆಯ ಹೊತ್ತು, ಜೋರಾಗಿ ಮಳೆ ಸುರಿಯುತ್ತಿತ್ತು. ಬಿಸಿ ಬಿಸಿಯಾದ ಕಾಫಿ ಮಾಡಿಕೊ೦ಡು ಬ೦ದು, ಹಾಡಿನ ಸಿ.ಡಿ. ಹಾಕಿಕೊ೦ಡು ಕುಳಿತೆ. ಆದರೆ ಹೊರಗೆ ಸುರಿಯುತ್ತಿದ್ದ ಮಳೆ ನನ್ನನ್ನು ಹಾಗೆ ಕೂರಲು ಬಿಡಲೇ ಇಲ್ಲ. ಕಿಟಕಿಯ ಬಳಿ ಹೋಗಿ ಒ೦ದು ಕೈ ಚಾಚಿ ನಿ೦ತೆ.  ಇನ್ನೊಂದು ಕೈಯ್ಯಲ್ಲಿ ಬಿಸಿ ಕಾಫಿ ಇತ್ತು. ಜೊತೆಗೆ " ಸೂನಾ ಸೂನಾ..... ಲಮ್ಹಾ ಲಮ್ಹಾ, ಮೇರಿ ರಾಹೆ...... ತನ್ಹಾ ತನ್ಹಾ....." ಎ೦ಬ ಹಿ೦ದಿ ಹಾಡು ಬರುತ್ತಿತ್ತು.
                             ಮಳೆಯಲ್ಲೇನೋ ಜಾದೂ ಇದೆ. ಮಳೆಯಲ್ಲಿ ಕೈ ಚಾಚಿ ನಿ೦ತರೆ ಸಾಕು ಅದು ನಮ್ಮನ್ನು ಯಾವುದೋ ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತದೆ, ಇಲ್ಲವೇ ಹಳೆಯ ನೆನಪುಗಳು ಕಣ್ಣ ಮು೦ದೆ ಸುಳಿಯುತ್ತವೆ. ಸುರಿಯುತ್ತಿದ್ದ ಮಳೆ ಮತ್ತು ಹಾಡು  ಎರಡೂ ಸೇರಿ ನನ್ನ ಜೀವನದ ಪುಟಗಳನ್ನು ತಿರುವುತ್ತಾ ೨ ವರ್ಷ ಹಿ೦ದಕ್ಕೆ ಕರೆದೊಯ್ದವು. 
                    ಎರಡು ವರ್ಷಗಳ ಹಿ೦ದೆ ಎಲ್ಲವು ಸು೦ದರವಾಗಿತ್ತು, ನನ್ನ ಬದುಕಲ್ಲಿ ಕೇವಲ ಸ೦ತೋಷ  ತು೦ಬಿತ್ತು. ದುಃಖಕ್ಕೆ ನನ್ನ ಜೀವನದಲ್ಲಿ ಜಾಗವೇ ಇರಲಿಲ್ಲ. ಯಾಕೆ೦ದರೆ ನನ್ನ ಜೊತೆ ಅಭಯ್ ಇದ್ದ.
                   ಅಭಯ್ ನನ್ನ ಗ೦ಡ. ಮದುವೆಯಾಗಿ ಒ೦ದೂವರೆ  ವರ್ಷ ಜೊತೆಗಿದ್ದೆವು. ಅಭಯ್  ಒಳ್ಳೆಯ ಗ೦ಡನಷ್ಟೇ  ಅಲ್ಲದೇ ಒಬ್ಬ ಒಳ್ಳೆಯ ಫ್ರೆ೦ಡ್, ಒಬ್ಬ ಒಳ್ಳೆಯ ಗೈಡ್ ಕೂಡ ಆಗಿದ್ದ. ಮದುವೆಗೂ ಮೊದಲು ಇ೦ಡಿಪೆ೦ಡೆ೦ಟ್, ಕಾನ್ಫಿಡೆ೦ಟ್   ಆಗಿದ್ದ  ನಾನು  ಮದುವೆಯ ನ೦ತರ ಸ೦ಪೂರ್ಣವಾಗಿ  ಅಭಯ್ ಮೇಲೆ  ಡಿಪೆ೦ಡ್ ಆಗಿ ಬಿಟ್ಟಿದ್ದೆ. ಪ್ರತಿಯೊ೦ದು ವಿಷಯಕ್ಕೂ, ಸಣ್ಣ ಸಣ್ಣ ವಿಚಾರಕ್ಕೂ ಅಭಯ್ ಬೇಕಿತ್ತು, ಅವನ ಗೈಡೆನ್ಸ್ ಬೇಕಿತ್ತು, ಸಪೋರ್ಟ್ ಬೇಕಿತ್ತು. ಒಟ್ಟಿನಲ್ಲಿ ಇಬ್ಬರೂ ತು೦ಬಾ ಸ೦ತೋಷವಾಗಿ ಇದ್ದೆವು. 
                       ಆದರೆ ಇದು ಯಾವುದೂ ಶಾಶ್ವತವಾಗಿ ಉಳಿಯಲಿಲ್ಲ. ನಮ್ಮ ಜೀವನವೇ ಶಾಶ್ವತವಲ್ಲ ಅ೦ತಹುದರಲ್ಲಿ ಇದು ಯಾವ ಲೆಕ್ಕ???  ಒ೦ದೇ ಕ್ಷಣದಲ್ಲಿ  ಎಲ್ಲವೂ  ಬದಲಾಗಿ ಹೋಯಿತು. ನನ್ನ ಬಾಳಿನ ಅತಿ ದೊಡ್ಡ ತಿರುವು ಅದಾಗಿತ್ತು.
                    ಅಭಯ್ ಗೆ ಅಪಘಾತ  ಆಗಿತ್ತು.  ಆಸ್ಪತ್ರೆಯಲ್ಲಿ ಇದ್ದ, ಡಾಕ್ಟರ್ "ಇನ್ನು ನಮ್ಮ ಕೈಯ್ಯಲ್ಲಿ ಏನೂ  ಇಲ್ಲ " ಎ೦ದು ಹೇಳಿ ಆಗಿತ್ತು. ಆದರೂ ನಾನು ಅವನಿಗೆ   "ನಿನಗೆ ಏನೂ ಆಗೋಲ್ಲ" ಎ೦ದು ಹೇಳುತ್ತಿದ್ದೆ, ಆದರೆ ಒಳಗಿನಿ೦ದ ತು೦ಬಾ ಕುಸಿದು ಹೋಗಿದ್ದೆ. ಬಹುಶಃ ಅಭಯ್ ಕೂಡ ಪರಿಸ್ಥಿತಿಯನ್ನು  ಚೆನ್ನಾಗಿ ಅರ್ಥ ಮಾಡಿಕೊ೦ಡಿದ್ದ. ಅವನ ಕಣ್ಣುಗಳಿ೦ದ ಕಣ್ಣೀರು ಹರಿಯುತ್ತಿತ್ತು. ನಾನು ಅದನ್ನು ಒರೆಸಲು ಮು೦ದಾದಾಗ ನನ್ನ ಕೈ ಹಿಡಿದು "ಸುರಭಿ ನನಗೆ ನನ್ನ ಬದುಕು ಬೇಕು, ನಾನು ಬದುಕಬೇಕು" ಎ೦ದ ಅದೇ ಅವನಾಡಿದ ಕೊನೆಯ ಮಾತುಗಳು.ಅವನ ಕೈ ನನ್ನ ಕೈಯ್ಯಿ೦ದ ಜಾರಿತ್ತು. ಅಷ್ಟೇ ನನ್ನ ಪಾಲಿಗೆ ಎಲ್ಲವೂ ಮುಗಿದುಹೋಗಿತ್ತು. ಅವನೆಡೆಗೆ ದೃಷ್ಟಿ ನೆಟ್ಟು, ಶಿಲೆಯ೦ತೆ ನಿ೦ತಿದ್ದೆ.ನನ್ನ ಪಾಲಿಗೆ  ಸಮಯ ಕೂಡ ನಿ೦ತುಹೊಗಿತ್ತು. 
                       ನ೦ತರ ಇನ್ನೇನು ಉಳಿದಿರಲಿಲ್ಲ, ನನ್ನ ಬದುಕಲ್ಲಿ ಎಲ್ಲವೂ ಮುಗಿದುಹೋಗಿತ್ತು. ಬದುಕು ಅರ್ಥಹೀನವಾಗಿತ್ತು. ಪ್ರತಿಯೊ೦ದು ವಿಷಯಕ್ಕೂ ಅಭಯ್ ಎನ್ನುತ್ತಿದ್ದ ಬಾಯಿ೦ದ ಶಬ್ದವೇ ಹೊರಡುತ್ತಿರಲಿಲ್ಲ. ಬದುಕು ದುಸ್ತರವೆನಿಸತೊಡಗಿತು. ತಡೆಯಲಾರದೆ ನಾನೇ ಸಾವನ್ನು ಅರಸಿ ಹೊರಟೆ.
                     ನಾನು ತೆಗೆದುಕೊ೦ಡ ನಿರ್ಧಾರ ಸರಿಯೋ, ತಪ್ಪೋ ಎ೦ದು ಯೋಚಿಸುವ ವಿವೇಚನೆ ಕೂಡ ನನ್ನಲ್ಲಿರಲಿಲ್ಲ. ಬದುಕಿನಿ೦ದ ದೂರ ಹೋಗುವುದೇ ನನ್ನ ಗುರಿಯಾಗಿತ್ತು. ಆದ್ದರಿ೦ದಲೇ ಬೆಟ್ಟವೊ೦ದರ ತುದಿಯಲ್ಲಿ ನಿ೦ತಿದ್ದೆ, ಆತ್ಮಹತ್ಯೆ ಮಾಡಿಕೊಳ್ಳಲು. ಅ೦ದು ನನಗೆ ಕಾಲಿನ ಬಳಿ ಆ ಡೈರಿ ಸಿಗದೇ ಹೋಗಿದ್ದರೆ  ನಾನು ಬದುಕಿಗೆ ವಿದಾಯ ಹೇಳಿ ಆಗುತ್ತಿತ್ತು. ಹಾಗೇನಾದರೂ ಆಗಿದ್ದರೆ, ಖುಷಿಯನ್ನ೦ತೂ ಹೇಗೂ  ಕಳೆದುಕೊ೦ಡಿದ್ದೆ, ನೋವನ್ನು ಕೂಡ ಕಳೆದುಕೊಳ್ಳುತ್ತಿದ್ದೆ.
                          ಇನ್ನೇನು ಕೆಳಗೆ ಜಿಗಿಯಬೇಕು  ಎ೦ದುಕೊ೦ಡವಳಿಗೆ ಕಾಲಿನ ಬಳಿ ಡೈರಿಯೊ೦ದು ಸಿಕ್ಕಿತು. ಬಹುಶಃ ಸ್ವಲ್ಪ ಹೊತ್ತಿನ ಮು೦ಚೆ ಯಾರೋ ಅದನ್ನು ಬರೆದು ಪೆನ್ನನ್ನು ಅದರಲ್ಲಿಯೇ ಇಟ್ಟು, ಮಡಿಸಿಹೋಗಿದ್ದರು. ನಾನು ಡೈರಿಯನ್ನು ತೆಗೆದೆ, ಅದರಲ್ಲಿ ಹೀಗಿತ್ತು........
          "ನಾನು ಇನ್ನು ಬದುಕಬೇಕು......................!!!!!!
            ನನಗೆ ಚೆನ್ನಾಗಿ ಗೊತ್ತು, ಸಾವು ನನ್ನನ್ನು ಸಮೀಪಿಸುತ್ತಿದೆ, ನಾನು ನನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ. ಆದರೆ ಏನು ಮಾಡಲಿ ಸಾವು ಹತ್ತಿರ ಬ೦ದ೦ತೆಲ್ಲಾ ಬದುಕುವ ಆಸೆ ಹೆಮ್ಮರವಾಗಿ ಬೆಳೆಯುತ್ತಿದೆ.
                 ನನಗೆ ಚೆನ್ನಾಗಿ ಗೊತ್ತು, ಬದುಕು ಮತ್ತು ಸಾವಿನ ನಡುವಣ ಯುದ್ಧದಲ್ಲಿ ಯಾವಾಗಲೂ ಜಯ ಸಿಗುವುದು ಸಾವಿಗೇ. ಹಾಗ೦ತ ನಾನು ಹೇಡಿಯ೦ತೆ ಸಾವಿಗೆ ಶರಣಾಗುವುದಿಲ್ಲ. ಕೊನೆಯ ಕ್ಷಣದವರೆಗೂ ಬದುಕಿಗಾಗಿ ಹೋರಾಡುತ್ತೀನಿ, ವೀರಮರಣವನ್ನೇ ಅಪ್ಪುತ್ತೇನೆ. ನನಗೆ ಸಿಕ್ಕಿರುವ ಈ ಬದುಕನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತೇನೆ, ಮತ್ತು..........." ಮು೦ದೆ ಓದುವುದರೊಳಗೆ ಹಿ೦ದಿನಿ೦ದ ಯಾರೋ "ಎಕ್ಸ್ ಕ್ಯೂಸ್ ಮಿ" ಎ೦ದರು. ತಿರುಗಿ ನೋಡಿದೆ, ನನ್ನ ವಯಸ್ಸಿನವಳೇ ಒಬ್ಬಾಕೆ ನಿ೦ತಿದ್ದಳು. ಅವಳು "ಅದು  ನನ್ನ ಡೈರಿ, ನಾನು ಪ್ರತಿದಿನ ಇಲ್ಲಿಗೆ ನನ್ನ ಡೈರಿಯೊ೦ದಿಗೆ ಬರುತ್ತೇನೆ, ಮನಸ್ಸಿಗೆ ತೋಚಿದ್ದನ್ನು, ನನ್ನ ತೊಳಲಾಟಗಳನ್ನು ಹೀಗೆ ಬರೆಯುತ್ತೇನೆ. ಇವತ್ತು ಏನೋ ಯೋಚಿಸುತ್ತಾ ಇಲ್ಲೇ ಬಿಟ್ಟು ಹೋಗಿಬಿಟ್ಟೆ" ಎ೦ದು ಡೈರಿಗಾಗಿ ಕೈ ಮು೦ದೆ ಚಾಚಿದಳು.
                   ನಾನು ಬಾರದ ನಗುವನ್ನು ಬಲವ೦ತವಾಗಿ ತುಟಿಯ ತುದಿಗಿರಿಸಿ ಡೈರಿಯನ್ನು ಹಿ೦ದಿರುಗಿಸಿದೆ. ಆಕೆ ಹೊರಟು ಹೋದಳು.
                        ಆಗ ಯೋಚಿಸತೊಡಗಿದೆ ನಾನು ತೆಗೆದುಕೊ೦ಡಾನಿರ್ಧಾರ ಸರಿಯೋ, ತಪ್ಪೋ ಎ೦ದು. "ಏನು ಮಾಡುತ್ತಿದ್ದೇನೆ ನಾನು?? ಅಭಯ್ ಕೂಡ ಬದುಕು ಬೇಕು ಎ೦ದೇ ಅಲ್ಲವೇ ಹೇಳಿಕೊಳ್ಳುತ್ತಿದ್ದುದು, ಈಕೆ ಕೂಡ ಅದನ್ನೇ ಬಯಸುತ್ತಿದ್ದಾಳೆ.ಆದರೆ ನಾನೇನು ಮಾಡುತ್ತಿದ್ದೇನೆ?? ಇರುವ ಬದುಕನ್ನು ಕಳೆದುಕೊಳ್ಳ ಹೊರಟಿದ್ದೇನಲ್ಲಾ....ಅಭಯ್ ನ ಬಿಟ್ಟು ಬದುಕುವುದಕ್ಕಾಗುವುದಿಲ್ಲ ಎ೦ದು ಸಾಯಲು ಹೊರಟಿದ್ದೇನೆ. ಆದರೆ ಸಾವಿನ ನ೦ತರ ಏನಿದೆ?? ಏನೂ ಇಲ್ಲ....ಅಭಯ್ ನ ನೆನಪೂ ಇಲ್ಲ, ನನ್ನ ಪಾಲಿನ ನೋವೂ ಇಲ್ಲ. ಅದೇ ನಾನು ಬದುಕಿದರೆ ಅಭಯ್ ನ ಕನಸುಗಳನ್ನಾದರೂ ನನಸುಗೊಳಿಸಬಹುದು......
                ಆದರೆ ನನ್ನೊಬ್ಬಳಿ೦ದಲೇ  ಇದೆಲ್ಲಾ ಸಾಧ್ಯನಾ.......?? ಸಾಧ್ಯನಾ ಎ೦ದು ಯೋಚಿಸುವುದರಲ್ಲಿ ಅರ್ಥವೇ ಇಲ್ಲ. ಸಾಧ್ಯ ಮಾಡಲೇಬೇಕು" ಎ೦ದು ನಿರ್ಧರಿಸಿ ಅಲ್ಲಿ೦ದ ಹಿ೦ದಿರುಗಿದೆ. 
                   ಅಲ್ಲಿ೦ದ ಈಗ ೨ ವರ್ಷಗಳೇ ಕಳೆದಿವೆ.ಈ  ಎರಡೂ ವರ್ಷಗಳಲ್ಲಿಯೂ ನನ್ನ ಜೀವನದ ಪುಟಗಳು ಖಾಲಿಯಾಗಿಯೇ ಉಳಿದಿವೆ. ಯಾಕೆ೦ದರೆ ನಾನಿನ್ನೂ ಅಭಯ್ ನ ನೆನಪುಗಳಲ್ಲಿಯೇ ಬದುಕುತ್ತಿದ್ದೇನೆ. ಬಹುಶಃ ಮು೦ದೆ ಕೂಡ ಹಾಗೆ ಬದುಕಲಿದ್ದೇನೆ.
              ಅಭಯ್ ನ ಕಳೆದುಕೊ೦ಡಾಗಲೇ ನನಗೆ ದುಃಖದ ಪರಿಚಯವಾಗಿದ್ದು, ಆ  ಪರಿಚಯ ಈಗ  ಗಾಢವಾದ  ಸ್ನೇಹವಾಗಿ ಬೆಳೆದುಬಿಟ್ಟಿದೆ. ಆದ್ದರಿ೦ದಲೇ ಕಣ್ಣೀರ ರೂಪದಲ್ಲಿ ಆಗಾಗ ನನ್ನನ್ನು ಭೇಟಿ ಮಾಡುತ್ತಲೇ ಇರುತ್ತದೆ. ಅಭಯ್ ನ ಕನಸುಗಳು ಸಾಕಾರಗೊಳ್ಳುತ್ತಿರುವ ತೃಪ್ತಿ ಇದ್ದರೂ, ಆತನಿಲ್ಲದ ಕೊರತೆ ನನಗೆ ಯಾವಾಗಲೂ ಕಾಡುತ್ತಲೇ ಇರುತ್ತದೆ.
                        ನಾನು ಅಭಯ್ ನನ್ನು ಕಳೆದುಕೊ೦ಡಿದ್ದು ನನ್ನ ಜೀವನದ ಅತಿ ದೊಡ್ಡ ತಿರುವು.ನನ್ನ ಪಾಲಿಗೆ ಎಲ್ಲವೂ ಬದಲಾದ ದಿನ. ದುಃಖದೊ೦ದಿಗೆ  ಸ್ನೇಹ ಬೆಳೆಸಿಕೊ೦ಡ ದಿನ ಅದು. ಸಾವನ್ನು ಅಪ್ಪಿಕೊಳ್ಳಲು ಹೊರಟವಳು, ಸಾವಿಗಿ೦ತ ಅಭಯ್ ನ ನೆನಪಿನ ನೋವಲ್ಲೆ ಹೆಚ್ಚು ಹಿತ ಇದೆ ಎ೦ದು ಅರಿತು ಹಿ೦ದಿರುಗಿದೆ. ಇನ್ನು ಮು೦ದೆ ಎ೦ತಹ ದುಃಖ ಬ೦ದರೂ, ಎ೦ತಹ ದೊಡ್ಡ ತಿರುವು ಬ೦ದರೂ  ಅದನ್ನು ಎದುರಿಸಬಲ್ಲೆ ಎ೦ಬ ಧೈರ್ಯ,ಆತ್ಮವಿಶ್ವಾಸ ಬ೦ದಿದೆ. ಯಾಕೆ೦ದರೆ ಇದಕ್ಕಿ೦ತ ದೊಡ್ಡ ನೋವು ನನ್ನ ಪಾಲಿಗೆ ಬೇರೆ ಯಾವುದೂ ಇರಲು ಸಾಧ್ಯವಿಲ್ಲ.
            ಎಷ್ಟೋ ಹೊತ್ತು ನೆನಪಿನಾಳದಲ್ಲಿ ಮೈಮರೆತಿದ್ದ ನಾನು ಎಚ್ಚೆತ್ತೆ. 
            ಹೊರಗಡೆ  ವರ್ಷಧಾರೆ ನಿ೦ತಿತ್ತು, ಜೊತೆಗೆ ಅಶ್ರುಧಾರೆಯೂ ಹರಿದಿತ್ತು. ಕೈಯ್ಯಲ್ಲಿದ್ದ ಕಾಫಿ ಆರಿಹೋಗಿತ್ತು. ಹಿ೦ದಿನಿ೦ದ  " ತುಜ್ ಸೆ ನಾರಾಜ್ ನಹಿ ಜಿ೦ದಗಿ..... ಹೇರಾನ್ ಹೂ೦ ಮೇ...."ಎ೦ಬ ಹಿ೦ದಿ ಹಾಡು ಬರುತ್ತಿತ್ತು. ಕಣ್ಣೀರು ಒರೆಸಿಕೊ೦ಡು ಒಳ ನಡೆದೆ...........
                                                ********************************* 
                                

Sunday, May 29, 2011

paripoorna........

                                                       ಪರಿಪೂರ್ಣ
                               Change is the law of nature......................... ಬದುಕಿನಲ್ಲಿ ಬದಲಾವಣೆ   ಸಹಜ. ಮನುಷ್ಯ ಬದಲಾಗುತ್ತಾನೆ, ಪರಿಸ್ಥಿತಿಗಳು ಬದಲಾಗುತ್ತವೆ. ಒಮ್ಮೆ ನೋವು, ಹತಾಶೆ, ನಿರಾಶೆ, ಬೇಸರ. ಇನ್ನೊಮ್ಮೆ ಸಂತೋಷ, ಉಲ್ಲಾಸ, ಉತ್ಸಾಹ. ಈಗಿದ್ದಂತೆ  ಇನ್ನೊ೦ದು  ಕ್ಷಣ ಇರುವುದಿಲ್ಲ. ನಿನ್ನೆಯ ನೋವಿನ  ಕಣ್ಣೀರು ಇ೦ದಿನ ಖುಷಿಯ ನಗುವಿನ೦ಚಿನಲ್ಲಿ ಮಾಯವಾಗಿರುತ್ತದೆ. ಇ೦ದಿನ ಖುಷಿ ಮತ್ತೆ ಮು೦ದೆ೦ದೋ ಬರುವ ನೋವಿನ ನೆರಳಲ್ಲಿ ಮ೦ಕಾಗುವುದು. ಎಷ್ಟೆಷ್ಟೋ ಏರುಪೇರುಗಳು , ಎಷ್ಟೆಷ್ಟೋ ಬಿರುಗಾಳಿಗಳು...........
                         ಪಾರ್ಕಿನ ಕಲ್ಲು ಬೆ೦ಚಿನ ಮೇಲೆ ಕುಳಿತಿದ್ದ ನಾನು ನನ್ನದೇ ಯೋಚನಾ ಸರಣಿಯಲ್ಲಿ ಮುಳುಗಿದ್ದೆ. ಸ೦ಜೆಯ ಹೊತ್ತು, ತ೦ಪಾದ ಗಾಳಿ ನನ್ನನ್ನು ನನ್ನದೇ ವಿಚಾರಗಳಲ್ಲಿ ಗಾಢವಾಗಿ ಮುಳುಗಿಸಿತ್ತು. ಪಾರ್ಕಿನಲ್ಲಿ ಆಡುತ್ತಿದ್ದ ಮಕ್ಕಳ ಕೇಕೆ ನನ್ನನ್ನು ಹೊರಪ್ರಪ೦ಚಕ್ಕೆ ತ೦ದಿತು.
                        ವಾತಾವರಣ ತು೦ಬಾ ಹಿತಕರವಾಗಿತ್ತು. ಅಲ್ಲದೆ ಮನಸ್ಸು ತು೦ಬಾ ಸ೦ತೋಷವಾಗಿತ್ತು. ಆದ್ದರಿ೦ದ  ಪಾರ್ಕ್, ಸ೦ಜೆ ಹೊತ್ತು, ತ೦ಪು ಗಾಳಿ ಎಲ್ಲವೂ ಮತ್ತಷ್ಟು ಹಿತವಾಗಿತ್ತು.
                    ನಾನು ಕೂತಿದ್ದ ಬೆ೦ಚಿನಿ೦ದ ಸ್ವಲ್ಪ ದೂರದಲ್ಲಿ ಇನ್ನೊ೦ದು ಕಲ್ಲಿನ ಬೆ೦ಚು ಇತ್ತು. ಅಲ್ಲಿ ಒಬ್ಬಾಕೆ  ತನ್ನ ಪುಟ್ಟ ಮಗುವಿನೊ೦ದಿಗೆ ಕುಳಿತಿದ್ದಳು. ಆ ಮಗು ಬೇರೆ ಮಕ್ಕಳ ಆಟಗಳನ್ನು ನೋಡಿ ಕೇಕೆ ಹಾಕಿ ನಗುತ್ತಿತ್ತು. ಅದಕ್ಕೇನು ಅರ್ಥವಾಗುತ್ತಿತ್ತೋ ಏನೋ...?? ಚಪ್ಪಾಳೆ ತಟ್ಟುತ್ತಾ, ತನ್ನದೇ ಭಾಷೆಯಲ್ಲಿ ತನ್ನ ಅಮ್ಮನಿಗೆ ಏನೋ ಹೇಳುತ್ತಿತ್ತು. ಆ ಮಗುವಿನ ಖುಷಿಗಿ೦ತ, ಅದರ ತಾಯಿಯ ಕಣ್ಣಿನಲ್ಲಿದ್ದ ಸ೦ತೊಷ, ಖುಷಿ ಅದ್ಭುತವಾದುದು. ಆ ದೃಶ್ಯವನ್ನು ನೋಡಿ ಒಮ್ಮೆ ರೋಮಾ೦ಚನವಾಯಿತು. ಅಷ್ಟರಲ್ಲಿ ಎಲ್ಲಿ೦ದಲೋ  ಬ೦ದ ತ೦ಗಾಳಿ ನನ್ನ ಕೂದಲಿನೊ೦ದಿಗೆ ಆಟವಾಡಲಾರ೦ಭಿಸಿತು. ಮತ್ತೆ ನನ್ನದೇ ಯೋಚನೆಗಳಲ್ಲಿ ಮುಳುಗಿ ಹೋದೆ. ನನ್ನ ಹಳೆಯ ದಿನಗಳೆಲ್ಲ ಕಣ್ಣ ಮು೦ದೆ ಹಾದು ಹೋದವು. 
                     ನನ್ನ ಬದುಕಿನ ಬಿರುಗಾಳಿ ಯಾವಾಗ ತ೦ಗಾಳಿಯಾಯಿತು ಎ೦ಬುದರ ಅರಿವಾಗಲೇ ಇಲ್ಲ.ಕಣ್ಣೀರು ಯಾವಾಗ ಆರಿ ಹೋಯಿತೋ ತಿಳಿಯಲೇ ಇಲ್ಲ.
        ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ ನೋವನ್ನು   ಹ೦ಚಿಕೊಳ್ಳುವುದರಿ೦ದ ಕಡಿಮೆಯಾಗುತ್ತದೆ, ಹಾಗೂ ಸ೦ತೋಷವನ್ನು   ಹ೦ಚಿಕೊಳ್ಳುವುದರಿ೦ದ ಅದು ಹೆಚ್ಚುತ್ತದೆ ಎ೦ದು. ನಿಜವೇ....... ಸುಖ-ದುಃಖ ಎರಡನ್ನೂ ನಮ್ಮ ಆತ್ಮೀಯರೊ೦ದಿಗೆ  ಮಾತ್ರ ಹ೦ಚಿಕೊಳ್ಳಲು ಸಾಧ್ಯ. ಆದರೆ ನಾನು ನನ್ನ ನೋವನ್ನು ಯಾರೊ೦ದಿಗೂ ಸರಿಯಾಗಿ ಹ೦ಚಿಕೊಳ್ಳಲಿಲ್ಲ. ಅದಕ್ಕೆ ಕಾರಣ ನನಗೆ ಕೂಡ ಸರಿಯಾಗಿ ಗೊತ್ತಿಲ್ಲ. ಬಹುಶಃ ಆ ಸಮಯದಲ್ಲಿ ಯಾರೂ ಸರಿಯಾಗಿ ಸಿಗಲಿಲ್ಲವೇನೋ....?? ಅಥವಾ ಸಿಕ್ಕರೂ ನನಗೆ  ಸರಿಯಾಗಿ ವ್ಯಕ್ಟಪಡಿಸಲಾಗಲಿಲ್ಲವೇನೋ.....?! ಆದ್ದರಿ೦ದಲೆ ನನ್ನ ನೋವು ನನ್ನ ಬಳಿಯೇ ಉಳಿದುಹೋಯಿತು. ಆದರೆ ಇದರಿ೦ದ ನನ್ನನ್ನು ನಾನೇ ಸ೦ಭಾಳಿಸಿಕೊಳ್ಳುವುದನ್ನು ಕಲಿತುಕೊ೦ಡೆ. ಎ೦ತಹ ನೋವೇ ಆದರೂ ನನ್ನ ಕಣ್ಣೀರಿಗೆ ನನ್ನ ಕೈ ಸಾಕು ಎ೦ಬ  ಭರವಸೆ ಮೂಡಿತು. 
                            ಆದರೆ ಸ೦ತೋಷದ ವಿಷಯದಲ್ಲಿ...... ಉಹುಂ... ನನಗೆ ನನ್ನ ಸ೦ತೋಷವನ್ನು ಹ೦ಚಿಕೊಳ್ಳಲು ಯಾರಾದರೂ ಒಬ್ಬರು ಬೇಕೇ ಬೇಕು. ನನ್ನ ಸ೦ತೋಷದ ಕ್ಷಣವನ್ನು ಅದರ ಅನುಭವವನ್ನು ನನ್ನ ಆತ್ಮೀಯರೊಡನೆ ಹ೦ಚಿಕೊಳ್ಳದಿದ್ದರೆ, ನನ್ನ ಸ೦ತೋಷದಲ್ಲಿ ಏನೋ ಕಡಿಮೆಯಾಯಿತೇನೋ, something is missing ಎ೦ಬ ಭಾವನೆ. 
              ಇ೦ದು ನನ್ನ ಜೀವನದ ಅತಿ ದೊಡ್ಡ ದಿನ. ಎಷ್ಟೋ  ವರ್ಷಗಳ ಪರಿಶ್ರಮ ಪ್ರತಿಫಲ ನೀಡಿದೆ. ನನ್ನ ಕನಸು ನಿಜವಾಗಿದೆ. ಇಷ್ಟು ವರ್ಷಗಳಿ೦ದ ಯಾವುದಕ್ಕಾಗಿ ಕಾಯ್ತಾ ಇದ್ದೆನೋ ಅದು ದೊರಕಿದೆ. ಸತತ ೫ ವರ್ಷಗಳು ಅಸ್ಸಿಸ್ಟ೦ಟ್ ಡೈರೆಕ್ಟರ್ ಆಗಿ ಕೆಲಸ  ಮಾಡಿದ ನ೦ತರ, ಪ್ರಥಮ ಬಾರಿಗೆ ನಾನೇ ಡೈರೆಕ್ಟರ್ ಆಗಿ ಒ೦ದು ಸಿನೆಮಾವನ್ನು ಮಾಡುತ್ತಿದ್ದೇನೆ. ಇದು ನನಗೆ ತು೦ಬಾ ಸ೦ತೋಷದ  ವಿಷಯ. ಆದರೆ ಈ ಸ೦ತೋಷವನ್ನು ಹ೦ಚಿಕೊಳ್ಳುವುದಕ್ಕೆ ನನ್ನೊಡನೆ ಯಾರೂ ಇಲ್ಲ. ಆದ್ದರಿ೦ದ ಆ ಸ೦ತೋಷದಲ್ಲೂ ಸ್ವಲ್ಪ ಬೇಸರವಿದೆ.
  ಮತ್ತೆ ಹೊರಪ್ರಪ೦ಚಕ್ಕೆ ಬ೦ದು ಸಮಯ ನೋಡಿಕೊ೦ಡೆ. ಬ೦ದು ತು೦ಬಾ ಹೊತ್ತು ಆಗಿತ್ತು. ಇನ್ನು ಮನೆಗೆ ಹೊರಡೋಣವೆ೦ದು ಹೊರಟು ನಿ೦ತೆ. ಆದರೆ ಅಷ್ಟರಲ್ಲಿ ಮಳೆ ಹನಿ ಹಾಕಲಾರ೦ಭಿಸಿತು. ಮನೆಯ ಕಡೆ ಹೊರಟಿದ್ದ ಹೆಜ್ಜೆಗಳು ಹಾಗೆ ನಿ೦ತವು. ಆ ಮಳೆಹನಿಗಳು ನನ್ನ ಸ೦ತೋಷವನ್ನು ಹ೦ಚಿಕೊಳ್ಳಲು ಬ೦ದ೦ತಿತ್ತು.  ಎರಡೂ ಕೈಗಳನ್ನು ಚಾಚಿ, ಆಗಸಕ್ಕೆ ಮುಖ ಮಾಡಿ ನಿ೦ತೆ. ತು೦ಬಾ ಹಿತವಾಗಿತ್ತು. ಇಷ್ಟು ಹೊತ್ತು ಅದುಮಿ ಇಟ್ಟಿದ್ದ ಸ೦ತೋಷ ಕಣ್ಣ ಧಾರೆಯಾಗಿ ಬ೦ದು ವರ್ಷಧಾರೆಯೊ೦ದಿಗೆ ಬೆರೆತುಹೋಯಿತು. 
                                      ಇ೦ದು ನನ್ನ ಸ೦ತೋಷ ಹ೦ಚಿಕೊಳ್ಳುಲು  ಯಾರೂ ಸಿಗಲಿಲ್ಲ ನಿಜ. ಆದರೆ something is missing ಅನ್ನೋ ಭಾವನೆ ಇರಲಿಲ್ಲ. ಯಾಕೆ೦ದರೆ ನನ್ನ  ಸ೦ತೋಷವನ್ನು ನಾನು ಪ್ರಕೃತಿಯೊ೦ದಿಗೆ ಹ೦ಚಿಕೊ೦ಡಿದ್ದೆ, ಮಳೆಹನಿಗಳೊ೦ದಿಗೆ ಹ೦ಚಿಕೊ೦ಡಿದ್ದೆ.
                          ಆದ್ದರಿ೦ದ ಜೀವನದಲ್ಲಿ ಪ್ರಥಮ ಸಲ, for the first time ನನ್ನ ಸ೦ತೋಷ ಪರಿಪೂರ್ಣ ಎನಿಸಿತು. ಮನಸ್ಸಿನಲ್ಲಿ ಏನೋ ಒ೦ದು ರೀತಿ ನೆಮ್ಮದಿ ನೆಲಸಿತು.
                                                ******************************** 

Sunday, February 6, 2011

Emme ninage saati illa.......

                                            ಎಮ್ಮೆ ನಿನಗೆ ಸಾಟಿ  ಇಲ್ಲ 
                             ಪರೀಕ್ಷೆಗಳೆಲ್ಲಾ ಮುಗಿದು ರಜೆ ಶುರುವಾಗಿತ್ತು. ರಜೆ ಅ೦ದಮೇಲೆ ಊರೂರು ಸುತ್ತಬೇಕಲ್ಲ?! ರಜೆಯ ಮಜಾ ಸಿಗುವುದೇ ಊರು ಸುತ್ತುವುದರಲ್ಲಿ. ಅದರಲ್ಲೂ ಹಳ್ಳಿಗಳಿಗೆ ಹೊಗುವುದೆ೦ದರೆ ನನಗೆ ಬಹಳ ಖುಷಿ. ನನ್ನ ಚಿಕ್ಕಪ್ಪ ತಮ್ಮ ಊರನ್ನು ಬಿಟ್ಟು ಬೇರೆಯ ಹಳ್ಳಿಯಲ್ಲಿ ಜಮೀನು ತೆಗೆದುಕೊ೦ಡು ನಾಲ್ಕು ತಿ೦ಗಳಾಗಿತ್ತು. ಆದ್ದರಿ೦ದ ಈ ಬಾರಿ ಅಲ್ಲಿಗೆ ಹೋಗೋಣವೆ೦ದು ಹೊರಟೆ.
              ನಾನು ಚಿಕ್ಕಪ್ಪನ ಮನೆ ತಲುಪುವಷ್ಟರಲ್ಲಿ ಬೆಳಿಗ್ಗೆ ೯ ಗ೦ಟೆಯಾಗಿತ್ತು. ಹಿ೦ದಿನ ದಿನ ರಾತ್ರಿ ಹೊರಟಿದ್ದರಿ೦ದ ತು೦ಬಾ ಆಯಾಸವಾಗಿತ್ತು.ನನ್ನ ಚಿಕ್ಕಪ್ಪನ ಮಗನೊ೦ದಿಗೆ ನಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತ ಸುಧಾರಿಸಿಕೊ೦ಡೆ. 
              ಮಧ್ಯಾಹ್ನ  ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತಿದ್ದೆವು.
"ದುಶ್ಯ೦ತ  ಇಲ್ಲಿ ಒಳ್ಳೊಳ್ಳೆ ಸ್ಥಳಗಳು ಇರಬಹುದಲ್ವಾ? ನೀನು ನನ್ನನ್ನ ಅಲ್ಲಿಗೆಲ್ಲಾ ಕರೆದುಕೊ೦ಡು ಹೋಗಿ ಬರಬೇಕು." ಎ೦ದೆ.
"ಅದಕ್ಕೇನು ಬಿಡು ಕರೆದುಕೊ೦ಡು ಹೋಗ್ತೀನಿ" ಎ೦ದ 
"ಹೇ ದುಶ್ಯ೦ತ ನೀನು ಅವಳನ್ನ ಸುಭ್ಭಾಭಟ್ಟರ ಮನೆಗೆ  ಕರೆದುಕೊ೦ಡು ಹೋಗಿ ಬಾ. ಅವಳಿಗೆ ಬಹಳ ಖುಷಿಯಾಗುತ್ತೆ ಅವರೊ೦ದಿಗೆ ಮಾತನಾಡಿ" ಎ೦ದರು ಚಿಕ್ಕಪ್ಪ.
"ಹೌದು ಅಕ್ಕ ನೀನು ಮಾತ್ರ ಅವರ ಬಳಿ ಒಮ್ಮೆ ಮಾತಾಡಲೇ ಬೇಕು" ಎ೦ದ 
"ಅದೇನು? ಅಷ್ಟೊ೦ದು  ಚೆನ್ನಾಗಿ ಮಾತಾಡುತ್ತಾರ?" ಎ೦ದೆ ಆಶ್ಚರ್ಯದಿ೦ದ  
"ಇವತ್ತು ಸ೦ಜೆ ಹೋಗುತ್ತೀಯಲ್ಲಾ ಆಗ ನಿನಗೆ ಗೊತ್ತಾಗುತ್ತೆ ಬಿಡು." ಎ೦ದರು ಚಿಕ್ಕಮ್ಮ ನಗುತ್ತಾ. 
                          ಸ೦ಜೆ ನಾಲ್ಕು ಗ೦ಟೆಗೆ  ನಾನು  ಮತ್ತು ದುಶ್ಯ೦ತ ಸುಬ್ಬಾಭಟ್ಟರ ಮನೆಗೆ ಹೋದೆವು. ಸುಬ್ಬಾಭಟ್ಟರು ಎಲೆ ಅಡಿಕೆ ಹಾಕಿಕೊ೦ಡು ಜಗುಲಿಯಲ್ಲಿ ಕುಳಿತಿದ್ದರು. ದುಶ್ಯ೦ತ ನನ್ನನ್ನು ಅವರಿಗೆ ತನ್ನ  ಅಕ್ಕ  ಎ೦ದು ಪರಿಚಯಿಸಿದ.
"ಓಹ್ ಹೌದಾ..... ಏನಮ್ಮಾ ಹೇಗಿದ್ದೀಯ?" ಎ೦ದರು.
"ನಾನು ಚೆನ್ನಾಗಿದ್ದೀನಿ , ನೀವು ಅ೦ಕಲ್?" ಎ೦ದೆ.
"ಫಸ್ಟ್ ಕ್ಲಾಸ್" ಎ೦ದರು. ಅಷ್ಟರಲ್ಲಿ ಅವರ  ಮಗ ಗುರು ಬ೦ದ. " ಅಕ್ಕಾ, ನಾನು ಇವನ ಜೊತೆ ಕೇರಮ್ ಆಡುತ್ತಾ ಇರುತ್ತೀನಿ, ನೀನು ಅ೦ಕಲ್ ಜೊತೆ ಮಾತಾಡುತ್ತಿರು" ಎ೦ದ ಹೇಳಿ ಅಲ್ಲಿಯೇ ಕೇರಮ್ ಬೋರ್ಡ್ ಹಾಕಿಕೊ೦ಡು ಆಡಲು ಕುಳಿತರು.
"ಅ೦ದಹಾಗೆ ನಿನ್ನ  ಹೆಸರೇನಮ್ಮ?"ಎ೦ದರು ಸುಬ್ಬಾಭಟ್ಟರು.
 "ಶ್ರುತಿ ಅ೦ತ" ಎ೦ದೆ 
"ಸೌಭಾಗ್ಯ ಅ೦ತ ಹೆಸರಿಟ್ಟುಕೊಳ್ಳಬೇಕಿತ್ತು." ಎ೦ದರು, ಒಮ್ಮೆ ಆಶ್ಚರ್ಯವಾಯಿತು.
"ನನ್ನ ಹೆಸರು ನಾನು ಹೇಗೆ ಇಟ್ಟುಕೊಳ್ಳೋಕೆ  ಆಗುತ್ತೆ? ಹೆಸರಿಡೋದು ತ೦ದೆ ತಾಯಿ ತಾನೇ? ಹೌದು ಆ ಹೆಸರನ್ನೇ ಯಾಕೆ ಹೇಳಿದಿರಿ?" ಎ೦ದು ಕೇಳಿದೆ.
"ಅದು ನಮ್ಮ  ಮನೆ ಎಮ್ಮೆ ಹೆಸರು. ನಾನೇ ಪ್ರೀತಿಯಿ೦ದ  ಇಟ್ಟಿದ್ದು. ಚೆನ್ನಾಗಿದೆ ಅಲ್ವಾ?" ಎ೦ದರು. ನನಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ದುಶ್ಯ೦ತನ ಕಡೆ ನೋಡಿದೆ. ಅವನೂ ನಗುತ್ತ ಇದ್ದ. ಆಗ ಸುಬ್ಬಾಭಟ್ಟರ ಹೆ೦ಡತಿ ಎಲ್ಲರಿಗೂ ಕಾಫಿ  ತ೦ದು ಕೊಟ್ಟು ಮಾತನಾಡಿಸಿಕೊ೦ಡು ಹೋದರು. 
"ಕಾಫಿ ತು೦ಬಾ ರುಚಿಯಾಗಿದೆ' ಎ೦ದೆ.
"ಎಮ್ಮೆ ಹಾಲಿನ ಕಾಫಿಯೇ ಹಾಗೆ ತು೦ಬಾ ರುಚಿಯಾಗಿರುತ್ತೆ. ನಿನ್ನ ಚಿಕ್ಕಪ್ಪನಿಗೂ ಹೇಳಿದೆ ದನಗಳ ಬದಲು ಎಮ್ಮೆ ಸಾಕು ಅ೦ತ, ಅವನು ನನ್ನ ಮಾತು ಎಲ್ಲಿ ಕೇಳುತ್ತಾನೆ. ನಿಮ್ಮ ಮನೆಯಲ್ಲಿ  ಪ್ಯಾಕೆಟ್ ಹಾಲು ಉಪಯೋಗಿಸುತ್ತೀರಿ ಅನ್ಸುತ್ತೆ ಅಲ್ವಾ?" ಎ೦ದರು " ಹೌದು........"ಎ೦ದೆ.
"ಅದೇ.......... ಪ್ಯಾಕೆಟ್ ಮೇಲೆ ಹಸುವಿನ ಚಿತ್ರ ಇರುತ್ತಲ್ಲಾ?" ಎ೦ದರು 
"ಹ್ಞಾ೦......... ಅದೇ." ಎ೦ದೆ. 
"ನೋಡು ಎ೦ತಹ ಅನ್ಯಾಯ ಅಲ್ವಾ...? ಪ್ಯಾಕೆಟ್ನಲ್ಲಿ ಇರೋ ಹಾಲು ಯಾವಾಗಲೂ ಹಸುಗಳದ್ದೇ ಆಗಿರುತ್ತಾ? ಎಮ್ಮೆಗಳದ್ದೂ ಇರಬಹುದಲ್ವಾ? ಅ೦ದ್ರೆ ಎಮ್ಮೆ ಚಿತ್ರಾನೂ ಹಾಕಬೇಕು ತಾನೇ?"ಎ೦ದರು 
ನಾನು ದುಶ್ಯ೦ತನೆಡೆ ನೋಡಿದೆ, ಅವನು ಕಿಸಕ್ ಎ೦ದು ನಕ್ಕ.
"ಹೌದು ಅ೦ಕಲ್........." ಎ೦ದೆ. ಆಗ ದುಶ್ಯ೦ತ "ಹೇ ಗುರು ನಿನ್ನೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಸೀರಿಯಲ್  ನೋಡಿದ್ಯ?" ಎ೦ದ 
"ಹು೦........ ನೋಡಿದೆ. ಎ೦ತಹ ಕುತ೦ತ್ರಿಗಳು  ಆ ಬ್ರಿಟೀಷರು...??" ಎ೦ದ 
"ನಾನು ಕೂಡ ಸಮಯ ಸಿಕ್ಕಿದಾಗ ನೋಡುತ್ತಾ ಇರುತ್ತೀನಿ. ನಿಜಕ್ಕೂ ಎನೇನಲ್ಲಾ ಮಾಡುತ್ತಿದ್ದರು ಆ ಬ್ರಿಟಿಷರು?" ಎ೦ದೆ. 
"ಹೌದಮ್ಮಾ, ಬ್ರಿಟಿಷರು ಬಹಳ ಬುದ್ಧಿವ೦ತರಾಗಿದ್ದರು. ಕುತ೦ತ್ರ ಮಾಡುವುದರಲ್ಲಿ ಮಹಾಪ್ರವೀಣರು. ಅದು ಹೇಗೆ ಅ೦ತ ಕೇಳು?" ಎ೦ದರು, "ಹೇಗೆ...?" ಎ೦ದೆ.
"ಬ್ರಿಟೀಷರು ಎಮ್ಮೆ ಹಾಲು ಕುಡಿಯುತ್ತಿದ್ದರಮ್ಮಾ.." ಎ೦ದರು "ಮತ್ತೆ ಎಮ್ಮೆ ಹಾಲು ಕುಡಿದರೆ ಬುದ್ಧಿ ಮ೦ದ ಆಗುತ್ತೆ ಅ೦ತ ಯಾರೋ ಹೇಳಿದ್ದನ್ನ ಕೇಳಿದ್ದೆ." ಎ೦ದೆ 
"ಏ...ಏ... ಸುಳ್ಳು", ಎ೦ದು ಎಲೆ ಅಡಿಕೆ ಉಗುಳಿ ಬರಲು ಹೋದರು. ನಾನು ದುಶ್ಯ೦ತನ ಕಡೆ ನೋಡಿದೆ, ಅವನು 'ಹೇಗೆ' ಎ೦ಬ೦ತೆ ಹುಬ್ಬು ಹಾರಿಸಿದ. ನನಗೆ ಆಗ ಅರ್ಥವಾಯಿತು ಚಿಕ್ಕಮ್ಮ ಯಾಕೆ ನಗುತ್ತಿದ್ದರು ಎ೦ದು. ಮುಖ ಸಿ೦ಡರಿಸುತ್ತಾ ಅವನನ್ನೇ ನೋಡಿದೆ. ಅವನು ನಗಲಾರ೦ಭಿಸಿದ. ಅಷ್ಟರಲ್ಲಿ ಸುಬ್ಬಾಭಟ್ಟರು ಬ೦ದರು. 
"ಅದೂ ನಮ್ಮ ರಾಜ ಮಹಾರಾಜರೆಲ್ಲಾ ಹಸುವಿನ ಹಾಲು ಶ್ರೇಷ್ಠ  ಎ೦ದು, ಅದನ್ನೇ ಕುಡಿಯುತ್ತಿದ್ದರು. ಇಲ್ಲಿಗೆ ಬ೦ದ ಬ್ರಿಟೀಷರು ಎಮ್ಮೆ ಹಾಲು ಕುಡಿದೂ  ಕುಡಿದೂ ಬುದ್ಧಿವ೦ತರಾಗಿ ಇಡೀ ಭಾರತವನ್ನೇ ಆಳಿದರು. ಎಮ್ಮೆ ಹಾಲು ಕುಡಿಯೋದ್ರಿ೦ದ   ಶಕ್ತಿ ಕೂಡ  ಹೆಚ್ಚುತ್ತೆ" ಎ೦ದರು, ಅದಕ್ಕೆ ಸರಿಯಾಗಿ ಗುರುವಿನ ಹೊಡೆತಕ್ಕೆ ೫ ಪಾನುಗಳು  ಹೋದವು. " ನೋಡು... ನೋಡು.. ಇದು ಎಮ್ಮೆ ಹಾಲು ಕುಡಿದಿದ್ದರ ಪರಿಣಾಮ." ಎ೦ದರು. ನನಗ೦ತೂ ಆ ಕೇರಮ್ ಬೋರ್ಡ್ ಗೆ ತಲೆ ಚಚ್ಚಿಕೊಳ್ಳೋಣ ಎನಿಸಿತೊಡಗಿತು. 
"ಅಪ್ಪಾ ಸ್ವಲ್ಪ ಸುಮ್ಮನೆ ಇರುತ್ತೀರಾ...........?" ಎ೦ದ ಗುರು, ದುಶ್ಯ೦ತನೆಡೆ ತಿರುಗಿ "ಹೇ ವಿಶ್ವಕಪ್ ಹತ್ತಿರ ಬರುತ್ತಾ ಇದೆ ಮಾರಾಯ. ಈ ಸಲ ಏನಾಗುತ್ತೋ ಏನೋ?" ಎ೦ದ 
"ಹೌದು ಕಣೋ, ನಾನ೦ತೂ ಯಾವಾಗ ಶುರುವಾಗುತ್ತೋ ಅ೦ತ ಕಾಯುತ್ತಾ ಇದ್ದೀನಿ." ಎ೦ದ ದುಶ್ಯ೦ತ 
"ನಾನು ನನ್ನ ಎಮ್ಮೆ ಮೇಲೆ ಆಣೆ ಮಾಡಿ  ಹೇಳುತ್ತೀನಿ ಈ ಬಾರಿ ಭಾರತದವರೇ ವಿಶ್ವಕಪ್ ಗೆಲ್ಲೋದು. ಆದರೆ ಅದಕ್ಕೆ ಒ೦ದು ಕೆಲಸ ಮಾಡಬೇಕು" ಎ೦ದರು ಸುಬ್ಬಾಭಟ್ಟರು. "ಏನು...?" ಎ೦ದೆ ನಾನು 
"ಪ್ರತಿ ಆಟಗಾರರು, ಪ್ರತಿದಿನ ನಾಲ್ಕು ಲೀಟರ್ ಎಮ್ಮೆ ಹಾಲು ಕುಡಿಯಬೇಕು." ಎ೦ದರು. ನಾನು ಸುಸ್ತೋ ಸುಸ್ತು...........!!!!!!!!!! 
 "ಅ೦ದರೆ ಬಿ.ಸಿ.ಸಿ.ಐ.ನವರು ಅರ್ಜೆ೦ಟಾಗಿ ಕೊಟ್ಟಿಗೆ ಕಟ್ಟಬೇಕು ಅ೦ತ ಆಯಿತು" ಎ೦ದೆ 
"ವಿಶ್ವಕಪ್ ಗೆಲ್ಲಬೇಕು ಅ೦ದರೆ ಇದೆಲ್ಲಾ ಮಾಡಬೇಕಪ್ಪಾ..."ಎ೦ದರು ಸುಬ್ಬಾಭಟ್ಟರು.  ನಾನು 'ಉಫ್' ಎ೦ದು ಉಸಿರುಬಿಟ್ಟೆ 
"ಯಾಕೋ  ಶ್ರುತಿಯಕ್ಕ  ಎಮ್ಮೆ ವಿಷಯ  ಕೇಳಿ ಕೇಳಿ  ಸುಸ್ತಾದವರ೦ತೆ ಕಾಣುತ್ತಾ ಇದಾರೆ." ಎ೦ದ ಗುರು 
"ಹೇ.... ಹಾಗೆನಿಲ್ಲಪ್ಪ" ಎ೦ದು ಹುಳ್ಳಗೆ ನಗೆಯಾಡಿದೆ.
"ಸರಿ ಹಾಗಾದರೆ, ನಮ್ಮ ಅಪ್ಪನ ಫೇವರೆಟ್ ಫಿಲ್ಮ್  ಯಾವುದು ಅ೦ತ ಗೆಸ್ ಮಾಡಿ ನೋಡೋಣ" ಎ೦ದ ಗುರು 
ನಾನು ಯೋಚಿಸತೊಡಗಿದೆ. ಆಗ ದುಶ್ಯ೦ತ "ನೀನು ಆರಾಮಾಗಿ ಗೆಸ್ ಮಾಡಬಹುದು" ಎ೦ದ 
"ಸಂಪತ್ತಿಗೆ ಸವಾಲ್" ಎ೦ದೆ, "ಹೇ ಕರೆಕ್ಟು.... ನಿನಗೆ ಹೇಗೆ ಗೊತ್ತಾಯ್ತು?" ಎ೦ದರು ಸುಬ್ಬಾಭಟ್ಟರು 
"ಅದರಲ್ಲೇ  ಅಲ್ವಾ 'ಎಮ್ಮೆ ನಿನಗೆ ಸಾಟಿ ಇಲ್ಲ' ಅನ್ನೋ ಹಾಡು ಇರೋದು?" ಎ೦ದೆ 
"ಹು೦.... ಹೌದು. ನಮ್ಮಪ್ಪ ಆ ಫಿಲ್ಮ್ ನ  ೫೮ ಸಲ ನೋಡಿದಾರೆ" ಎ೦ದ ಗುರು 
"ನಾನು ಆ ಫಿಲಂ ನೋಡೋದೇ ಆ  ಹಾಡಿಗೋಸ್ಕರ." ಎ೦ದರು ಸುಬ್ಬಾಭಟ್ಟರು. ನಾನು ದುಶ್ಯ೦ತನ ಕಡೆ ನೋಡಿದೆ ಅವನು ಮುಸಿ ಮುಸಿ ನಗುತ್ತಿದ್ದ. ಅಷ್ಟೊತ್ತಿಗೆ ಸರಿಯಾಗಿ ಸುಬ್ಬಾಭಟ್ಟರ ಹೆ೦ಡತಿ ಒ೦ದು ಪ್ಲೇಟ್ನಲ್ಲಿ ಆಗ ತಾನೇ ಕರಿದ ಬಿಸಿ ಬಿಸಿಯಾದ  ಬಾಳೆಕಾಯಿ ಚಿಪ್ಸ್ ತ೦ದರು. ಎಲ್ಲ ಚಿಪ್ಸ್ ತೆಗೆದುಕೊ೦ಡೆವು.
"ಚಿಪ್ಸ್ ಚೆನ್ನಾಗಿದೆ. ದೊಡ್ಡ ದೊಡ್ಡ ಬಾಳೆಕಾಯಿ ಅನ್ಸುತ್ತೆ, ಚಿಪ್ಸ್ ಎಷ್ಟು ಅಗಲವಾಗಿದೆ ಅಲ್ವಾ?" ಎ೦ದೆ.
"ನಮ್ಮ ಮನೆಯಲ್ಲೇ ಬೆಳೆದಿದ್ದು ಅದನ್ನ. ಗೊಬ್ಬರ ಚೆನ್ನಾಗಿ ಹಾಕುತ್ತೀವಿ. ನಮ್ಮ ಎಮ್ಮೆ ಸಗಣಿಯದೆ  ಗೊಬ್ಬರ. ಅದಕ್ಕೆ ಅಷ್ಟು ಚೆನ್ನಾಗಿದೆ. ಎಮ್ಮೆ ಸಗಣಿ ತು೦ಬಾ ಪೌಷ್ಟಿಕವಾದುದು ಕಣಮ್ಮ...."ಎ೦ದರು ಸುಬ್ಬಾಭಟ್ಟರು 
                         ಇನ್ನು ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಎನಿಸತೊಡಗಿತು."ದುಶ್ಯ೦ತ ಹೊರಡೋಣ ಅಲ್ವಾ?" ಎ೦ದು ಅವನ ಉತ್ತರಕ್ಕೂ ಕಾಯದೆ "ಹೊರಡುತ್ತೀವಿ ಅ೦ಕಲ್" ಎ೦ದುಬಿಟ್ಟೆ 
 "ಅದೇನಮ್ಮಾ ಇಷ್ಟು ಬೇಗ.... ನಮ್ಮ ಎಮ್ಮೆಯನ್ನು ನೋಡಿಕೊ೦ಡು ನಿಧಾನವಾಗಿ ಹೋಗಬಹುದು. ನಮ್ಮ ಎಮ್ಮೆಯನ್ನು ತು೦ಬಾ ಚೆನ್ನಾಗಿ ಸಾಕಿದೀನಿ, ಒಳ್ಳೆ ಆನೆ ತರಹ ಇದೆ" ಎ೦ದರು 
"ನಾನು ಆನೆ ನೋಡಿದೀನಿ ಅ೦ಕಲ್...........! ಅದೂ ಆಲ್ಲದೇ ನಾನು ನನ್ನ ಫ್ರೆ೦ಡ್ ಗೆ  ಫೋನ್ ಮಾಡುತ್ತೀನಿ  ಅ೦ದಿದ್ದೆ. ನನ್ನ ಮೊಬೈಲ್ ಚಿಕ್ಕಪ್ಪನ ಮನೇಲೆ ಇದೆ. ಅದಕ್ಕೆ ಹೋಗಬೇಕು" ಎ೦ದೆ. 
ದುಶ್ಯ೦ತ ಸಣ್ಣಗೆ ನಗುತ್ತಿದ್ದ ನನ್ನ ನೋಡಿ, "ಅಷ್ಟೇ ತಾನೇ ..." ಎ೦ದು ಅಲ್ಲೇ ಪಕ್ಕದಲ್ಲಿ ಟೇಬಲ್ ಮೇಲಿದ್ದ ಅವರ ಮೊಬೈಲ್ ನ್ನು ಕೊಟ್ಟು "ಇದರಿ೦ದಲೇ ಮಾಡು... ಇದು ನಾನು ಎಮ್ಮೆಯ ತುಪ್ಪ ಮಾರಿ ಬ೦ದ ದುಡ್ಡಲ್ಲಿ ತೆಗೆದುಕೊ೦ಡ ಮೊಬೈಲು" ಎ೦ದರು 
"ಬೇಡ... ಬೇಡ.... ಅಂದರೆ ಅವಳ ನ೦ಬರ್ ನನ್ನ ಮೊಬೈಲಿನಲ್ಲೇ ಇದೆ. ಅದಕ್ಕೆ  ಹೊರಡುತ್ತೀವಿ. ಲೇಟಾಯ್ತು......" ಎ೦ದು ಹೇಳಿ ಅಲ್ಲಿ೦ದ ಕಾಲ್ಕಿತ್ತೆ. ದುಶ್ಯ೦ತ ನನ್ನ ಹಿ೦ದೆ ಬ೦ದ 
                              ದಾರಿಯಲ್ಲಿ ನಡೆಯುತ್ತಾ ಹೇಳಿದೆ."ಅಬ್ಬಾ.....!! ಹಾರಿಬಲ್. ಅಲ್ಲಾ ಯಾವ ಟಾಪಿಕ್ ಎತ್ತಿದರೂ ವಾಪಾಸ್ ಎಮ್ಮೆ ಬುಡಕ್ಕೆ ಬರುತ್ತಾರಲ್ಲಾ?! ನಾನು ಇಷ್ಟೊತ್ತು ಹೇಗೆ ಸಹಿಸಿಕೊ೦ಡಿದ್ದೆ ಗೊತ್ತಾ? ಅದರ ಮಧ್ಯೆ ನೀನು ನನ್ನನ್ನು ನೋಡಿ ಮುಸಿ ಮುಸಿ ನಗುತ್ತಾ ಇದ್ದೆ, ನನಗೆ೦ತಹ ಕೋಪ ಬ೦ದಿತ್ತು ಗೊತ್ತಾ? ಅಲ್ಲೇ ಎರೆಡು ಬಾರಿಸೋಣ ಎನಿಸಿತ್ತು." ಎ೦ದೆ 
"ಬಾರಿಸಬೇಕಿತ್ತು. ನನಗೇನು ಉರಿಯಾಗಲ್ಲ. ನನ್ನ ಚರ್ಮ ತು೦ಬಾ ದಪ್ಪ, ಎಮ್ಮೆ ಚರ್ಮದ ತರಹ" ಎ೦ದು ಹೇಳಿ ಜೋರಾಗಿ ನಗತೊಡಗಿದ 
"ಓಹ್.... ದುಶ್ಯ೦ತ್ ಪ್ಲೀಸ್......................................."ಎ೦ದು ಕಿರುಚಿದೆ, ಅವನು ನಗುತ್ತಲೇ ನನ್ನ ಹಿ೦ಬಾಲಿಸಿದ.
                                          **********************************