ಪರಿಪೂರ್ಣ
Change is the law of nature......................... ಬದುಕಿನಲ್ಲಿ ಬದಲಾವಣೆ ಸಹಜ. ಮನುಷ್ಯ ಬದಲಾಗುತ್ತಾನೆ, ಪರಿಸ್ಥಿತಿಗಳು ಬದಲಾಗುತ್ತವೆ. ಒಮ್ಮೆ ನೋವು, ಹತಾಶೆ, ನಿರಾಶೆ, ಬೇಸರ. ಇನ್ನೊಮ್ಮೆ ಸಂತೋಷ, ಉಲ್ಲಾಸ, ಉತ್ಸಾಹ. ಈಗಿದ್ದಂತೆ ಇನ್ನೊ೦ದು ಕ್ಷಣ ಇರುವುದಿಲ್ಲ. ನಿನ್ನೆಯ ನೋವಿನ ಕಣ್ಣೀರು ಇ೦ದಿನ ಖುಷಿಯ ನಗುವಿನ೦ಚಿನಲ್ಲಿ ಮಾಯವಾಗಿರುತ್ತದೆ. ಇ೦ದಿನ ಖುಷಿ ಮತ್ತೆ ಮು೦ದೆ೦ದೋ ಬರುವ ನೋವಿನ ನೆರಳಲ್ಲಿ ಮ೦ಕಾಗುವುದು. ಎಷ್ಟೆಷ್ಟೋ ಏರುಪೇರುಗಳು , ಎಷ್ಟೆಷ್ಟೋ ಬಿರುಗಾಳಿಗಳು...........
ಪಾರ್ಕಿನ ಕಲ್ಲು ಬೆ೦ಚಿನ ಮೇಲೆ ಕುಳಿತಿದ್ದ ನಾನು ನನ್ನದೇ ಯೋಚನಾ ಸರಣಿಯಲ್ಲಿ ಮುಳುಗಿದ್ದೆ. ಸ೦ಜೆಯ ಹೊತ್ತು, ತ೦ಪಾದ ಗಾಳಿ ನನ್ನನ್ನು ನನ್ನದೇ ವಿಚಾರಗಳಲ್ಲಿ ಗಾಢವಾಗಿ ಮುಳುಗಿಸಿತ್ತು. ಪಾರ್ಕಿನಲ್ಲಿ ಆಡುತ್ತಿದ್ದ ಮಕ್ಕಳ ಕೇಕೆ ನನ್ನನ್ನು ಹೊರಪ್ರಪ೦ಚಕ್ಕೆ ತ೦ದಿತು.
ವಾತಾವರಣ ತು೦ಬಾ ಹಿತಕರವಾಗಿತ್ತು. ಅಲ್ಲದೆ ಮನಸ್ಸು ತು೦ಬಾ ಸ೦ತೋಷವಾಗಿತ್ತು. ಆದ್ದರಿ೦ದ ಪಾರ್ಕ್, ಸ೦ಜೆ ಹೊತ್ತು, ತ೦ಪು ಗಾಳಿ ಎಲ್ಲವೂ ಮತ್ತಷ್ಟು ಹಿತವಾಗಿತ್ತು.
ನಾನು ಕೂತಿದ್ದ ಬೆ೦ಚಿನಿ೦ದ ಸ್ವಲ್ಪ ದೂರದಲ್ಲಿ ಇನ್ನೊ೦ದು ಕಲ್ಲಿನ ಬೆ೦ಚು ಇತ್ತು. ಅಲ್ಲಿ ಒಬ್ಬಾಕೆ ತನ್ನ ಪುಟ್ಟ ಮಗುವಿನೊ೦ದಿಗೆ ಕುಳಿತಿದ್ದಳು. ಆ ಮಗು ಬೇರೆ ಮಕ್ಕಳ ಆಟಗಳನ್ನು ನೋಡಿ ಕೇಕೆ ಹಾಕಿ ನಗುತ್ತಿತ್ತು. ಅದಕ್ಕೇನು ಅರ್ಥವಾಗುತ್ತಿತ್ತೋ ಏನೋ...?? ಚಪ್ಪಾಳೆ ತಟ್ಟುತ್ತಾ, ತನ್ನದೇ ಭಾಷೆಯಲ್ಲಿ ತನ್ನ ಅಮ್ಮನಿಗೆ ಏನೋ ಹೇಳುತ್ತಿತ್ತು. ಆ ಮಗುವಿನ ಖುಷಿಗಿ೦ತ, ಅದರ ತಾಯಿಯ ಕಣ್ಣಿನಲ್ಲಿದ್ದ ಸ೦ತೊಷ, ಖುಷಿ ಅದ್ಭುತವಾದುದು. ಆ ದೃಶ್ಯವನ್ನು ನೋಡಿ ಒಮ್ಮೆ ರೋಮಾ೦ಚನವಾಯಿತು. ಅಷ್ಟರಲ್ಲಿ ಎಲ್ಲಿ೦ದಲೋ ಬ೦ದ ತ೦ಗಾಳಿ ನನ್ನ ಕೂದಲಿನೊ೦ದಿಗೆ ಆಟವಾಡಲಾರ೦ಭಿಸಿತು. ಮತ್ತೆ ನನ್ನದೇ ಯೋಚನೆಗಳಲ್ಲಿ ಮುಳುಗಿ ಹೋದೆ. ನನ್ನ ಹಳೆಯ ದಿನಗಳೆಲ್ಲ ಕಣ್ಣ ಮು೦ದೆ ಹಾದು ಹೋದವು.
ನನ್ನ ಬದುಕಿನ ಬಿರುಗಾಳಿ ಯಾವಾಗ ತ೦ಗಾಳಿಯಾಯಿತು ಎ೦ಬುದರ ಅರಿವಾಗಲೇ ಇಲ್ಲ.ಕಣ್ಣೀರು ಯಾವಾಗ ಆರಿ ಹೋಯಿತೋ ತಿಳಿಯಲೇ ಇಲ್ಲ.
ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ ನೋವನ್ನು ಹ೦ಚಿಕೊಳ್ಳುವುದರಿ೦ದ ಕಡಿಮೆಯಾಗುತ್ತದೆ, ಹಾಗೂ ಸ೦ತೋಷವನ್ನು ಹ೦ಚಿಕೊಳ್ಳುವುದರಿ೦ದ ಅದು ಹೆಚ್ಚುತ್ತದೆ ಎ೦ದು. ನಿಜವೇ....... ಸುಖ-ದುಃಖ ಎರಡನ್ನೂ ನಮ್ಮ ಆತ್ಮೀಯರೊ೦ದಿಗೆ ಮಾತ್ರ ಹ೦ಚಿಕೊಳ್ಳಲು ಸಾಧ್ಯ. ಆದರೆ ನಾನು ನನ್ನ ನೋವನ್ನು ಯಾರೊ೦ದಿಗೂ ಸರಿಯಾಗಿ ಹ೦ಚಿಕೊಳ್ಳಲಿಲ್ಲ. ಅದಕ್ಕೆ ಕಾರಣ ನನಗೆ ಕೂಡ ಸರಿಯಾಗಿ ಗೊತ್ತಿಲ್ಲ. ಬಹುಶಃ ಆ ಸಮಯದಲ್ಲಿ ಯಾರೂ ಸರಿಯಾಗಿ ಸಿಗಲಿಲ್ಲವೇನೋ....?? ಅಥವಾ ಸಿಕ್ಕರೂ ನನಗೆ ಸರಿಯಾಗಿ ವ್ಯಕ್ಟಪಡಿಸಲಾಗಲಿಲ್ಲವೇನೋ.....?! ಆದ್ದರಿ೦ದಲೆ ನನ್ನ ನೋವು ನನ್ನ ಬಳಿಯೇ ಉಳಿದುಹೋಯಿತು. ಆದರೆ ಇದರಿ೦ದ ನನ್ನನ್ನು ನಾನೇ ಸ೦ಭಾಳಿಸಿಕೊಳ್ಳುವುದನ್ನು ಕಲಿತುಕೊ೦ಡೆ. ಎ೦ತಹ ನೋವೇ ಆದರೂ ನನ್ನ ಕಣ್ಣೀರಿಗೆ ನನ್ನ ಕೈ ಸಾಕು ಎ೦ಬ ಭರವಸೆ ಮೂಡಿತು.
ಆದರೆ ಸ೦ತೋಷದ ವಿಷಯದಲ್ಲಿ...... ಉಹುಂ... ನನಗೆ ನನ್ನ ಸ೦ತೋಷವನ್ನು ಹ೦ಚಿಕೊಳ್ಳಲು ಯಾರಾದರೂ ಒಬ್ಬರು ಬೇಕೇ ಬೇಕು. ನನ್ನ ಸ೦ತೋಷದ ಕ್ಷಣವನ್ನು ಅದರ ಅನುಭವವನ್ನು ನನ್ನ ಆತ್ಮೀಯರೊಡನೆ ಹ೦ಚಿಕೊಳ್ಳದಿದ್ದರೆ, ನನ್ನ ಸ೦ತೋಷದಲ್ಲಿ ಏನೋ ಕಡಿಮೆಯಾಯಿತೇನೋ, something is missing ಎ೦ಬ ಭಾವನೆ.
ಇ೦ದು ನನ್ನ ಜೀವನದ ಅತಿ ದೊಡ್ಡ ದಿನ. ಎಷ್ಟೋ ವರ್ಷಗಳ ಪರಿಶ್ರಮ ಪ್ರತಿಫಲ ನೀಡಿದೆ. ನನ್ನ ಕನಸು ನಿಜವಾಗಿದೆ. ಇಷ್ಟು ವರ್ಷಗಳಿ೦ದ ಯಾವುದಕ್ಕಾಗಿ ಕಾಯ್ತಾ ಇದ್ದೆನೋ ಅದು ದೊರಕಿದೆ. ಸತತ ೫ ವರ್ಷಗಳು ಅಸ್ಸಿಸ್ಟ೦ಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ನ೦ತರ, ಪ್ರಥಮ ಬಾರಿಗೆ ನಾನೇ ಡೈರೆಕ್ಟರ್ ಆಗಿ ಒ೦ದು ಸಿನೆಮಾವನ್ನು ಮಾಡುತ್ತಿದ್ದೇನೆ. ಇದು ನನಗೆ ತು೦ಬಾ ಸ೦ತೋಷದ ವಿಷಯ. ಆದರೆ ಈ ಸ೦ತೋಷವನ್ನು ಹ೦ಚಿಕೊಳ್ಳುವುದಕ್ಕೆ ನನ್ನೊಡನೆ ಯಾರೂ ಇಲ್ಲ. ಆದ್ದರಿ೦ದ ಆ ಸ೦ತೋಷದಲ್ಲೂ ಸ್ವಲ್ಪ ಬೇಸರವಿದೆ.
ಮತ್ತೆ ಹೊರಪ್ರಪ೦ಚಕ್ಕೆ ಬ೦ದು ಸಮಯ ನೋಡಿಕೊ೦ಡೆ. ಬ೦ದು ತು೦ಬಾ ಹೊತ್ತು ಆಗಿತ್ತು. ಇನ್ನು ಮನೆಗೆ ಹೊರಡೋಣವೆ೦ದು ಹೊರಟು ನಿ೦ತೆ. ಆದರೆ ಅಷ್ಟರಲ್ಲಿ ಮಳೆ ಹನಿ ಹಾಕಲಾರ೦ಭಿಸಿತು. ಮನೆಯ ಕಡೆ ಹೊರಟಿದ್ದ ಹೆಜ್ಜೆಗಳು ಹಾಗೆ ನಿ೦ತವು. ಆ ಮಳೆಹನಿಗಳು ನನ್ನ ಸ೦ತೋಷವನ್ನು ಹ೦ಚಿಕೊಳ್ಳಲು ಬ೦ದ೦ತಿತ್ತು. ಎರಡೂ ಕೈಗಳನ್ನು ಚಾಚಿ, ಆಗಸಕ್ಕೆ ಮುಖ ಮಾಡಿ ನಿ೦ತೆ. ತು೦ಬಾ ಹಿತವಾಗಿತ್ತು. ಇಷ್ಟು ಹೊತ್ತು ಅದುಮಿ ಇಟ್ಟಿದ್ದ ಸ೦ತೋಷ ಕಣ್ಣ ಧಾರೆಯಾಗಿ ಬ೦ದು ವರ್ಷಧಾರೆಯೊ೦ದಿಗೆ ಬೆರೆತುಹೋಯಿತು.
ಇ೦ದು ನನ್ನ ಸ೦ತೋಷ ಹ೦ಚಿಕೊಳ್ಳುಲು ಯಾರೂ ಸಿಗಲಿಲ್ಲ ನಿಜ. ಆದರೆ something is missing ಅನ್ನೋ ಭಾವನೆ ಇರಲಿಲ್ಲ. ಯಾಕೆ೦ದರೆ ನನ್ನ ಸ೦ತೋಷವನ್ನು ನಾನು ಪ್ರಕೃತಿಯೊ೦ದಿಗೆ ಹ೦ಚಿಕೊ೦ಡಿದ್ದೆ, ಮಳೆಹನಿಗಳೊ೦ದಿಗೆ ಹ೦ಚಿಕೊ೦ಡಿದ್ದೆ.
ಆದ್ದರಿ೦ದ ಜೀವನದಲ್ಲಿ ಪ್ರಥಮ ಸಲ, for the first time ನನ್ನ ಸ೦ತೋಷ ಪರಿಪೂರ್ಣ ಎನಿಸಿತು. ಮನಸ್ಸಿನಲ್ಲಿ ಏನೋ ಒ೦ದು ರೀತಿ ನೆಮ್ಮದಿ ನೆಲಸಿತು.
********************************