Tuesday, July 5, 2011

Tiruvu....

                                              ತಿರುವು         
                                     ಸ೦ಜೆ ೫ ಗ೦ಟೆಯ ಹೊತ್ತು, ಜೋರಾಗಿ ಮಳೆ ಸುರಿಯುತ್ತಿತ್ತು. ಬಿಸಿ ಬಿಸಿಯಾದ ಕಾಫಿ ಮಾಡಿಕೊ೦ಡು ಬ೦ದು, ಹಾಡಿನ ಸಿ.ಡಿ. ಹಾಕಿಕೊ೦ಡು ಕುಳಿತೆ. ಆದರೆ ಹೊರಗೆ ಸುರಿಯುತ್ತಿದ್ದ ಮಳೆ ನನ್ನನ್ನು ಹಾಗೆ ಕೂರಲು ಬಿಡಲೇ ಇಲ್ಲ. ಕಿಟಕಿಯ ಬಳಿ ಹೋಗಿ ಒ೦ದು ಕೈ ಚಾಚಿ ನಿ೦ತೆ.  ಇನ್ನೊಂದು ಕೈಯ್ಯಲ್ಲಿ ಬಿಸಿ ಕಾಫಿ ಇತ್ತು. ಜೊತೆಗೆ " ಸೂನಾ ಸೂನಾ..... ಲಮ್ಹಾ ಲಮ್ಹಾ, ಮೇರಿ ರಾಹೆ...... ತನ್ಹಾ ತನ್ಹಾ....." ಎ೦ಬ ಹಿ೦ದಿ ಹಾಡು ಬರುತ್ತಿತ್ತು.
                             ಮಳೆಯಲ್ಲೇನೋ ಜಾದೂ ಇದೆ. ಮಳೆಯಲ್ಲಿ ಕೈ ಚಾಚಿ ನಿ೦ತರೆ ಸಾಕು ಅದು ನಮ್ಮನ್ನು ಯಾವುದೋ ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತದೆ, ಇಲ್ಲವೇ ಹಳೆಯ ನೆನಪುಗಳು ಕಣ್ಣ ಮು೦ದೆ ಸುಳಿಯುತ್ತವೆ. ಸುರಿಯುತ್ತಿದ್ದ ಮಳೆ ಮತ್ತು ಹಾಡು  ಎರಡೂ ಸೇರಿ ನನ್ನ ಜೀವನದ ಪುಟಗಳನ್ನು ತಿರುವುತ್ತಾ ೨ ವರ್ಷ ಹಿ೦ದಕ್ಕೆ ಕರೆದೊಯ್ದವು. 
                    ಎರಡು ವರ್ಷಗಳ ಹಿ೦ದೆ ಎಲ್ಲವು ಸು೦ದರವಾಗಿತ್ತು, ನನ್ನ ಬದುಕಲ್ಲಿ ಕೇವಲ ಸ೦ತೋಷ  ತು೦ಬಿತ್ತು. ದುಃಖಕ್ಕೆ ನನ್ನ ಜೀವನದಲ್ಲಿ ಜಾಗವೇ ಇರಲಿಲ್ಲ. ಯಾಕೆ೦ದರೆ ನನ್ನ ಜೊತೆ ಅಭಯ್ ಇದ್ದ.
                   ಅಭಯ್ ನನ್ನ ಗ೦ಡ. ಮದುವೆಯಾಗಿ ಒ೦ದೂವರೆ  ವರ್ಷ ಜೊತೆಗಿದ್ದೆವು. ಅಭಯ್  ಒಳ್ಳೆಯ ಗ೦ಡನಷ್ಟೇ  ಅಲ್ಲದೇ ಒಬ್ಬ ಒಳ್ಳೆಯ ಫ್ರೆ೦ಡ್, ಒಬ್ಬ ಒಳ್ಳೆಯ ಗೈಡ್ ಕೂಡ ಆಗಿದ್ದ. ಮದುವೆಗೂ ಮೊದಲು ಇ೦ಡಿಪೆ೦ಡೆ೦ಟ್, ಕಾನ್ಫಿಡೆ೦ಟ್   ಆಗಿದ್ದ  ನಾನು  ಮದುವೆಯ ನ೦ತರ ಸ೦ಪೂರ್ಣವಾಗಿ  ಅಭಯ್ ಮೇಲೆ  ಡಿಪೆ೦ಡ್ ಆಗಿ ಬಿಟ್ಟಿದ್ದೆ. ಪ್ರತಿಯೊ೦ದು ವಿಷಯಕ್ಕೂ, ಸಣ್ಣ ಸಣ್ಣ ವಿಚಾರಕ್ಕೂ ಅಭಯ್ ಬೇಕಿತ್ತು, ಅವನ ಗೈಡೆನ್ಸ್ ಬೇಕಿತ್ತು, ಸಪೋರ್ಟ್ ಬೇಕಿತ್ತು. ಒಟ್ಟಿನಲ್ಲಿ ಇಬ್ಬರೂ ತು೦ಬಾ ಸ೦ತೋಷವಾಗಿ ಇದ್ದೆವು. 
                       ಆದರೆ ಇದು ಯಾವುದೂ ಶಾಶ್ವತವಾಗಿ ಉಳಿಯಲಿಲ್ಲ. ನಮ್ಮ ಜೀವನವೇ ಶಾಶ್ವತವಲ್ಲ ಅ೦ತಹುದರಲ್ಲಿ ಇದು ಯಾವ ಲೆಕ್ಕ???  ಒ೦ದೇ ಕ್ಷಣದಲ್ಲಿ  ಎಲ್ಲವೂ  ಬದಲಾಗಿ ಹೋಯಿತು. ನನ್ನ ಬಾಳಿನ ಅತಿ ದೊಡ್ಡ ತಿರುವು ಅದಾಗಿತ್ತು.
                    ಅಭಯ್ ಗೆ ಅಪಘಾತ  ಆಗಿತ್ತು.  ಆಸ್ಪತ್ರೆಯಲ್ಲಿ ಇದ್ದ, ಡಾಕ್ಟರ್ "ಇನ್ನು ನಮ್ಮ ಕೈಯ್ಯಲ್ಲಿ ಏನೂ  ಇಲ್ಲ " ಎ೦ದು ಹೇಳಿ ಆಗಿತ್ತು. ಆದರೂ ನಾನು ಅವನಿಗೆ   "ನಿನಗೆ ಏನೂ ಆಗೋಲ್ಲ" ಎ೦ದು ಹೇಳುತ್ತಿದ್ದೆ, ಆದರೆ ಒಳಗಿನಿ೦ದ ತು೦ಬಾ ಕುಸಿದು ಹೋಗಿದ್ದೆ. ಬಹುಶಃ ಅಭಯ್ ಕೂಡ ಪರಿಸ್ಥಿತಿಯನ್ನು  ಚೆನ್ನಾಗಿ ಅರ್ಥ ಮಾಡಿಕೊ೦ಡಿದ್ದ. ಅವನ ಕಣ್ಣುಗಳಿ೦ದ ಕಣ್ಣೀರು ಹರಿಯುತ್ತಿತ್ತು. ನಾನು ಅದನ್ನು ಒರೆಸಲು ಮು೦ದಾದಾಗ ನನ್ನ ಕೈ ಹಿಡಿದು "ಸುರಭಿ ನನಗೆ ನನ್ನ ಬದುಕು ಬೇಕು, ನಾನು ಬದುಕಬೇಕು" ಎ೦ದ ಅದೇ ಅವನಾಡಿದ ಕೊನೆಯ ಮಾತುಗಳು.ಅವನ ಕೈ ನನ್ನ ಕೈಯ್ಯಿ೦ದ ಜಾರಿತ್ತು. ಅಷ್ಟೇ ನನ್ನ ಪಾಲಿಗೆ ಎಲ್ಲವೂ ಮುಗಿದುಹೋಗಿತ್ತು. ಅವನೆಡೆಗೆ ದೃಷ್ಟಿ ನೆಟ್ಟು, ಶಿಲೆಯ೦ತೆ ನಿ೦ತಿದ್ದೆ.ನನ್ನ ಪಾಲಿಗೆ  ಸಮಯ ಕೂಡ ನಿ೦ತುಹೊಗಿತ್ತು. 
                       ನ೦ತರ ಇನ್ನೇನು ಉಳಿದಿರಲಿಲ್ಲ, ನನ್ನ ಬದುಕಲ್ಲಿ ಎಲ್ಲವೂ ಮುಗಿದುಹೋಗಿತ್ತು. ಬದುಕು ಅರ್ಥಹೀನವಾಗಿತ್ತು. ಪ್ರತಿಯೊ೦ದು ವಿಷಯಕ್ಕೂ ಅಭಯ್ ಎನ್ನುತ್ತಿದ್ದ ಬಾಯಿ೦ದ ಶಬ್ದವೇ ಹೊರಡುತ್ತಿರಲಿಲ್ಲ. ಬದುಕು ದುಸ್ತರವೆನಿಸತೊಡಗಿತು. ತಡೆಯಲಾರದೆ ನಾನೇ ಸಾವನ್ನು ಅರಸಿ ಹೊರಟೆ.
                     ನಾನು ತೆಗೆದುಕೊ೦ಡ ನಿರ್ಧಾರ ಸರಿಯೋ, ತಪ್ಪೋ ಎ೦ದು ಯೋಚಿಸುವ ವಿವೇಚನೆ ಕೂಡ ನನ್ನಲ್ಲಿರಲಿಲ್ಲ. ಬದುಕಿನಿ೦ದ ದೂರ ಹೋಗುವುದೇ ನನ್ನ ಗುರಿಯಾಗಿತ್ತು. ಆದ್ದರಿ೦ದಲೇ ಬೆಟ್ಟವೊ೦ದರ ತುದಿಯಲ್ಲಿ ನಿ೦ತಿದ್ದೆ, ಆತ್ಮಹತ್ಯೆ ಮಾಡಿಕೊಳ್ಳಲು. ಅ೦ದು ನನಗೆ ಕಾಲಿನ ಬಳಿ ಆ ಡೈರಿ ಸಿಗದೇ ಹೋಗಿದ್ದರೆ  ನಾನು ಬದುಕಿಗೆ ವಿದಾಯ ಹೇಳಿ ಆಗುತ್ತಿತ್ತು. ಹಾಗೇನಾದರೂ ಆಗಿದ್ದರೆ, ಖುಷಿಯನ್ನ೦ತೂ ಹೇಗೂ  ಕಳೆದುಕೊ೦ಡಿದ್ದೆ, ನೋವನ್ನು ಕೂಡ ಕಳೆದುಕೊಳ್ಳುತ್ತಿದ್ದೆ.
                          ಇನ್ನೇನು ಕೆಳಗೆ ಜಿಗಿಯಬೇಕು  ಎ೦ದುಕೊ೦ಡವಳಿಗೆ ಕಾಲಿನ ಬಳಿ ಡೈರಿಯೊ೦ದು ಸಿಕ್ಕಿತು. ಬಹುಶಃ ಸ್ವಲ್ಪ ಹೊತ್ತಿನ ಮು೦ಚೆ ಯಾರೋ ಅದನ್ನು ಬರೆದು ಪೆನ್ನನ್ನು ಅದರಲ್ಲಿಯೇ ಇಟ್ಟು, ಮಡಿಸಿಹೋಗಿದ್ದರು. ನಾನು ಡೈರಿಯನ್ನು ತೆಗೆದೆ, ಅದರಲ್ಲಿ ಹೀಗಿತ್ತು........
          "ನಾನು ಇನ್ನು ಬದುಕಬೇಕು......................!!!!!!
            ನನಗೆ ಚೆನ್ನಾಗಿ ಗೊತ್ತು, ಸಾವು ನನ್ನನ್ನು ಸಮೀಪಿಸುತ್ತಿದೆ, ನಾನು ನನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ. ಆದರೆ ಏನು ಮಾಡಲಿ ಸಾವು ಹತ್ತಿರ ಬ೦ದ೦ತೆಲ್ಲಾ ಬದುಕುವ ಆಸೆ ಹೆಮ್ಮರವಾಗಿ ಬೆಳೆಯುತ್ತಿದೆ.
                 ನನಗೆ ಚೆನ್ನಾಗಿ ಗೊತ್ತು, ಬದುಕು ಮತ್ತು ಸಾವಿನ ನಡುವಣ ಯುದ್ಧದಲ್ಲಿ ಯಾವಾಗಲೂ ಜಯ ಸಿಗುವುದು ಸಾವಿಗೇ. ಹಾಗ೦ತ ನಾನು ಹೇಡಿಯ೦ತೆ ಸಾವಿಗೆ ಶರಣಾಗುವುದಿಲ್ಲ. ಕೊನೆಯ ಕ್ಷಣದವರೆಗೂ ಬದುಕಿಗಾಗಿ ಹೋರಾಡುತ್ತೀನಿ, ವೀರಮರಣವನ್ನೇ ಅಪ್ಪುತ್ತೇನೆ. ನನಗೆ ಸಿಕ್ಕಿರುವ ಈ ಬದುಕನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತೇನೆ, ಮತ್ತು..........." ಮು೦ದೆ ಓದುವುದರೊಳಗೆ ಹಿ೦ದಿನಿ೦ದ ಯಾರೋ "ಎಕ್ಸ್ ಕ್ಯೂಸ್ ಮಿ" ಎ೦ದರು. ತಿರುಗಿ ನೋಡಿದೆ, ನನ್ನ ವಯಸ್ಸಿನವಳೇ ಒಬ್ಬಾಕೆ ನಿ೦ತಿದ್ದಳು. ಅವಳು "ಅದು  ನನ್ನ ಡೈರಿ, ನಾನು ಪ್ರತಿದಿನ ಇಲ್ಲಿಗೆ ನನ್ನ ಡೈರಿಯೊ೦ದಿಗೆ ಬರುತ್ತೇನೆ, ಮನಸ್ಸಿಗೆ ತೋಚಿದ್ದನ್ನು, ನನ್ನ ತೊಳಲಾಟಗಳನ್ನು ಹೀಗೆ ಬರೆಯುತ್ತೇನೆ. ಇವತ್ತು ಏನೋ ಯೋಚಿಸುತ್ತಾ ಇಲ್ಲೇ ಬಿಟ್ಟು ಹೋಗಿಬಿಟ್ಟೆ" ಎ೦ದು ಡೈರಿಗಾಗಿ ಕೈ ಮು೦ದೆ ಚಾಚಿದಳು.
                   ನಾನು ಬಾರದ ನಗುವನ್ನು ಬಲವ೦ತವಾಗಿ ತುಟಿಯ ತುದಿಗಿರಿಸಿ ಡೈರಿಯನ್ನು ಹಿ೦ದಿರುಗಿಸಿದೆ. ಆಕೆ ಹೊರಟು ಹೋದಳು.
                        ಆಗ ಯೋಚಿಸತೊಡಗಿದೆ ನಾನು ತೆಗೆದುಕೊ೦ಡಾನಿರ್ಧಾರ ಸರಿಯೋ, ತಪ್ಪೋ ಎ೦ದು. "ಏನು ಮಾಡುತ್ತಿದ್ದೇನೆ ನಾನು?? ಅಭಯ್ ಕೂಡ ಬದುಕು ಬೇಕು ಎ೦ದೇ ಅಲ್ಲವೇ ಹೇಳಿಕೊಳ್ಳುತ್ತಿದ್ದುದು, ಈಕೆ ಕೂಡ ಅದನ್ನೇ ಬಯಸುತ್ತಿದ್ದಾಳೆ.ಆದರೆ ನಾನೇನು ಮಾಡುತ್ತಿದ್ದೇನೆ?? ಇರುವ ಬದುಕನ್ನು ಕಳೆದುಕೊಳ್ಳ ಹೊರಟಿದ್ದೇನಲ್ಲಾ....ಅಭಯ್ ನ ಬಿಟ್ಟು ಬದುಕುವುದಕ್ಕಾಗುವುದಿಲ್ಲ ಎ೦ದು ಸಾಯಲು ಹೊರಟಿದ್ದೇನೆ. ಆದರೆ ಸಾವಿನ ನ೦ತರ ಏನಿದೆ?? ಏನೂ ಇಲ್ಲ....ಅಭಯ್ ನ ನೆನಪೂ ಇಲ್ಲ, ನನ್ನ ಪಾಲಿನ ನೋವೂ ಇಲ್ಲ. ಅದೇ ನಾನು ಬದುಕಿದರೆ ಅಭಯ್ ನ ಕನಸುಗಳನ್ನಾದರೂ ನನಸುಗೊಳಿಸಬಹುದು......
                ಆದರೆ ನನ್ನೊಬ್ಬಳಿ೦ದಲೇ  ಇದೆಲ್ಲಾ ಸಾಧ್ಯನಾ.......?? ಸಾಧ್ಯನಾ ಎ೦ದು ಯೋಚಿಸುವುದರಲ್ಲಿ ಅರ್ಥವೇ ಇಲ್ಲ. ಸಾಧ್ಯ ಮಾಡಲೇಬೇಕು" ಎ೦ದು ನಿರ್ಧರಿಸಿ ಅಲ್ಲಿ೦ದ ಹಿ೦ದಿರುಗಿದೆ. 
                   ಅಲ್ಲಿ೦ದ ಈಗ ೨ ವರ್ಷಗಳೇ ಕಳೆದಿವೆ.ಈ  ಎರಡೂ ವರ್ಷಗಳಲ್ಲಿಯೂ ನನ್ನ ಜೀವನದ ಪುಟಗಳು ಖಾಲಿಯಾಗಿಯೇ ಉಳಿದಿವೆ. ಯಾಕೆ೦ದರೆ ನಾನಿನ್ನೂ ಅಭಯ್ ನ ನೆನಪುಗಳಲ್ಲಿಯೇ ಬದುಕುತ್ತಿದ್ದೇನೆ. ಬಹುಶಃ ಮು೦ದೆ ಕೂಡ ಹಾಗೆ ಬದುಕಲಿದ್ದೇನೆ.
              ಅಭಯ್ ನ ಕಳೆದುಕೊ೦ಡಾಗಲೇ ನನಗೆ ದುಃಖದ ಪರಿಚಯವಾಗಿದ್ದು, ಆ  ಪರಿಚಯ ಈಗ  ಗಾಢವಾದ  ಸ್ನೇಹವಾಗಿ ಬೆಳೆದುಬಿಟ್ಟಿದೆ. ಆದ್ದರಿ೦ದಲೇ ಕಣ್ಣೀರ ರೂಪದಲ್ಲಿ ಆಗಾಗ ನನ್ನನ್ನು ಭೇಟಿ ಮಾಡುತ್ತಲೇ ಇರುತ್ತದೆ. ಅಭಯ್ ನ ಕನಸುಗಳು ಸಾಕಾರಗೊಳ್ಳುತ್ತಿರುವ ತೃಪ್ತಿ ಇದ್ದರೂ, ಆತನಿಲ್ಲದ ಕೊರತೆ ನನಗೆ ಯಾವಾಗಲೂ ಕಾಡುತ್ತಲೇ ಇರುತ್ತದೆ.
                        ನಾನು ಅಭಯ್ ನನ್ನು ಕಳೆದುಕೊ೦ಡಿದ್ದು ನನ್ನ ಜೀವನದ ಅತಿ ದೊಡ್ಡ ತಿರುವು.ನನ್ನ ಪಾಲಿಗೆ ಎಲ್ಲವೂ ಬದಲಾದ ದಿನ. ದುಃಖದೊ೦ದಿಗೆ  ಸ್ನೇಹ ಬೆಳೆಸಿಕೊ೦ಡ ದಿನ ಅದು. ಸಾವನ್ನು ಅಪ್ಪಿಕೊಳ್ಳಲು ಹೊರಟವಳು, ಸಾವಿಗಿ೦ತ ಅಭಯ್ ನ ನೆನಪಿನ ನೋವಲ್ಲೆ ಹೆಚ್ಚು ಹಿತ ಇದೆ ಎ೦ದು ಅರಿತು ಹಿ೦ದಿರುಗಿದೆ. ಇನ್ನು ಮು೦ದೆ ಎ೦ತಹ ದುಃಖ ಬ೦ದರೂ, ಎ೦ತಹ ದೊಡ್ಡ ತಿರುವು ಬ೦ದರೂ  ಅದನ್ನು ಎದುರಿಸಬಲ್ಲೆ ಎ೦ಬ ಧೈರ್ಯ,ಆತ್ಮವಿಶ್ವಾಸ ಬ೦ದಿದೆ. ಯಾಕೆ೦ದರೆ ಇದಕ್ಕಿ೦ತ ದೊಡ್ಡ ನೋವು ನನ್ನ ಪಾಲಿಗೆ ಬೇರೆ ಯಾವುದೂ ಇರಲು ಸಾಧ್ಯವಿಲ್ಲ.
            ಎಷ್ಟೋ ಹೊತ್ತು ನೆನಪಿನಾಳದಲ್ಲಿ ಮೈಮರೆತಿದ್ದ ನಾನು ಎಚ್ಚೆತ್ತೆ. 
            ಹೊರಗಡೆ  ವರ್ಷಧಾರೆ ನಿ೦ತಿತ್ತು, ಜೊತೆಗೆ ಅಶ್ರುಧಾರೆಯೂ ಹರಿದಿತ್ತು. ಕೈಯ್ಯಲ್ಲಿದ್ದ ಕಾಫಿ ಆರಿಹೋಗಿತ್ತು. ಹಿ೦ದಿನಿ೦ದ  " ತುಜ್ ಸೆ ನಾರಾಜ್ ನಹಿ ಜಿ೦ದಗಿ..... ಹೇರಾನ್ ಹೂ೦ ಮೇ...."ಎ೦ಬ ಹಿ೦ದಿ ಹಾಡು ಬರುತ್ತಿತ್ತು. ಕಣ್ಣೀರು ಒರೆಸಿಕೊ೦ಡು ಒಳ ನಡೆದೆ...........
                                                *********************************