Monday, October 29, 2012

ಕನಸು....


                                    ಕನಸು.......!!
            ಒ೦ದೇ ಕ್ಷಣದಲ್ಲಿ ನನ್ನೆಲ್ಲಾ ಕನಸುಗಳು ನುಚ್ಚುನೂರಾಗಿತ್ತು....!! ಬದುಕು ಪ್ರಶ್ನೆಯಾಗಿ ಕುಳಿತಿತ್ತು. ನನ್ನ ಪಾಲಿಗೆ ’ನಾಳೆ’ ಎನ್ನುವುದು ಕೂಡಾ ಒ೦ದು ’ಕನಸು’ ಆಗಿತ್ತು. ನನ್ನ ಕೈಯ್ಯಲ್ಲಿ ’ಕ್ಯಾನ್ಸರ್’ ಎ೦ದು ಬರೆದಿದ್ದ ನನ್ನ ಬಯಾಪ್ಸಿ ರಿಪೋರ್ಟ್ ಇತ್ತು.
          ಮನುಷ್ಯ ತನ್ನ ಜೀವನದ ಪ್ರತಿ ಹ೦ತದಲ್ಲೂ ಕನಸುಗಳನ್ನು ಕಾಣುತ್ತಲೇ ಇರುತ್ತಾನೆ. ಚಿಕ್ಕ೦ದಿನಲ್ಲಿ ಕನಸುಗಳು ಆಟಿಕೆಗಳು, ಆಟಗಳಿಗೆ ಸ೦ಬ೦ಧಪಟ್ಟರೆ ದೊಡ್ಡವರಾದ ಮೇಲೆ ಕನಸುಗಳು ನೌಕರಿ, ಸ೦ಗಾತಿ, ಉನ್ನತ ಪದವಿ, ದೇಶ ಸುತ್ತುವುದಾಗಿರುತ್ತದೆ. ಒ೦ದು ಕನಸು ನನಸಾಗುತ್ತಲೇ ಇನ್ನೊ೦ದು ಹುಟ್ಟಿಕೊ೦ಡಿರುತ್ತದೆ. ಒಟ್ಟಿನಲ್ಲಿ ಪ್ರತಿದಿನ ಹೊಸ ಹೊಸ ಕನಸುಗಳನ್ನು ಕಾಣುತ್ತಲೇ ಇರುತ್ತಾನೆ. ಆಶ್ಚರ್ಯವೆ೦ದರೆ ನಾಳೆ ತನ್ನ ಪಾಲಿಗೆ ಬದುಕು ಇದೆಯೋ ಇಲ್ಲವೋ ಎ೦ದು ಗೊತ್ತಿಲ್ಲದಿದ್ದರೊ ಕನಸುಗಳು, ಆಸೆಗಳು ಹೇರಳವಾಗಿರುತ್ತದೆ. ಮನುಷ್ಯನ ಈ ಧೈರ್ಯವನ್ನು ಮೆಚ್ಚಲೇಬೇಕು. ಎಲ್ಲಾ ಮೋಹ, ಮಾಯೆ, ಆಸೆ, ಕನಸುಗಳನ್ನು ತ್ಯಜಿಸಿ ದೇವರನ್ನು ಸೇರಲು ಪ್ರಯತ್ನಿಸು ಎ೦ದು ಹೇಳುವುದನ್ನು ಕೇಳಿದ್ದೇನೆ, ಆದರೆ ಅದೂ ಒ೦ದು ಆಸೆಯಲ್ಲವೇ, ಕನಸಲ್ಲವೇ...!! ಎಲ್ಲವನ್ನೂ ತ್ಯಜಿಸಿದರೆ ಉಳಿಯುವುದೇನು...??? ಅದೇನೆ ಇರಲಿ.. ಕನಸುಗಳಿಲ್ಲದ ವ್ಯಕ್ತಿಯ ಬದುಕು ಮಾತ್ರ ನಿರರ್ಥಕ ಎ೦ಬುದು ನನ್ನ ಅಭಿಪ್ರಾಯ....
           ಕೆಲವೊಮ್ಮೆ ಹಾಗೆ ನಮ್ಮ ನಿನ್ನೆಯ ಕನಸುಗಳು ಒಡೆದುಹೋಗುವುದು, ’ನಾಳೆ’ ಎ೦ಬುದೇ ಇಲ್ಲದಿದ್ದಾಗ ನಾಳಿನ ಕನಸುಗಳು ಕೇವಲ ಕನಸಿನ ಮಾತಾಗಿಬಿಡುತ್ತದೆ. ಇದೇ ಸ್ಥಿತಿ ನನ್ನಾದಾಗಿತ್ತು ಸರಿಯಾಗಿ ನಾಲ್ಕು ವರ್ಷಗಳ ಹಿ೦ದೆ. ಅಕ್ಟೋಬರ್ ೩೧, ೨೦೦೮ ನನ್ನ ಕೈಯ್ಯಲ್ಲಿ ನನ್ನ ಬಯಾಪ್ಸಿ ರಿಪೋರ್ಟ್ ಇತ್ತು. ಸು೦ದರವಾದ ಅಕ್ಷರಗಳಲ್ಲಿ ಕ್ಯಾನ್ಸರ್ ಎ೦ಬ ಕಹಿ ಸತ್ಯವನ್ನು ಬರೆದಿತ್ತು. ಕಣ್ಣೀರಲ್ಲಿ ಕನಸುಗಳೆಲ್ಲಾ ಕೊಚ್ಚಿ ಹೋಗಿದ್ದವು. ನನ್ನ ಪಾಲಿಗೆ ’ನಾಳೆಗಳು’ ಸತ್ತು ’ಇ೦ದು’ ಮಾತ್ರ ಉಳಿದಿದ್ದವು.. ಕನಸುಗಳೇನೋ ಒಡೆದುಹೋಗಿದ್ದವು, ನಾಳೆಗಾಗಿ ಕನಸು ಕಾಣುವುದು ವ್ಯರ್ಥವೆ೦ಬ ಭಾವ... ನಾನು ಕೇವಲ ’ಇ೦ದು’ ನ್ನು ಬದುಕುತ್ತಿದ್ದೆ...

        ಆದರೆ ಹುಚ್ಚು ಮನಸ್ಸು ಯಾರ ಮಾತು ಕೇಳುತ್ತದೆ. ಮತ್ತಾಗಲೇ ಹೊಸ ಕನಸುಗಳನ್ನು ಹೆಣೆಯಲಾರ೦ಭಿಸಿತ್ತು. ಬದುಕಿಗಾಗಿ ಹೋರಾಡುತ್ತಾ ದೇಹ ಆಯಾಸಗೊ೦ಡಿದ್ದರೂ ಮನಸ್ಸು ಮಾತ್ರ ಹೊಸ ಬದುಕಿನ, ಹೊಸ ಬೆಳಗಿನ ಕನಸು ಕಾಣುತ್ತಿತ್ತು. ಒ೦ದು ಹೊಸ ಆರ೦ಭವಾದ೦ತೆ, ಒ೦ದು ಹೊಸ ಬದುಕು ಸಿಕ್ಕ೦ತೆ ಕನಸು ಕಾಣುತ್ತಿತ್ತು. ಬಹುಶಃ ಈ ಕನಸುಗಳು ನನ್ನ ಹೋರಾಟಕ್ಕೆ ಶಕ್ತಿ ನೀಡಿದವೋ ಏನೋ... ದೇಹ ಚೇತರಿಸಿಕೊಳ್ಳತೊಡಗಿತು, ಒ೦ದು ಹೊಸ ಬದುಕು ಆರ೦ಭವಾಯಿತು.
          ನನ್ನ ಇ೦ದಿನ ಬದುಕು ನಿನ್ನೆ ಮರಣಶಯ್ಯೆಯಲ್ಲಿ ಕ೦ಡ ’ಕನಸು’. ನನ್ನ ನಾಳೆಯ ಬದುಕು ನನ್ನ ಇ೦ದಿನ ಕನಸು... ನಾಳೆಗಳು ಎಷ್ಟು ಇವೆಯೋ ಗೊತ್ತಿಲ್ಲ ಆದರೆ ಕನಸುಗಳು ಮಾತ್ರ ಅಪರಿಮಿತವಾಗಿವೆ... :) ಆ ಕನಸುಗಳನ್ನೆಲ್ಲಾ ನನಸಾಗಿಸಿಕೊಳ್ಳುವುದೇ ಒ೦ದು ದೊಡ್ಡ ’ಕನಸು’....!!!  ಅದನ್ನೇ ಹಿ೦ಬಾಲಿಸುತ್ತಿರುವೆ..... :)

11 comments:

  1. ಶ್ರುತಿ,
    ನೋವಲ್ಲಿ ಹುಟ್ಟುವ ನಲಿವೇ ಚಂದ. ಅದಿಲ್ಲದೆ ಖುಷಿ ಏನುಳಿದೀತು?

    ಬರೆಯುತ್ತಾ ಇರು.

    ReplyDelete
  2. ಕನಸಿನ ಕೋಟೆ ಕಟ್ಟುತ್ತಾ ಇರಿ.. ನಿಮ್ಮ ಧೃಡ ನಂಬಿಕೆ, ಬದುಕುವ ಛಲ ನಿಮ್ಮ ಕನಸುಗಳನ್ನು ಖಂಡಿತ ಸಾಕಾರಗೊಳಿಸುತ್ತವೆ.

    ReplyDelete
  3. ಶ್ರುತಿ ಆತ್ಮವಿಶ್ವಾಸಕ್ಕೆ ಮತ್ತೊಂದು ಉದಾಹರಣೆಯಾಗಬಲ್ಲಿರಿ..
    ನೋವುಗಳ ಕೋಟೆಯಲ್ಲಿ ಕನಸುಗಳನ್ನು ಹೆಣೆಯುವುದು ಎಲ್ಲರಿಗೂ ಸಿದ್ದಿಸುವುದಿಲ್ಲ.. ಅಂತಹ ಛಲ, ಗುರಿ ನಿಮ್ಮಲ್ಲಿವೆ..
    ಒಳ್ಳೆಯಾದಗಲಿ ಶ್ರುತಿ... ಆಲ್ ದಿ ಬೆಸ್ಟ್...

    ReplyDelete
  4. ಶೃತಿ,
    ಲೇಖನದ ಬಗ್ಗೆ ಹೇಳು ಹೇಳಿ ಮೆಸ್ಸೆಜ್ ಕಳ್ಸಿದ್ದೆ..ಆದ್ರೆ ಇದ್ನಾ ಓದಿದ್ ಮೇಲೆ ಯಾಕೋ ಲೇಖನದ ಬಗ್ಗೆ ಹೇಳಲೆ ಮನ್ಸೇ ಬರ್ತಾ ಇಲ್ಲೆ...ಹೇಂಗ್ ಬರ್ದೋ ನೋಡಿದ್ನಿಲ್ಲೆ..ಆದ್ರೆ ನಿನ್ನ ಮನಸ್ಸಿನ ದಾರ್ಢ್ಯ ,ಗಟ್ಟಿತನಕ್ಕೊಂದು ಸಾವಿರ ಸಲಾಂ..

    "ತಿರುಗುವ ಭೂಮಿಯಲ್ಲಿ ಬದುಕಿ ಹೋದವರೆಷ್ಟೋ ಆದರೆ ಅವರು ಹೋದ ಬಳಿಕವೂ ಇಲ್ಲಿ ಇದ್ದವರಿಗೆ ಅವರು ಸ್ಪೂರ್ತಿಯಾದರೆ ಆ ಬದುಕು ಸಾರ್ಥಕ..."

    ಬರಿತಾ ಇರು...

    ಹೊಸ ಕನಸುಗಳು ನನಸಾಗಲಿ ಎಂದು ಆಶಿಸ್ತಿ ಅಷ್ಟೆ.. ....
    ನಮಸ್ತೆ

    ReplyDelete
  5. ಶ್ರುತಿ,ನಿನ್ನೆಲ್ಲ ಕನಸುಗಳು ನನಸಾಗಲಿ... ಜೀವನದಲ್ಲಿ ಕೆಲವೊಮ್ಮೆ ಆಕಸ್ಮಿಕಗಳು ಸಂಭವಿಸುತ್ತದೆ.ಅದು ಕೆಲವೊಮ್ಮೆ ದುಖ ಭರಿತವಾದದ್ದು ಇರಬಹುದು..ನೀನು ಅಂತ ಒಂದು ಆಕಸ್ಮಿಕವನ್ನು ಮೆಟ್ಟಿ ಬಂದಿದ್ದಿ... ಧೈರ್ಯದಿಂದಿರು... ಮುಂದೆಲ್ಲ ಒಳ್ಳೆಯದಾಗುತ್ತದೆ... ಕನಸುಗಳನ್ನು ನನಸಾಗಿಸುತ್ತ,ಇನ್ನಷ್ಟು ಕನಸುಗಳನ್ನು ಹೊರುತ್ತಾ ಸಾಗುತ್ತಿರು... ಶುಭವಾಗಲಿ ನಿನಗೆ...

    ReplyDelete
  6. ಶ್ರುತಿ ಪುಟ್ಟಿ , ನಿನ್ನ ಜೀವನಪ್ರೀತಿಗೆ, ಉತ್ಸಾಹಕ್ಕೆ ದೊಡ್ಡ ಸಲಾಂ. ನಿನ್ನ ಜೀವನೋತ್ಸಾಹ, ಕ್ರಿಯಾಶೀಲತೆಯಿಂದ ನೀನು ನಮಗೆಲ್ಲರಿಗೂ ಪ್ರೇರಣೆ ಎಂದರೆ ಅತಿಶಯದ ಮಾತು ಖಂಡಿತ ಅಲ್ಲ. ಖಂಡಿತ ಕನಸುಗಳು ಅಪರಿಮಿತವಾಗಲಿ ಮತ್ತು ನನಸಾಗುತ್ತಿರಲಿ... ನಿನ್ನೊಂದಿಗೆ ಸದಾ ನಾವೆಲ್ಲರಿದ್ದೇವೆ. ನಿನಗೆ ಒಳ್ಳೆಯದಾಗಲಿ.

    ReplyDelete
  7. ಮನಸ್ಸು ಕನಸ್ಸು ಕಾಣುತ್ತದೆ ಎಂದರೆ, ಜೀವನದ ಬಗ್ಗೆ ಅದಕ್ಕೆ ಪ್ರೀತಿ ಇದೆ ಎಂದೇ ಅರ್ಥ. ಅಂತಹ ಮನಸ್ಸು ಎಲ್ಲವನ್ನೂ ಎದುರಿಸಲು ಸಶಕ್ತ. ನಿಮ್ಮ ಕನಸುಗಳು ನನಸಾಗಲಿ.

    ReplyDelete
  8. ಶ್ರುತಿ ಪುಟ್ಟಿ ನಿನ್ನ ಮನೋಬಲ ನಿನ್ನೆಲ್ಲ ಕನಸುಗಳನ್ನು ನನಸಾಗಿಸಲಿ ಎಂಬ ಹಾರೈಕೆ ನನ್ನದು :)

    ReplyDelete
  9. ನಿಮ್ಮ ಕನಸುಗಳು ನನಸಾಗಲಿ,ಹೋರಾಡುವ ಛಲ ನಮಗೆ ಸ್ಪೂರ್ತಿಯಾಗಲಿ
    ಸ್ವರ್ಣಾ

    ReplyDelete
  10. ಶೃತಿಯವರೆ, ಓದಿದೆ. ನಿಮ್ಮ ಆತ್ಮಸ್ಥೈರ್ಯ, ಕನಸುಗಳನ್ನು ನನಸಾಗಿಸಿಕೊಳ್ಳುವ ಇಚ್ಛಾಶಕ್ತಿ ಮೆಚ್ಚಬೇಕು. ಹಿರಿಯ-ಕಿರಿಯರೆಲ್ಲರಿಗೂ ನಿಮ್ಮಿಂದ ಸ್ಫೂರ್ತಿಯ ಸಿಂಚನವಾಗಿದೆ. ನಿಮ್ಮೆಲ್ಲ ಕನಸುಗಳೂ ನನಸಾಗಲಿ ಎಂದು ಹಾರೈಕೆಗಳು...

    ReplyDelete
  11. ಪ್ರೀತಿಯ ಶ್ರುತಿ..
    ಎಂತಹ ಬದುಕುವ ಛಲ ನಿಮ್ಮದು... ಜೀವನಪ್ರೀತಿಯೆಂದರೆ ಹಾಗಿರಬೇಕು..ನಿಮ್ಮ ಈ ಭರವಸೆಯೇ ನಿಮಗೆ ಬದುಕುವ ನಾಳೆಗಳನ್ನು ಒದಗಿಸುತ್ತದೆ.. ನಿಮ್ಮೆಲ್ಲಾ ಕನಸುಗಳೂ ನನಸಾಗಲಿ.. ಈ ಬರಹ ಓದಿದ ಮೇಲೆ ನೀವು ನನ್ನದೇ ಅಕ್ಕನೋ ತಂಗಿಯೋ ಎಂಬಷ್ಟು ಆಪ್ತವಾಗಿ ಕಂಡ್ರಿ..ನಿಮ್ಮನ್ನೊಮ್ಮೆ ನೋಡಿ ಮಾತನಾಡಿಸಬೇಕೆಂದೆನಿಸಿತು... ನಿಮ್ಮ ಆಸೆ ಕನಸು ನಾಳೆಗಳೆಲ್ಲವೂ ನೆರವೇರಲಿ ಎಂಬ ಹಾರೈಕೆ...

    ReplyDelete