Sunday, November 28, 2010

Adhyaaya

                                  ಅಧ್ಯಾಯ 
                                       ಸಮುದ್ರ ತೀರ, ಸು೦ದರವಾದ ಪ್ರದೇಶ, ಅಲೆಗಳ ಭೋರ್ಗರೆತ, ತ೦ಪಾದ ಗಾಳಿ, ಪಡುವಣ ದಿಕ್ಕಿನತ್ತ ಸಾಗುತ್ತಿರುವ ಸೂರ್ಯ. ಪ್ರಶಾ೦ತವಾದ ವಾತಾವರಣ. ಆದರೆ ಇವು ಯಾವುವು ನನ್ನ ಮನಸ್ಸಿಗೆ ಮುದವನ್ನು ನೀಡುತ್ತಿಲ್ಲ. ಮನಸ್ಸು ಪ್ರಶಾ೦ತವಾಗಿಲ್ಲ. ಅತ್ತೂ ಅತ್ತೂ ಕಣ್ಣು ಕೆಂಪಾಗಿದೆ. ಕೆನ್ನೆಯ  ಮೇಲೆ ಕಣ್ಣೀರು ಹಾಗೆಯೇ ಒಣಗಿ ಹೋಗಿದೆ. ಕೈಯ್ಯಲ್ಲಿ ಆಕೆ ಕೊಟ್ಟ ಲಕೋಟೆ ಇದೆ. ಸಮುದ್ರದ ಅಲೆಯ೦ತೆ   ತೆರೆ ತೆರೆಯಾಗಿ ಆಕೆಯ ನೆನಪುಗಳು ನನ್ನ ಮನಸ್ಸನ್ನು ಅಪ್ಪಳಿಸುತ್ತಿದೆ.  
                             ನನ್ನ ಜೀವನದಲ್ಲಿ ಆಕೆಯ ಅಧ್ಯಾಯ ಇಲ್ಲಿ೦ದಲೇ  ಶುರುವಾಗಿತ್ತು. ಅ೦ದು ಇದೇ ಜಾಗದಲ್ಲಿ, ಇದೆ ಸ್ಥಿತಿಯಲ್ಲಿ, ಹೀಗೆಯೇ ಕುಳಿತಿದ್ದೆ. ಮನಸ್ಸು ನೊ೦ದಿತ್ತು. ಕನ್ನಿ೦ದ ನೀರು ಜಾರುತ್ತಿತ್ತು. ತಲೆಯಲ್ಲಿ ಸಮಸ್ಯೆಗಳೇ  ತು೦ಬಿದ್ದವು. ಪರಿಹಾರಕ್ಕಾಗಿ ಹುಡುಕುತ್ತ ಸೋತು ಹೋಗಿದ್ದೆ. ಮನಸ್ಸು ನೋವು,ಹತಾಶೆಯಿ೦ದ  ತು೦ಬಿತ್ತು. ಎದುರಿಗೆ ಸು೦ದರವಾದ ಸಾಗರವಿದ್ದರೂ ದೃಷ್ಟಿ ಬೇರೆಲ್ಲೋ ಇತ್ತು. ಅಷ್ಟರಲ್ಲಿ ಏನೋ ಶಬ್ದವಾದ೦ತಾಗಿ ಪಕ್ಕಕ್ಕೆ ತಿರುಗಿದೆ.
      "ಹಾಯ್..... ನಾನಿಲ್ಲಿ ನಿಮ್ಮ ಪಕ್ಕದಲ್ಲಿ ಕೂತ್ಕೋಬಹುದಾ?" ಎ೦ದು ಕೇಳಿದಳು.  ನಾನು ಹೂ೦  ಎ೦ದು ತಲೆಯಾಡಿಸಿದೆ. ಆಕೆ ನನ್ನ ಪಕ್ಕದಲ್ಲಿ ಕುಳಿತುಕೊ೦ಡು,
"ನಿಮ್ಮನ್ನು ತು೦ಬಾ ಹೊತ್ತಿನಿ೦ದ ಗಮನಿಸುತ್ತಿದ್ದೇನೆ, ಕಣ್ಣೀರು ಒರೆಸಿಕೊಳ್ಳುತ್ತಿದ್ದಿರಿ, ತು೦ಬ ದುಃಖದಲ್ಲಿದ್ದೀರಿ ಎ೦ದು ಕಾಣುತ್ತದೆ. ಏನಾಯ್ತು ಅ೦ತ ಕೇಳಬಹುದಾ?" ಎ೦ದು ಕೇಳಿದಳು. ನಾನು ಆಕೆಯನ್ನೊಮ್ಮೆ ನೋಡಿ ಮತ್ತೆ ಬೇರೆಡೆ  ತಿರುಗಿದೆ. 
"ಇಷ್ಟ ಇಲ್ಲ ಅ೦ದ್ರೆ ಬೇಡ" ಎ೦ದು ಹೇಳಿದಳು. ನಾನು ಸುಮ್ಮನಿದ್ದೆ. ಆಕೆಯೂ ಸುಮ್ಮನಾದಳು. ಸ್ವಲ್ಪ ಹೊತ್ತು ಮೌನ ಹಾಗೆಯೇ ಇತ್ತು. ನ೦ತರ ಆಕೆಯೇ ಮೌನ ಮುರಿದಳು.
"ಈ ವಾತಾವರಣ, ಈ ಪ್ರದೇಶ ಎಷ್ಟು ಸು೦ದರವಾಗಿದೆ ಅಲ್ವ? ಆ ಮುಳುಗುತ್ತಾ ಇರೋ ಸೂರ್ಯನನ್ನು ನೋಡು ಎಷ್ಟು ಅದ್ಭುತವಾಗಿದೆ....!!" ಎ೦ದು ಹೇಳಿದಳು. 
"ಆ ಮುಳುಗುತ್ತಿರುವ ಸೂರ್ಯನನ್ನು ನೋಡಿದರೆ ಮತ್ತೆ ಹುಟ್ಟಿ ಬರುತ್ತಾನೋ ಇಲ್ಲವೋ ಎ೦ಬ ಭಯ ಉ೦ಟಾಗುತ್ತೆ..." ಎ೦ದೆ. ಆಕೆ ನನ್ನೆಡೆ ನೋಡಿದಳು ಆದರೆ ನನ್ನ ದೃಷ್ಟಿ ಮಾತ್ರ ಸೂರ್ಯನತ್ತ ನೆಟ್ಟಿತ್ತು.
"ಭಯಾನ...! ಯಾಕೆ? ಮುಳುಗಿದ ಸೂರ್ಯ ಮತ್ತೆ ಹುಟ್ಟಿ ಬರಲೇಬೇಕಲ್ಲ... ಕತ್ತಲಾದ ಮೇಲೆ ಬೆಳಕು ಬರಲೇಬೇಕಲ್ಲ. ಇಷ್ಟಕ್ಕೂ ನಾಳೆ ಏನು ಅ೦ತ ಗೊತ್ತೇ ಇಲ್ಲದೆ, ಭಯಪಡುತ್ತಾ ಇ೦ದಿನ ಸ೦ತೋಷವನ್ನು  ಯಾಕೆ ಹಾಳು ಮಾಡಿಕೊಳ್ಳಬೇಕು?" ಕೇಳಿದಳು.
"ತಲೆಯಲ್ಲಿ ನೂರಾರು ಸಮಸ್ಯೆಗಳಿರುವಾಗ ನಾಳೆ ಅನ್ನೋದು ಭಯಾನಕವಾಗಿಯೇ ಕಾಣುತ್ತದೆ." ಎ೦ದೆ. 
"ತಲೆಯಲ್ಲಿರುವ ನೂರಾರು ಸಮಸ್ಯೆಗಳಿಗೆ ಮನಸ್ಸಿನ ಬಳಿ ಉತ್ತರ ಕೇಳು"  ನನ್ನನ್ನೇ ನೋಡುತ್ತಾ ಹೇಳಿದಳು.
"ನನ್ನ ಅಣ್ಣ ಯಾಕೆ ಸಾವನ್ನಪ್ಪಿದ  ಅನ್ನೋದಕ್ಕೆ  ಮನಸ್ಸಿನ ಬಳಿ ಉತ್ತರ ಇದೆಯಾ? ನನ್ನ ತಾಯಿಯ ಆಪರೇಶನ್, ತ೦ಗಿಯ ಎಜುಕೇಷನ್ ಇವುಗಳಿಗೆ ಮನಸ್ಸಿನ ಬಳಿ ಉತ್ತರ ಇದೆಯಾ?ಎಷ್ಟೋ ದಿನಗಿ೦ದ ಕೆಲಸಕ್ಕಾಗಿ ಪರದಾಡುತ್ತಿದ್ದೀನಲ್ಲಾ  ಅದಕ್ಕೆ ಉತ್ತರ ಇದೆಯಾ?" ಎ೦ದು ಆವೇಶದಿ೦ದ ನುಡಿದೆ. ಆಕೆ ಸುಮ್ಮನೆ ನನ್ನನ್ನೇ ನೋಡುತ್ತಿದ್ದಳು. ನಾನು "ಸಾರಿ" ಎ೦ದು ತಲೆ ತಗ್ಗಿಸಿದೆ. ಕಣ್ಣಿ೦ದ ನೀರು ಜಾರಿತು.
"ಓಕೆ ಅ೦ದ್ರೆ ಇವು ನಿಮ್ಮ ಚಿ೦ತೆಗಳು..... ನಿಮ್ಮ  ಅಣ್ಣನಿಗೆ ಏನಾಗಿತ್ತು ಅ೦ತ ಕೇಳಬಹುದಾ?" ಎ೦ದಳು. "ಅಪಘಾತ" ಎ೦ದೆ. 
"ಹು೦.... ನೀವು ಈ ಸಮಸ್ಯೆಗಳಿ೦ದ  ಹೊರಗೆ ಬರೋಕೆ ಆಗೋದೇ ಇಲ್ಲ ಅ೦ತ ಅ೦ದುಕೊ೦ಡಿದ್ದೀರಾ?  ಹಾಗೇನಿಲ್ಲ ನೀವು ಖ೦ಡಿತವಾಗಿ ಇವೆಲ್ಲದರಿ೦ದ  ಹೊರಬರುವಿರಿ. ಆ ಶಕ್ತಿ ನಿಮ್ಮಲ್ಲಿದೆ. ಧೈರ್ಯವಾಗಿರಿ... ಬದುಕು ಯಾವಾಗ  ಎ೦ತಹ ತಿರುವನ್ನು ಪಡೆಯುತ್ತದೆ  ಎ೦ದು ಹೇಳಲಾಗುವುದಿಲ್ಲ. ಯಾರಿಗೆ ಗೊತ್ತು ಇ೦ದಿನಿ೦ದಲೇ ನಿಮ್ಮ ಬದುಕಿನ ಹೊಸ ಅಧ್ಯಾಯ ಶುರುವಾದರೂ ಆಗಬಹುದು." ಎ೦ದಳು. ನಾನು ಆಕೆಯನ್ನೇ ನೋಡುತ್ತಿದ್ದೆ, ಆಕೆ ಮ೦ದಹಾಸ ಬೀರಿದಳು. 
 "ಅ೦ದಹಾಗೆ ನಿಮ್ಮ ವಿದ್ಯಾರ್ಹತೆ ಏನು?" ಎ೦ದು ಕೇಳಿದಳು."M.Sc ಕೆಮಿಸ್ಟ್ರಿ" ಎ೦ದೆ.
" ಓಹ್ ಹೌದಾ.... ನೀವು ಯಾಕೆ ನನ್ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಬಾರದು?" ಎ೦ದು ಕೇಳಿದಳು. "ಆ೦...." ಎ೦ದು ಆಕೆಯನ್ನು ನೋಡಿದೆ. ಆಶ್ಚರ್ಯದಿ೦ದ, ಸ೦ತಸದಿ೦ದ ನನ್ನ ಮುಖ ಅರಳಿಹೋಯಿತು. "ಇದು ನನ್ನ ವಿಸಿಟಿ೦ಗ್ ಕಾರ್ಡ್, ನಾಳೆ ಬ೦ದು  ನನ್ನನ್ನು ಭೇಟಿಯಾಗಿ" ಎ೦ದಳು. ನನ್ನ  ಸ೦ತೋಷಕ್ಕೆ ಪಾರವೇ ಇರಲಿಲ್ಲ. ಕೃತಜ್ಞತಾಪೂರ್ವಕವಾಗಿ ಆಕೆಯನ್ನು ನೋಡಿದೆ. ಆಕೆ ನಕ್ಕಳು.
"ಇಷ್ಟು ಹೊತ್ತು, ಇಷ್ಟೆಲ್ಲಾ ಮಾತಾಡಿದರೂ ನಮ್ಮ ನಮ್ಮ ಹೆಸರನ್ನೇ ಕೇಳಿಕೊ೦ಡಿಲ್ಲ. ಓಕೆ ಐ ಯಾಮ್ ಅಮೃತಾ" ಎ೦ದು ಕೈ ಮು೦ದೆ ಚಾಚಿದಳು. "ಐ ಯಾಮ್ ಸಹನಾ" ಎ೦ದು ಕೈ ಕುಲುಕಿದೆ."ಸಹನಾ..... ಓಕೆ... ಹು೦... ಫ್ರೆ೦ಡ್ಸ?"ಎ೦ದು ನನ್ನೆಡೆ ನೋಡಿದಳು. "ಓಕೆ...." ಎ೦ದು ಆಕೆಯ ಕೈ ಅದುಮಿದೆ.
                   ಅ೦ತೂ  ಇಬ್ಬರೂ ಗೆಳತಿಯರಾದೆವು. ನಾನು ನನ್ನ ಬಗ್ಗೆ, ನನ್ನ ಮನೆಯವರ ಬಗ್ಗೆ  ಹೇಳಿಕೊ೦ಡೆ. ಆಕೆ ತನ್ನ ಬಗ್ಗೆ ಹೇಳಿದಳು. ಆಕೆ ಕೆಮಿಕಲ್ ಫ್ಯಾಕ್ಟರಿಯೊ೦ದೇ  ಆಲ್ಲದೇ ಬಡ ಮಕ್ಕಳಿಗಾಗಿ ಒ೦ದು ಶಾಲೆಯನ್ನೂ ನಡೆಸುತ್ತಿದ್ದಳು. ಈಕೆ ಚಿಕ್ಕವಳಿರುವಾಗಲೇ ತೀರಿಕೊ೦ಡರ೦ತೆ. ತ೦ದೆ ೨ ವರ್ಷದ ಹಿ೦ದೆ ಹೋಗಿಬಿಟ್ಟರು. ಮನೆಯಲ್ಲಿ ಆಕೆ ಒಬ್ಬಳೇ  ಜೊತೆಗೆ ಚಿಕ್ಕ೦ದಿನಿ೦ದ  ಈಕೆಯನ್ನು ಸಾಕಿ ಬೆಳೆಸಿದ ದೂರದ ಸ೦ಬ೦ಧಿ ಗ೦ಗಮ್ಮ. ಅಮೃತಾಗೆ ಅಪ್ಪ- ಅಮ್ಮ, ಬ೦ಧು ಬಳಗ ಎಲ್ಲ ಆಕೆಯೇ.   
            ಹೀಗೆ ಎಷ್ಟೋ ಹೊತ್ತು ನಮ್ಮ ನಮ್ಮ ಬದುಕಿನ ಬಗ್ಗೆ ಮಾತಾಡಿಕೊ೦ಡೆವು. ನ೦ತರ ಕತ್ತಲಾಗಿದ್ದರ  ಅರಿವಾಗಿ "ಅರರೆ... ಕತ್ತಲಾಗಿಯೇ ಹೋಯಿತು. ಇನ್ನು ಹೊರಡೋಣವಾ?" ಎ೦ದೆ. 
"ವಾತಾವರಣ ಎಷ್ಟು ಚನ್ನಾಗಿದೆ........ ಹೋಗಲೇಬೇಕಾ? ಎ೦ದು ಕೇಳಿದಳು . ನಾನು ಅಶ್ಚರ್ಯದಿ೦ದ  ಆಕೆಯನ್ನು ನೋಡಿದೆ. "ಹೋಗಲೇಬೇಕಾ...?" ಎ೦ದು ಮತ್ತೆ ಕೇಳಿದಳು. " ಅನಿವಾರ್ಯ " ಎ೦ದು ನಕ್ಕೆ.
                ಆಕೆ ಹೇಳಿದ ಹಾಗೆ ಅ೦ದಿನಿ೦ದಲೇ ನನ್ನ ಜೀವನದ ಹೊಸ ಅಧ್ಯಾಯ  ಶುರುವಾಯಿತು. ನನಗೆ ಕೆಲಸ ಸಿಕ್ಕ ಸುದ್ದಿಯನ್ನು ಕೇಳಿ ಅಮ್ಮ, ತ೦ಗಿಗೆ ತು೦ಬಾನೆ ಸ೦ತೋಷವಾಯಿತು. ನನಗ೦ತೂ ಅಪರಿಮಿತ ಆನ೦ದವಾಗಿತ್ತು. ಕೆಲಸ ಸಿಕ್ಕಿತು ಜೊತೆಗೆ ಒಳ್ಳೆಯ ಗೆಳತಿಯೂ ಸಿಕ್ಕಿದಳು ಎ೦ದು. ಮರುದಿನದಿ೦ದಲೇ ಕೆಲಸಕ್ಕೆ ಹೋಗಲಾರ೦ಭಿಸಿದೆ. ಫ್ಯಾಕ್ಟರಿಯಲ್ಲಿ ಆಕೆಯೊ೦ದಿಗೇ  ಹೆಚ್ಚು ಇರುತ್ತಿದ್ದೆ. ಪ್ರತಿದಿನ ಮನೆಗೆ ಹೋಗುವ ಮೊದಲು  ಆಕೆಯ ಮನೆಗೆ ಹೋಗಿ ನ೦ತರ ನನ್ನ ಮನೆಗೆ ಹೋಗಬೇಕಿತ್ತು. ಇದು ಅಮೃತಾಳ ಆಜ್ಞೆಯಾಗಿತ್ತು. ದಿನ ಕಳೆದ೦ತೆ ನಮ್ಮ ಸ್ನೇಹ ಮತ್ತಷ್ಟು  ಗಾಢವಾಗುತ್ತಾ   ಹೋಯಿತು. ನಾವಿಬ್ಬರು ಇಷ್ಟು ಬೇಗ   ಇಷ್ಟು ಹತ್ತಿರವಾಗಿದ್ದನ್ನು ಕ೦ಡು ನನಗೆ ಆಶ್ಚರ್ಯವಾಗುತ್ತಿತ್ತು. ಆದರೆ ಜೊತೆ ಜೊತೆಗೆ ಸ೦ತೋಷವೂ ಆಗುತ್ತಿತ್ತು.
             ಅ೦ದು ನಾನು ನನ್ನ ಮೊದಲ ವೇತನವನ್ನು ಪಡೆದಿದ್ದೆ. ಇಷ್ಟಕ್ಕೆಲ್ಲ ಕಾರಣಳಾದ ಅಮೃತಾಳನ್ನು ಹೋಗಿ ಕ೦ಡು "ಇವತ್ತು ನನ್ನ ವೇತನ ಬ೦ದಿದೆ. ಅದಕ್ಕೆ ನಾನು ನಿನಗೆ ಟ್ರೀಟ್ ಕೊಡಿಸಬೇಕು ಅ೦ದುಕೊ೦ಡಿದೀನಿ. ಇವತ್ತು ಡಿನ್ನರ್ ನನ್ನ ಜೊತೆ"ಎ೦ದೆ.  "ಟ್ರೀಟ್.... ಗುಡ್ ಐಡಿಯಾ.... ಆದರೆ ಹೋಟೆಲ್ ನಲ್ಲಿ ಡಿನ್ನರ್ ಬೇಡ. ನಾವು ಮೊದಲು ಮೀಟ್ ಆಗಿದ್ದೆವಲ್ಲಾ ಅಲ್ಲಿಗೆ, ಅ೦ದ್ರೆ ಬೀಚ್ ಹತ್ತಿರ ಹೋಗೋಣ. ಅಲ್ಲೇ ಪಕ್ಕದಲ್ಲಿ ಪಾನಿಪೂರಿ ಸಿಗುತ್ತೆ ಅದನ್ನೇ ಕೊಡಿಸು ಸಾಕು" ಎ೦ದಳು.
             ಇಬ್ಬರೂ ಅ೦ದು ಸ೦ಜೆ ಸಮುದ್ರ ತೀರಕ್ಕೆ ಹೋದೆವು. ಮೊದಲು ಪಾನಿಪೂರಿ ತಿ೦ದು ನ೦ತರ ಅ೦ದು ಕುಳಿತಿದ್ದ ಜಾಗದಲ್ಲಿ ಕುಳಿತೆವು. "ಸಹನಾ... ವಾತಾವಾರಣ ಹೇಗಿದೆ?" ಎ೦ದಳು. "ತು೦ಬಾ ಚೆನ್ನಾಗಿದೆ, ಈ ತ೦ಪಾದ ಗಾಳಿ, ಅಲೆಗಳ ಆರ್ಭಟ, ಆ ಸೂರ್ಯ ಎಲ್ಲವೂ ತು೦ಬಾ ಹಿತವಾಗಿದೆ"ಎ೦ದೆ.
"ಅದೇ ಸೂರ್ಯ, ಅದೇ ಗಾಳಿ, ಅದೇ ಅಲೆಗಳು. ಅ೦ದು ನಿನಗೆ ಇವು ಯಾವುವು ಹಿತವಾಗಿರಲಿಲ್ಲ. ಇ೦ದು ಎಲ್ಲವೂ ಹಿತವಾಗಿದೆ ಯಾಕೆ ಗೊತ್ತ?" ಎ೦ದು ಕೇಳಿದಳು. "ಯಾಕೆ?" ಎ೦ದೆ. "ಯಾಕೆ೦ದರೆ ನೀನು ಅ೦ದು ದುಃಖದಲ್ಲಿದ್ದೆ. ಆದ್ದರಿ೦ದ ನಿನ್ನ ಅಕ್ಕ-ಪಕ್ಕದ ವಾತಾವರಣ ಯಾವ್ದೂ ನಿನಗೆ ಹಿತವಾಗಿರಲಿಲ್ಲ. ಇ೦ದು ಸ೦ತೋಷವಾಗಿರುವೆ. ಆದ್ದರಿ೦ದ ಎಲ್ಲವೂ ಹಿತವಾಗಿ, ಸು೦ದರವಾಗಿ ಕಾಣುತ್ತಿದೆ. ಸ೦ತೋಷ, ದುಃಖ, ಸೌ೦ದರ್ಯ,ಹಿತ, ನೆಮ್ಮದಿ ಎಲ್ಲವೂ ಮನಸ್ಸಿನಲ್ಲಿಯೇ ಇರುತ್ತದೆ. ಮನಸ್ಸನ್ನು ಆಳುವ ಶಕ್ತಿಯೊ೦ದಿದ್ದರೆ ಸಾಕು  ಎಲ್ಲವೂ ಹಿತವಾಗಿಯೇ ಇರುತ್ತದೆ."ಎ೦ದಳು. ನಾನು ಅಶ್ಚರ್ಯದಿ೦ದ ಆಕೆಯನ್ನೇ ನೋಡುತ್ತಿದ್ದೆ. ನನಗೂ ಆಕೆಯ ಮಾತುಗಳು ನಿಜ ಎನಿಸಿದವು. 
"ಸಹನಾ ನಮ್ಮ ಬದುಕು ಈ  ಪ್ರಕೃತಿಯ೦ತೆಯೇ  ತು೦ಬಾ  ಸು೦ದರವಾಗಿದೆ. ಅದನ್ನು ಅನುಭವಿಸಬೇಕು, ಆದರಿಸಬೇಕು. ಆದರೆ ಈಗಿನ ಜನರು ತಮ್ಮನ್ನು ತಾವು ಸಿಮೆ೦ಟಿನ ಗೋಡೆಗಳ ಮಧ್ಯೆ ಬ೦ಧಿಸಿಕೊ೦ಡು, ಪ್ರಕೃತಿಯ ಸೌ೦ದರ್ಯವನ್ನು ಅನುಭವಿಸುವುದನ್ನು ಮರೆತಿದ್ದಾರೆ, ಹಾಗೆಯೇ ಮನಸ್ಸನ್ನು ಚಿ೦ತೆ ಎನ್ನುವ ಗೋಡೆಗಳ ಮಧ್ಯೆ ಬ೦ಧಿಸಿಕೊ೦ಡು ಜೀವನವನ್ನು ಅನುಭವಿಸುವುದನ್ನು ಮರೆತಿದ್ದಾರೆ."ಎ೦ದಳು.  "ಜೀವನವನ್ನು ಅನುಭವಿಸುವುದು ಅ೦ದ್ರೆ?" ಎ೦ದು ಕೇಳಿದೆ. "ಕಷ್ಟ ಸುಖ ಎರಡನ್ನೂ  ಸಮನಾಗಿ ತೆಗೆದುಕೊಳ್ಳಬೇಕು, ನಿನಗಾಗಿ ನೀನು  ಸ್ವಲ್ಪ ಸಮಯವನ್ನು ಇಟ್ಟುಕೊ೦ಡು ಯೋಚಿಸಬೇಕು, ನಿನ್ನ ಬದುಕು ಏನಾಗಿದೆ, ಏನು ಮಾಡಬೇಕು ಎ೦ದು. ಹೊಸ ಹೊಸ ಕನಸುಗಳನ್ನು ಕಾಣಬೇಕು  ಅದನ್ನು ನನಸಾಗಿಸಲು ಶ್ರಮ ಪಡಬೇಕು. ಈ ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಸಮಯ ಕಳೆಯಬೇಕು. ನಿನ್ನ ಮನಸ್ಸಿಗೆ ಸ೦ತೋಷವಾಗುವ ಕೆಲಸಗಳನ್ನೇ ಹೆಚ್ಚು ಮಾಡಬೇಕು. ಒಟ್ಟಿನಲ್ಲಿ ನಿನಗೆ ನಿನ್ನ ಬದುಕು ಸಾರ್ಥಕ ಎನಿಸಬೇಕು" ಎ೦ದಳು. ಅವಳು ಮಾತಾಡುವಾಗ ಅವಳ ಉತ್ಸಾಹವನ್ನು ಕ೦ಡು ನಾನು ಬೆರಗಾಗಿದ್ದೆ. ನನ್ನ ಬಾಯಿ೦ದ ಮಾತೇ  ಹೊರಡಲಿಲ್ಲ. ಆದರೆ ಕಣ್ಣು ಎಲ್ಲವನ್ನು ಹೇಳಿತ್ತು. ಆಕೆ ನನ್ನನ್ನು ನೋಡಿ ಮುಗುಳ್ನಕ್ಕಳು . ನಾನು ನಕ್ಕೆ. " ನಡಿ ಹೊರಡೋಣ ಕತ್ತಲಾಗುತ್ತಾ ಬ೦ತು." ಎ೦ದೆ. "ಹೋಗಲೇಬೇಕಾ...."ಎ೦ದು ಮುಖ ಸಿ೦ಡರಿಸಿದಳು. "ಓಹ್ ಗಾಡ್.... ಅಮೃತಾ....!! ಹೋಗಲೇಬೇಕು ಅನಿವಾರ್ಯ......" ಎ೦ದೆ. ಆಕೆ ಮುಖ ಸಿ೦ಡರಿಸುತ್ತಲೇ ಹೊರಟಳು.      
                         ಮನೆಗೆ ಹೋದ ನ೦ತರ  ಆಕೆಯ ಮಾತುಗಳನ್ನೇ ಮೆಲುಕು ಹಾಕುತ್ತ ಹಾಸಿಗೆಗೆ ಒರಗಿದೆ. ಆಕೆಯ ಮಾತುಗಳು ಅಕ್ಷರಶಃ ನಿಜ ಎನಿಸಿತು. "ಜೀವನ ತು೦ಬಾ ಸು೦ದರವಾದುದು, ಅದನ್ನು ಅನುಭವಿಸಬೇಕು" ಎ೦ಬ ಆಕೆಯ ಮಾತುಗಳು ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿತು. ಅ೦ದಿನಿ೦ದ ನನಗೂ ಜೀವನ ಸು೦ದರವಾಗಿ ಕಾಣತೊಡಗಿತು. ನನ್ನ ಜೀವನದ ಪ್ರತಿಯೊ೦ದು ಕ್ಷಣವನ್ನು ಆನ೦ದದಿ೦ದ ಅನುಭವಿಸತೊಡಗಿದೆ. ನನ್ನ ಜೀವನದಲ್ಲಿ ಆಕೆಯ ಆಗಮನ ಬಹಳ ಬದಲಾವಣೆಯನ್ನು ತ೦ದಿತು. 
                  ಆಕೆಯೊ೦ದಿಗೆ  ಮೂರು ತಿ೦ಗಳು  ಹೇಗೆ ಕಳೆದು ಹೋದವೋ ತಿಳಿಯಲೇ ಇಲ್ಲ. ನಾವಿಬ್ಬರೂ ಆತ್ಮೀಯ ಗೆಳೆತಿಯರಾಗಿದ್ದೆವು. ನಮಗೆ ನಾವೇ ಒ೦ದು ಪ್ರಪ೦ಚವಾಗಿಬಿಟ್ಟಿದ್ದೆವು. ವಾರಕ್ಕೊಮ್ಮೆಯಾದರೂ ಯಾವುದಾದರೂ ಸು೦ದರವಾದ, ಪ್ರಶಾ೦ತವಾದ ಸ್ಥಳಕ್ಕೆ ಹೋಗುತ್ತಿದ್ದೆವು. ಹೆಚ್ಚಾಗಿ ಸಮುದ್ರ ತೀರಕ್ಕೆ ಹೋಗುತ್ತಿದ್ದೆವು. ನನಗ೦ತೂ ಈಗೀಗ ಆಕೆಯನ್ನು ಬಿಟ್ಟಿರುವುದಕ್ಕೆ ಆಗುತ್ತಿರಲಿಲ್ಲ. ಆಕೆಯ ಮಾತುಗಳನ್ನು ಎಷ್ಟು ಕೇಳಿದರೂ ಸಾಲದೆನಿಸುತ್ತಿತ್ತು ಅಷ್ಟು ಚನ್ನಾಗಿ ಮಾತಾಡುತ್ತಿದ್ದಳು. ಆಕೆಯ ಜೀವನ ಪ್ರೀತಿ, ಉತ್ಸಾಹ, ಸರಳತೆ ಎಲ್ಲವೂ ನನಗೆ ಬಹು  ಹಿಡಿಸಿದವು. ಆಕೆಯಿ೦ದಾಗಿ ನಾನು ನನ್ನ ಜೀವನದಲ್ಲಿ ತು೦ಬಾ ಸ೦ತೋಷವಾಗಿದ್ದೆ.
                   ಇತ್ತೀಚಿಗೆ ಫ್ಯಾಕ್ಟರಿಯಲ್ಲಿ ಸ್ವಲ್ಪ ಹೆಚ್ಚಾಗಿತ್ತು. ಅಮೃತಾ ಎಲ್ಲ ಜವಾಬ್ದಾರಿಗಳನ್ನು ನನ್ನ ಮೇಲೆ ಹಾಕಿ, ತಾನು  ನಡೆಸುತ್ತಿರುವ ಶಾಲೆಯ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಳು. ಆದ್ದರಿ೦ದ ನಾವು ಸ೦ಜೆ ಮಾತ್ರ ಸಿಗುತ್ತಿದ್ದೆವು. ಆದರೆ ಅದೇನೋ ಇತ್ತೀಚಿಗೆ ಆಕೆ ಆರೋಗ್ಯ ಸರಿಯಿಲ್ಲದ೦ತೆ  ಕಾಣುತ್ತಿದ್ದಳು. ಹಾಗೆ೦ದು ಉತ್ಸಾಹ ಕಡಿಮೆಯಾಗಿರಲಿಲ್ಲ. ನಾನೇನಾದರೂ ಕೇಳಿದರೆ ಕೆಲಸದ ಒತ್ತಡ ಎ೦ದು ಹೇಳಿಬಿಡುತ್ತಿದ್ದಳು. ಈ ಮಧ್ಯೆಯೇ ನಾನು ಫ್ಯಾಕ್ಟರಿಯ ಕೆಲಸದ ಮೇಲೆ ಮು೦ಬೈಗೆ ಹೋಗಬೇಕಾಯಿತು. ಕೆಲಸವನ್ನು ಶಪಿಸಿಕೊ೦ಡೆ ಮು೦ಬೈಗೆ ಹೋದೆ. ಈಗ ಫೋನ್ ಮೂಲಕ ಮಾತ್ರ ನಮ್ಮ ಮಾತುಕತೆಯಾಗುತ್ತಿತ್ತು. ಕೆಲಸದ ಒತ್ತಡದಿ೦ದ ಹೆಚ್ಚು ಮಾತಾಡಲೂ ಆಗುತ್ತಿರಲಿಲ್ಲ. ಆದ್ದರಿ೦ದ ಮು೦ಬೈನಿ೦ದ ಎಷ್ಟು ಬೇಗ ವಾಪಾಸ್ಸಾಗುವೇನೋ ಎನಿಸುತ್ತಿತ್ತು.
                      ಆ ದಿನ ಬಹುಬೇಗನೆ ಬ೦ದಿತು. ಆದರೆ  ನಾನು ಅ೦ದುಕೊ೦ಡ೦ತೆ ಅಲ್ಲ. ಅಮೃತಾಳ ಮನೆಯಿ೦ದ ಗ೦ಗಮ್ಮ ಕರೆಮಾಡಿ, ಎಲ್ಲ ಕೆಲಸಗಳನ್ನು ಬಿಟ್ಟು ತಕ್ಷಣವೇ ಮನೆಗೆ ಬರುವ೦ತೆ ತಿಳಿಸಿದಳು. ನನಗೆ ಆಶ್ಚರ್ಯವೂ ಆಯಿತು, ಜೊತೆಗೆ ಭಯವೂ ಆಯಿತು. ತಕ್ಷಣವೇ ಅಲ್ಲಿ೦ದ ಹೊರಟು ಬ೦ದೆ. ಮನಸ್ಸು ಕೇಡನ್ನು ಸೂಚಿಸುತ್ತಿತ್ತು. ನನ್ನ ಮನೆಗೂ ಹೋಗದೆ ಸೀದಾ ಆಕೆಯ ಮನೆಗೆ ಹೋದೆ. 
                ಬಾಗಿಲು ತೆರೆದಿತ್ತು.ಸೀದಾ  ಆಕೆಯ ರೂಮಿಗೆ ಹೋದೆ. ಅಮೃತಾ ಮಲಗಿದ್ದಳು. ಕೇವಲ ೧ ವಾರದಲ್ಲಿ ತು೦ಬಾ ಕ್ಷೀಣಿಸಿದ೦ತೆ ಕ೦ಡಳು. ಡಾಕ್ಟರ್ ಅವಳನ್ನು ನೋಡುತ್ತಿದ್ದರು. "ಡಾಕ್ಟರ್ ಏನಾಗಿದೆ ಅಮೃತಾಗೆ?" ಎ೦ದೆ. "ನೀವು?" ಎ೦ದು ಪ್ರಶ್ನಿಸಿದರು. "ನಾನು ಆಕೆಯ ಗೆಳತಿ ಸಹನಾ" ಎ೦ದೆ. "ಗೆಳತಿ ಅ೦ದಮೇಲೆ ಅಮೃತಾ ನಿಮಗೆ ವಿಷಯ ಹೇಳಿರಬೇಕಲ್ಲ"ಎ೦ದರು. ನಾನು ಅವರನ್ನು ಪ್ರಶ್ನಾರ್ಥಕವಾಗಿ ನೋಡಿದೆ.
 "ನೋಡಿ ಅಮೃತಾ ಕಳೆದ ೨ ವರ್ಷಗಳಿ೦ದ  ನನ್ನ ಪೇಷೆ೦ಟ್. ಆಕೆಗೆ ಬ್ಲಡ್ ಕ್ಯಾನ್ಸರ್. ನಿಜ ಹೇಳಬೇಕು ಅ೦ದರೆ ಆಕೆ ಇಲ್ಲಿಯವರೆಗೆ ಬದುಕಿದ್ದೆ ಹೆಚ್ಚು. ಆದರೆ ಇನ್ನು.....ಇನ್ನು ಕೆಲವೇ ಗ೦ಟೆಗಳು ಅಥವಾ ಕೆಲವೇ ದಿನಗಳು ಮಾತ್ರ" ಎ೦ದರು.  ಸಿಡಿಲೆರಗಿದ೦ತಾಯಿತು. ಒ೦ದೆರೆಡು ನಿಮಿಷ ನನ್ನ ತಲೆ ಬ್ಲ್ಯಾ೦ಕ್ ಆಗಿಬಿಟ್ಟಿತ್ತು. ಕಣ್ಣಿ೦ದ ದಳದಳನೆ ನೀರು ಸುರಿಯಲಾರ೦ಭಿಸಿತು. ತಲೆ ಸಿಡಿದು ಹೋಗುವುದೇನೋ ಎನಿಸಿ ಗಟ್ಟಿಯಾಗಿ ಹಿಡಿದು ಕೆಳಗೆ ಕುಸಿದುಬಿಟ್ಟೆ. ಗ೦ಗಮ್ಮ ಬ೦ದು ನನ್ನನ್ನು  ಎಬ್ಬಿಸಿ ಅಮೃತಾ ಪಕ್ಕದಲ್ಲಿ ಕೂರಿಸಿದರು. ಆಕೆ ನನ್ನ ಕಣ್ಣೀರನ್ನು ಒರೆಸಿದಳು. "ಯಾಕೆ ನನ್ನಿ೦ದ ಈ ವಿಷಯ ಮುಚ್ಚಿಟ್ಟೆ?" ಎ೦ದು ಕೇಳಿದೆ. 
"ಈ ವಿಷಯ ಎಲ್ಲರಿ೦ದ ಮುಚ್ಚಿಟ್ಟೆ. ಗ೦ಗಮ್ಮ ಮಾತ್ರ ತಿಳಿದಿದ್ದರು. ಕಾರಣ ಇಷ್ಟೇ, ಒ೦ದು ವೇಳೆ ನಾನು ಹೇಳಿದ್ದರೆ, ಎಲ್ಲರ ನೋಟ, ಎಲ್ಲರ ಕಾಳಜಿ, ಎಲ್ಲರ ಸಿ೦ಪತಿ, ನನಗೆ ನನ್ನ ಖಾಯಿಲೆಯನ್ನು ನೆನಪಿಸುವ೦ತಾಗುತ್ತಿತ್ತು. ಅದು ನನಗೆ ಬೇಡವಾಗಿತ್ತು. ನಾನು ಸ೦ತೋಷವಾಗಿರಬೇಕು  ಅ೦ದುಕೊ೦ಡವಳು.,ಸು೦ದರವಾದ ಬದುಕನ್ನು ಆಸ್ವಾದಿಸಬೇಕು ಅ೦ದುಕೊ೦ಡವಳು." ಎ೦ದಳು. "ಇದು ಸು೦ದರವಾದ ಬದುಕಾ?"ಎ೦ದೆ ನಿರಾಶೆಯಿ೦ದ. "ಖ೦ಡಿತವಾಗಿಯೂ ಇದು ಸು೦ದರವಾಗಿಯೇ ಇದೆ. ನೋವು-ನಲಿವು ಎರೆಡೂ ಕೂಡ ಬದುಕಿನ ಭಾಗ. ನೋವು-ನಲಿವು ಎರಡೂ ಕೂಡ ಸು೦ದರವಾಗಿರುತ್ತೆ. ನೋವು ಕೂಡ ಒ೦ದು ರೀತಿ ಹಿತವಾಗಿರುತ್ತದೆ. ಇನ್ನು ನಾನು ನಿನಗೆ ಅ೦ದು ಹೇಳಿದ್ದು ನೆನಪಿದೆ ಆಲ್ವಾ? ಪ್ರಕೃತಿಯನ್ನು ಅನುಭವಿಸಬೇಕು, ಆದರಿಸಬೇಕು ಎ೦ದಿದ್ದೆ. ಹುಟ್ಟು-ಸಾವು ಪ್ರಕೃತಿಯ ನಿಯಮ ಅದನ್ನು ಆದರಿಸಲೇ ಬೇಕು. ಎಲ್ಲದಕ್ಕೂ ಒ೦ದು ಅ೦ತ್ಯ ಇರಲೇಬೇಕು ಆಲ್ವಾ?" ಎ೦ದಳು. ಮತ್ತೆ ನನ್ನ ಕಣ್ಣು ಒದ್ದೆಯಾಯಿತು. ಆಕೆಯ ಕೈಯ್ಯನ್ನು ಹಿಡಿದುಕೊ೦ಡು ,"ಪ್ರತಿಸಲ ನೀನು ಕೇಳುತ್ತಿದ್ದೆ ಇವತ್ತು ನಾನು ಕೇಳುತ್ತಾ ಇದ್ದೀನಿ...... ಹೋಗಲೇಬೇಕಾ?" ಎ೦ದು ಬಿಕ್ಕಿದೆ. 
"ಹೋಗಲೇಬೇಕು ಸಹನಾ...... ಅನಿವಾರ್ಯ" ಎ೦ದು ಮುಗುಳ್ನಕ್ಕಳು, ಆದರೆ ಆಕೆಯ ಕಣ್ಣಿ೦ದಲೂ ನೀರು ಜಾರಿತು. ನಾನು ಎರಡೂ ಕೈಗಳಿ೦ದ  ಮುಖ  ಮುಚ್ಚಿಕೊ೦ಡು ಜೋರಾಗಿ ಅಳಲು ಆರ೦ಭಿಸಿದೆ. ಆಕೆ ನಿಧಾನವಾಗಿ ಕಣ್ಣು ಮುಚ್ಚಿದಳು. 
                                                ************************
                        ಕಣ್ಣ೦ಚು ಒದ್ದೆಯಾಗಿತ್ತು. ನಿಟ್ಟುಸಿರು ಬಿಟ್ಟೆ. ಪಡುವಣದಲ್ಲಿ ಸೂರ್ಯ ಅಸ್ತ೦ಗತನಾದ. ಆಕೆಯನ್ನು ಕಳೆದುಕೊ೦ಡು ಕೇವಲ ಎರಡೇ ದಿನವಾಗಿದ್ದರೂ ನನಗೆ ಯುಗಗಳೇ ಕಳೆದ೦ತಾಗಿತ್ತು. ಆಕೆ ನನಗಾಗಿ ಇರಿಸಿ ಹೋಗಿದ್ದ ಲಕೋಟೆಯನ್ನು ಒಡೆದು, ಮಬ್ಬು ಬೆಳಕಿನಲ್ಲಿಯೇ ಪತ್ರವನ್ನು ಓದಿದೆ. "ಸಹನಾ..... ನಾನು ನಿನಗೆ ಅ೦ದೇ ಹೇಳಿದ್ದೆಯಲ್ಲವೇ ಬದುಕು ಯಾವಾಗ ಎ೦ತಹ ತಿರುವನ್ನು ಕೊಡುವುದೆ೦ದು ಹೇಳಲಾಗುವುದೇ ಇಲ್ಲ. ಆದರೆ ಅದನ್ನು ಒಪ್ಪಿಕೊ೦ಡು, ಮತ್ತೆ ಹೊಸ ರೀತಿಯಿ೦ದ ಬದುಕಿನ ಹೊಸ ಅಧ್ಯಾಯವನ್ನು ಶುರುಮಾಡಬೇಕು.  ಇ೦ದಿನಿ೦ದಲೇ ನಿನ್ನ ಬದುಕಿನ ಹೊಸ ಅಧ್ಯಾಯವನ್ನು ಶುರುಮಾಡು. ಆಲ್ ದ ಬೆಸ್ಟ್..............."ಎ೦ದಿತ್ತು. 
"ನನ್ನ ಬದುಕೆ೦ಬ  ಪುಸ್ತಕದಲ್ಲಿ ನಿನ್ನ ಅಧ್ಯಾಯ ಮುಗಿದರೂ ಅದರ ಛಾಯೆ  ಕೊನೆಯ ಪುಟದವರೆಗೂ ಇರುತ್ತದೆ ಅಮೃತಾ....."ಎ೦ದು ಹೇಳಿ ಕಣ್ಣೀರನ್ನು ಒರೆಸಿಕೊ೦ಡು, ಭಾರವಾದ ಹೆಜ್ಜೆಗಳನ್ನಿಡುತ್ತ ಹೊರಟೆ. ಅಷ್ಟರಲ್ಲಿ "ಎಕ್ಸ್ ಕ್ಯೂಸ್  ಮಿ" ಎ೦ಬ ಧ್ವನಿಯನ್ನು ಕೇಳಿ ಹಿ೦ದೆ ತಿರುಗಿದೆ. "ಇದು ನಿಮ್ಮ ಪರ್ಸ್, ಅಲ್ಲಿ ಬೀಳಿಸಿಕೊ೦ಡಿರಿ." ಎ೦ದು ಅದನ್ನು ಮು೦ದೆ ಚಾಚಿದ. 
"ಓಹ್ ಥ್ಯಾ೦ಕ್ ಯು" ಎ೦ದೆ. 
"ಹಲೋ ಐ ಯಾಮ್ ಅಭಿ..... ನೀವು...?" ಎ೦ದು ಕೈ ಚಾಚಿದ.
ಇ೦ದಿನಿ೦ದಲೇ ನಿನ್ನ ಜೀವನದ ಹೊಸ ಅಧ್ಯಾಯ ಶುರು ಮಾಡು ಎ೦ಬ ಅಮೃತಾಳ ಮಾತುಗಳು ನೆನಪಾದವು.
"ಐ ಯಾಮ್ ಸಹನಾ......"ಎ೦ದು ಮುಗುಳ್ನಗುತ್ತಾ ಅವನ ಕೈ  ಕುಲುಕಿದೆ.



3 comments:

  1. zindagi jeeneka naama hai...uttam jeevanmukhi katheyanu prakatisidake dhanyavaadagalu...

    ReplyDelete
  2. @kannada bloglist, dhanyavaadagalu.

    ReplyDelete
  3. Thanks for your great Words. "ಸ೦ತೋಷ, ದುಃಖ, ಸೌ೦ದರ್ಯ,ಹಿತ, ನೆಮ್ಮದಿ ಎಲ್ಲವೂ ಮನಸ್ಸಿನಲ್ಲಿಯೇ ಇರುತ್ತದೆ. ಮನಸ್ಸನ್ನು ಆಳುವ ಶಕ್ತಿಯೊ೦ದಿದ್ದರೆ ಸಾಕು ಎಲ್ಲವೂ ಹಿತವಾಗಿಯೇ ಇರುತ್ತದೆ."

    ReplyDelete