Monday, November 28, 2011

ಮೋಹ

                                               ಮೋಹ
                                          ಇಟ್ಟಿಗೆ-ಸಿಮೆ೦ಟಿನ ಕಟ್ಟಡದೊ೦ದಿಗೆ ಇ೦ತಹದೊ೦ದು ಬಾ೦ಧವ್ಯ ಬೆಳೆದುಕೊಳ್ಳಬಹುದೆ೦ದು ತಿಳಿದೇ ಇರಲಿಲ್ಲ......ಮನುಷ್ಯನ ಭಾವನೆಗಳಿಗೆ ಎಷ್ಟೊ೦ದು ಶಕ್ತಿಯಿದೆ...!!! ಅವನು ನಿರ್ಜೀವ ವಸ್ತುಗಳಿಗೂ ಜೀವ ತು೦ಬಬಲ್ಲ ಎ೦ದು ಈಗ ಅರಿವಾಗಿತ್ತು.
               ರೂಮಿನಲ್ಲಿ ಜೋಡಿಸಿಡಬೇಕಾಗಿದ್ದ ವಸ್ತುಗಳೆಲ್ಲಾ ನೆಲದ ಮೇಲೆ ಹಾಗೆ ಬಿದ್ದಿದ್ದವು. ನಾನೂ ಕೂಡ ಆ ವಸ್ತುಗಳ೦ತೆ ಮ೦ಚದ ಮೇಲೆ ಕುಳಿತಿದ್ದೆ. ದೇಹ ಇಲ್ಲಿತ್ತು, ಮನಸ್ಸು ಮತ್ತೆಲ್ಲೋ..ಹೇಳಲಾರದ ನೋವಿತ್ತು ಮನದಲ್ಲಿ, ತುಟಿಯಲ್ಲಿ ಮೌನ........
                 ಇ೦ದು ಬೆಳಿಗ್ಗೆಯಷ್ಟೆ ನಮ್ಮ ಕುಟು೦ಬ ಹಳ್ಳಿಯಲ್ಲಿದ್ದ ಮನೆಯನ್ನು ಬಿಟ್ಟು ನಗರದಲ್ಲಿಯ ಮನೆಯೊ೦ದನ್ನು ಸೇರಿದ್ದೆವು. ಆದರೆ ಅದೇಕೋ ಈ ಹೊಸಮನೆ ಕೇವಲ ಇಟ್ಟಿಗೆ - ಸಿಮೆ೦ಟಿನ ಕಟ್ಟಡವೆನಿಸುತ್ತಿತ್ತು. ಮನೆಯೆ೦ದಾಕ್ಷಣ ನನ್ನ ಹಳೆ ಮನೆಯೇ ಕಣ್ಣ ಮು೦ದೆ ಸುಳಿಯುತ್ತಿತ್ತು. ಆಗಲೇ ಬೇಕು ಕೂಡ....೨೦ ವರ್ಷಗಳ ನೆನಪುಗಳಿವೆಯಲ್ಲಾ ಅಲ್ಲಿ..........

                           ನಾನು ಮೊದಲ ಸಾರಿ ಕಣ್ಣು ತೆರೆದು, ನನ್ನ ಜೀವನ ಆನ೦ದಿಸಲು ಶುರುಮಾಡಿದ ಮನೆ ಅದು...ನನಗೆ ನಗುವುದನ್ನು - ಅಳುವುದನ್ನು ಕಲಿಸಿಕೊಟ್ಟ ಮನೆ ಅದು. ಆ ಮನೆಯಲ್ಲಿ ಪುಟ್ಟ-ಪುಟ್ಟ ಹೆಜ್ಜೆಗಳನ್ನು  ಇಟ್ಟು ನಡೆಯುವುದನ್ನು ಕಲಿತೆ, ಬಡಬಡನೆ ಮಾತನಾಡಲು ಹಾಗೂ ಡೊ೦ಕು ಡೊ೦ಕು ಅಕ್ಷರಗಳನ್ನು ಬರೆಯುವುದನ್ನು ಕೂಡ ಕಲಿತೆ. ನನ್ನಲ್ಲಿ ಹೊಸ ಹೊಸ ಕನಸುಗಳನ್ನು ಚಿಗುರಿಸಿದ ಮನೆ ಅದು....ನನ್ನ ಪ್ರತಿ ನಗುವಿಗೆ ಪ್ರತಿಧ್ವನಿಸಿತ್ತು, ಸಾಕ್ಷಿಯಾಗಿತ್ತು. ನನ್ನ ಪ್ರತಿ ನೋವಿಗೆ ಸ್ಪ೦ದಿಸಿತ್ತು. ಗೋಡೆಗೆ ತಲೆಯಾನಿಸಿ ಕಣ್ಣೀರಿಟ್ಟಾಗ ಆಸರೆಯಾಗಿತ್ತು. ಆ ಮನೆಯ ಪ್ರತಿ ಮೂಲೆಗಳು ಎಷ್ಟೋ ನೆನಪುಗಳಿಗೆ ಕಾರಣವಾಗಿತ್ತು. ಆ ಮನೆಗೂ ಜೀವವಿದೆಯೆನೋ ಎನಿಸುತ್ತಿತ್ತು. ನಾವು ಅದನ್ನು ಬಿಟ್ಟು ಹೊರಡುವಾಗ "ನನ್ನನ್ನೇಕೆ ಹೀಗೆ ಅನಾಥವಾಗಿ ಬಿಟ್ಟು ಹೋಗುತ್ತಿರುವೆ " ಎ೦ದು ಕೇಳಿದ೦ತೆ ಭಾಸವಾಗಿತ್ತು. ಆದರೆ ನಾನು ವಿವಶಳಾಗಿದ್ದೆ. 
               ಎಷ್ಟೋ ಸಲ ಆಶ್ಚರ್ಯವಾಗುತ್ತದೆ, ಇಟ್ಟಿಗೆ - ಸಿಮೆ೦ಟು, ಮರಳಿನಿ೦ದ ಮಾಡಿದ ನಿರ್ಜೀವ ಕಟ್ಟಡದೊ೦ದಿಗೆ ಇಷ್ಟೊ೦ದು ಆಪ್ಯಾಯತೆ ಹೇಗೆ ಎ೦ದು.....?!! ಬಹುಶಃ ನಾವುಗಳೇ ಅದಕ್ಕೆ ಜೀವ ತು೦ಬುತ್ತೇವೆ...ನಮ್ಮ ಭಾವನೆಗಳಿ೦ದ...ನೆನಪುಗಳಿ೦ದ.....ಈ ಹೊಸ ಕಟ್ಟಡವೂ ’ನಮ್ಮಮನೆ’ ಆಗುವುದು. ಆದರೆ ಅದಕ್ಕೆ ಬಹಳ ಕಾಲ ಹಿಡಿಯಬಹುದು............
                        ಬಾಗಿಲ ಬಳಿ ಶಬ್ದವಾಗಿದ್ದನ್ನು ಕೇಳಿ ಹಿ೦ದೆ ತಿರುಗಿದೆ. ಅಪ್ಪ ನನ್ನನ್ನು ಊಟಕ್ಕೆ ಕರೆಯಲು ಬ೦ದಿದ್ದರು. ಕಣ್ಣ೦ಚಿನಲ್ಲಿದ್ದ ನೀರನ್ನು ಒರೆಸಿಕೊ೦ಡೆ. ಆಗ ಅಪ್ಪ "ಇದನ್ನೇ ಮೋಹ ಎನ್ನುವುದು." ಎ೦ದರು. ನಾನು ಆಶ್ಚರ್ಯದಿ೦ದ ಅವರನ್ನು ನೋಡಿದೆ. 
"ನೀನೇನು ಯೋಚಿಸುತ್ತಿದ್ದೀಯ ಎ೦ದು ನನಗೆ ಗೊತ್ತಮ್ಮ.....ಆ ಮನೆಯ ಮೇಲಿನ ಮೊಹವೇ ನಿನ್ನನ್ನ ಈ ರೀತಿ ಮ೦ಕಾಗಿ ಕೂರಿಸಿದೆ ಅಲ್ವಾ..? ನೋಡು ಒ೦ದು ಕಟ್ಟಡಕ್ಕೆ ನಾವು  ನಮ್ಮ ಭಾವನೆಗಳಿ೦ದ ಜೀವ ತು೦ಬುತ್ತೇವೆ, ಅದೇ ರೀತಿ ಈ ದೇಹಕ್ಕೆ ಆತ್ಮ ಜೀವ ತು೦ಬುತ್ತದೆ. ಈಗ ನಾವು ಆ ಮನೆ ಬಿಟ್ಟು ಈ ಮನೆಗೆ ಬ೦ದಿದ್ದೇವೆ, ಅದೇ ರೀತಿ ನಾಳೆ ಈ ಆತ್ಮ ದೇಹವನ್ನು ಬಿಟ್ಟು ಬೇರೆ ದೇಹವನ್ನು ಆಶ್ರಯಿಸುತ್ತದೆ.  ಇದು ಪ್ರಕೃತಿಯ ಪ್ರಕ್ರುತಿಯ ನಿಯಮ. ನಾವದನ್ನು ಪಾಲಿಸಲೇ ಬೇಕು. ನಾವು ಒ೦ದೇ ಕಡೆ ನಿಲ್ಲಲಾಗುವುದಿಲ್ಲ. ಆತ್ಮಕ್ಕೆ ಈ ದೇಹ ಮನೆ ಇದ್ದ೦ತೆ, ಈ ದೇಹವೇ ಶಾಶ್ವತವಲ್ಲದ ಮೇಲೆ ಆ ಮನೆ ಯಾವ ಲೆಕ್ಕ......ಅದಕ್ಕೆ ಈ ಮೋಹಗಳಿ೦ದ ಆದಷ್ಟು ಬೇಗ ಹೊರ ಬರಬೇಕು......ಈಗ ಅದೆಲ್ಲಾ ಬಿಟ್ಟು ಊಟಕ್ಕೆ ಬಾ...ಹೊತ್ತಾಯಿತು" ಎ೦ದು ಹೇಳಿ ರೂಮಿನಿ೦ದ ಹೊರನಡೆದರು..
                    ಅಪ್ಪ ಹೇಳಿದ್ದು ಅಕ್ಷರಶಃ ಸತ್ಯ...ಆದರೆ ಈ ಮೋಹಗಳಿ೦ದ ಹೊರಬರುವುದು ಅಷ್ಟು ಸುಲಭವೇ..........??? ತಿಳಿಯಲಿಲ್ಲ...ಸುಮ್ಮನೆ ಎದ್ದು ಊಟಕ್ಕೆ ಹೊದೆ.......

19 comments:

 1. ಚೆನ್ನಾಗಿದೆ..
  ಆಪ್ತ ಬರಹ.

  ReplyDelete
 2. ಶೃತಿ...

  ತುಂಬಾ ಸೊಗಸಾದ ಲೇಖನ...

  ನನಗೂ ಈ ಇಟ್ಟಿಗೆ ಸಿಮೆಂಟಿನ ಕಟ್ಟಡಕ್ಕೂ ಬಹಳ ದೊಡ್ಡ ನಂಟಿದೆ..

  ಮಾಲಿಕರ ಬಳಿ ಗುತ್ತಿಗೆ ಪಡೆದು..
  ತಳ ಪಾಯದಿಂದ ಹಿಡಿದು..
  ಅದಕ್ಕೆ ಅಲಂಕಾರ.. ಎಲ್ಲವನ್ನೂ ವ್ಯವಸ್ಥೆಯನ್ನೂ ಮಾಡಿ..
  ಆಮೇಲೆ ನನ್ನದೇನೂ ಇಲ್ಲ.. ಎಂದು ಹಣ ಸ್ವೀಕರಿಸಿ ಹೋಗುವದಿದೆಯಲ್ಲ... ಇದು ನನಗೂ ಬೇಸರ ತರಿಸುತ್ತದೆ...

  ಆ ಮನೆಯನ್ನು ಕಟ್ಟುವಾಗ ಅಲ್ಲಿ ಹಣ ಹೊಂದಿಸಲು...
  ಕೆಲಸ ಸರಿ ಆಗದಿದ್ದಾಗ ಕೆಲಸಗಾರ ಬಳಿ ಜಗಳ ಆಡಿರುತ್ತೇನೆ..

  ಹಾಗೆ ಮಾಲಿಕರಿಗೂ ನನಗೂ ಸಹ ಮಾತಿನ ಚಕಮುಕಿ ನಡೆದಿರುತ್ತದೆ..

  ಅಲ್ಲಿ ಕಾಲು ಎಡವಿ ಬಿದ್ದು ನೋವು ಕೂಡ ಆಗಿರುತ್ತದೆ..

  ಅಲ್ಲಿ ಕಷ್ಟದ ಕೆಲಸಗಳಾದ "ರೂಫ್ ಕಾಂಕ್ರೀಟ್" ಚೆನ್ನಾಗಿ ಮುಗಿದಾಗ ಸಂತಸವೂ ಆಗಿರುತ್ತದೆ..

  ನಮ್ಮ ಭಾವಗಳನ್ನು ಸೇರಿಸಿ ನಾವು ಅಲ್ಲಿರುತ್ತೇವೆ..
  ವ್ಯವಹಾರ ಮಾತ್ರವೇ ಅಲ್ಲವೇ ಅಲ್ಲ...

  ಆದರೂ ಒಂದು ವರ್ಷದ ಒಡನಾಟ ಗೃಹಪ್ರವೇಶ ಆದನಂತರ
  ಏನೂ ಆಗಿಲ್ಲ ಎನ್ನುವಂತೆ ಹೋಗಬೇಕಾದ ಅನಿವಾರ್ಯತೆ ಇದೆಯಲ್ಲ ಅದು ಬಹಳ ಕಷ್ಟ..

  ಕೆಲವು ಮಾಲಿಕರು ಹಣ ಕೊಡದೆ ಸತಾಯಿಸುವದೂ ಇದ್ದಿರುತ್ತದೆ ಅದು ಬೇರೆ ವಿಚಾರ..

  ನಿಮ್ಮ ತಂದೆಯವರ ನುಡಿ ನಮಗೆಲ್ಲ ಗೊತ್ತಿರುವದೇ ಆಗಿದ್ದರೂ...
  ಹೃದಯದೊಳಕ್ಕೆ ಇಳಿದುಬಿಡುತ್ತದೆ..

  ಒಂದು ಚಂದದ ಲೇಖನಕ್ಕಾಗಿ ಧನ್ಯವಾದಗಳು...

  ReplyDelete
 3. ಒಳ್ಳೆಯ ಬರಹ ಶೃತಿ.
  ಕೆ.ಎಸ್.ನ ಬರೆದಂತೆ ಮನೆಯಿಂದ ಮನೆಗೆ ಅಲ್ಲವೇ?

  ನಾನೂ ಹಳ್ಳಿ ಬಿಟ್ಟು ಬಂದವನೇ, ವಿಶಾಲ ಮನೆಯಲ್ಲೇ ಹುಟ್ಟಿ ಬೆಳೆದವನಿಗೆ, ನಗರದ ಇಕ್ಕಟ್ಟಾದ ಉಸಿರು ಕಟ್ಟಿಸೋ ಬಾಡಿಗೆ ಮನೆಗಳಲ್ಲಿ ಬದುಕು ಸವೆಸಬೇಕಾದ ಅನಿವಾರ್ಯತೆಗೆ ಎಷ್ಟು ನೊಂದಿದ್ದೇನೋ.

  ಇನ್ನೊಂದು ಆಯಾಮವೂ ಇದೆ, ಇಟ್ಟಿಗೆಸೀಮೆಂಟು ಪಕಾಸಣ್ಣನ ಬ್ಲಾಗು.

  ReplyDelete
 4. ಚೆ​ಂದದ ಬರಹ... ಓದಿ ಮನಸಿಗೆ ಖುಷಿಯೂ ಆಯಿತು.. ಬೇಸರವೂ ಆಯಿತು...

  ReplyDelete
 5. nijavagiyu bahaLa aaptavaagide nimma lekhana

  ReplyDelete
 6. @ಪ್ರಕಾಶಣ್ಣ ನೀ ಹೇಳಿದ್ದು ನಿಜ...ಎಷ್ಟೊ ದಿನಗಳಿ೦ದ ಕಾಳಜಿ ವಹಿಸಿ ನಿರ್ಮಿಸಿದ ಮನೆಯನ್ನು ಇನ್ನೊಬ್ಬರ ಕೈಗಿತ್ತು ಬರುವುದು ಕಷ್ಟವೇ.......
  @ಬದ್ರಿನಾಥ್ ಅವ್ರೆ...ನಾವೆಲ್ಲ ನಾವೆಲ್ಲ ಅನಿವಾರ್ಯತೆಗಳಿ೦ದ ಬ೦ಧಿತಾಗಿದ್ದೇವೆ..ಏನು ಮಾಡೋಕೆ ಆಗಲ್ಲ.....

  ReplyDelete
 7. Really good one... :) Touched my heart ....

  ReplyDelete
 8. ಬದರಿ ಭಾಯ್..

  ವಿಷಯ ಏನು ಗೊತ್ತಾ?

  ಒಂದಲ್ಲ ಒಂದು ದಿನ ಎಲ್ಲರೂ ಮನೆಯನ್ನು ಖಾಲಿ ಮಾಡಿಹೋಗಲೇ ಬೇಕು..
  ಇಲ್ಲಿ ಯಾವುದೂ ಸ್ವಂತದ್ದಲ್ಲ...
  ಶಾಶ್ವತವೂ ಅಲ್ಲ...

  ಆದರೆ ಮನೆಬಿಟ್ಟು ಹೋಗುವ ವಿಷಯ ಮೊದಲೇ ಗೊತಾಗುವುದುದಿದೆಯಲ್ಲ.. ಅದು ಕಷ್ಟ.. ಮನಸ್ಸಿಗೆ ನೋವು ಕೊಡುತ್ತದೆ..

  ಇಲ್ಲಿ ನಾವೆಲ್ಲ ಮನೆ ಸ್ವಂತದ್ದು.., ನಾವು ಇಲ್ಲ ಶಾಶ್ವತ ಎನ್ನುವ ಭ್ರಮೆಯಲ್ಲೇ ಇದ್ದಿರುತ್ತೇವೆ..

  ಅದು ಒಂಥರಾ ಧೈರ್ಯವೋ.. ಅಜ್ಞಾನವೋ..
  ಒಟ್ಟಿನಲ್ಲಿ ಭರವಸೆಯನ್ನಂತೂ ಕೊಟ್ಟಿರುತ್ತದೆ.. ಅಲ್ಲವಾ?

  ಈ ವಿಷಯವನ್ನೆಲ್ಲ ಗಮನದಲ್ಲಿಟ್ಟು ಲೇಖನ ಓದಿದಾಗ "ಶೃತಿಯ ಲೇಖನ" ವಿಶೇಷ ಎನಿಸುತ್ತದೆ..
  ಎಲ್ಲೋ ಒಂದು ಕಡೆ ಚುಚ್ಚುತ್ತದೆ..
  ನೋವಾಗುತ್ತದೆ..

  ReplyDelete
 9. Dear Shruti,
  As a first time visitor, I read thro' some of your older posts too. Nice blog. Best wishes...

  ReplyDelete
 10. ತುಂಬಾ ಚೆನ್ನಾಗಿದೆ ಶೃತಿ.. ಯಾವುದೇ ವಸ್ತುವನ್ನಾದರೂ ನಾವು ಹಚ್ಚಿಕೊಂಡಷ್ಟೂ ಬಿಡುವುದು ಕಷ್ಟ.. ಯಾವಾಗಲೂ ಹಾಕುತ್ತಿದ್ದ ಅಂಗಿ ಹಳೆಯದಾದರೇನೇ ಅದನ್ನು ಮೂಲೆಗಿಡಲು ಬೇಸರ ಹಲವರಿಗೆ.. ಅಷ್ಟು ಆ ಅಂಗಿಯನ್ನು ಹಚ್ಚಿಕೊಂಡಿರುತ್ತೇವೆ. ಇದೇ ರೀತಿ, ನಾಯಿ, ಬೆಕ್ಕುಗಳ ಮೇಲೂ ಮೋಹ ಜಾಸ್ತಿಯೇ.. ಇನ್ನು ಹುಟ್ಟಿನಿಂದ ಬೆಳೆದ ಮನೆಯನ್ನು ಬಿಟ್ಟು ಬೇರೆಡೆ ಸಾಗುವುದೂ ಕಷ್ಟವೇ.. ನಾವು ಅಂಬೆಗಾಲಿಟ್ಟ, ಓಡಿದ್ದೆಲ್ಲಾ ನೆನಪಿನಲ್ಲಿ ಉಳಿದಿರದಿದ್ದರೂ ಅದರದ್ದೊಂದು ಅಪ್ಯಾಯತೆ ನಮಗೆ. ಆ ನೆಲ, ಗೋಡೆಯ ಬಣ್ಣ ಹೀಗೆ ಪ್ರತಿಯೊಂದೂ ತನ್ನದೇ ಆದ ನೆನಪನ್ನು ಹೊತ್ತಿರುತ್ತದೆ. ಆ ಮನೆಯನ್ನು ಬಿಟ್ಟು ಬೇರೆಡೆ ಹೋಗುವುದೆಂದರೆ ಆ ನೆನಪು, ಖುಷಿಗಳನ್ನೆಲ್ಲಾ ವಾಪಾಸು ಮಾಡಿ ಹೋಗುವುದಾ ಎಂದೆನಿಸುತ್ತದೆ ..
  ಮನೆಯ ಬಗ್ಗೆಯೇ ಸುಮಾರು ಆಲೋಚಿಸುವಂತೆ ಮಾಡಿತು ನಿಮ್ಮ ಬರಹ.. ಮತ್ತೊಮ್ಮೆ ಅದಕ್ಕಾಗಿ ಅಭಿನಂದನೆಗಳು :-)

  ReplyDelete
 11. ಆಪ್ತವಾದ ಬರಹ ಶ್ರುತಿ :-)

  ReplyDelete
 12. 'ಅಲ್ಲಿದೆ ನಮ್ಮ ಮನೆ,ಇಲ್ಲಿರುವುದು ಸುಮ್ಮನೇ'ಹಾಡು ನೆನಪಾಯಿತು.ಸುಂದರ ಬರಹ.

  ReplyDelete
 13. ಶೃತಿರಾವ್‌,
  ನಿಮ್ಮ ಬರಹ ಆಪ್ತವಾಗಿದೆ ಮತ್ತು ಚಿಂತನಾಶೀಲವಾಗಿದೆ. ಯಾವುದೇ ಒಬ್ಬ ವ್ಯಕ್ತಿಗೆ ಯಾವುದೇ ವಸ್ತುವಿನಲ್ಲಿ ಆಪ್ತತೆ, ಪ್ರೀತಿ ಇದ್ದಲ್ಲಿ ಅದನ್ನು ಬೇರೊಬ್ಬರಿಗೆ ಬಿಟ್ಟುಕೊಡುವಾಗ, ಮನೆ ಮಾರುವಾಗ, ತಾವು ಇಷ್ಟಪಟ್ಟು ಕೊಂಡಿದ್ದ ಯಾವುದೇ ವಸ್ತುವನ್ನು ಅನಿವಾರ್ಯತೆಯಿಂದಾಗಿ ಮಾರುವಾಗ... ಇಂತಹ ಒಂದು ಅನುಭವವಾಗುತ್ತದೆ. ಕಾಲ ಸಂದಂತೆ ಹೊಸ ಜಗತ್ತಿಗೆ ಹೊಂದಿಕೊಳ್ಳುತ್ತಾ.. ಮತ್ತೆ ಮೋಹಜಾಲದಲ್ಲಿ ನಮಗರಿವಿಲ್ಲದಂತೆಯೇ ಸಿಲುಕುತ್ತೇವೆ.

  ಹೊಸಮನೆಯು ನಿಮಗೆ ಹಳೆಯ ನೆನಪುಗಳೊಂದಿಗೆ ಹೊಸತನ್ನೂ ನೀಡಲಿ...

  ಸ್ನೇಹದಿಂದ,

  ReplyDelete
 14. ಶೃತಿ...
  ಮನೆ ಜೊತೆಗಿನ ಸಂಬಂಧವೇ ಹಾಗೇ.....

  ಬೇಜಾರಾದಾಗ ಮನೆಯ ಟೆರೇಸಿನ ಬೆತ್ತದ ಚೇರ್ ಗೆ ಹೋಗೋಣಾ ಅನ್ಸುತ್ತೆ.

  ಹಳೆಯ ನೆನಪನ್ನ ಮಾಡಿಕೊಳ್ಳೋಕೆ ಮನೆಯ ಬಾಗಿಲಿಗೆ ಚಿಕ್ಕವರಿದ್ದಾಗ ಶೇಡಿಯಲ್ಲಿ ಅದ್ದಿ ಮೂಡಿಸಿದ ಪಾದದ ಗುರುತಿರುತ್ತೆ....

  ಹಳೆಯ ಬೇರನ್ನು ನೆನೆದುಕೊಳ್ಳೋಕೆ ಅಜ್ಜ ಕೂರುತ್ತಿದ್ದ ತೂಗು ಮಂಚವಿರುತ್ತೆ ....
  ಕಡಗೋಲು ಕಂಬ ಕಂಡಾಗಲೆಲ್ಲ ಕಟ್ಟಿ ಊಟ ಮಾಡಿಸುವ ಅಜ್ಜಿಯ ನೆನಪಾಗುತ್ತೆ....
  ಪ್ರೀತಿಯ ಕೋಡಿ ಆ ಮನೆಯೊಂದಿಗೇ ಹರಿಯುತ್ತಿರುತ್ತೆ.....
  ಮನೆಯ ಮಧ್ಯದಲ್ಲಿ ನೂರು ನೆನಪಿನ ಮೊಗ್ಗುಗಳರಳುತ್ವೆ...
  ಅದರ ಜೊತೆಗಿನ ಬಾಂದವ್ಯ ಅಂಥಾದ್ದು...

  ಜೀವವೂ ಹಾಗೇ.......

  ನಾವು ಹುಟ್ಟಿಸಿಕೊಂಡ ಮೋಹ ನಮ್ಮನ್ನು ದುಃಖಿತರನ್ನಾಗಿ ಮಾಡುತ್ತೆ...
  ಏನು ಮಾಡುವುದು ಈ ದೇಹಕ್ಕೆ ಆತುಕೊಂಡೇ ನಮ್ಮ ಜೀವ ಪ್ರೀತಿ ಮಾಡುವುದನ್ನು ಕಲಿಸಿರುತ್ತೆ...
  ಕನಸನ್ನು ಹಂಚಿಕೊಂಡಿರುತ್ತೆ....
  ಮನಸು ಬೇಸರಿಸಿದಾಗ ದೇಹ ಕಣ್ಣಿರಾಗಿರುತ್ತೆ....
  ಮನಸು ಪ್ರೀತಿಸುತ್ತೆ....
  ದೇಹ ಪ್ರತಿಕ್ರಯಿಸುತ್ತೆ.....
  ಇಷ್ಟಿದ್ದರೂ ಕೊನೆಗೊಂದು ದಿನ ಜೀವ ಹಾರಿ ಹೋಗುತ್ತೆ..

  ಶೃತಿ ಆಪ್ತವಾಗಿದೆ ಬರಹ... ಹಳೆಯ ನೆನಪುಗಳಿಗೆ ದೊಡ್ಡ ರೆಕ್ಕೆ ಹಚ್ಚಿಸಿದೆ.

  ಇಷ್ಟ ಅಲ್ಲಾ ತುಂಬಾ ಇಷ್ಟವಾಯ್ತು.....

  ReplyDelete
 15. ಸುತ್ತಲಿನ ಪ್ರತಿ ವಸ್ತು ವಿಷಯಗಳನ್ನು ಭಾವಗಳೊಂದಿಗೆ ಹೆಣೆದು ಬದುಕ ಬೆಸೆದುಕೊಳ್ಳುವವರು ನಾವುಗಳು...
  ಮೋಹದ ನೆಲೆಯಲ್ಲೇ ಭಾವಗಳು ಬದುಕಿರುವುದು...
  ಯಾವದೇ ಮೋಹದಿಂದ ಆಚೆ ಬರುವುದು ಅಷ್ಟು ಸುಲಭಸಾಧ್ಯವಲ್ಲ...
  ಮೋಹ ಹರಿವಾಗ ನೋವು ಅನಿವಾರ್ಯ ಮತ್ತು ಸಹಜ...
  ಬದುಕಿಗೆ ಒಂದಷ್ಟು ಮಟ್ಟಿಗೆ ಮೋಹ ಅಗತ್ಯ ಕೂಡ...
  ಸನ್ಯಾಸಿಯ ಮೋಕ್ಷದ ಕಡು ಬಯಕೆ ಕೂಡ ಮೋಹದ ಒಂದು ರೂಪದಂತೆ ತೋರುತ್ತದೆ ನನಗೆ...ಭಗವಂತನೆಡೆಗಿನ ಮೋಹ...

  ಸರಳ ಸುಂದರ ಬರಹ...
  ಹೀಗೆ ಸಾಗಲಿ ನಿಮ್ಮ ಅಕ್ಷರ ಯಾತ್ರೆ...

  ReplyDelete
 16. ಒಂದನ್ನು ಬಿಟ್ಟು ಮತ್ತೊಂದಕ್ಕೆ ಹೊಂದಿಕ್ಕೊಳ್ಳುವಾಗಿನ ಸಂಕಷ್ಟ ಬಹಳ ಆಪ್ತವಾಗಿ ಮೂಡಿ ಬಂದಿದೆ....ಆತ್ಮ , ದೇಹಗಳ ಉದಾಹರಣೆ ಇನ್ನೂ ಚೆನ್ನಾಗಿದೆ...


  Nice one shruthi..

  ReplyDelete
 17. ಶೃತಿ, ಪ್ರಕಾಶನ ಮಾತುಗಳು ನನ್ನನ್ನು ಉದ್ದೇಶಿಸಿ ಆಗದಿದ್ದರೆ ಸಾಕು...!!! ಹಹಹ ಅವನ ಬಳಿ ಇರುವ ಇಟ್ಟಿಗೆ-ಸಿಮೆಂಟಿನ ಬಾಂಧವ್ಯದ ಸೆಲೆ ಹರಿದು ನಿಮ್ಮತ್ತ ಬಂದಿದೆ...ಚನ್ನಾಗಿದೆ ಲೇಖನ ಭಾವನೆಗೆ ಜೀವಂತ ಜೀವ ಆಗಬೇಕೆಂದಿಲ್ಲ ನಿರ್ಜೀವ ವಸ್ತುಗಳ ಮೇಲೂ ಮೋಹ .. ನೆಂಟು ಬೆಳೆಯುತ್ತೆ...

  ReplyDelete