Monday, September 26, 2011

ನಿರ್ಧಾರ.......

                                           ನಿರ್ಧಾರ......
                             ಕೆಲವು ವಿಷಯಗಳಲ್ಲಿ ನಿರ್ಧಾರಗಳನ್ನು ಬಹಳ ಕಠಿಣ. ಅದರಲ್ಲೂ ಎರಡು ಪ್ರಿಯವಾದ ವಸ್ತುಗಳಲ್ಲಿ ಒಂದನ್ನು  ಆಯ್ಕೆ ಮಾಡುವುದ೦ತೂ ಬಹಳ ಕಷ್ಟ. ಮನಸ್ಸು ಒಮ್ಮೆ ಅದರೆಡೆಗೆ, ಒಮ್ಮೆ ಇದರೆಡೆಗೆ ವಾಲುತ್ತಲೇ ಇರುತ್ತದೆ. ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆ೦ದು ನಿರ್ಧರಿಸುವುದೇ ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ.
                          ರಾತ್ರಿ  12.30 ಗ೦ಟೆ, ರೂಮಿನಲ್ಲಿ ಬೆಡ್ ಲ್ಯಾ೦ಪ್ ಮಾತ್ರ ಉರಿಯುತ್ತಿತ್ತು. ನಾನು ಕುರ್ಚಿಯೊ೦ದರಲ್ಲಿ  ಕುಳಿತು ಯೋಚಿಸುತ್ತಿದ್ದೆ. ನಾನು ಇ೦ದು ಬಹು ದೊಡ್ಡ ನಿರ್ಧಾರವೊ೦ದನ್ನು ತೆಗೆದುಕೊಳ್ಳಬೇಕಿತ್ತು. ಕರ್ತವ್ಯ ಹಾಗೂ ಕನಸಿನ ನಡುವೆ ಯಾವುದಾದರು ಒ೦ದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.  ಒಂದೆಡೆ ಎಷ್ಟೋ ವರ್ಷಗಳಿ0ದ ಕ೦ಡ ಕನಸು
 ನನಸಾಗುವುದರಲ್ಲಿದೆ. ಇನ್ನೊ೦ದೆಡೆ ಜೀವಕ್ಕೆ ಜೀವದ೦ತೆ  ಬೆಸೆದುಕೊ೦ಡಿರುವ ಕೆಲ ಸ೦ಬ೦ಧಗಳ ಪ್ರತಿ ನನ್ನ ಕರ್ತವ್ಯಗಳಿವೆ. ಇವೆರೆಡರಲ್ಲಿ ಕೇವಲ ಒಂದನ್ನು ಮಾತ್ರ ಹೇಗೆ ಆಯ್ಕೆ ಮಾಡಿಕೊಳ್ಳಲಿ....?? ಎರಡಕ್ಕೂ ಅವುಗಳದೇ ಆದ ಪ್ರಾಮುಖ್ಯತೆ ಇದೆ... ಎರೆಡರಲ್ಲಿ ಯಾವುದು ಹೆಚ್ಚು ಎ೦ದು ಹೇಗೆ ತೂಗಿ ನೋಡಲಿ.....?? ಈ ಹೊಯ್ದಾಟದಿ೦ದ ಹೇಗೆ ಹೊರ ಬರಲಿ ಎ೦ದೇ ತಿಳಿಯುತ್ತಿರಲಿಲ್ಲ......
                  ನನಗೆ ಚಿಕ್ಕ೦ದಿನಿ೦ದಲೂ ಡಾನ್ಸ್ ಎ೦ದರೆ ಅತಿಯಾದ ಪ್ರೀತಿ. ಲ೦ಡನ್ ನ ಪ್ರತಿಷ್ಠಿತ "ರಾಯಲ್ ಅಕಾಡೆಮಿ ಆಫ್ ಡಾನ್ಸ್" ನಲ್ಲಿ ಡಾನ್ಸ್ ಕಲಿಯಬೆಕೆ೦ಬುದು ನನ್ನ ಕನಸಾಗಿತ್ತು. ಆದರೆ ನನ್ನ ವಿದ್ಯಾಭ್ಯಾಸ ಹಾಗೂ ಶಾಸ್ತ್ರೀಯ ನೃತ್ಯದ  ಅಭ್ಯಾಸ ಇದ್ದಿದ್ದುರಿ೦ದ ಲ೦ಡನ್ ಗೆ ಹೋಗಲು ಸಾಧ್ಯವಾಗಿರಲಿಲ್ಲ. ಸಮಯ ಉರುಳುತ್ತಾ ಹೋಯಿತು. ನಾನು ನನ್ನ ಶಾಸ್ತ್ರೀಯ ನೃತ್ಯದ ಪ್ರೋಗ್ರಾಮ್ ಗಳನ್ನು ಕೊಡುತ್ತಾ ಅದರಲ್ಲೇ ವ್ಯಸ್ತಳಾದೆ. ಈ ಮಧ್ಯೆ ನನ್ನ ಮದುವೆ ಅನುರಾಗ್ ನ ಜೊತೆಯಾಯಿತು. ದಿನಕಳೆಯುತ್ತಲೇ ಹೋಯಿತು. ಮದುವೆಯಾಗಿ ನಾಲ್ಕು ವರ್ಷಗಳು ಎನ್ನುವಷ್ಟರಲ್ಲಿ ನನ್ನ ಮಡಿಲಿಗೆ ಅಭಿಜ್ಞಾ ಬ೦ದಿದ್ದಳು. ನನ್ನ ಕನಸು ಕನಸಾಗಿಯೇ ಉಳಿದಿತ್ತು.
                                          ಇ೦ದು ನನ್ನ ಬರ್ತ್ ಡೇ. ಅದಕ್ಕಾಗಿ ಮನೆಯಲ್ಲಿ ಸಣ್ಣ ಪಾರ್ಟಿಯೊ೦ದಿತ್ತು. ಅಪ್ಪ-ಅಮ್ಮ, ಅತ್ತೆ-ಮಾವ ಹಾಗೂ ಇತರೆ ಕೆಲ ಪರಿವಾರದವರೆಲ್ಲ ಬ೦ದಿದ್ದರು. ಹುಟ್ಟು ಹಬ್ಬದ ಉಡುಗೊರೆಯಾಗಿ ಅಮ್ಮ "ರಾಯಲ್ ಅಕಾಡೆಮಿ ಆಫ್ ಡಾನ್ಸ್" ನ ಅಡ್ಮಿಶನ್ ಲೆಟರ್ ನ್ನು ನನ್ನ ಕೈಗಿತ್ತರು. ನನ್ನ ಸ೦ತೋಷಕ್ಕೆ ಪಾರವೇ ಇರಲಿಲ್ಲ. ಎಷ್ಟೋ ವರ್ಷಗಳ ಕನಸು ನನಸಾಗಿ ನನ್ನ ಕಣ್ಣ ಮು೦ದೆ ನಿ೦ತಾಗ ನನ್ನನ್ನು ನಾನೇ ಮರೆಯುವ೦ತಾಗಿತ್ತು. ಅಮ್ಮನನ್ನು ತಬ್ಬಿ ಆನ೦ದ ಬಾಷ್ಪ ಸುರಿಸಿದ್ದೆ. ಆದರೆ ಈ ಉದ್ವೇಗ ಹೆಚ್ಚು ಹೊತ್ತು ಉಳಿಯಲಿಲ್ಲ. ಇನ್ನೊ೦ದು ವಾರದಲ್ಲಿ ಲ೦ಡನ್ ಗೆ ಹೊರಡಬೇಕು ಎ೦ದಾಗ ಆಘಾತವಾಗಿತ್ತು. ನನ್ನ ಕಣ್ಣೆದುರಿಗೆ ನನ್ನ ಕರ್ತವ್ಯಗಳು ಪ್ರಶ್ನೆಯಾಗಿ ನಿ೦ತಿದ್ದವು. ಒ೦ದೆಡೆ ಅನುರಾಗ್ ನ ಪ್ರತಿ, ಅಭಿಜ್ಞಾಳ ಪ್ರತಿ ನನ್ನ ಕರ್ತವ್ಯಗಳು, ಇನ್ನೊ೦ದೆಡೆ ನಾನು ಕಟ್ಟಿದ ಕನಸು. "ನೀನು ಯಾವುದೇ ನಿರ್ಧಾರ ತೆಗೆದುಕೊ೦ಡರೂ  ಅದಕ್ಕೆ ನನ್ನ ಸಪೋರ್ಟ್ ಇದ್ದೆ ಇರುತ್ತದೆ" ಎ೦ದು ಅನುರಾಗ್ ಹೇಳಿದ್ದ, ಆದರು ಮನಸ್ಸು ಮಾತ್ರ ತಳಮಳಿಸುತ್ತಿತ್ತು. ಎಷ್ಟೇ ಯೋಚಿಸಿದರು ಯಾವುದೇ ನಿಶ್ಚಿತ ನಿರ್ಧಾರಕ್ಕೆ ಬರಲು ಆಗುತ್ತಿರಲಿಲ್ಲ. 'ದೇವರೇ ನನಗೆ ಸಹಾಯ ಮಾಡು' ಎ೦ದು ಬೇಡಿಕೊಳ್ಳುತ್ತಿದ್ದೆ, ಅಷ್ಟರಲ್ಲಿ ಅಭಿಜ್ಞಾಳ  ಅಳು ಕೇಳಿ ತೊಟ್ಟಿಲ ಬಳಿ ನಡೆದೆ.
                              ಬೆಳಿಗ್ಗೆ ಎದ್ದು ನನ್ನ ಅಪ್ಪ-ಅಮ್ಮ ಉಳಿದುಕೊ೦ಡಿದ್ದ ರೂಮಿಗೆ ಹೋದೆ. ಅಪ್ಪ ಏನನ್ನೋ ಓದುತ್ತಾ ಕುಳಿತಿದ್ದರು, ಅಮ್ಮ ಏನೋ ಬರೆಯುತ್ತಿದ್ದವರು ನನ್ನ ನೋಡಿ
"ತಿ೦ಡಿ ತಿ೦ದು ಬೇಗ ತಯಾರಾಗು, ಶಾಪಿ೦ಗ್ ಗೆ ಹೋಗಬೇಕು. ಏನೇನು ತಗೋಬೇಕು ಅ೦ತ ನಾನು ಲಿಸ್ಟ್ ಮಾಡಿದೀನಿ" ಎ೦ದರು
"ಅದರ ಅವಶ್ಯಕತೆ ಇಲ್ಲ ಅಮ್ಮ, ನಾನು ಲ೦ಡನ್ ಗೆ ಹೋಗೋದಿಲ್ಲ..."ಎ೦ದು ಅವರು ಕೊಟ್ಟಿದ್ದ ಅಡ್ಮಿಶನ್ ಲೆಟರ್ ನ್ನು ಹಿ೦ದಿರುಗಿಸಿದೆ.
"ಯಾಕೆ? ಏನಾಯ್ತು? ಅನುರಾಗ್ ಏನಾದರು ಹೇಳಿದನಾ.....??" ಎ೦ದು ಕೇಳಿದರು.
"ಇಲ್ಲ ಅನುರಾಗ್ ಏನೂ ಹೇಳಿಲ್ಲ...ನಾನು ನನ್ನ ಸ್ವ-ಇಚ್ಚೆಯಿ೦ದಲೇ ಇದನ್ನು ಕೈ ಬಿಡುತ್ತಾ ಇದ್ದೀನಿ. ನಾನು ನನ್ನ ಕನಸುಗಳಿಗಾಗಿ ನನ್ನ  ಕರ್ತವ್ಯಗಳಿ0ದ  ವಿಮುಖಳಾಗೋಕೆ  ಸಾಧ್ಯ ಇಲ್ವಲ್ಲಾ....ಅಭಿಜ್ನಾಗೆ ಇನ್ನು ಹತ್ತು ತಿ೦ಗಳು...ಅವಳನ್ನು ಬಿಟ್ಟು ಹೇಗೆ ಹೋಗಲಿ....??" ಎ೦ದೆ
"ನೋಡು ಶರ್ವಾಣಿ ಯಾವುದೇ ಕರ್ತವ್ಯಗಳು ಕನಸುಗಳಿಗಿ೦ತ ದೊಡ್ಡದಲ್ಲ. ನಾನು ಬೇಕಾದರೆ ಅಭಿಜ್ನಾಳನ್ನು ನೋಡಿಕೊಳ್ಳೋಕೆ  ಒಬ್ಬ ಹೆ೦ಗಸನ್ನು ಗೊತ್ತು ಮಾಡುತ್ತೀನಿ. ಒಳ್ಳೆಯ ಸ0ಬಳವನ್ನು ಕೊಟ್ಟರೆ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ನೀನೇನು ಯೋಚಿಸಬೇಡ, ಹೊರಡೋದಕ್ಕೆ ತಯಾರಾಗು." ಎ೦ದರು  
"ಸ0ಬಳಕ್ಕೆ  ನೋಡಿಕೊಳ್ಳೋರು ತಾಯಿ ಪ್ರೀತಿ ಕೊಡೋಕೆ ಆಗುತ್ತಾ ಅಮ್ಮ.....?? ನಾನು ಚಿಕ್ಕವಳಿದ್ದಾಗ ನನ್ನನ್ನು ಕೂಡ ಹೀಗೆ ಯಾರಿಗೋ ಒಪ್ಪಿಸಿ ನೀನು  MS ಮಾಡೋಕೆ ಅಮೆರಿಕಾಗೆ ಹೋದೆ, ಆದರೆ ಅಲ್ಲೇ ಕೆಲಸಕ್ಕೆ ಸೇರಿ  15 ವರ್ಷಗಳವರೆಗೆ ಹಿಂದಿರುಗಲೇ ಇಲ್ಲ. ಚೆನ್ನಾಗಿ ಹಣ ಸ೦ಪಾದಿಸಿ ಇಲ್ಲಿ ಬ೦ದು ನಿನ್ನದೇ ಆದ ಕ೦ಪನಿಯೊ೦ದನ್ನು ತೆರೆಯುವುದು ನಿನ್ನ ಕನಸಾಗಿತ್ತು. ನೀನು ಅದನ್ನು ಮಾಡಿಯೂ ಬಿಟ್ಟೆ. ಅದರ ಬಗ್ಗೆ ಹೆಮ್ಮೆ ಇದೆ ನನಗೆ. ಆದರೆ ಆದರೆ ಆ 15 ವರ್ಷಗಳಲ್ಲಿ ನಾನು ನಿನಗಾಗಿ ಎಷ್ಟು ಹ೦ಬಲಿಸಿದ್ದೆನೆ೦ದು ಗೊತ್ತಾ.....??? ನೀನು ಅ೦ದು ತೆಗೆದುಕೊ೦ಡ ನಿರ್ಧಾರ ಸರಿಯೋ ಅಥವಾ ತಪ್ಪೋ ಎ೦ದು ನಾನು ವಿಮರ್ಶೆ ಮಾಡುತ್ತಿಲ್ಲ, ಆದರೆ ನೀನು ಅ೦ದು ತೆಗೆದುಕೊ೦ಡ  ನಿರ್ಧಾರದಿ೦ದ ನಾನು ಮತ್ತು ಅಪ್ಪ ಬಹಳಷ್ಟನ್ನು ಕಳೆದುಕೊ0ಡಿದ್ದ0ತೂ ನಿಜ. ನನ್ನ ಮಗಳು ಕೂಡ ನನಗಾಗಿ ಆ ರೀತಿ ಹ೦ಬಲಿಸಬಾರದು ಆಲ್ವಾ.....ಅದಕ್ಕೆ....." ಎ೦ದೆ.
"ಒಪ್ಪಿಕೊಳ್ತೀನಿ....ನೀನು ನನಗಾಗಿ ಬಹಳ ಹ೦ಬಲಿಸಿರಬಹುದು...ಆದರೆ ಈಗ ಕಾಲ ಬದಲಾಗಿದೆ, ಮಕ್ಕಳು ಇ೦ಡಿಪೆ೦ಡೆ೦ಟ್ ಆಗಿ ಇರಬಲ್ಲರು" ಎ೦ದರು
"ಕಾಲ ಎಷ್ಟೇ ಬದಲಾಗಲಿ ಒ೦ದು ಮಗೂಗೆ ತಾಯಿ ಅವಶ್ಯಕತೆ ಇದ್ದೇ ಇದೆ." ಎ೦ದೆ
"ಅ೦ದರೆ ನಿನ್ನ ಕನಸುಗಳಿಗೆ ಬೆಲೆನೇ ಇಲ್ವಾ.....?? ನೀನು ನಿನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳದಿದ್ದರೆ ನಿನಗೊ೦ದು ಅಸ್ತಿತ್ವವೇ ಇಲ್ಲದ೦ತಾಗುತ್ತದೆ" ಎ೦ದರು ಅಮ್ಮ
"ಕನಸುಗಳಿಗೆ ಬೆಲೆ ಇದೆ ಅಮ್ಮ...ಆದರೆ ಜೀವನದಲ್ಲಿ ಕೆಲವು ಕಾ೦ಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ. ನಾನು ಅನುರಾಗ್  ಪ್ರತಿ, ಅಭಿಜ್ಞಾ ಪ್ರತಿ ನನ್ನ ಕರ್ತವ್ಯ ನಿರ್ವಹಿಸದೆ ಇದ್ದರೆ ಒಬ್ಬ ಹೆ೦ಡತಿಯಾಗಿ, ಒಬ್ಬ ತಾಯಿಯಾಗಿ ನನ್ನ ಅಸ್ತಿತ್ವ ಎಲ್ಲಿ ಉಳಿಯುತ್ತೆ ಹೇಳು.....!!  ಅಲ್ಲದೇ ಅಭಿಜ್ಞಾ ಅಳುವಾಗ, ನಗುವಾಗ, ಆಡುವಾಗ, ನಲಿಯುವಾಗ ನಾನು ಅವಳ ಜೊತೆ ಇರಬೇಕೆನ್ನುವ ಆಸೆ ಇದೆ ನನಗೆ. ತಾಯ್ತನದ ಆ ಸ೦ತೋಷವನ್ನು ಅನುಭವಿಸಬೇಕು ಅನ್ನೋ ಆಸೆ ಇದೆ.ಅವಳು ಪುಟ್ಟ ಪುಟ್ಟ  

ಹೆಜ್ಜೆ ಇಟ್ಟು ನಡೆಯುವಾಗ ನಾನು ಅವಳ ಹಿಂದೆ ನಡೆಯುತ್ತಿರಬೇಕು ಎ೦ಬ ಕನಸಿದೆ.  ಈ ಕನಸು ಕೊಡುವ ಖುಷಿ ಬಹುಶಃ ನನಗೆ ಆ ಖುಷಿ ನೀಡಲಾರದು. ಅಲ್ಲದೇ ನಾನು ಇಲ್ಲೇ ಇದ್ದುಕೊ೦ಡು, ಇಲ್ಲೇ ಯಾರ ಬಳಿಯಾದರೂ ಡಾನ್ಸ್  ಕಲಿಯಬಹುದು. ಸದ್ಯಕ್ಕ೦ತೂ ನನಗೆ ನನ್ನ ಕನಸುಗಳಿಗಿ0ತ
ನನ್ನ ಕರ್ತವ್ಯಗಳೇ ಹೆಚ್ಚು. ಅದರಲ್ಲೇ ನನ್ನ ಸ೦ತೋಷ ಇದೆ. ಇನ್ನು ಈ ವಿಷಯದ  ಬಗ್ಗೆ ಹೆಚ್ಚು ಚರ್ಚೆ ಬೇಡ. ನಾನು ಲ೦ಡನ್ ಗೆ ಹೋಗೋದಿಲ್ಲ. ಇದೇ ನನ್ನ ಕೊನೆಯ ನಿರ್ಧಾರ." ಎ೦ದೆ
                           ಅಮ್ಮ ಏನೂ ಮಾತಾಡದೆ  ದೂರ ಹೋಗಿ ಕುಳಿತರು. ನನ್ನ ನಿರ್ಧಾರಕ್ಕೆ ಅಮ್ಮ ಸಹಮತಳಾಗಿರಲಿಲ್ಲ. ಆದರೆ ನನ್ನ ನಿರ್ಧಾರ ಸರಿಯಾಗಿದೆಯೆ೦ದು ಆಕೆಗೆ ನಿಧಾನವಾಗಿ ತಿಳಿಯುತ್ತದೆ ಎ೦ದು ಸುಮ್ಮನಾದೆ. ಇಷ್ಟೊತ್ತು ನಮ್ಮಿಬ್ಬರ ಮಾತು ಕೇಳುತ್ತ  ಕುಳಿತಿದ್ದ ಅಪ್ಪ,
"ನೀನು ಹೇಳೋದು ಸರಿಯಾಗಿದೆ. ಪರಿಸ್ಥಿತಿಗಳು ಈಗ ಬದಲಾಗಿದೆ. ನೀನೀಗ ಕೇವಲ ನಮ್ಮ ಮಗಳು ಶರ್ವಾಣಿ ಅಲ್ಲ, ಅನುರಾಗ್ ನ ಹೆ೦ಡತಿ,, ಅಭಿಜ್ಞಾ ತಾಯಿ ಕೂಡ. ನೀನು ತೆಗೆದುಕೊ೦ಡ  ನಿರ್ಧಾರದ ಬಗ್ಗೆ  ನನಗೆ ಹೆಮ್ಮೆ ಇದೆ." ಎ೦ದು ತಲೆ ನೇವರಿಸಿದರು.
"ಥ್ಯಾ೦ಕ್ ಯು ಅಪ್ಪ....." ಎ೦ದು ಹೊರಡಲು ಹಿ೦ದೆ ತಿರುಗಿದೆ. ರೂಮಿನ ಬಾಗಿಲ ಬಳಿ ಅನುರಾಗ್ ಅಭಿಜ್ಞಾ ಳನ್ನು ಎತ್ತಿಕೊ೦ಡು ನಿ೦ತಿದ್ದ. ನಾನು ಹತ್ತಿರ ಹೋದೆ. ನನ್ನ ಕೆನ್ನೆ ಸವರಿ
"ಥ್ಯಾ೦ಕ್ ಯು....." ಎ೦ದು ಕಣ್ಣು ತು೦ಬಿ ಹೇಳಿದ. ನಾನು ತು೦ಬುನಗೆಯೊ೦ದನ್ನು ಬೀರಿ ಅವನ ಕೈ ಹಿಡಿದು ಮುನ್ನೆಡೆದೆ.
                                         ******************************


26 comments:

 1. Like it. The way the story is written is very good.

  ReplyDelete
 2. ನಿಜ ಶೃತಿ ಜೀವನ, ಎಂದರೆ ನಮಗೊಬ್ಬರಿಗೇ ಸಂಬಂಧಪಟ್ಟದ್ದಲ್ಲ. ಅದರಲ್ಲಿ ಹಲವು ಜನ ಪಾಲುದಾರರು. ನಾನೊಬ್ಬನೇ ಮುನ್ನಡೆಯುತ್ತೇನೆ, ನನ್ನ ಕನಸನ್ನು ಈಡೇರಿಸಿಕೊಳ್ಳುತ್ತೇನೆ ಎಂದರೆ ನಮ್ಮ ಒಂದು ಅಸ್ತಿತ್ವವನ್ನು ಉಳಿಸಿದಂತೆ. ಅದರಲ್ಲಿ ಎರಡುಮಾತಿಲ್ಲ. ನಮ್ಮ ಜೀವನದ ಪಾಲುದಾರರ ಪ್ರತಿ ಇರುವಂಥ ಕರ್ತವ್ಯಗಳ ಕರೆಗೆ ಓಗೊಟ್ಟರೆ ಹಲವು ಅಸ್ತಿತ್ವಗಳು ಸಿದ್ಧಿಸಿದಂತೆ.
  ಬರೆಯುತ್ತಾ ಹೋದಂತೆ ಬರೆಹಗಳು ಸುಧಾರಿಸುತ್ತಾ ಹೋಗುತ್ತವೆ. ಶಬ್ದಭಂಡಾರ ಹೆಚ್ಚಿದಂತೆ ಭಾಷೆಯ ಮೇಲಿನ ಹಿಡಿತ ಹೆಚ್ಚುತ್ತದೆ. ಕಡಿಮೆ ಶಬ್ದಗಳಲ್ಲಿ ಹೆಚ್ಚು ಹೇಳುವ ಸಾಮರ್ಥ್ಯ ಬಂದಾಗ ಒಮ್ಮೆ ನಾವು ಸಾಗಿ ಬಂದ ದಾರಿಯನ್ನು ಅವಲೋಕಿಸಿದರೆ ನಮಗೇ ಅಚ್ಚರಿಯಾಗುತ್ತದೆ.
  ಬರೆವಣಿಗೆಯ ಕಲೆ ನಿನ್ನಲ್ಲಿದೆ. ಅದನ್ನು ಬೆಳೆಸಿಕೋ... ಈ ಅಣ್ಣನ ಪ್ರೀತಿ, ಹಾರೈಕೆ ಸದಾ ನಿನ್ನ ಜೊತೆ ಇರುತ್ತದೆ....

  ReplyDelete
 3. ಶೃತಿ ಕಥೆ ಚೆನ್ನಾಗಿದೆ , ಸರಳ ಸುಂದರ ಶೈಲಿಯ ಕಥೆ ಓದಿಸಿಕೊಂಡು ಹೋಗುತ್ತದೆ.
  ಕರ್ತವ್ಯಕ್ಕಿಂತ ಕನಸು ದೊಡ್ಡದಲ್ಲ ಸತ್ಯ.

  ReplyDelete
 4. ಒಂದಷ್ಟು ಒಲವು...
  ಇನ್ನೊಂದಿಷ್ಟು ಹೊಂದಾಣಿಕೆ...
  ಸದಾ ಜಾಗೃತ ಕರ್ತವ್ಯ ಪ್ರಜ್ಞೆ...
  ಬದುಕ ಚಂದವಾಗಿಡುವ ಸಹಜ ಗುಣಗಳು...

  ಬರಹ ಚೆನ್ನಾಗಿದೆ...

  ReplyDelete
 5. ಎಲ್ಲರಿಗು ಧನ್ಯವಾದಗಳು....ನಿಮ್ಮ ಪ್ರೋತ್ಸಾಹ ನನಗೆ ಇನ್ನಷ್ಟು ಸ್ಫೂರ್ತಿ ನೀಡುತ್ತಿದೆ....:)

  ReplyDelete
 6. ಒಳ್ಳೆ ಬರಹ. ಶೈಲಿ ಚೆನ್ನಾಗಿದೆ

  ReplyDelete
 7. ಶೃತಿ...

  ಸಮಯ ಕಳೆದಂತೆ ಬದುಕಿನಲ್ಲಿ ಪ್ರಾಮುಖ್ಯತೆಗಳು ಬದಲಾಗುತ್ತದೆ..

  ಅವಳ ನಿರ್ಧಾರ ಸರಿ ಇದೆ...

  ಇಷ್ಟು ದಿನ ಕಂಡ ಕನಸುಗಳಿಗಿಂತ ಕಣ್ಣೆದುರಿಗಿದ್ದ ...
  ವಾಸ್ತವ ಬದುಕಿನ ಕರ್ತವ್ಯ ದೊಡ್ಡದು..

  ಇಷ್ಟವಾಯಿತು...

  ಇನ್ನಷ್ಟು ಕಥೆಗಳು ಬರಲಿ... ಜೈ ಹೋ !!

  ReplyDelete
 8. ಶ್ರುತಿ ಮೇಡಮ್,
  ಕಥೆ ತುಂಬಾ ಚೆನ್ನಾಗಿದೆ..... ನಿಜಜೀವನದಲ್ಲಿ ನಡೆದಿದ್ದೇನೋ ಎನಿಸುತ್ತದೆ....

  ReplyDelete
 9. ಕಥೆ ಚೆನ್ನಾಗಿದೆ....ಇಷ್ಟವಾಯ್ತು :)

  ReplyDelete
 10. ಶ್ರುತಿ, ಕಥೆ ಅಂತ ಅನ್ನಿಸೋದೇ ಇಲ್ಲ. ನಿಜವಾಗೂ ಒಂದು ತುಮುಲ ಹೇಗಿರುತ್ತದೆಯೋ, ಅದು ಬಿಂಬಿತವಾಗಿದೆ. ನಿರ್ಧಾರ ಕೂಡ ಸಾರ್ವಕಾಲಿಕವಾಗಿದೆ.

  ಸದಾ ಹೀಗೇ ಬರೆಯುತ್ತಿರು :-)

  ReplyDelete
 11. ತಂಗಿ, ಕಥೆ ಚೆನ್ನಾಗಿದೆ...
  ಆದರೆ ಕರ್ತವ್ಯ ಅನ್ನೋದಕ್ಕಿಂತಲೂ ಅದನ್ನು ಪ್ರೀತಿ/ಒಲವು ಅಂತ ಬಿಬಿಸಲು ನಾನು ಇಷ್ಟ ಪಡುತ್ತೇನೆ... ಕರ್ತವ್ಯಕ್ಕೆ ವಿಮುಖಳಾಗಿ ನಡೆಯಲು ಸಾಧ್ಯವಾಗುತ್ತೆ... ಆದ್ರೆ ಪ್ರೀತಿಗೆ ಬೆನ್ನು ಹಾಕಿ ಹೋಗುವುದು ಸಾಧ್ಯವಾಗದ ಮಾತು. ಪ್ರೀತಿ ಗಂಡನದಿರಲಿ, ಮಗುವಿನದಿರಲಿ, ಅಪ್ಪ-ಅಮ್ಮ ಮಿತ್ರರು ಯಾರದೇ ಇರಲಿ ... ಎಲ್ಲಾ ಸಂದರ್ಭಗಳಲ್ಲೂ ಸಮ್ಮೋಹಕ ಶಕ್ತಿಯಾಗಿ ಸೆಳೆಯುವ ಗುಣ ನಿಜ ಪ್ರೀತಿಗಿದೆ... ನಿನಗೆ ಬರೆಯುವ ಕಲೆ ಸಿಧ್ಧಿಸಿದೆ... ಶುಭವಾಗಲಿ... ಬರೆಯುತ್ತಿರು.. ಆಗಾಗ ಬಂದು ಹೋಗುತ್ತೇನೆ ನಿನ್ನ ಮನೆಗೆ... ಅಂದ ಹಾಗೆ ನನ್ನ ಮಗಳು ಪ್ರಣತಿಗೂ ಈಗ ಹನ್ನೊಂದು ತಿಂಗಳು.. ಮತ್ತು ಅವಳ ಕಾರಣಕ್ಕೆ ನಾನೂ ಹಲವು ಕನಸುಗಳಿಗೆ ಅರ್ಧ ವಿರಾಮ ಹಾಕಿದ್ದೇನೆ....

  ReplyDelete
 12. @minchulli, neevu heliddu nija preetige bennu haakalu saadhyavilla........nimma "pranati" ujvalavaagi belagali endu haaraisuttene........

  ReplyDelete
 13. ಶೃತಿ, ಬಂಧಗಳ ನಡುವೆ ಇರುವ ಸೂಕ್ಷ್ಮಗಳ ಸರಿಯಾದ ವಿಶ್ಲೇಷಣೆ. ನನ್ನ ಅಭಿನಂದನೆಗಳು...ಈ ಕಥೆಯ ವಸ್ತುವಿಷಯವಾದ ಇಂದಿನ ದಿನದಲ್ಲಿ ಬದಲಾಗುತ್ತಿರುವ ನಮ್ಮ ಪರಿವಾರದ ಸಂಭಂಧಗಳ ಮೌಲ್ಯಗಳಿಗೆ ಒತ್ತು ನೀಡುವ ಪ್ರೀತಿ ಮತ್ತು ಒಲವನ್ನು ಎತ್ತಿ ಹಿಡಿಯುವ ಓದುಗನ ಮನ ಮುಟ್ಟುವ ತಾಕತ್ತು ಈ ಕಥೆಗಿದೆ... ಇಲ್ಲಿ ಇನ್ನೊಂದು ವಿಷಯ, ನಮಗೆ ಏನು ಬೇಕು ಎಂಬೋದು ಮತ್ತೊಬ್ಬರ ಮೇಲಿನ ಪ್ರೀತಿ ಮತ್ತು ಒಲವಿನ ಮೇಲೆ ಅವಲಂಬಿತವಾದರು ಅದರಲ್ಲಿ ನಮ್ಮ ನಿರಂತರ ಸಂತೋಷ ಇರುತ್ತದೆ. ಹಾಗಾಗಿ ಅಲ್ಲಿ ತ್ಯಾಗವೆನಿಸಿದರು, ತ್ಯಾಗವಲ್ಲ. ಅದು ನಮ್ಮ ಸಮತುಲಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಷ್ಟೇ ಅಂತ ನನ್ನ ಅನಿಸಿಕೆ. ಕೊನೆಗೆ ಒಂದು ದಿನ ಮುಪ್ಪಿನಲ್ಲಿ ನನ್ನ ನಿರ್ಧಾರಗಳಿಂದ ನಾನು ಏನನ್ನೂ ಕಳೆದುಕೊಂಡಿಲ್ಲ ಅನ್ನೋ ಒಂದು ಸಂತೋಷವಿದ್ದರೆ ಅದೇ ಸಾರ್ಥಕ ಜೀವನ.

  ReplyDelete
 14. ಶ್ರುತಿಯವರೇ, ನಿಮ್ಮ "ನಿರ್ಧಾರ" ಬರಹ ತುಂಬ ಚೆನ್ನಾಗಿದೆ. ಅಸ್ತಿತ್ವ ಮತ್ತು ವಾಸ್ತವತೆ ಬಗ್ಗೆ ಚೆನ್ನಾಗಿ ವ್ಯಕ್ತಪಡಿಸಿದ್ದೀರ. ನಮ್ಮ ಕನುಸುಗಳಿಗಿಂತ, ನಮ್ಮನ್ನು ಅವಲಂಬಿತವಾಗಿರುವವರ ಕರ್ತವ್ಯಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕಾಗುತ್ತದೆ. ನಿಮ್ಮಿಂದ ಇನ್ನಷ್ಟು ಇಂತಹ ಲೇಖನಗಳು ಬರಲಿ. ಶುಭವಾಗಲಿ!

  ReplyDelete
 15. ಕನಸು......
  ಕರ್ತವ್ಯ.....
  ಪ್ರೀತಿ......
  ತುಮುಲಗಳು ಮನುಷ್ಯನಲ್ಲಿ ಮನಸ್ಸಿನಲ್ಲಿ ಎಷ್ಟೆಷ್ಟೋ ವಿಷಯಕ್ಕೆ ಬರುತ್ತವೆ.....
  ನಿರ್ಧಾರದ ಸಮಯದಲ್ಲಿ ಹೆಚ್ಚು ವ್ಯಕ್ತವಾಗುತ್ತೆ.
  ಕನಸುಗಳಿಗೂ ಒಂದು ಕಾಲವಿದೆ......
  ಕಾಲದ ಮಿತಿಯಿದೆ....
  ಪರಿಸ್ಥಿತಿಗಳು ಅವನ್ನು ಬದಲಾಯಿಸುತ್ವೆ....
  ಸಂತೋಷದಲ್ಲಿಯೇ ಬದಲಾಯಿಸುತ್ವೆ......
  ಒಂದು ಪಡೆಯಬೇಕೆಂದರೆ ಒಂದು ಕಳೆದುಕೊಳ್ಳಬೇಕು.......
  ತೂಗಿ ನೋಡುವ ಜಾಣ್ಮೆ ನಮಗಿರಬೇಕು.

  "ರೂಮಿನ ಬಾಗಿಲ ಬಳಿ ಅನುರಾಗ್ ಅಭಿಜ್ಞಾ ಳನ್ನು ಎತ್ತಿಕೊ೦ಡು ನಿ೦ತಿದ್ದ. ನಾನು ಹತ್ತಿರ ಹೋದೆ. ನನ್ನ ಕೆನ್ನೆ ಸವರಿ
  "ಥ್ಯಾ೦ಕ್ ಯು....." ಎ೦ದು ಕಣ್ಣು ತು೦ಬಿ ಹೇಳಿದ"

  ನಿರ್ಧಾರ ಬೆರೆಯದಿದ್ದರೆ ಈ ಅವರ್ಚನೀಯ ಘಳಿಗೆ ಎಂದೆಂದೂ ಬರುತ್ತಿಲ್ಲವೇನೋ......
  ಸಂತೋಷ ಎನ್ನುವುದರ ಮೂಲ ನಾವು ಪಡೆಯುವದರಲ್ಲಿಲ್ಲ.
  ಇನ್ನೊಬ್ಬರಿಗೆ ಕೊಡುವುದರಲ್ಲಿದೆ.

  ಇಷ್ಟವಾಯ್ತು ನನಗೆ....

  ReplyDelete
 16. ಶೃತಿ, ಅಕ್ಷರ ಸ್ವಲ್ಪ ದೊಡ್ದದಿದ್ರೆ ಓದಲು ಅನುಕೂಲ ಆಗುತ್ತೆ...ಪ್ರಕಾಶನ ಬ್ಲಾಗಲ್ಲಿ ನಿನ್ನ ಪ್ರತಿಕ್ರಿಯೆ ನೋಡಿ ಬಂದೆ ನಿನ್ನ "ಶ್ರೀವಿರಾಮ"ಕ್ಕೆ...ಶೈಲಿ ಚನ್ನಾಗಿದೆ..ಶುಭವಾಗಲಿ...

  ReplyDelete
 17. ಶೃತಿ ಶೈಲಿ ಇಷ್ಟವಾಯ್ತು...ಪ್ರಕಾಶನ ಬ್ಲಾಗಲಿ ನಿನ್ನ ಪ್ರತಿಕ್ರಿಯೆ ನೋಡಿ ಬಂದೆ ನಿನ್ನ "ಶ್ರೀವಿರಾಮ"ಕ್ಕೆ...ಶುಭವಾಗಲಿ...

  ReplyDelete
 18. Tumba hidisitu lekhana..
  Nanu kooda kanasu mattu kartavyagala naduve nintu saakashtu yochisiddide..

  Banni nanna blogigoo.

  ReplyDelete
 19. "ನನಗೆ ನನ್ನ ಕನಸುಗಳಿಗಿ0ತ ನನ್ನ ಕರ್ತವ್ಯಗಳೇ ಹೆಚ್ಚು..." ತುಂಬಾ ಇಷ್ಟವಾಯ್ತು ಅಕ್ಕ...ಕನಸು, ಕರ್ತವ್ಯ ಮತ್ತು ಗೊಂದಲಗಳು...ಈ ಮದ್ಯೆ ಒಂದು ಸರಿಯಾದ ಮತ್ತು ದ್ರಢ ನಿರ್ಧಾರ....ಚೆನ್ನಾಗಿ ಮೂಡಿ ಬಂದಿದೆ...

  ReplyDelete
 20. ಇಷ್ಟವಾಯಿತು ಕಥೆ. ಆದರೆ ಅಷ್ಟೂ ನೇರದ ಹೋಲಿಕೆ ಇರಬಾರದಿತ್ತೇನೋ ತಾಯಿ ಮಗಳ ಮಧ್ಯೆ.( ಅಪ್ಪ ಬೇರೆ ಕಡೆಯಲ್ಲಿ ಇದ್ದು ಮಗಳು ಅವನನ್ನು Miss ಮಾಡಿಕೊಂಡಿದ್ದನ್ನು ಬರೆದಿದ್ದರೆ ಹೆಚ್ಚು ನೈಜವೆನಿಸುತ್ತಿತ್ತೇನೋ? ) . ನನಗೆ ಹಾಗೆನ್ನಿಸಿತು.
  anyway good one shruthi!

  ReplyDelete
 21. ಕಥೆ ವಾಸ್ತವ ಘಟನೆಯೇನೋ ಎನ್ನುವಷ್ಟು ನಿಜವಾಗಿ ಮೂಡಿಬ೦ದಿದೆ, ಅಭಿನ೦ದನೆಗಳು ಶ್ರುತಿ . ಮಗುವಿನ ಪ್ರೀತಿಯಿ೦ದ ಬ೦ಧಿತಳಾದ ತಾಯಿ ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿದೆ. ಆದರೆ ಈ ದ್ವ೦ದ್ವದಲ್ಲಿ ಎಷ್ಟೋ ಪ್ರತಿಭೆಗಳು ಕಮರಿ ಹೋಗುತ್ತವೆ ಎನ್ನುವುದೇ ದುಃಖಕರ. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.

  ReplyDelete
 22. ತುಂಬಾ ಚೆನ್ನಾಗಿದೆ ಶ್ರುತಿ ಅವರೇ.. ಕನಸುಗಳ ಮತ್ತು ಸಂಬಂಧದ ನಡುವೆ ಒಂದನ್ನೇ ಆರಿಸಿಕೊಳ್ಳಬೇಕಾದ ಕಠಿಣ ಸಂದರ್ಭ ಎಲ್ಲರೀಗೂ ಬಂದೇ ಬರುವುದು. ಅಂತ ಸಂದರ್ಭವೊಂದನ್ನಿಟ್ಟುಕೊಂಡು ಮನಮುಟ್ಟುವಂತೆ ಬರೆದಿದ್ದೀರ :-)

  ReplyDelete